ಕಥೆ: ಆರೋಹಣ ಅವರೋಹಣ

ಕಥೆ: ಆರೋಹಣ ಅವರೋಹಣ

 

ಆರೋಹಣ ಅವರೋಹಣ

   ಬಾನುವಾರವಾದ್ದರಿಂದ ಏಳುವಾಗಲೆ ತಡವಾಗಿತ್ತು.ಸೂರ್ಯನ ಬಿಸಿಲು ರೂಮಿನಲ್ಲೆಲ್ಲ ಹರಡಿತ್ತು. ದಡಬಡಸಿ ಎದ್ದೆ. ಪಕ್ಕಕ್ಕೆ ತಿರುಗಿ ನೋಡಿದರೆ ಸರಳ ಆಗಲಿ ಅವಳ ಹಾಸಿಗೆಯಾಗಲಿ ಕಾಣಲಿಲ್ಲ.ತಕ್ಷಣ ನೆನಪಿಗೆ ಬಂದಿತು.ರಾತ್ರಿ ಮಲಗುವಾಗಲೆ ದುಮಗುಡುತ್ತ ಹಾಸಿಗೆಯನ್ನು ಸುತ್ತಿಕೊಂಡು ತೆಗೆದುಕೊಂಡು ಹೋಗಿ ನಡುಮನೆಯಲ್ಲಿ ಮಲಗಿದ್ದಳು. ಅವಳ ಕೋಪ ಸದಾ ಇದ್ದಿದ್ದೆ,ಮತ್ತು ಅದು ಸಕಾರಣವು ಆಗಿತ್ತು. ನಿನ್ನೆ ನಡೆದುದ್ದು ಅದೆ,ಮನೆಗೆ ಬರುವಾಗಲೆ ಸಾಕಷ್ಟು ತಡವಾಗಿತ್ತು, ಸಂಜೆ ದಾಟಿ ರಾತ್ರಿಯಾಗಿತ್ತು. ಬೆಂಗಳೂರಿನಲ್ಲಿ ಬಸ್ಸನ್ನು ಹಿಡಿದು ಮನೆಗೆ ಬರುವಾಗ ಅಷ್ಟು ಹೊತ್ತು. ಸ್ಕೂಟರ್ ಬೈಕ್ ಎಲ್ಲ ನನಗೆ ಕನಸೆ.
ಬಾಗಿಲು ತೆರೆದೆ ಇತ್ತು ಸಿದಾ ಒಳಗೆ ಬಂದೆ,ಗೋಡೆಯ ಪಕ್ಕ ಕುಳಿತು ಸೊಪ್ಪು ಸರಿಮಾಡುತ್ತಿದ್ದಳು. ಹಾಗೆ ಕುರ್ಚಿಯಲ್ಲಿ ಕುಳಿತೆ. ಅವಳಿಂದ ಯಾವ ಮಾತು ಇಲ್ಲ.
   "ಸ್ವಲ್ಪ ಕಾಫಿ ಕೊಡ್ತೀಯ?" ಕೇಳಿದೆ.
   "ಬೆಳಗ್ಗೆ ಹೊರಡುವಾಗಲೆ ಹೇಳಿದ್ದೆ ಕಾಫಿಪುಡಿ ಇಲ್ಲ ತನ್ನಿ ಅಂತ ತಂದಿರಾ?" ಸರಳಳ ಮಾತು ಯಾವಾಗಲು ಕಡ್ಡಿ ಮುರಿದಂತೆ. ಉತ್ತರಿಸಿದರೆ ನನಗೆ ತೊಂದರೆ.ಸುಮ್ಮನೆ ಕುಳಿತೆ ಸ್ವಲ್ಪಹೊತ್ತು, ಹೋಗಲಿ ಟೀವಿಯಾದರು ನೋಡೋಣವೆ ಅಂತ ಎದ್ದು ಗೋಡೆಹತ್ತಿರ  ಹೋಗಿ ಸ್ವಿಚ್ ಅದುಮಿದೆ. ಟೀವಿಯಲ್ಲಿ ಏನು ಬರುತ್ತಿಲ್ಲ ಬರೀ ಚುಕ್ಕಿಗಳು, ಕೇಬಲ್ ನವನ ಹತ್ತಿರ ಕರೆಂಟ್ ಹೋಗಿರಬಹುದಾ?
   "ಬೆಳಗ್ಗೆ ಬಂದಿದ್ದ ಕೇಬಲ್ ನವನು ಎರಡು ತಿಂಗಳು ಬಾಕಿ ಕೊಟ್ಟಿಲ್ಲ ಅಂತ ಕೇಬಲ್ ಕಟ್ ಮಾಡಿಹೋದ" ಮತ್ತೆ ಮಡದಿಯಿಂದ ಆರತಿ.
   "ಅಲ್ಲ ನಾನು ಎದ್ದು ಬರುವವರೆಗೂ ಸುಮ್ಮನಿದ್ದು ನಂತರ ಹೇಳುತ್ತಿಯಲ್ಲ ಮೊದಲೆ ಹೇಳಬಾರದ ಎದ್ದು ಬರುವುದು ತಪ್ಪುತ್ತಿತ್ತು" ಎಂದೆ
  ಅಲ್ಲಿಂದ ಪ್ರಾರಂಬವಾಯಿತು ಅವಳ ಮಾತಿನ ಹರಿ, ಮದುವೆಯಾಗಿ ದಿನದಿಂದ ಇಲ್ಲಿ ಬಂದು ಅನುಭವಿಸುತ್ತಿರುವ ಕಷ್ಟಗಳನ್ನೆಲ್ಲ ಮಾತಿನಲ್ಲಿ ಕಕ್ಕಿದಳು. ನನ್ನ ಜೊತೆಯೆ ಆಫೀಸಿನಲ್ಲಿರುವರೆಲ್ಲ ಎಷ್ಟೊ ನೆಮ್ಮದಿಯಾಗಿ ಸಂಸಾರ ಮಾಡುತ್ತಿರುವಾಗ ನಿಮ್ಮ ಹೇಡಿತನದಿಂದ ನಮಗೀ ಗತಿ ಬಂದಿದೆ ಅಂದಳು.  ನಿಜ ಭ್ರಷ್ಟಾಚಾರಿಯಾಗದೆ ಪ್ರಾಮಾಣಿಕನಾಗಿದ್ದಲ್ಲಿ ಈಗ ಸಿಗುವ ಬಿರುದು ಪಟ್ಟ  ಅದೇ "ಹೇಡಿ" ಎಂದು.ಇದು ಮೊದಲ ಸಲವೇನು ಅಲ್ಲ. ಆದರೆ ನಿನ್ನೆ ನಾನೇಕೊ ಸಹನೆ ಕಳೆದು ಮಾತನಾಡಿದೆ,ಮಾತು ವಿಕೋಪಕ್ಕೆ ತಿರುಗಿತು. ನಾನು ನನ್ನ ಸಹಗೆ ಮೀರಿ ಕೈಮೆಲೆತ್ತಿದೆ,ಆದರೆ ಹೊಡೆಯಲಿಲ್ಲ. ಅವಳು ನನ್ನ ಎದುರಿಗೆ ಕಣ್ಣಿಗೆ ಕಣ್ಣು ಸೇರಿಸಿ ದೃಷ್ಟಿಯಿಟ್ಟು ನಿಂತಳು "ಹೊಡೆಯುತ್ತೀರ ಹೊಡೆಯಿರಿ" ಎಂದು, ಅದು ನಿಮ್ಮ ಕೈಲಾಗದು ಎಂಬಂತೆ. ನಾನು ಸೋತುಹೋಗಿ ತಲೆತಗ್ಗಿಸಿ ಕುಳಿತೆ. ಅದು ಅವಳಿಗೆ ಹೊಸದೇನು ಅಲ್ಲ ಅಳುತ್ತ ಕುಳಿತ ಅವಳು ಮತ್ತೆ ಹಳೆ ವಿಷಯವೆ ತೆಗೆದಳು. ನೀವು ಏನು ಮಾಡುವುದಿಲ್ಲ ನನ್ನನ್ನು ಮಾಡಗೋಡುವದಿಲ್ಲ, ನಿಮ್ಮ ಹುಂಬತನಕ್ಕೆ ಆದರ್ಶ ಎಂತ ಹೆಸರು ಅಂತ ಹಂಗಿಸಿದಳು. ನಿಜವೇನು?. ಅವಳು ಸುಮಾರು ಒಂದುವರ್ಷದಿಂದ ನನ್ನನ್ನು ಒಪ್ಪಿಸುತ್ತಿದ್ದಾಳೆ, ಅವಳ ತಂದೆ ತಕ್ಕ ಮಟ್ಟಿಗೆ ಸ್ಥಿಥಿವಂತರೆ, ಅವರು ನಮಗಾಗಿ ಮನೆ ಕಟ್ಟಿಸಿಕೊಡಲು ಸಿದ್ದವಿದ್ದಾರೆ ಅಲ್ಲದೆ ನಾನು ಈಗ ಮಾಡುತ್ತಿರುವ ಈ ಸರ್ಕಾರಿ ಎರಡನೆ ದರ್ಜೆ ಗುಮಾಸ್ತನ ಕೆಲಸ ಬಿಡಲು ಸಿದ್ದವಿದ್ದಲಿ ಯಾವುದಾದರು ವ್ಯಾಪರ ವ್ಯವಹಾರಕ್ಕೆ ಕೈಹಾಕಿದಲ್ಲಿ ಅದಕ್ಕೆ ಸಹಾಯಕ್ಕೆ ಬರುವುದಕ್ಕು ಸಿದ್ದ ಅಂತ ತಿಳಿಸಿದ್ದಾರೆ. ಆದರೆ ಏಕೊ ನನ್ನ ಮನ ಒಪ್ಪುತ್ತಿಲ್ಲ ಇದು ಆದರ್ಶವೊ ಅಥವ ಅವಳೆ ಹೇಳುವಂತೆ ನನ್ನ ಹೇಡಿತನವೊ ನನಗೆ ತಿಳಿಯುತ್ತಿಲ್ಲ.
   ನಂತರ ಮಾತು ನಿಂತು ಮೌನ ಆವರಿಸಿತು. ನಾನೆ ಎದ್ದು ಅಡಿಗೆಮನೆಗೆ ಹೋಗಿ ತಟ್ಟೆಗೆ ಅನ್ನ ಬಡಸಿ ತಂದು ತಿಂದೆ. ಅವಳ ಸೊಪ್ಪು ಬಿಡಿಸಿ ಆಯಿತೇನೊ ಎದ್ದು ಒಳಗೆ ಹೋದಳು. ಊಟಮಾಡಿದಳೊ ಇಲ್ಲವೋ ತಿಳಿಯಲ್ಲಿಲ್ಲ ಒಳಗೆ ಪಾತ್ರೆಗಳ ಸದ್ದಾಗುತ್ತಿತ್ತು. ನಾನು ಅವಳಿಗೆ ಸ್ವಲ್ಪವಾದರು ಮನಸಿಗೆ ಸಮಾದಾನವಾಗಲಿ ಎಂದು ರೂಮಿನಲ್ಲಿ ಚಾಪೆ ಹಾಸಿ ಎರಡು ಹಾಸಿಗೆಗಳನ್ನು ಹಾಸಿದೆ. ಕೆಲಸ ಮುಗಿಸಿಬಂದ ಆಕೆ ದುಮುಗುಡುತ್ತ ತನ್ನ ಹಾಸಿಗೆಯನ್ನು ಸುತ್ತಿ ನಡುಮನೆಗೆ ತೆಗೆದುಕೊಂಡು ಹೋದಳು. ನಾನು ಅಸಹನೆಯಿಂದ "ಇದೇನೆ?" ಅಂದೆ.
   "ನಾನು ಇನ್ನೆಂದು ನಿಮ್ಮ ಜೊತೆ ಇರಲಾರೆ ನಿಮ್ಮ ಮುಖ ನೋಡಲೆ ಅಸಹ್ಯ ಎನಿಸುತ್ತದೆ" ಅಂದಳು,ನನ್ನ ಸಹನೆಯೂ ಮೀರಿ ಹೋಯಿತು.
   "ಏನಾದರು ಮಾಡಿಕೋ ಹಾಳಾಗಿಹೋಗು" ಎಂದು ಕಿರುಚಿ ಮುಸುಗುಹಾಕಿ ಮಲಗಿದ್ದೆ.


   ಎಲ್ಲ ನೆನೆಯುತ್ತ ಎದ್ದು ಕುಳಿತೆ.ಹೊರಗೆಲ್ಲ ಎಂತದೊ ಮೌನ. ರಾತ್ರಿಯ ಸಿಟ್ಟು ಇನ್ನೂ ಇಳಿದಿಲ್ಲವೇನೊ ಎಂದು ರೂಮಿನಿಂದ ಹೊರಬಂದೆ. ಎಲ್ಲಿಗೆ ಹೋದಳು ಹಾಲು ತರಲ? ಅಡಿಗೆ ಮನೆಗೆ ಹೋದೆ ರಾತ್ರಿ ತೊಳೆದು ಜೋಡಿಸಿದ ಪಾತ್ರೆಗಳು ನನ್ನನ್ನು ಅಣಕಿಸಿದವು. ಬಚ್ಚಲು ಮನೆಗೆ ಹೋದರೆ ಇನ್ನು ಒಲೆಯೆ ಹಚ್ಚಿಸಿಲ್ಲ. ಹೊರಗೆ ಬಂದೆ ಮುಂದಿನ ಬಾಗಿಲು ತೆರೆದೆ ಇತ್ತು.ಎಲ್ಲಿ ಹೋದಳು ಅನ್ನುವ ಗೊಂದಲ. ಪಕ್ಕದ ಮನೆಯಾಕೆ,ಎಂತದೊ ಅವಳ ಹೆಸರು ಗೀತ ಇರಬೇಕು,ಬಕೆಟಿನಲ್ಲಿ ಸಗಣಿನೀರು ಕಲಸಿ ನೆಲಕ್ಕೆ ಚುಮುಕಿಸುತ್ತಿದ್ದಳು. ಅವಳನ್ನು ಪ್ರಶ್ನಿಸಿದೆ "ಸರಳ ನಿಮ್ಮ ಮನೆಗೇನಾದರು ಬಂದಿದ್ದಾಳ?" ಎಂದು. ಆಕೆ ನೆಟ್ಟಗೆ ನಿಂತು ನನ್ನ ಮುಖವನ್ನೆ ವಿಚಿತ್ರವಾಗಿ ದಿಟ್ಟಿಸಿದಳು
   "ಬೆಳಗ್ಗೆ ಆರಕ್ಕೆ ಬಂದು ಅಮ್ಮನ ಮನೆಗೆ ಹೋಗ್ತಿದ್ದೀನಿ ಕೋಲಾರಕ್ಕೆ ಅಂತ ಹೇಳಿ ಹೋದರು, ಏಕೆ ನಿಮಗೆ ಹೇಳಿ ಹೋಗಲಿಲ್ವ?" ಅಂದಳು. ಅವಳ ದ್ವನಿ ಮತ್ತು ನೋಟ ಬಕೆಟಿನಲ್ಲಿದ್ದ ಸಗಣಿಯನ್ನು ನನ್ನ ಮುಖಕ್ಕೆ ಎರೆಚಿದಂತಿತ್ತು. ಮಾತನಾಡದೆ ಹಿಂದೆ ತಿರುಗಿದೆ. ಅವಳು ಗೊಣಗುತ್ತಿದ್ದುದ್ದು ಜೋರಾಗಿಯೆ ಕೇಳಿಸಿತು "ಎಂತಾ ಗಂಡಹೆಂಡತಿಯೊ ದೇವರಿಗೆ ಪ್ರೀತಿ" ಅಂತ. ಬಾಗಿಲು ಮುಚ್ಚಿ ಒಳಗೆ ಬಂದು ಕುಳಿತೆ ಏಕೊ ಏನು ತೋಚದು.
   ಎಷ್ಟು ಹೊತ್ತು ಹಾಗೆ ಕುಳಿತೆನೊ ತಿಳಿಯದು. ಇದೆಂತ ಪಿರಿಪಿರಿ ಬಾನುವಾರ ರಜಾದಿನ ಮನೆಯಲ್ಲಿ ನೆಮ್ಮದಿಯಿಂದ ಇರೋಣ ಅಂದುಕೊಂಡರೆ ಇದೆಂತಹ ದುರಾದೃಷ್ಟ.ಇದೆಂತಹ ಜನ್ಮವೊ ಸಾಕು ಅನ್ನಿಸಿತು.ಎದ್ದು ಹಾಗೆಯೆ ತಣ್ಣೀರಿನಲ್ಲಿಯೆ ಸ್ನಾನ ಮುಗಿಸಿದೆ. ಮನೆಯಲ್ಲಿದ್ದು ಇನ್ನೇನು ಮಾಡುವುದು? ಕೋಲಾರಕ್ಕೆ ಅವಳ ಅಪ್ಪನ ಮನೆಗೆ ಹೋಗೋದಾ?  ಏಕೋ ಅಸಹ್ಯ ಅನ್ನಿಸಿತು.ಅವಳ ಅಪ್ಪ ಅಮ್ಮನ ಬುದ್ದಿವಾದ ಆ ಒರಟು ಭಾವಮೈದುನನ ಉರುಟು ಕಣ್ಣೋಟ ಎಲ್ಲವನ್ನು ಎದುರಿಸಲಾರೆ ಬೇಡ ಅನ್ನಿಸಿತು. ಬಟ್ಟೆದರಿಸಿ ಬೀಗ ಹಾಕಿ ಮನೆಯಿಂದ ಹೊರಟೆ.
