ಕಥೆ ಕತ್ತಲ್ ರಾತ್ರಿ
ಕಥೆ
ಕತ್ತಲ್ ರಾತ್ರಿ
ಖಾದರ್ ಸಾಬ್........... ಖಾದರ್ ಸಾ.................. ಟಕ್ ಟಕ್ ಟಕ್............... ಬಾಗಿಲು ಬಡಿಯುವ ಸದ್ದು ಹೊರಗೆ ಗೌಡರ ಆಸಾಮಿ ರಂಗ ಗಂಟಲು ಕಿತ್ತುಕೊಳ್ಳುವ ಹಾಗೆ ಕಿರುಚುತ್ತಿದ್ದ. ಬೂದೂರು ಕೇವಲ ಐವತ್ತು ಅರವತ್ತು ಮನೆಗಳಿಂದ ಕೂಡಿದ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಸಾಬರದು ಕೇವಲ ಐದಾರು ಮನೆಗಳು ಮಾತ್ರ. ಒಂದು ಶುಕ್ರವಾರದ ದಿನ ಬಾಗಿಲು ತೆರೆದುಕೊಳ್ಳುವ ಜುಮ್ಮಾ ಮಸೀದಿಯನ್ನು ಬಿಟ್ಟರೆ ಮತ್ತೊಂದು ಮೋಹರ್ರಮ್ ತಿಂಗಳಿನ ಪೀರ್ಲದೇವರನ್ನು ಪ್ರತಿಷ್ಟಾಪನೆ ಮಾಡಲು ಕಟ್ಟಿರುವ ಆಶೂರಖಾನ ಕಟ್ಟಾ. ಅದರ ಮುಂದೆಯೆ ಒಂದು ಹನುಮಪ್ಪನ ಗದ್ದುಗೆ ಬಲಕ್ಕೆ ಸ್ವಲ್ಪ ಮುಂದೆ ಸಾಗಿದರೆ ಮಾರೆಮ್ಮನ ಗುಡಿ. ಊರ ಹೊರಗಡೆ ಇರುವುದು ಅಗಸೆಕಟ್ಟೆ ಇದು ಬೂದೂರು ಗ್ರಾಮದ ಸ್ಥಿತಿ.ಈ ಹಳ್ಳಿಯಲ್ಲಿ ಏನಾದರೊಂದು ವಿಶೇಷ ಘಟನಾವಳಿಗಳು ಜರುಗಿದರೆ ಎಲ್ಲರೂ ಸೇರುವುದು ಮಾತಾಡಿಕೊಳ್ಳುವುದು ಆ ಅಗಸೆಕಟ್ಟೆಯಲ್ಲಿಯೆ. ಈ ಅಗಸೆಕಟ್ಟೆಗೆ ಸೋಮಾರಿಕಟ್ಟೆ ಎಂಬ ಪ್ರತೀತಿಯು ಇದೆ. ಇದಕ್ಕೆ ಹಲವಾರು ಕಾರಣಗಳು ಉಂಟು. ಕೆಲಸವಿಲ್ಲದ ಊರ ಸೋಮಾರಿಗಳು ತಮ್ಮ ದಿನವನ್ನು ಕಳೆಯಲು ಈ ಅಗಸೆಕಟ್ಟೆಗೆ ಹೊಂದಿಕೊಂಡಿರುವ ಆಲದ ಮರದ ಕೆಳಗೆ ಬಿಡಾರ ಹೋಡಿ ಬೀಡಿ ಸೇದುತ್ತ ಇಸ್ಪೀಟು ಆಡುವುದು, ಹರಟೆ ಹೊಡೆಯುದು ನಿತ್ಯದ ಜಾಯಮಾನವನ್ನಾಗಿ ಮಾಡಿಕೊಂಡಿದ್ದರು. ಊರಿನ ಶುಭಾಶುಭ ಕಾರ್ಯಗಳಿಗಾಗಿ ಖಾದರ್ ಸಾಬ ನ ಸಹಾಯ ಸಹಕಾರ ಊರ ಜನರಿಗೆ ಬೇಕಾಗಿತ್ತು. ಕುರಿ ಕೋಳಿ ಹಲಾಲ್ ಮಾಡಲಿಕ್ಕೂ ಅವನೆ ಬೇಕು. ಆದ್ದರಿಂದಲೆ ಖಾದರ್ ಊರ ಜನರಿಗೆ ಚಿರಪರಿಚಿತ ಮತ್ತು ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ. ಮಕ್ಕಳಿಂದ ಮುದುಕರ ವರೆಗೂ ಅವನನ್ನು ಸಾಬ ಎಂದೆ ಕರೆಯುತ್ತಿದ್ದರು. ಅದಕ್ಕೆ ಅದಕ್ಕೆ ಅವನು ಸಹ ಹೊಂ ಗೊಟ್ಟುತ್ತಿದ್ದ. ........................................................ಕಳೆದ ವರ್ಷದ ಮೋಹರ್ರಮ್ ಪೀರ್ಲದೇವರ ಪ್ರತಿಷ್ಠಾಪನೆಯ ವಿಷಯದಲ್ಲಿ ದಲಿತರ ಮಾದ್ಯ ಮತ್ತು ಮಾಲಿಗೌಡರ ಮದ್ಯ ನಡೆದ ಕಲಹದಿಂದಾಗಿ ಅದು ನಂತರ ದಲಿತರ ಮೇಲಿನ ದೌರ್ಜನ್ಯವೆಂದು ಬಿಂಬಿತವಾಗಿ ಆ ಎರಡೂ ಕೋಮಿ ದ್ವೇಷದ ಕಿಡಿ ಊರಿಗೆ ಊರೇ ಕೋಮುದಳ್ಳೂರಿಯಲ್ಲಿ ಬೆಂದುವಂತೆ ಮಾಡಿತ್ತು.