ಕಥಕ್ ಸಾಮ್ರಾಟ್ ಪಂಡಿತ್ ಬಿರ್ಜೂ ಮಹಾರಾಜ್

ಕಥಕ್ ಸಾಮ್ರಾಟ್ ಪಂಡಿತ್ ಬಿರ್ಜೂ ಮಹಾರಾಜ್

ಕಥಕ್ ನೃತ್ಯಕ್ಕೆ ಹೊಸ ಭಾಷ್ಯ ಬರೆದ ಬಿರ್ಜೂ ಮಹಾರಾಜ್ ಅವರು ಜನವರಿ ೧೭, ೨೦೨೨ರಂದು ನಮ್ಮನ್ನು ಅಗಲಿದರು. ನಮ್ಮ ರಾಜ್ಯಕ್ಕೆ ಕಥಕ್ ನೃತ್ಯ ಸ್ವಲ್ಪ ಅಪರೂಪದ್ದೇ. ಇವರು ಖ್ಯಾತ ಕಥಕ್ ನೃತ್ಯ ಘರಾನಾ (ಕುಟುಂಬ)ವಾದ ಮಹಾರಾಜ್ ವಂಶಸ್ಥರು. ತಮ್ಮ ಘರಾನಾದ ಗರಿಮೆಯನ್ನು ವಿಶ್ವದಾದ್ಯಂತ ಪಸರಿಸಿದ ಕೀರ್ತಿ ಬಿರ್ಜೂ ಮಹಾರಾಜ್ ಅವರಿಗೆ ಸಲ್ಲುತ್ತದೆ.

ಫೆಬ್ರವರಿ ೪, ೧೯೩೮ರಲ್ಲಿ ಜನಿಸಿದ ಬೃಜಮೋಹನನಾಥ್ ಮಿಶ್ರಾ ನಮಗೆ ಬಿರ್ಜೂ ಮಹಾರಾಜ್ ಎಂದೇ ಪರಿಚಿತರಾಗಿದ್ದಾರೆ. ಬಾಲ್ಯದಲ್ಲಿ ಅವರನ್ನು ‘ದುಃಖಹರನ್' ಎಂದೂ ಕರೆಯುತ್ತಿದ್ದರಂತೆ. ನಂತರದ ದಿನಗಳಲ್ಲಿ ಲಖನೌ ಕಾಲ್ಕಾ ಬಿಂದಾದಿನ್ ಘರಾನಾ ಶೈಲಿಯ ಖ್ಯಾತ ಕಥಕ್ ಕಲಾವಿದರಾಗಿ ಬೆಳೆದದ್ದು ಈಗ ಇತಿಹಾಸ. ಇವರ ತಂದೆ ಗುರು ಅಚ್ಚನ್ ಮಹಾರಾಜ್ ಹಾಗೂ ಅವರ ತಂದೆಯ ಸಹೋದರರಾದ ಶಂಭು ಮಹಾರಾಜ್ ಮತ್ತು ಲಚ್ಚು ಮಹಾರಾಜ್ ಇವರು ಕಥಕ್ ನೃತ್ಯದಲ್ಲಿ ಪರಿಣತಿಯನ್ನು ಪಡೆದವರಾಗಿದ್ದರು. ಬಾಲ್ಯದಲ್ಲೇ ತಮ್ಮ ತಂದೆಯವರನ್ನು ಕಳೆದುಕೊಂಡ ಬಿರ್ಜೂ ತಮ್ಮ ಚಿಕ್ಕಪ್ಪನವರಾದ ಶಂಭು ಹಾಗೂ ಲಚ್ಚು ಮಹಾರಾಜ್ ಅವರ ಪಾಲನೆಯಲ್ಲಿ ಬೆಳೆದರು. ಅವರಿಂದ ಕಥಕ್ ನೃತ್ಯದ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡರು.

ಕಥಕ್ ನೃತ್ಯದಲ್ಲಿ ಬಹಳವಾದ ಆಸಕ್ತಿ ಇದ್ದ ಬಿರ್ಜೂ ತಮ್ಮ ಏಳನೇ ವಯಸ್ಸಿನಲ್ಲೇ ಮೊದಲ ಬಾರಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ತಮ್ಮ ೯ನೇ ವಯಸ್ಸಿನಲ್ಲಿ ತಂದೆಯವರ ನಿಧನದ ನಂತರ ಆರ್ಥಿಕ ಸಮಸ್ಯೆಗಳ ಸುಳಿಗೆ ಸಿಲುಕಿದ ಇವರ ಕುಟುಂಬ ದೆಹಲಿಗೆ ಸ್ಥಳಾಂತರವಾಯಿತು. ನವದೆಹಲಿಯಲ್ಲಿ ಸಂಗೀತ್ ಭಾರತಿ ಸಂಸ್ಥೆಯಲ್ಲಿ ಬಿರ್ಜೂ ಮಹಾರಾಜ್ ನೃತ್ಯ ತರಭೇತಿಯನ್ನು ಕಲಿಸಲು ಪ್ರಾರಂಭಿಸುವಾಗ ಅವರಿಗೆ ಹದಿಮೂರರ ಹರೆಯ ಎಂದರೆ ಅಚ್ಚರಿಯಾದೀತು. ಆದರೆ ಅವರ ಪರಂಪರೆಯೇ ಅಂಥಹದ್ದು. ಅವರು ತಮ್ಮ ವಿದ್ಯಾರ್ಥಿಗಳಿಗೆ ಕಥಕ್ ನೃತ್ಯ ಕಲೆಯನ್ನು ಬಹಳ ಸೊಗಸಾಗಿ ಹೇಳಿಕೊಡುತ್ತಿದ್ದರು. ಆ ಬಳಿಕ ಅವರು ನವದೆಹಲಿಯ ಭಾರತೀಯ ಕಲಾ ಕೇಂದ್ರ ಹಾಗೂ ಕಥಕ್ ಕೇಂದ್ರಗಳಲ್ಲಿ ತರಭೇತಿ ನೀಡಲಾರಂಭಿಸಿದರು.