   ರಸ್ತೆಕೊನೆಯಲ್ಲಿನ ಗೂಡಂಗಡಿಯಲ್ಲಿ ಅರ್ದ ಕಾಫಿ ಕುಡಿದು ಹೊರ ನಡೆಯುವಾಗಲೆ ಎದುರಿಗೆ ಸಿಟಿಬಸ್ ಚಲಿಸುತ್ತಿತ್ತು ಏನು ಎತ್ತ ಅಂತ ನಿರ್ದರಿಸದೆ ಓಡುತ್ತ ಆ ಬಸ್ಸನ್ನು ಹತ್ತಿ ಬಾಗಿಲಹತ್ತಿರವೆ ಇದ್ದ ಸೀಟಿನಲ್ಲಿ ಕುಳಿತೆ. ಸ್ನಾನ ಮಾಡಿರದ ರಾತ್ರಿ ಕುಡಿದ ಅಮಲು ಇನ್ನು ಇಳಿಯದ ಕಂಡಕ್ಟರ್ ಹತ್ತಿರ ಬಂದು 'ಟಿಕೇಟ್' ಅಂದ ಒರಟಾಗಿ. ನಾನು ಸಣ್ಣನೆ ದ್ವನಿಯಲ್ಲಿ ಕೇಳಿದೆ "ಎಲ್ಲಿಗೆ ಹೋಗುತ್ತಪ್ಪ?" ಎಂದು.
   ಅವನಿಗೆ ಏಕೆ ಪಿತ್ತ ನೆತ್ತಿಗೇರಿತೊ ತಿಳಿಯದು, " ಸ್ಮಶಾನಕ್ಕೆ ಹೋಗುತ್ತೆ ಬರ್ತೀಯಾ?" ಎಂದವನು "ಬೋರ್ಡ್ ನೋಡದೆ ಬಸ್ಸು ಹತ್ತಿ ತಲೆ ತಿಂತೀರಿ ಎಲ್ಲಿಗೆ ಹೋಗ್ಬೇಕು" ಎಂದ.
   ನಾನು ಏನು ಉತ್ತರಿಸಲು ತೋಚದೆ ಮೂಕನಾಗಿ ನಿಂತೆ. ಅವನು ವಿಷಲ್ ಹಾಕಿ ಬಸ್ ನಿಲ್ಲಿಸಿ " ಕೆಳಗೆ ಇಳಿ" ಅಂದ ಏಕವಚನದಲ್ಲಿ. ನಾನೇಕೊ ದಡದಡ ಇಳಿದುಬಿಟ್ಟೆ. ಬಸ್ಸು ನನ್ನ ಮುಖದಮೇಲೆ ಹೊಗೆ ಉಗುಳುತ್ತ ಹೊರಟು ಹೋಗಿ ನಾನು ಒಂಟಿಯಾಗಿ ನಿಂತೆ. ನಂತರ ಮುಂದಿನ ಸ್ಟಾಪಿನವರೆಗು ನಡೆದು ಹೋದೆ, ಹಿಂದೆಯೆ ಮೆಜೆಸ್ಟಿಕ್ ಹೋಗುವ ಬಸ್ಸು ಬಂದಿತು. ನಿಲ್ಲಿಸಿದ ಹತ್ತಿ ಕುಳಿತು ಟಿಕೆಟ್ ಪಡೆದೆ. ಎಲ್ಲಿಗೆ ಹೋಗಬೇಕೆಂಬ ನಿರ್ದಾರವಿಲ್ಲ. ದಿಕ್ಕು ತಪ್ಪಿದವನಂತಾಗಿದ್ದೆ.
ಮೆಜಿಸ್ಟಿಕ್ಕಿನಲ್ಲಿ ಇಳಿದು ಬಸ್ಸು ನಿಲ್ದಾಣಾದತ್ತ ನಡೆದು ಹೋದೆ. ಅಲ್ಲೆಲ್ಲ ಸುತ್ತಾಡುತ್ತಿರುವಂತೆ ಕೋಲಾರದ ಬಸ್ಸುಗಳು ಕಣ್ಣಿಗೆ ಬಿದ್ದವು. ಎಂತದೊ ಸುಳ್ಳು ನಿರೀಕ್ಷೆ ಸರಳಾ ಏನಾದರು ಕಾಣಾಸಿಗಬಹುದಾ ಅಂತ. ಇಲ್ಲ ಹುಸಿಯಾಯಿತು. ಓಡಾಡುತ್ತಿರುವಂತೆ ನಂದಿಬೆಟ್ಟಕ್ಕೆ ಹೊರಟ ಬಸ್ಸುಗಳು ಕಾಣಿಸಿದವು. ಎಂದೋ ಕಾಲೇಜಿನ ದಿನದಲ್ಲಿ ಹೋದ ನೆನೆಪು, ಅಲ್ಲಿ ಟಿಪ್ಪುಡ್ರಾಪ್ ಇದೆ ಅಂತ ಹಿಂದೆಯೆ ನೆನಪಿಗೆ ಬಂತು. ಏಕೊ ಹೋಗಬೇಕೆನಿಸಿ ಟಿಕೆಟ್ ಪಡೆದು ಬಸ್ಸು ಹತ್ತಿ ಕುಳಿತೆ. ಹೊಟ್ಟೆಯಲ್ಲಿ ಎಂತದೋ ಸಂಕಟ. ಜನರು ತುಂಬಿ ಬಸ್ಸು ಹೊರಟಂತೆ ಎಲ್ಲರಲ್ಲು ಸಡಗರ. ಕೆಲವರಾದರು ನನ್ನನ್ನು ವಿಚಿತ್ರ ಎಂಬಂತೆ ದಿಟ್ಟಿಸಿದರಾ? ತಿಳಿಯದು.