ದಲಿತರ ಮಾದ್ಯನು ಅಲಾಯಿ(ಕುಣೀ) ಆಡುವಂತ ಸಂದರ್ಭದಲ್ಲಿ ಮಾಲಿಗೌಡನಿಗೆ ಕಾಲು ತಾಗಿದ ಪರಿಣಾಮವಾಗಿ ಅದು ಜಗಳಕ್ಕೆ ಎಡೆ ಮಾಡಿಕೊಟ್ಟಿತ್ತು. ‘’ಲೇ ಅರುವುಗೇಡಿ ಮಗನೆ ಮುಕ್ಳ್ಯಾಗೇನ್ ಹಲ್ಲ್ ಬಂದಾವ ಮಗ್ನಾ? ನನ್ನ ಕಾಲು ತುಳಿಯಷ್ಟು ಧೈರ್ಯ ಬಂತೇನ್ಲೇ’’ ಎಂದು ಕಾಲುಗೀರಿ ಕಲಹಕ್ಕೆಡೆ ಮಾಡಿಕೊಟ್ಟಿದ್ದ. ಇದನ್ನೆ ನೆಪ ಮಾಡಿಕೊಂಡ ಆ ಕಡೆಯ ಒಂದಿಷ್ಟು ದಲಿತ ಕೇರಿಯ ಪೋರರು ಈ ಕಡೆಯ ಸವರ್ಣಿಯರ ಹುಡುಗರು ಸೇರಿಕೊಂಡು ಸಿಕ್ಕ ಸಿಕ್ಕವರ ಮೇಲೆ ಏರಿ ಹೋಗಿ ಹೊತ್ತು ಮುಳುಗಿ ಸೂರ್ಯ ಬರುವುದರೊಳಗೆ ಈ ಕಡೆಯ ಒಂದೆರಡು ಆ ಕಡೆಯ ಒಂದೆರಡು ತಲೆಗಳು ಉರುಳಿ ಹೋಗಿದ್ದವು. ಇದೆಲ್ಲ ಅನಾಹುತದಿಂದಾಗಿ ಅಂದಿನಿಂದ ಮೋಹರ್ರಮ್ ಚಂದ್ರಮಾ ಕಾಣುವುದು ಆ ಊರಿನ ಜನರಿಗೆ ಬೇಕಾಗಿರಲಿಲ್ಲ. ಸ್ವತಃ ಪೋಲಿಸ್ ಪಾಟೀಲ್ ಲಿಂಗಪ್ಪಗೌಡನೂ ಇದನ್ನು ರದ್ದು ಮಾಡಿ ಈಗ ‘ನಮ್ಮೂರ್ನಾಗಿ ಏನೋ ಕೇಡುಗಾಲ ಬಂದಂಗೈತಿ ಸದ್ಯಕ ಕೆಲವು ವರ್ಸ ಈ ಪೀರ್ಲದೇವರ ಅಲಾಯಿ ಹಬ್ಬನ್ನ ಮಾಡೋದ್ ಬ್ಯಾಡ’ ಎಂದು ಊರೆಲ್ಲ ಫರ್ಮಾನು ಹೊರಡಿಸಿದ್ದ. ಇಷ್ಟೆಲ್ಲ ಕಳೆದು ಹತ್ತಾರು ವರ್ಷಗಳೆ ಮುಗಿದರೋ ಇನ್ನೂ ದಲಿತರ ಮತ್ತು ಗೌಡರ ಮದ್ಯ ಹೊತ್ತಿಕೊಂಡಿರುವ ದ್ವೇಷಾಗ್ನಿ ಮಾತ್ರ ನಂದಿರಲಿಲ್ಲ. ಆಗಾಗ ಕಾಲು ಕೆದರಿ ಹೋಗಿ ಗೌಡರ ಹುಡುಗರು ದಲಿತರನ್ನು ಹೊಡೆ ಬಡಿಯುವುದು ಮಾಡುತ್ತಲೇ ಇದ್ದರು. ಅದಕ್ಕೆ ಬಗ್ಗದ ದಲಿತರು ಅವರಿಗೆ ಪ್ರತಿರೋದನವನ್ನು ಒಡ್ಡುತ್ತಿದ್ದರು. ಒಮ್ಮೆ ಊರ ಚೇರ್ಮನ್ ಗೌಡನು ಎರಡೂ ಕೋಮಿನವರಲ್ಲಿ ಹೊಂದಾಣಿಕೆ ಮಾಡಲು ಊರ ಪಂಚಾಯತಿಯನ್ನು ಸೇರಿಸಿ ತಾವು ಇನ್ನು ಮುಂದೆ ಹೊಡೆಬಡೆಯುವುದಾಗಲಿ ಮಾಡಕೂಡದೆಂದು ಎರಡೂ ಗುಂಪಿನ ಯುವಕರಲ್ಲಿ ತಿಳಿ ಹೇಳಿ ಒಂದು ಒಳಒಪ್ಪಂದವನ್ನು ಮಾಡಿಕೊಂಡು ಮುಂದೆ ಊರ ಜನ ಶಾಂತಿ ನೆಮ್ಮದಿಯಿಂದ ಬಾಳಲು ಅವಕಾಶವನ್ನು ಮಾಡಿಕೊಟ್ಟಿದ್ದನು. ಅಂದಿನಿಂದ ಆ ಊರು ಮೇಲ್ನೋಟಕ್ಕೆ ಶಾಂತಿಯಿಂದಿರುವಂತೆ ಕಂಡರೂ ಗೌಡರ ಒಡಲು ದ್ವೇಷ ಹಾಗೂ ಸೇಡಿನಿಂದ ಬಿರಿಯುತ್ತಿತ್ತು. ಹೇಗಾದರೂ ಮಾಡಿ ಮತ್ತೇ ಈ ವರ್ಷದ ಮೋಹರ್ರಮ್ ಮಾಸದಲ್ಲಿ ಪೀರ್ಲದೇವರನ್ನು ಪ್ರತಿಷ್ಟಾಪನೆ ಮಾಡಿಸಿ ತಮ್ಮ ಸೇಡನ್ನು ತೀರಿಸಿಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು. ಹಳ್ಳಿಯ ಹರಿಜನಕೇರಿಯ ಯುವಕರು ಈಗ ಮೊದಲಿನಂತೆ ಇರಲಿಲ್ಲ. ಅಲ್ಪಸ್ವಲ್ಪ ಅಕ್ಷರ ಜ್ಞಾನವನ್ನು ಪಡೆಯುವುದರ ಮೂಲಕ ತಮ್ಮ ಹಕ್ಕುಗಳೇನು? ಸಮಾನತೆ, ಸಂಘಟನೆಯ ಕುರಿತು ತಿಳುವಳಿಕೆಯನ್ನು ಪಡೆದಿದ್ದು ಮೇಲ್ಜಾತಿಯವರು ತಮ್ಮೊಂದಿಗೆ ವ್ಯವಹರಿಸುತ್ತಿದ್ದ ರೀತಿನೀತಿಗಳನ್ನು ಖಂಡಿಸುವಷ್ಟು ಧೈರ್ಯ ಆ ಹುಡುಗರಲ್ಲಿ ಹುಟ್ಟಿತು. ಇದಕ್ಕೆ ಕಾರಣ ಅಂದು ಮೊಳಕೆಯೊಡೆದೆ ದಲಿತ ಚಳುವಳಿಗಳ ಪರಿಣಾಮವಾಗಿತ್ತು. ಅವರು ಶಿಕ್ಷಣ ಸಂಘಟನೆ ಹೋರಾಟ ಎಂಬ ಮಂತ್ರವನ್ನು ಉಚ್ಚರಿಸಿದ್ದೇ ತಡ ಗೌಡರ ಕಡೆಯವರು ಕೈ ಕೈ ಮಸೆಯತೊಡಗಿ ಇನ್ನೇನು ತಮ್ಮ ಉಳಿಗಾಲವಿಲ್ಲ ಎಂದು ಮನದಲ್ಲೆ ಅಂದುಕೊಂಡು ಅದಕ್ಕಾಗಿ ಏನಾದರೂ ಒಂದು ವ್ಯವಸ್ಥಯನ್ನು ಮಾಡಿಯೆ ತೀರಬೇಕೆಂದು ಪಣವನ್ನು ತೊಟ್ಟಿದ್ದು ಗುಟ್ಟಾಗಿ ಉಳಿದಿದ್ದಿಲ್ಲ. ಆ ದಿನ ಬೆಳಿಗ್ಗೆ ಗೌಡರ ಯುವತಿಯು ನೀರು ತರಲು ಹೋದಾಗ ಬಾವಿಯ ಬಳಿ ದಲಿತರ ಹನುಮ್ಯಾ ಇದ್ದದ್ದು ಬಾವಿಯು ಮೈಲಿಗೆಯಾಗಲು ಕಾರಣವೆಂದು ಬೊಬ್ಬೆ ಹಾಕಿದ್ದು ಇದನ್ನು ಕೇಳಿದ ಹುಡುಗರು ಹನುಮ್ಯಾನನ್ನು ಬಾವಿಯ ಕಂಬಕ್ಕೆ ಕಟ್ಟಿ ಹಾಕಿ ದನಕ್ಕೆ ಬಡಿದಂತೆ ಬಡಿದಿದ್ದರು. ಇದನ್ನು ಪ್ರತಿಭಟಿಸಿದ ದಲಿತೋದ್ಧಾರಕ ಸಂಘಟನೆಯ ಸದಸ್ಯರು ಮೇಲ್ಜಾತಿಯವರು ತಮ್ಮ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ ಎಂದು ಅವರ ವಿರುದ್ಧ ಹೋರಾಟವನ್ನು ಆರಂಭಿಸಿದ್ದು ಆ ಕ್ಷೇತ್ರದ ಎಮ್ಮೆಲ್ಲೆ ರಾಯಪ್ಪನಿಗೆ ಭಾರಿ ತಲೆನೋವು ಉಂಟುಮಾಡಿತ್ತು. ಜನತಾ ಸರ್ಕಾರ ಬಂದಾಗಿನಿಂದ ಅಲ್ಲಲ್ಲಿ ದಲಿತ ಹೋರಾಟಗಳು ಅಸ್ಪೃಶ್ಯತಾ ನಿವಾರಣೆ ಕಾರ್ಯಕ್ರಮಗಳು ಜೀವಪಡೆದುಕೊಂಡಿದ್ದವು. ಇದರ ಪರಿಣಾಮವೆ ಬೂದೂರಿನ ಯುವಕರು ತಾವು, ಮನುಷ್ಯರು ತಮಗೆ ಇತರರಂತೆ ಜೀವಿಸುವ ಹಕ್ಕಿದೆ ತಮಗೂ ಎಲ್ಲರಂತೆ ಹೋಟೆಲಲ್ಲಿ ಕುಳಿತು ಚಹಾ ಸೇವಿಸುವ ಹಕ್ಕಿದೆ ಎಂದು ನಿತ್ಯವೋ ಮೇಲ್ಜಾತಿ ಮತ್ತು ದಲಿತರ ಮಧ್ಯ ಒಂದಿಲ್ಲೊಂದು ರೀತಿಯಲ್ಲಿ ತಕರಾರು ನಡೆದೆ ಇದ್ದವು. ಈ ಮಧ್ಯೆ ಒಂದೆರಡು ಬಾರಿ ದೂರದ ತಾಲೂಕಿನಿಂದ ಬಂದ ಖಾಕಿ ಬಟ್ಟೆಯವರ ಸರಕಾರಿ ವಹಾನಗಳು ಸುತ್ತುಹಾಕಿ ಹೋಗಿದ್ದವು. ಸರಕಾರವೆ ಮುಂದೆ ನಿಂತು ದಲಿತರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವಲ್ಲಿ ಸಹಕರಿಸಿತ್ತು. ಬೂದೂರಿನ ದಲಿತರಿಗೆ ಯಾರಾದರೂ ತಮ್ಮ ಹೋಟೆಲ್ಲುಗಳಲ್ಲಿ ಪ್ರವೇಶ ನೀಡದೆ ಹೋದರೆ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದೆಂದು ಸರಕಾರಿ ಅಧಿಕಾರಿಗಳು ಗತ್ತಿನಲ್ಲಿಯೆ ಸಾರಿ ಹೋಗಿದ್ದರು. ಅಂದಿನಿಂದ ದಲಿತರಿಗೆ ಯಾವುದೆ ಅಡೆತಡೆಗಳಿಲ್ಲದೆ ಊರಿನ ಎಲ್ಲಾ ಹೋಟೆಲು ಗಳಲ್ಲಿ ಪ್ರವೇಶ ದೊರೆಯುತ್ತಿತ್ತು. ಈ ದಲಿತರಲ್ಲಿ ಇಷ್ಟೆಲ್ಲ ಕ್ರಾಂತಿಕಾರಿ ವಿಚಾರಗಳು ಬರಲು ಆ ಊರಿನ ಅಂಬೇಡ್ಕರ್ ಸಂಘದ ರಮೇಶನೆ ಕಾರಣ ಇವನು ಒಂದೆರಡು ಪಟ್ಟಣಗಳನ್ನು ಸುತ್ತಿ ಅಂಬೇಡ್ಕರ ವಿಚಾರಗಳನ್ನು ಯುವಕರಲ್ಲಿ ಅರುಹುತ್ತಿದ್ದ. ....................................ಅದೊಂದು ಹಿರಿದಾದ ವಿಶಾಲ ಮನೆ. ಒಳ ಪಡಸಾಲೆಯಲ್ಲಿ ಹಾಕಿದ್ದ ತೂಗು ಮಂಚದಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದ ಪೋಲಿಸ್ ಪಾಟಿಲ್ ನಿಂಗಪ್ಪಗೌಡ ತನ್ನ ಮೀಸೆಯನ್ನು ತೀವುತ್ತ’’ ಅಲ್ಲಾ ಈ ಬೋ...... ಮಕ್ಳು ನಮ್ಮತಾವನೆ ಪೋಕರಿಕೆ ಮಾಡತಾವಲ್ಲ. ಎಷ್ಟೊಂದು ಪೊಗರು ಅಂತೀನಿ’’ ಎಂದು ತಮ್ಮ ಮುಂದಿನ ಕುರ್ಚಿಯಲ್ಲಿ ಕುಳಿತ ಮಾಲಿಗೌಡನೊಂದಿಗೆ ‘ಈ ಮಕ್ಳಿಗೆ ಒಂದು ಗತಿ ಕಾಣಿಸಕ್ಕಾಯ್ತದ’ ಎಂದ. ಆತನ ದ್ವನಿಯಲ್ಲಿ ರೋಷವು ಪ್ರತಿದ್ವನಿಸುತ್ತಿತ್ತು. ಅದಕಾ ನಾ ಖಾದರ ಸಾ.. ನನ್ನು ಕರೆ ಕಳಿಸಿದ್ದು ಏನಾದರೊಂದು ಮಾಡಿ ಈ ಸಲ ಪೀರ್ಲದೇವರನ್ನು ಕೂಡಿಸಿ ಪ್ಯಾಟ್ಯಾಗೊಳಗಿಂದ ನಾಕ ಜನ ಕರೆಸಿ ಈ ಸೂ.. ಮಕ್ಳ ಹೆಣ ಬೀಳಿಸಬೇಕು ಆಗ ತಾವ ಬಾಯಿ ಮುಚ್ಗಂಡು ಕೂಡತಾವು. ಇಲ್ಲಾಂದ್ರ ಸಂಗಗಿಂಗ ಕಟ್ಕೊಂಡು ನಮ್ ಜನನ್ನ ನಮ್ ತಾವ ಛೂ ಬಿಡ್ತಾವ. ಏನಂತಿ? ಎಂದು ಮಾಲಿಗೌಡ ತನ್ನ ನರಿಬುದ್ದಿಯನ್ನು ಪ್ರದರ್ಶಿಸಿದ...........................................ಖಾದರ್ ಸಾಬ್... ಕಾದರ್ ಸಾ.... ರಂಗನ ಕೂಗು ಜೋರಾಯಿತು. ಯಾರು? ಯಾರದು ಮನೆಯೊಳಗಿಂದ ಹೆಣ್ಣು ದ್ವನಿ ಮುಖವನ್ನು ತನ್ನ ಸೆರಗಿನಿಂದ ಮುಚ್ಚಿಕೊಂಡ ಮಹಿಳೆಯೊಬ್ಬಳು ಅರ್ದ ತೆರೆದ ಬಾಗಿಲಿನಿಂದ ಇಣುಕಿ ಕೇಳಿತು. ಖಾದರ್ ನ ಪತ್ನಿ ಇರಬೇಕು. ಪೂರ ಹೊರಗೆ ಬರದೆ ಮರೆಯಲ್ಲಿ ನಿಂತೆ ಮಾತನಾಡಿದಳು. ಯಾರು ಯಾರು ಬೇಕು? ನಾನ್ಕಣವ್ವ ಗೌಡರ ಆಸಾಮಿ ರಂಗ. ಗೌಡ್ರು ನಿಮ್ಮೆಜಮಾನ್ರನ್ನ ಬರಾಕ ಹೇಳ್ವರೇ, ಅದೇನೋ ಅರ್ಜಂಟು ಕೆಲ್ಸಂದ್ರು. ಈಗ್ಲೆ ನನ್ತಾವೆ ಕರ್ಕೊಂಡು ಬರ್ಲಿಕ್ಕೇಳವ್ರೆ ಎಂದು ಗೌಡನ ಆದೇಶವನ್ನು ಒಪ್ಪಿಸಿದ ರಂಗ. ಅವರು ಮನೇಲಿ ಇಲ್ಲ. ಈಗತಾನೆ ಯಾರೋ ಬಂದ್ರು ಕರ್ಕೊಂಡು ಹೋದ್ರು. ಬಂದಮೇಲೆ ನಾ ಹೇಳ್ತೀನಿ ಎಂದು ಹೊಳ ಹೊಕ್ಕಳು.