ಕಥಕ್ ಕೇಂದ್ರವು ಸಂಗೀತ ನಾಟಕ ಅಕಾಡೆಮಿಯ ಅಂಗಸಂಸ್ಥೆಯಾಗಿತ್ತು. ಬಿರ್ಜೂ ಮಹಾರಾಜ್ ಅವರು ೧೯೯೮ರ ತನಕ ಈ ಕೇಂದ್ರದಲ್ಲಿ ಬೋಧಕ ವೃಂದದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ತಮ್ಮ ನಿವೃತ್ತಿಯ ಬಳಿಕ ತಮ್ಮದೇ ಆದ ಕಥಕ್ ಮತ್ತು ಭಾರತೀಯ ಲಲಿತ ಕಲಾ ಅಕಾಡೆಮೆ ‘ಕಲಾಶ್ರಮ' ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ಕಥಕ್ ನೃತ್ಯದತ್ತ ಆಕರ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಬಿರ್ಜೂ ಮಹಾರಾಜ್ ಅವರು ಕೇವಲ ನೃತ್ಯದಲ್ಲಿ ಮಾತ್ರವಲ್ಲದೇ ಕೆಲವು ಹಿಂದಿ ಚಿತ್ರಗಳಿಗೆ ಹಾಡನ್ನೂ ಹಾಡಿದ್ದಾರೆ, ಜೊತೆಗೆ ನೃತ್ಯವನ್ನೂ ಸಂಯೋಜನೆ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರು ನಿರ್ದೇಶಿಸಿದ ಏಕೈಕ ಹಿಂದಿ ಚಲನ ಚಿತ್ರ ‘ಶತರಂಜ್ ಕೆ ಖಿಲಾಡಿ' ಯ(೧೯೭೭) ಎರಡು ನೃತ್ಯ ದೃಶ್ಯಗಳನ್ನು ಇವರು ಸಂಯೋಜನೆ ಮಾಡಿದ್ದರು. ಅದರ ಜೊತೆಗೆ ಆ ಚಿತ್ರದ ಸಂಗೀತವನ್ನೂ ನಿರ್ದೇಶಿಸಿ, ಹಾಡೂ ಹಾಡಿದ್ದರು. ೧೯೯೭ರ ದಿಲ್ ತೊ ಪಾಗಲ್ ಹೈ, ೨೦೦೧ರ ‘ಗದರ್-ಏಕ್ ಪ್ರೇಮ್ ಕಥಾ’ ಹಾಗೂ ೨೦೦೨ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ ‘ದೇವದಾಸ್’ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ.

ಬಿರ್ಜೂ ಮಹಾರಾಜ್ ಅವರ ಪ್ರತಿಭೆಗೆ ಸಂದ ಗೌರವಗಳು ಹಲವಾರು. ಇವರಿಗೆ ೨೮ನೇ ವಯಸ್ಸಿನಲ್ಲೇ ಕಾಳಿದಾಸ್ ಸಮ್ಮಾನ್ ದೊರೆತಿದೆ. ನೃತ್ಯ ಚೂಡಾಮಣಿ, ಸೋವಿತ್ ಲ್ಯಾಂಡ್ ನೆಹರೂ ಪ್ರಶಸ್ತಿ, ರಾಜೀವ್ ಗಾಂಧಿ ಶಾಂತಿ ಪ್ರಶಸ್ತಿಗಳು ಸಂದಿವೆ. ೨೦೦೨ರಲ್ಲಿ ಲತಾ ಮಂಗೇಷ್ಕರ್ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಹಲವಾರು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪುರಸ್ಕಾರಗಳೂ ದೊರೆತಿವೆ. ಭಾರತ ಸರಕಾರದಿಂದ ಪದ್ಮ ವಿಭೂಷಣ ಗೌರವವೂ ಲಭಿಸಿದೆ. 

ಬಿರ್ಜೂ ಮಹಾರಾಜ್ ಅವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು. ಇವರಲ್ಲಿ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಬಿರ್ಜೂ ಮಹಾರಾಜ್ ಅವರ ಹಾದಿಯಲ್ಲಿ ಸಾಗುತ್ತಿದ್ದು, ಕಥಕ್ ನೃತ್ಯ ಪಟುಗಳಾಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಕಾಲಿಗೆ ಗೆಜ್ಜೆ ಕಟ್ಟಿದ ಬಿರ್ಜೂ ಮಹಾರಾಜ್ ಅವರು ಸುಮಾರು ಏಳು ದಶಕಗಳ ಕಾಲ ಕಥಕ್ ಲೋಕದ ಸಾಮ್ರಾಟರಾಗಿ ಮೆರೆದದ್ದು ಈಗ ಇತಿಹಾಸ. ತಮ್ಮ ೮೩ನೇ ವಯಸ್ಸಿನಲ್ಲಿ ಪರಲೋಕಕ್ಕೆ ಪ್ರಯಾಣ ಬೆಳೆಸಿದ ಕಥಕ್ ನೃತ್ಯಲೋಕದ ಅಭಿಜ್ಞಾತ ಕಲಾವಿದನನ್ನು ನಾವೆಂದೂ ಮರೆಯಬಾರದು ಅಲ್ಲವೇ?

ಚಿತ್ರ ಕೃಪೆ: ಅಂತರ್ಜಾಲ ತಾಣ