   ನಂದಿಯಲ್ಲಿ ಇಳಿದಾಗ ಗಂಟೆ ಹನ್ನೊಂದು ದಾಟಿತ್ತೇನೊ ಎಲ್ಲರು ಇಳಿದು ಗುಂಪು ಗುಂಪಾಗಿ ಸುತ್ತುತ್ತಿದರೆ ನಾನು ಅನಾಥನಂತೆ ಒಂಟಿಯಾಗಿಯೆ ಓಡಾಡುತ್ತಿದ್ದೆ. ಎಲ್ಲಿ ಹೋಗಬೇಕೆಂಬ ಗುರಿಯಾಗಲಿ ಉತ್ಸಾಹವಾಗಲಿ ಇಲ್ಲ. ಕೊಳದ ಸಮೀಪ ಹೋದರೆ ಜನವಿದ್ದರು. ಮೇಲೆ ಬಂದು ದೇವಾಲಯದತ್ತ ಹೊರಟೆ ಏಕೊ ಒಳಗೆ ಹೋಗಲು ಬೇಸರವೆನಿಸಿ ಆಚೆ ಬಂದು ನಡೆಯುತ್ತ ಬಂಡೆಗಳ ಮೇಲೆ ಸಾಗುತ್ತ ಇರುವಂತೆ ಟಿಪ್ಪು ಡ್ರಾಪ್ ಕಾಣಿಸಿತು. ಟಿಪ್ಪು ಕೈದಿಗಳನ್ನು ಶತ್ರುಗಳನ್ನು ತಳ್ಳಿಸಿ ಕೊಲ್ಲುತಿದ್ದ ಜಾಗ. ಜನರೆಲ್ಲ ಉತ್ಸಾಹವಾಗಿಯೆ ಓಡಾಡುತ್ತಿದ್ದರು. ಯುವಜೋಡಿಗಳು ಹೆಚ್ಚು. ಹಸುವಿಗೊ ಬಿಸಿಲಿನ ಜಳಕ್ಕೊ ಕಣ್ಣು ಮಂಜು ಮಂಜು ಅನ್ನಿಸಿತು. ಹಾಗೆಯೆ ಬಂಡೆಯಮೇಲೆ ಕುಳಿತು ದೂರದ ಪ್ರಜ್ವಲ ಗಗನದತ್ತ ದೃಷ್ಟಿಯಿಟ್ಟೆ. ಎಷ್ಟು ಹೊತ್ತಾಯಿತೊ ಅರಿವಿಲ್ಲ.
   ಒಳಗೆ ಎಂತದೋ ಕೇಳಿಸುತ್ತಿರುವ ದ್ವನಿಗಳು. "ನೀನು ಏತಕ್ಕು ನಾಲಯಕ್ಕು ನಿನ್ನ ಕೈಲಿ ಏನು ಸಾಗದು. ಬರಿ ತಿನ್ನಲಿಕ್ಕೆ ಸರಿ " ಅವಹೇಳನದ ಮಾತುಗಳು ಯಾರವು ? ಚಿಕ್ಕವಯಸ್ಸಿನಲ್ಲಿ ಅಪ್ಪನಿಂದ ಸದಾ ಕೇಳುತ್ತಿದ್ದ ಮಾತುಗಳು. ಬೈಗಳು.
"ಶಂಕರ ನಿನ್ನ ಕೈಲಾಗೊಲ್ಲ ಬಿಡಪ್ಪ ನಾನೆ ಮಾಡ್ಕೋತೀನಿ" ಅಮ್ಮನ ಅಸಹನೆಯ ಉದ್ಗಾರಗಳು. ನಾನು ಏತಕ್ಕು ಬಾರದವನು. "ನೀನು ಹೇಡಿ ನಿನ್ನ ಮುಖನೋಡಲು ಅಸಹ್ಯ ನಿನ್ನ ಜೊತೆ ಬಾಳಲಾರೆ"  ಸರಳ ಪದೆ ಪದೆ ನುಡಿಯುತ್ತಿದ ಕೋಪದ ನುಡಿಗಳು ನನ್ನ ಕಿವಿಯಲ್ಲಿ ಅರಳು ಹುರಿದಂತೆ ಸಿಡಿಯುತ್ತಿದ್ದವು. ಆಫೀಸಿನಲ್ಲು ಅದೇ ತಿರಸ್ಕಾರ ಸಹೋದೋಗಿಗಳಿಂದ. ಕೆಲಸಕ್ಕು ಸೇರಿ ಹನ್ನೆರಡು ವರ್ಷಗಳಾಗುತ್ತ ಬಂತು. ಇಂದಿಗೂ ಅದೇ ಭಯ, ಯಾರದಾರು ತಾವಗಿಯೆ ಲಂಚ ಎಂದು ಹಣ ಕೊಡಬಂದರು ಕೈಕಾಲುಗಳಲ್ಲಿ ನಡುಕ. ಅಲ್ಲಿನ ವಾತವರಣಕ್ಕೆ ತಾನು ಹೊಂದಿಕೊಳ್ಳಲಾರೆ. ಹಾಗಾಗಿ ಪ್ರತಿದಿನ ತನ್ನನ್ನು ರೂಮಿಗೆ ಕರೆಸಿ ಮನಸಿಗೆ ಬಂದಂತೆ ಜರಿಯುವುದು ತನ್ನ ಮೇಲಾದಿಕಾರಿಯ ದಿನದ ಪರಮ ಕರ್ತವ್ಯ. ತಾನು ಅವರ ರೂಮಿನಿಂದ ಪ್ರತಿಸಾರಿ ತಲೆ ತಗ್ಗಿಸಿ ಹೊರಬರುವಾಗಲು ಜೊತೆಯವರು ಕುಹಕ ವ್ಯಂಗ ನಗು. ಇನ್ನೆಷ್ಟು ದಿನ ಈ ಅಪಮಾನದ ಬೆಂಕಿಯಲ್ಲಿ ಬೇಯುವುದು. ಬಾಳು ಸವೆಸುವುದು ?