ಒಂದರ್ದ ಮುಕ್ಕಾಲು ಗಂಟೆಯಾಗಿರಬೇಕು ರಂಗ ಹೋಗಿ ಆಗಲೆ ಕಾದರ್ ಮನೆಯೊಳಗೆ ಕಾಲಿಟ್ಟ ಮನೆಗೆ ಬಂದ ಖಾದರ್ ಮುಂದೆ ಹೆಂಡತಿ ಸಮೀನಾ ರಂಗನ ವಿಚಾರವನ್ನು ಮುಂದಿಟ್ಟಳು. ಹೆಂಡತಿಯಿಂದ ವಿಷಯ ತಿಳಿದು ಗೌಡರ ಬುಲಾವು, ‘ಏನ್ ಗ್ರಹಚಾರ ಕಾದಿದೆಯೋ ಏನೋ’ ಎನ್ನುತ್ತ ತನ್ನ ಓಬೆರಾಯನ ಕಾಲದ ಸೈಕಲ್ಲಿನ ಪೈಡಲ್ಲನ್ನು ತುಳಿಯಹತ್ತಿದ. ..............................................ಅದೇ ವಿಶಾಲ ಪಡಸಾಲೆಯಲ್ಲಿ ಗೌಡ ಚಾರ್ಮಿನಾರ್ ಛಾಪಿನ ಸಿಗರೇಟನ್ನು ಬಾಯಲ್ಲಟ್ಟು ಒಂದೊಂದೆ ದಮ್ಮು ಸೇದುತ್ತ ಹೊಗೆಯನ್ನು ಉಗುಳುತ್ತಿದ್ದ. ಆ ಹೊಗೆಯಲ್ಲಿ ಏನೋ ಸುಟ್ಟ ವಾಸನೆ. ಬಾ ಕಾದರ್ ಸಾಬ್ ನಿನ್ನ ಹಾದಿಯನ್ನೆ ನೋಡುತ್ತಿದ್ದೆ. ಎಂದು ಮಾಲಿಗೌಡ ಕಾದರ್ ನನ್ನು ಸ್ವಾಗತಿಸಿದ. ಆತನ ದ್ವನಿಯಲ್ಲಿನ ಕುಹಕ ಕಾದರ್ ಅರಿಯದಾದ. ಪಡಸಾಲೆಯ ಮೆಟ್ಟಿಲುಗಳನ್ನೇರಿ ಮುಂದಿನ ಕಂಬಕ್ಕೊರಗಿ ನಿಂತು ‘’ಏನ್ರಿ ಗೌಡ್ರೆ ಅರ್ಜಂಟು ಅಂತ ಹೇಳಿ ಕಳಿಸಿದ್ರಿ, ನಿಮ್ ವಿಷಯ ಕೇಳಿ ಕೂಡಲೆ ಬಂದ್ಬಿಟ್ಟೆ’’ ಎಂದ. ‘ಏನಿಲ್ಲ ಬಾ ಕೂತ್ಕೋ’ ಎಂದು ಪಕ್ಕದ ಕುರ್ಚಿಯನ್ನು ಮುಂದಕ್ಕೆಳೆದ ಗೌಡನ ಮುಂದೆ ಕುರ್ಚಿಯ ಮೇಲೆ ಕೂಡುವುದು ಅಷ್ಟೇನು ಸರಿಕಾಣಲಿಲ್ಲ ಆದರೂ ಗೌಡನೆ ಈಗ ಕುರ್ಚಿಯನ್ನು ಮುಂದೆ ಮಾಡಿದ್ದಾನೆ ಎಂದ ಮೇಲೆ ಸ್ವಲ್ಪ ದೈರ್ಯವನ್ನು ತಂದು ಕೊಂಡ ಕಾದರ್ ಕುರ್ಚಿಯನ್ನು ಸ್ವಲ್ಪ ದೂರಕ್ಕೆಳೆದು ಕುಳಿತುಕೊಂಡ. ಲೇ ರಂಗ... ಲೇ ರಂಗ.............. ಎಲ್ಲ್ಹೋದ ರಂಡೆ ಮುಂಡೆ ಮಗ. ಗೌಡ ಸ್ವಲ್ಪ ಏರು ದ್ವನಿಯಲ್ಲಿ ಅಬ್ಬರಿಸತೊಡಗಿದ. ಏದುಸಿರುಬಿಟ್ಟು ಓಡಿ ಬಂದ ರಂಗ’ ಏನ್ ಸಾಮಿ ಇಲ್ಲೆ ದನದ ಕ್ವಟ್ಟಿಗ್ಯಾಗ ಮೇವು ಹಾಕ್ತಿದ್ದೆ’ ಎಂದ ಜೀವ ಭಯದಿಂದ. ನೀ ಹೋಗಿ ಆ ನಾಡಗೌಡನ್ನ ಮರಿಗೌಡನ್ನ ನಾ ಕರದೀನಂತ ಹೇಳು ಎಂದು ರಂಗನನ್ನು ಹೊರಕಟ್ಟಿದ. ಈಗ ಕಾದರ್ ಕಡೆಗೆ ತಿರುಗಿ ಆಂ ನೋಡು ಕಾದರ್ ಈ ಪೀರ್ಲ ದೇವರ ಕೂಡುಸ್ತಾರಲ್ಲ ಅದೇ ಮೋಹರ್ರಮ್ ಹಬ್ಬದ ಚಂದ್ರ ಯಾವಾಗ ಕಾಣ್ತದ ಎಂದು ಗೌಡ ಮೆಲ್ಲಗೆ ವಿಷಯಕ್ಕೆ ಬಂದ. ‘ಅದ್ಯಾಕ್ ಇಚಾರ ಈಗ ಬುಡ್ರಿ ಗೌಡ್ರೆ’ ನಮ್ಮೂರ್ನಾಗ ಜಗಳ ಆಗಿದಾಗ್ನಿಂದ ಪೋಲಿಸ್ನೋರು ಬಂದು ದೇವರ ಪಂಜಾ ಕೂಡಿಸ್ಬಾರ್ದು ಅಂತ ಫೈಸಲಾ ಮಾಡಿ ಹೋಗೌರೆ, ಈಗ ಅದರ ಇಚಾರನೆ ನಮ್ ತಲಿಯೊಳಗಿಲ್ಲ ಅದರ ಸುದ್ದಿ ಈಗ ತೆಗಿಬ್ಯಾಡ್ರಿ ಎಂದು ಖಾದರ್ ತನ್ನ ನಿರ್ಣಯವನ್ನು ತಿಳಿಸಿದ. ‘ಅಲ್ಲೋ ಕಾದರ್ ಸಾ... ಆ ಹಸೇನ ಹುಸೇನಿ ಪಂಜಾ ಕೂಡಿಸೋದ್ ಬಂದ್ ಮಾಡಿದಾಗ್ನಿಂದ ನಮ್ ಊರಾಗ ಏನಾದ್ರೋ ಸೂಕೂನು ಐತೇನು ನೀನೆ ಹೇಳು? ಒಂದು ವರ್ಷ ಬರಗಾಲ ಬಂದು ಹೊಲ ಮನೆ ಹಾಳಾದ್ವು, ಈಗ ಊರ್ನಲ್ಲಿ ಈ ಹೋಲೆಯರದೊಂದು ಕಾಟ ಸುರುವಾಗೈತೆ ಏನು ಸಂಗಗಿಂಗ ಕಟ್ಕೊಂಡು ನಮ್ ವಿರುದ್ಧ ಹೋರಾಟಕ್ಕೆ ನಿಂತ್ವರೆ ಇದೆಲ್ಲ ಅವರಿಗೆ ಬೇಕಾಗಿತ್ತ? ಎಂದು ತನ್ನ ಮಾತಿನ ಸರಪಳಿಯನ್ನು ಬಿಚ್ಚತೊಡಗಿದ. ನೊಡು ಕಾದರ್ ಈ ಪೀರ್ಲ ದೇವರ ಕೂಡಿಸೊದ್ರಿಂದ ಯಾರಿಗೂ ನಷ್ಟವಿಲ್ಲ ನಿನಗೂ ಒಂದಿಷ್ಟು ಕಾಳುಕಡ್ಡಿ ಅಂತ ಸಿಗ್ತದೆ ಒಂದ ನಾಕೈದು ತಿಂಗಳು ಹೊಟ್ಟೆ ಉಪಜೀವನಕ್ಕ ಆಗ್ತೈತೆ ಅದು ಅಲ್ದೆ ನಮ್ಮ ಊರ್ನಾಗ ಶಾಂತಿನು ಬರ್ತೈತೆ, ಇದರ ಮ್ಯಾಗ ನಿನ್ ಇಚಾರ. ನಾವು ನಿನ್ನ ಒಳೇದ್ಕೆ ಹೇಳಿದ್ವಿ ಎಂದು ಗೌಡ ರಾಗ ಎಳೆದ. ಕಾದರ್ನಿಗೇಕೋ ಗೌಡನ ಮಾತು ಸರಿ ಎನಿಸಿತು. ಈ ತುಟ್ಟಿ ಜಮಾನದಾಗ ನಾಲ್ಕೈದು ಮಕ್ಳನ್ನು ಸಾಕೋದು ಕಷ್ಟನೆ ಇರುವಾಗ ಗೌಡ ಹೇಳಿದ್ದರಲ್ಲಿ ತನ್ನ ಲಾಭವಿದೆ ಅನ್ನಿಸಿದರೂ ಮನಸ್ಸು ಮಾತ್ರ ಮುಂಬರುವ ಅಪಾಯದ ಮುನ್ಸೂಚನೆಯನ್ನು ನೀಡುತ್ತಿತ್ತು.ಸ್ವಲ್ಪ ಹೊತ್ತು ಪಡಸಾಲೆ ನೀರಾವ ಮೌನದಿಂದ ತುಂಬಿತ್ತು. ಅಷ್ಟರಲ್ಲಿಯೆ ಗೌಡಸಾಣಿ ತಟ್ಟೆಯೊಂದರಲ್ಲಿ ಚಹಾ ತಂದು ಟಿಪಾಯಿ ಮೇಲೆ ಇಟ್ಟಳು. ಚಹಾವನ್ನು ಹೀರುತ್ತ ಅದೇ ಗುಂಗಿನಲ್ಲಿ ಕುಳಿತಿದ್ದರು ಮೂವರು. ‘’ಯಾಕ್ರಿ ಗೌಡ್ರೆ ನಮ್ಮನ್ನೂ ಬರ್ಲಿಕ್ಕೆ ಹೇಳಿದ್ರಂತೆ ರಂಗ ಈಗ ತಾನೆ ಬಂದು ಹೇಳಿಹೋದ ಏನ್ ವಿಚಾರ’’ ಎಂದಾಗಲೆ ಮೂವರು ವಾತ್ಸವ ಲೋಕಕ್ಕೆ ಮರಳಿದ್ದು. ತುಂಬು ಮೊಖ, ಹುರಿ ಮೀಸೆ, ಠೀವಿಯ ನಡೆ, ಕೈಗೊಂದು ಬ್ರಾಸ್ ಲೆಟ್ ಚೈನು, ಖಾದಿ ಜುಬ್ಬಾ ತೊಟ್ಟ ಸರಪಂಚ ನಾಡಗೌಡ ಮತ್ತವನ ಸಂಬಂಧಿ ಮರಿಗೌಡ ದರ್ಪದಿಂದಲೆ ಗೌಡನ ಮನೆಯ ಮೆಟ್ಟಿಲನ್ನು ಹತ್ತಿದ್ದರು. ಇಬ್ಬರನ್ನು ಆದರದಿಂದ ಸ್ವಾಗತಿಸಿದ ಮಾಲಿಗೌಡ ಸ್ವಲ್ಪ ಏನೋ ಯೋಚಿಸಿದಂತೆ ಮಾಡಿ ಆಂ ನಿಮ್ ವಿಚಾರ ಏನಾದ ಹೇಳ್ರಲಾ ಸರಪಂಚರೆ ಎಂದು ಮೌನ ಮುರಿದು