   ಸೂರ್ಯ ನಡುನೆತ್ತಿ ಬಿಟ್ಟು ಪಶ್ಚಿಮದತ್ತ ಇಳಿಯುತ್ತಿದ್ದ. ಟಿಪ್ಪುಡ್ರಾಪಿನತ್ತ ಜನ ಬರುವುದು ಕಡಿಮೆಯಾಗುತ್ತಿತ್ತು.ನಾನು ಏನೊ ನಿರ್ದರುಸುತ್ತ ಎದ್ದು ನಿಂತೆ, ತೂರಾಡುವಂತಾಗುತ್ತಿತ್ತು. ಪಕ್ಕದಲ್ಲಿ ಯಾರೊ ಬಂದು ನಿಂತರು. ತಿರುಗಿದೆ, ಯಾರೋ ಪೊಲೀಸ್ ಪೇದೆ."ಎಲ್ಲಿನವರು ಸಾರ್ ನೀವು" ಅಂದ. ನಾನು ಅವನತ್ತ ನೋಡುತ್ತ ಬೆಂಗಳೂರು ಅಂದೆ. ಅದಕ್ಕವನು
"ನೋಡಿ ನಾನು ನಾಲಕ್ಕು ಐದು ಸುತ್ತು ಬರುವಾಗ ಗಮನಿಸಿದ್ದೀನಿ ನೀವು ಬೆಳಗಿನಿಂದಲೂ ಇಲ್ಲೆ ಕುಳಿತಿದ್ದೀರಿ. ತಿಳಿಯಿರಿ ಇದು ಅಂತ ಒಳ್ಳೆಯ ಜಾಗವಲ್ಲ. ಎಂತ ಗಟ್ಟಿಮನಸ್ಸಿನವರು ಇಲ್ಲಿ ಅಳುಕಿ ವೀಕ್ ಆಗಿಬಿಡ್ತಾರೆ. ಜಾಗವೆ ಅಂತದೂ, ನೀವು ಇಲ್ಲಿಂದ ಹೊರಡಿ" ಅಂದ. ನಾನು ಅವನ ಮುಖವನ್ನೆ ದಿಟ್ಟಿಸಿದೆ. ಅವನು ಸ್ವಲ್ಪ ಒರಟುದ್ವನಿಯಲ್ಲಿಯೆ " ಹೊರಡಿ ಅಂದೆನಲ್ಲ ಸಂಜೆಯಾದ ನಂತರ ಇಲ್ಲಿರುವಂತಿಲ್ಲ" ಎಂದ.
   ನಾನು ನಿದಾನವಾಗಿ ಕಾಲೆಳೆಯುತ್ತ ಸಾಗಿದೆ. ಹೇಗೆ ಯಾವ ಕಡೆನಡೆದನೊ ಗಮನಿಸಲಿಲ್ಲ. ನಂದಿಯಿಂದ ಕೆಳಗೆ ಇಳಿಯುವ ರಸ್ತೆಗೆ ಬಂದು ಸಾಗಿದೆ. ಕತ್ತಲಾವರಿಸುತ್ತಿತ್ತು ಎಷ್ಟು ನಡೆದನೊ ಅರಿವಿಲ್ಲ. ಎಲ್ಲಿರುವನೋ ತಿಳಿಯದು. ರಸ್ತೆಯಲ್ಲಿ ಸೈಕಲ್ಲಿನಲ್ಲಿ ನಿದಾನವಾಗಿ ಬಂದಾತನನ್ನು ಕೇಳಿದೆ ಹತ್ತಿರವಿರುವ ಊರು ಯಾವುದು ಅಂತ. ಅವನು ನನ್ನ ಮುಖ ನೋಡುತ್ತ. ಕೈತೋರಿಸಿ ಹೇಳಿದ
   "ಹೀಗೆ ನಡೆಯುತ್ತ ಹೋಗಿ ಅರ್ದಗಂಟೆಯಲ್ಲಿ ಚಿಕ್ಕಬಳ್ಳಾಪುರದಲ್ಲಿರುತ್ತೀರಿ". ಸಮಯವೆಷ್ಟಾಯಿತೊ ಗಡಿಯಾರವನ್ನು ಕಟ್ಟಿಲ್ಲ. ಬೆಳಗ್ಗೆಯಿಂದ ಏನು ತಿನ್ನಲಿಲ್ಲ. ಹೇಗೊ ಚಿಕ್ಕಬಳ್ಳಾಪುರ ತಲುಪಿದೆ ಹಸಿವಾಗುತ್ತಿತ್ತು. ಕಣ್ಣಿಗೆ ಕಾಣಿಸಿದ ಹೋಟೆಲಿಗೆ ಹೋಗಿ ಇಡ್ಲಿ ತಿಂದು ಕಾಫಿ ಕುಡಿದೆ. ಸ್ವಲ್ಪ ಶಕ್ತಿ ಬಂದಂತಾಯಿತು.
   ಬಸ್ಸು ನಿಲ್ದಾಣವನ್ನು ಹುಡುಕುತ್ತ ಬರುವಾಗಲೆ ಒಂದು ಬೆಂಗಳೂರಿನ ಬಸ್ಸು ಹೊರಟು ನಿಂತಿತ್ತು. ಏಕೊ ಬಸ್ಸು  ಖಾಲಿ ಖಾಲಿಯಾಗಿಯೆ ಇತ್ತು. ಹತ್ತಿ ಮದ್ಯದಲ್ಲಿ ಕಿಟಕಿಯ ಪಕ್ಕದಲ್ಲಿ ಜಾಗ ಆರಿಸಿ ಕುಳಿತೆ.
   ಸ್ವಲ್ಪ ಹೊತ್ತಿನಲ್ಲಿಯೆ ಇಬ್ಬರು ಹೆಂಗಸರು ಬಸ್ಸು ಹತ್ತಿದರು ಕೂಲಿಯವರಂತೆ ಕಾಣುತ್ತಿದ್ದ ಚಿಕ್ಕವಯಸಿನಾಕೆ ಸೊಂಟದಲ್ಲಿ ಚಿಕ್ಕ ಮಗುವನ್ನು ಹಿಡಿದಿದ್ದಳು. ಮತ್ತೊಬ್ಬಳು ಅವಳ ಅತ್ತೆಯೊ ಅಮ್ಮನೊ ಇರಬಹುದಾದ ವಯಸ್ಸಿನವಳು ಬಾಯಲ್ಲಿ ಎಲೆ ಹಾಕಿ ಅಗೆಯುತ್ತಿದ್ದಳು , ಅವಳ ಮುಖ ನಿರ್ಲಿಪ್ತ. ಅವರಿಬ್ಬರು ಬರುತ್ತ ನನ್ನ ಕಡೆಯೆ ನೋಡುತ್ತ ಖಾಲಿಯಾಗಿದ್ದ ನನ್ನ ಪಕ್ಕ ಕುಳಿತರು. ನನಗೆ ಎಂತದೋ ಮುಜುಗರ, ಕಿಟಕಿಗೆ ಒತ್ತಿ ಕುಳಿತೆ. ಕಂಡಕ್ಟರ್ ಟಿಕೆಟ್ ಕೊಟ್ಟಂತೆ ಬಸ್ಸು ಹೊರಟಿತು.
ಪಕ್ಕದಲ್ಲಿ ಕಪ್ಪಗೆ ದುಂಡುಮುಖ ಹೊತ್ತು ಕುಳಿತಿದ್ದ ಆಕೆ ತನ್ನಷ್ಟೆ ಕಪ್ಪಗಿದ್ದ ಮಗುವನ್ನು ತನ್ನ ತೊಡೆಯಮೇಲೆ ಕೂಡಿಸಿಕೊಂದಿದ್ದಳು. ಏಕೊ ಆ ಮಗುವು ನನ್ನ ಕಡೆ ಪದೆ ಪದೆ ನೋಡುತ್ತ ನಗುತ್ತಿತ್ತು. ನಾನು ಸುಮ್ಮನೆಯೆ ಇದ್ದೆ. ಆ ಮಗು ಈಗ ನನ್ನ ಕಡೆ ಬಗ್ಗಿ ನನ್ನ ಜೇಬಿಗೆ ಕೈಸೇರಿಸಿ ಹಿಡಿದು ನನ್ನನ್ನು ಎಳೆಯಿತು. ಆಕೆ ಗಾಬರಿಯಾದಳು, "ಏ ಬಿಡೊ ಸಾಹೇಬರ ಹತ್ತಿರ ಹೋಗಬೇಡ" ಎನ್ನುತ್ತ ಮಗುವನ್ನು ಎಳೆದಳು. ಆದರೆ ಆ ಮಗು ನನ್ನ ಶರ್ಟನ್ನು ಜೇಬಿನ ಹತ್ತಿರ ಹಿಡಿದಿರುವದನ್ನು ಬಿಡುತ್ತಿಲ್ಲ.
   ನಾನು ಸಾಮಾನ್ಯವಾಗಿ ಮಕ್ಕಳನ್ನು ಎತ್ತಿಕೊಳ್ಳುವದಿಲ್ಲ, ಆದರೂ ಏಕೋ ಕಪ್ಪಗಿದ್ದರು ದುಂಡು ಡುಂಡಾಗಿದ್ದು ಮುದ್ದಾಗಿದ್ದು ನಗುತ್ತಿದ್ದ ಆ ಮಗುವನ್ನು ಎತ್ತಿಕೊಳ್ಳಬೇಕೆನಿಸಿತು. "ಪರವಾಗಿಲ್ಲ ಬಿಡಮ್ಮ ಏಕೊ ಅವನು ನನ್ನ ಹತ್ತಿರ ಬರುತ್ತೀನಿ ಅನ್ನುತ್ತಿದ್ದಾನೆ" ಎನ್ನುತ್ತ ಕೊಡು ಅಂತ ಎತ್ತಿಕೊಂಡೆ. ಆಕೆ ಸಂಕೋಚದಿಂದಲೆ ಕೊಟ್ಟಳು.
   ಮಗು ನನ್ನ ತೊಡೆಯಮೇಲೆ ನಿಂತು ಕೇಕೆ ಹಾಕುತ್ತ ಕುಣಿಯುತ್ತಿತ್ತು.ಆಕೆ "ಸಾಹೇಬರ ಬಟ್ಟೆ ಕೊಳೆ ಮಾಡ್ತೀಯ?" ಎನ್ನುತ್ತ ತನ್ನ ಕೊಳಕು ಟವಲ್ಲನ್ನು ನನ್ನ ತೊಡೆಯಮೇಲೆ ಹಾಕಿದಳು. ನಾನು ಮಗುವಿನ ನಗುವನ್ನು ನೋಡುತ್ತಿರುವಂತೆ ನೆನಪಿಗೆ ಬಂದಿತು. ಹದಿನೈದು ದಿನದ ಕೆಳಗೆ ಸರಳ ಹೇಳಿದ್ದಳು, ಅವಳು ಹೊರಗಾಗದೆ ಮೂರು ತಿಂಗಳಾಗಿತ್ತು. ಮದುವೆಯಾಗಿ ಐದು ವರ್ಷಗಳ ನಂತರ ಆಕೆ ತಾಯಿಯಾಗುತ್ತಿದ್ದಳು, ಆಕೆ ಸಂತಸಪಟ್ಟಿದ್ದಳು. ಡಾಕ್ಟರ್ ಬಳಿ ತೋರಿಸಿ ತಾನು ಗರ್ಬಿಣಿ ಅಂತ ಗಟ್ಟಿಮಾಡಿಕೊಂಡಿದಳು.
   ಇದ್ದಕಿದ್ದಂತೆ ನನ್ನ ಮನಸ್ಸು ಮೃದುವಾಯಿತು. ನಾನೆಷ್ಟರವನು ಆಕೆಗೆ ಎಂದು ಏನನ್ನು ತಂದುಕೊಡಲಿಲ್ಲ, ಕೊಡಿಸಲಿಲ್ಲ. ಬರೀ ನನ್ನ ಕಷ್ಟಗಳನ್ನೆ ದೊಡ್ಡದು ಮಾಡಿಕೊಂಡೆ, ಅವಳಾದರು ನನ್ನನ್ನು ಸೇರಿ ಏನು ಸುಖಪಟ್ಟಳು?. ಅನ್ನಿಸಿತು. ಕಳೆದ ಯುಗಾದಿಯಂದು ಒಂದು ಸೀರೆ ಕೇಳಿದ್ದಳು ಹಸಿರುಬಣ್ಣದ್ದು, ತಾನು ಕೊಡಿಸಲಾಗಲಿಲ್ಲ. ಏನೇನೊ ಕಾರಣಹೇಳಿ ತಪ್ಪಿಸಿಬಿಟ್ಟೆ. ಅವಳಾದರು ಏನು ದೊಡ್ಡದು ಬಯಸುತ್ತಿದ್ದಾಳೆ? ನೆಮ್ಮದಿಯ ಎರಡುಹೊತ್ತಿನ ಊಟ, ಮೈಮೇಲೆ ಬಟ್ಟೆ. ಅದನ್ನೆ ಕೊಡಿಸಲಾಗದಿದ್ದಲ್ಲಿ ನನ್ನನ್ನು ನಂಬಿ ಬಂದ ಅವಳ ಸ್ಥಿಥಿಯೇನು ಅನ್ನಿಸಿತು.