ಮಾತಿಗೆ ಮುನ್ನುಡಿ ಹಾಕಿದ. ಎನೋ ನನಗೊಂದು ತಿಳಿತಿಲ್ಲ ಎಂದು ನಾಟಕೀಯವಾಗಿಯೆ ನುಡಿದರು. ಸರಪಂಚರು. ಅದಾ ಮೋಹರ್ರಮ್ ಪೀರ್ಲದೇವರ ಪಂಜಾ ಕೂಡಿಸೊ ದಿನ ಸಮೀಪಕ ಬಂತು ನೋಡು. ಈ ವರ್ಸಾ ಪೀರ್ಲ ದೇವರ ಕೂಡಿಸೋ ವಿಚಾರ ಮಾಡಿವಿ. ಓಹೋ ಅದಾ ವಿಷಯ ಭಾಳ ಛಲೋ ಆಯ್ತು ಬಿಡ್ರಿ. ನಮ್ಮೂರಾಗ ಹತ್ತು ವರ್ಸಾಯ್ತು ದೇವ್ರು ಕೂಡಿಸಲಾರ್ದೆ. ಅದಕ ಊರಿಗೆ ಊರೇ ಸಣಿ ಬಡಿದಂಗಾಗ್ಯದ. ನಾನೂ ಈ ಇಚಾರ ನಿಮಗ ತಿಳಿಸೋಣು ಅಂತ ಮಾಡಿದ್ದೆ ಈಗ ನಿಮ್ ಮನಸ್ನ್ಯಾಗ ಬಂದ ಬಿಟೈತೆ ಅಂದ ಮ್ಯಾಲ ಮತ್ಯಾಕ ತಡ ಎಲ್ಲ ವ್ಯವಸ್ಥೆನೂ ಮಾಡಿ ಬಿಡುವ ನಾ ಸರ್ಕಾರದವರ ಜತೆನೂ ಮಾತಾಡ್ತಿನಿ’’ ಎಂದರು ಸರಪಂಚರು. ನಾಡಗೌಡ ಹಾಕಿದ ಪೂರ್ವಯೋಜನೆಯಂತೆ. ಮೋಹರ್ರಮ್ ಆಚರಣೆಗೆ ಖಾದರ್ ಮನಸು ಒಪ್ಪದಿದ್ದರೂ ಊರ ಗೌಡರ ಬಲವಂತದಿಂದ ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು................................ಮೋಹರ್ರಮ್ ಚಂದ್ರದರ್ಶನಕ್ಕೆ ಇನ್ನೆರಡೆ ದಿನ ಬಾಕಿ ಈ ಸಲ ಖಾದರ್ ಪೀರ್ಲದೇವರ ಕೂಡುಸ್ತಾನಂತೆ ಎಂಬ ಮಾತುಗಳು ಎಲ್ಲರ ಬಾಯಲ್ಲಿ ತೇಲಾಡಿದವು. ಜನರು ಊರಅಗಸೆಕಟ್ಟೆಯಲ್ಲಿ ಕುಳಿತು ಮುಂದಾಗುವ ಬೆಳವಣೆಗೆಗಳ ಬಗ್ಗೆ ಲೆಕ್ಕಾಚಾರ ಹಾಕತೊಡಗಿದರು. ಹತ್ತಾರು ವರ್ಷಗಳಿಂದ ಸುಣ್ಣಬಣ್ಣ ಕಾಣದಿದ್ದ ಆಶುರಖಾನ ಕಟ್ಟೆಯು ಈಗ ಸುಣ್ಣಬಣ್ಣ ಬಳಿದುಕೊಂಡು ಮೈಕೊಡವಿ ನಿಂತುಕೊಂಡಿದೆ.. ಬಣ್ಣ ಬಣ್ಣಗಳ ಕಾಗದಗಳಿಂದ ತಳಿರುತೋರಣಗಳಿಂದ ಅಲಂಕೃತ ಈ ಆಶುರ್ಖಾನ ಕಟ್ಟೆ ಈಗದು ಎಲ್ಲರ ಆಕರ್ಷಿಣಿಯ ಕೇಂದ್ರ ಬಿಂದು.ಅಂದು ಮೋಹರ್ರಮ್ ಒಂದನೆಯ ತಾರೀಕು ಇಸ್ಲಾಮಿನ ಹೊಸ ವರ್ಷದ ಮೊದಲದಿನ ಸಾವಿರಾರು ವರ್ಷಗಳ ಹಿಂದೆ ಅರೇಬಿಯದಲ್ಲಿ ಧರ್ಮಸಂಸ್ಥಾಪನೆಗಾಗಿ ಹೋರಾಡಿ ವೀರಮರಣವನ್ನಪ್ಪಿದ ಪ್ರಾವಾದಿ ಮುಹಮ್ಮದ್ ಪೈಗಂಬರರ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನರು ಇದೇ ಮೋಹರ್ರಮ್ ತಿಂಗಳು ಹತ್ತನೆ ತಾರೀಕಿನಂದು ಇರಾಕಿನ ಕಬರ್ಲಾ ಎಂಬ ಪ್ರದೇಶದಲ್ಲಿ ವೀರ ಮರಣವನ್ನಪ್ಪಿದ್ದ ದಿನ ಇದನ್ನೆ ವಿಶ್ವದ ಮುಸ್ಲಿಮರು ಕಬರ್ಲಾದ ದಿನ ಅಥವಾ ಕತ್ತಲ್ ರಾತ್ರಿ ಎಂದು ಆಚರಿಸುತ್ತಾರೆ. ಅಂದು ಬೂದೂರಿನ ಜನ ಕೂಡ ಚಂದ್ರದರ್ಶನ ಗೈಯಲು ಕಾತುರದಿಂದ ನಿಂತಿದ್ದಾರೆ. ಚಂದ್ರದರ್ಶನವಾದಕೂಡಲೆ ಆಶುರ್ಖಾನ ಕಟ್ಟೆಯ ಮುಂದಿನ ಜಾಗದಲ್ಲಿ ಒಂದು ಅಲಾಯಿ(ಕುಣಿ)ಯನ್ನು ತೋಡಲಾಗತ್ತದೆ. ವಡ್ಡರ ಪೋರರು ಕೈಯಲ್ಲಿ ಗುದ್ದಲಿ ಸಲಾಕೆಗಳನ್ನು ಹಿಡಿದು ಅಲಾಯಿ ತೋಡುವ ಕೆಲಸದಲ್ಲಿ ನಿರತರಾದ್ದಾರೆ. ನೋಡನೋಡುತ್ತಿದ್ದಂತೆ ಮಣ್ಣಿನ ದೊಡ್ಡ ರಾಶಿಯೆ ನಿರ್ಮಾಣವಾಗುತ್ತದೆ ಏಳೆಂಟು ಅಡಿ ಆಳದ ಕುಣಿ(ಅಲಾಯಿ) ಸಿದ್ದವಾಗುತ್ತದೆ. ಮೋಹರ್ರಮ್ ಒಂದನೆ ತಾರೀಖಿನಿಂದ ಹತ್ತನೆಯ ತಾರೀಖಿನ ತನಕ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ ಸಕ್ಕರೆಯನ್ನು ಓದಿಸಿಕೊಂಡು ಹೋಗುವುದು. ಹರಕೆ ಹೊರುವುದು, ಸಕ್ಕರೆ ತುಲಭಾರ ತೆಂಗಿನಕಾಯಿ ಒಡೆಸಿ ಹರಕೆಯನ್ನು ತೀರಿಸುವುದು ಹೀಗೆ ನಾನ ರೀತಿಯ ಸೇವೆ ನಡೆಯುತ್ತದೆ. ಸುಮಾರು ಹತ್ತು ವರ್ಷಗಳಿಂದ ನಡೆಯದ ಈ ಹಬ್ಬ ಈಗ ನಡೆಯುತ್ತಿರುವುದರಿಂದ ಈ ವರ್ಷ ಭಕ್ತಾದಿಗಳ ಸಂಖ್ಯೆಯು ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಖಾದರ್ ಸಾಬ್ ಒಳಗೊಳಗೆ ಖುಷಿ ಪಡುತ್ತಿದ್ದು ಮುಂದಿನ ಎರಡು ವರ್ಷಗಳಷ್ಟು ಆದಾಯ ಆಗಿದೆ ಎಂದು ಮನದಲ್ಲೆ ಲೆಕ್ಕಾ ಹಾಕುತ್ತಿದ್ಧಾನೆ. ಅಂದು ಮೋಹರ್ರಮ್ ಕೊನೆಯ ದಿನ ಕತ್ತಲ್ ರಾತ್ರಿ ಅಲಾಯಿ ತುಂಬ ನಿಗಿ ನಿಗಿ ಉರಿಯುವ ಬೆಂಕಿ ಸಿದ್ದಗೊಂಡಿದೆ. ಸಂಜೆ ಆರು ಗಂಟೆಗೆ ಹಸೇನ್ ಹುಸೇನ್ ಪೀರಾ ಪಂಜಾಗಳ ಸವಾರಿ ಹೊರಡುತ್ತದೆ. ಊರಿನ ಎಲ್ಲ ಜನರು ಅದನ್ನು ಕಾಣಲು ಕಾತುರರಾಗಿದ್ದಾರೆ. ಇತ್ತ ದಲಿತ ಕೇರಿಯ ಹತ್ತಾರು ಹುಡುಗರು ಬಂದು ಅಲಾಯಿ ಕುಣಿತದಲ್ಲಿ ತಲ್ಲಿನರಾಗಿದ್ದಾರೆ. ಮೊದಲೆ ಪೂರ್ವಯೋಜನೆಯಂತೆ ಗೌಡ ಪಟ್ಟಣದಿಂದ ಕರೆಸಿದ ರೌಡಿಗಳು ಎಲ್ಲಾ ಸಿದ್ದತೆಯೊಂದಿಗೆ ಬಂದಿದ್ದಾರೆ. ಗೌಡನು ಸಹ ಅಲಾಯಿ ಕುಣಿತದಲ್ಲಿ ಶಾಮಿಲಾಗಿದ್ದಾನೆ. ನೋಡ ನೂಡುತ್ತಿದ್ದಂತೆ ಕತ್ತಿ ಲಾಂಗುಗಳು ಝಳಪಿಸುತ್ತವೆ. ಉರಿಯುತ್ತಿದ್ದ ಅಲಾಯಿ ಕುಣಿಯು ಹೆಣ ಸುಡುವ ಸುಡುಗಾಡಾಗಿ ಮಾರ್ಪಟ್ಟಿದ್ದೆ. ಅಷ್ಟರಲ್ಲಿ ಇಬ್ಬರು ದಲಿತರ ಹುಡುಗರು ಗೌಡರ ನಾಲ್ಕು ಜನ ಮುಖಂಡರನ್ನು ಎಳೆದು ಉರಿಯುವ ಅಲಾಯಿಕುಣಿಗೆ ತಳ್ಳುತ್ತಾರೆ. ಗೌಡನು ತಾನಿ ತೋಡಿದ ಕುಣಿಯಲ್ಲಿ ಬಿದ್ದು ಉರಿದು ಹೋಗುತ್ತಾನೆ. ಅಂದು ಬೂದೂರಿನಲ್ಲಿ ನಡೆದ ಕತ್ತಲ್ ರಾತ್ರಿಯು ಗೌಡರ ಪಾಲಿಗೆ ಕರಾಳ ರಾತ್ರಿಯಾಗುತ್ತದೆ. ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,