   ನಾನಾದರು ಏಕೆ ಹೆದರಬೇಕು. ಅವಳ ಅಪ್ಪನಿಂದ ಅವರಾಗೆ ಸಹಾಯ ಅಂತ ಏನನ್ನಾದರು ನೀಡಿದಲ್ಲಿ ಪಡೆಯುವದರಲ್ಲಿ ತಪ್ಪೇನು,ಅದು ಅವರಾಗಿಯೆ ಸಿದ್ದರಿರುವಾಗ. ಕಡೆಗೆ ಸಾಲ ಅಂತ ಪಡೆದು ದುಡಿದು ತೀರಿಸಿದರಾಯಿತು. ಅವರು ಹೇಳುವಂತೆ ಕೆಲಸಬಿಡುವುದು ಬೇಡ, ದೀರ್ಘ ರಜಾ ಹಾಕಿ. ನಂತರ ಹೆಂಡತಿ ಹೇಳುವಂತೆ ಅವಳ ಅಪ್ಪನ ರೀತಿಯೆ ಯಾವುದಾದರು ವ್ಯವಹಾರದಲ್ಲಿ ತೊಡಗಿಕೊಳ್ಳುವುದು, ಹೇಗೂ ಅವರ ಅಪ್ಪನ ಸಹಾಯವಂತು ಇದ್ದೆ ಇರುತ್ತದೆ. ಆಗದು ಎನ್ನಿಸಿದಾಗ ಕೆಲಸವಂತು ಇದ್ದೆ ಇರುತ್ತದೆ, ಹಿಂದಿರುಗಿದರಾಯಿತು ಎನ್ನುವ ಪರಿಹಾರ ಕಾಣಿಸಿತು. ನಾಳೆಯೆ ರಜಾ ಹಾಕಿ ಅವಳ ಬಳಿಗೆ ಹೋಗಬೇಕು, ಹೋಗುವಾಗ ಅವಳು ಕೇಳಿದ ಹಸಿರು ಸೀರೆ ಕೊಂಡೇ ಹೋಗಬೇಕು. ಹೇಗೆ ಯಾರಲ್ಲಿ ಸಾಲ ಕೇಳಿದರೆ ಆದೀತು ಅಂತ ಯೋಚಿಸಿದೆ.
   ತೊಡೆಯಮೇಲೆ ನಿಂತಿದ್ದ ಮಗು ಕುಣಿಯುತ್ತ ನನ್ನ ಬಲಕೈ ಬೆರಳು ಹಿಡಿದು ಎಳೆಯುತ್ತಿತ್ತು. ನೋಡಿದರೆ ನನ್ನ ಕೈಲಿದ್ದ ಉಂಗುರ. ಮನಸಿಗೆ ಹಾಯೆನಿಸಿತು. ಇದಿರುವಾಗ ಯಾಕೆ ಸಾಲ, ಮದುವೆಯಲ್ಲಿ ಅವರಪ್ಪ ಮಾಡಿಸಿದ್ದು ಹೀಗೆ ಖರ್ಚಾಗಲಿ ಅನ್ನಿಸಿ ಮುಖದಲ್ಲಿ ನಗು ಮೂಡಿತು.
   ಅಷ್ಟರಲ್ಲಿ ತೊಡೆಯಮೇಲೆ ನಿಂತಿದ್ದ ಮಗು ಒದ್ದೆ ಮಾಡಿಕೊಂಡಿತು. ಅದರ ತಾಯಿ ಸಂಕೋಚ ಗಾಬರಿಯಿಂದ ಮಗುವನ್ನು ಪಡೆದು "ಥೂ ಪಾಪಿ ಸಾಹೇಬರ ಬಟ್ಟೆ ಹಾಳು ಮಾಡಿದೆ" ಅಂತ ಬಟ್ಟೆಯಿಂದ ನನ್ನ ಪ್ಯಾಂಟ್ ಒರೆಸಿದಳು. ನಾನು ಬಿಡಮ್ಮ ಪರವಾಗಿಲ್ಲ ಅಂದರು ಅವಳು ಸುಳ್ಳು ಕೋಪದಿಂದ ಮಗುವನ್ನು ಬೈಯುತ್ತಿದ್ದಳು.
   ನಾನು ನಗುತ್ತ ನನ್ನ ಜೇಬಿಗೆ ಕೈಹಾಕಿದೆ ಹತ್ತುರೂಪಾಯಿ ಸಿಕ್ಕಿತು. ಅದನ್ನು ಮಗುವಿನ ಕೈಗೆ ತುರುಕಿದೆ ಅವಳು ಬೇಡಾ ಸ್ವಾಮಿ ಅಂದಳು. ನಾನು ನಗುತ್ತ "ಬಿಡಮ್ಮ ಮಗುವನ್ನು ಬರೀ ಕೈಲಿ ನೋಡಬಾರದಂತೆ" ಎಂದಾಗ ಆಕೆ ಸುಮ್ಮನಾದಳು.
   ಮಗು ಅವಳ ತೊಡೆಯಮೇಲೆ ಹಾಗೆಯೆ ಮಲಗಿತು. ಕಂಡೆಕ್ಟರ್ ಮೂರು ಬಾರಿ ವಿಷಲ್ ಊದಿದಾಗ ಚಾಲಕ ಅರಿತವನಂತೆ ಒಳಗಿನ ದೀಪ ಆರಿಸಿದ. ಒಳಗೆ ಕತ್ತಲು ಆವರಿಸಿದಂತೆ ಆಕೆ ಮಗುವಿಗೆ ಹಾಲು ಕುಡಿಸತೊಡಗಿದಳು. ನಾನು ಕಿಟಕಿಯಕಡೆ ಒರಗಿ ಕಣ್ಣು ಮುಚ್ಚಿದೆ. ಹೊರಗಿನಿಂದ ತಣ್ಣಗಿನ ಗಾಳಿ ಬೀಸುತ್ತಿರುವಂತೆ ಬೆಳಗಿನಿಂದ ಆಗಿದ್ದ ಆಯಾಸಕ್ಕೆ ಕಣ್ಣು ಎಳೆಯುತ್ತಿರುವಂತೆ , ನಾನು ನಿದ್ದೆಗೆ ಜಾರಿದೆ.

Comments