ಕಥೆ: ಪರಿಭ್ರಮಣ..(34)
(ಪರಿಭ್ರಮಣ..33ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಶ್ರೀನಾಥನಿಗೆ ಈಗ ಎದೆ ಧಸಕ್ಕೆಂದಿತು.. 'ಈತನೇನೊ ತನ್ನ ಮನಸನ್ನೆ ಪುಸ್ತಕದಂತೆ ಓದುತ್ತಿರುವನಲ್ಲಾ' ಎಂದು. ತನ್ನ ಮನಸಿನ ಮೇಲೆ ಮೂಡಿಬರುತ್ತಿರುವ ಆಲೋಚನೆಗಳೆಲ್ಲ ತನ್ನಲ್ಲಿ ಪ್ರಕಟಗೊಳ್ಳುವ ಹೊತ್ತಿನಲ್ಲೆ ಅವನಲ್ಲೂ ಅನಾವರಣಗೊಳ್ಳುತ್ತಿರಬಹುದೆ ಎಂದು ಅನುಮಾನ ಹುಟ್ಟಿ, ಏನು ಯೋಚಿಸಲೂ ಭೀತಿ ಪಡುವಂತಾಯ್ತು - ಆಲೋಚಿಸಿದ್ದೆಲ್ಲ ಅವನಿಗೆ ನಿಸ್ತಂತುವಾಗಿ ನೇರ ತಲುಪುತ್ತಿರಬಹುದೇನೊ ಎನ್ನುವ ಅನುಮಾನದಲ್ಲಿ. ಈ ಸನ್ಯಾಸಿಗೆ ಅದೇನೇನು ಶಕ್ತಿ, ಸಾಮರ್ಥ್ಯಗಳಿವೆಯೊ? ಹೇಳದೆಲೆ ಒಳಗಿನದೆಲ್ಲ ತಿಳಿದುಕೊಳ್ಳುವ ಪವಾಡ ಪುರುಷರ ಹಾಗಿನ ವಿಶೇಷತೆಗಳೇನಾದರೂ ಸಿದ್ದಿಸಿಬಿಟ್ಟಿದೆಯೊ ಎಂಬ ಸಖೇದಾಶ್ಚರ್ಯದಲ್ಲಿ ತುಸು ಹೊತ್ತು ಮಾತೆ ಹೊರಟಿರಲಿಲ್ಲ - ತನ್ನ ಮನದೊಳಗಿನ ಗುಟ್ಟೆಲ್ಲ ಅವನಲ್ಲಿ ಬಯಲಾಗಿಬಿಡುತ್ತಿರುವುದಲ್ಲ ಎನ್ನುವ ಆತಂಕದಲ್ಲಿ. ಆ ಯೋಚನೆಯಲ್ಲಿದ್ದಾಗ ಆತನೆ ಮುಂದುವರೆದು, 'ನನಗ್ಹೇಗೆ ನಿನ್ನ ಮನಸು ತಿಳಿಯಿತೆಂಬ ಅಚ್ಚರಿ ಬಿಡು ಮಗು... ಈ ಜಗದ ಬಂಧಗಳಿಂದ ನಿರ್ವಾಣ ಹೊಂದಿದ ಪರಿತ್ಯಾಗಿ ಜೀವಕ್ಕೆ ತನ್ನದು, ಪರರದು ಎನ್ನುವ ವ್ಯತ್ಯಾಸವಿರದಂತೆ ಎಲ್ಲವೂ ಸ್ಪಷ್ಟವಾಗಿ, ನಿಖರವಾಗಿ ಕಾಣಿಸುತ್ತದೆ.. ಭಾವ ವಿಕಾರವಿಲ್ಲದ ನಿರ್ಮೋಹಿ ಮನದಲ್ಲಿ ಸರಿ ತಪ್ಪಿನ ವಿಶ್ಲೇಷಣೆಗಿಂತ ಎಲ್ಲವನ್ನು ವಿರಕ್ತ, ನಿರ್ಲಿಪ್ತ ಭಾವನೆಯಲ್ಲಿ ನೋಡುವುದರಿಂದ ನಿನ್ನೊಳಗಿನ ಚಿತ್ರ ನನಗರಿವಾಗುತ್ತದೆಯಷ್ಟೆ ; ಅದಕ್ಕಾಗಿ ಭೀತಿ ಪಡಬೇಡ. ನಿನ್ನ ಮನದಾಳದ ಯಾವುದೋ ಮೂಲೆಯ ಪ್ರಾಮಾಣಿಕ ಕೂಗು ತುಣುಕಾಗಿ ನನಗೂ ಕೇಳಿಸಿತು, ಕಾಣಿಸಿತು.. ಅದಕ್ಕೆ ನಿನಗೆ ಸಹಾಯ ಮಾಡೋಣವೆಂದೆಣಿಸಿ ಹಾಗೆ ಹೇಳಿದೆನಷ್ಟೆ...'
ಅವನು ಹಾಗೆನ್ನುತ್ತಿದ್ದಂತೆ, ಈತನ್ಯಾರೊ ಅತಿಶಯ ಮಾನುಷ ಶಕ್ತಿಯಿರುವ ಬೌದ್ಧಗುರುವಿರಬೇಕೆಂದು ಶ್ರೀನಾಥನ ಅಪರಿಪೂರ್ಣ ಪ್ರಜ್ಞೆಗೆ ತಟ್ಟನೆ ಹೊಳೆದುಹೋಗಿತ್ತು. ಆ ಹೊಳಹಿನ ತೀವ್ರತೆ ಎಷ್ಟು ಆಳವಾಗಿತ್ತೆಂದರೆ ಆತನಿಗೆ ಸತ್ಯವಾಗಿಯೂ ಶಕ್ತಿಯಿದ್ದು ತನ್ನ ಯೋಚನೆಯೆಲ್ಲ ತಿಳಿಯುತ್ತಿದೆಯೆ ಇಲ್ಲವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಪಾಡಿಗೂ ಹೋಗದೆ, ಆತನಿಗೆ ಖಂಡಿತವಾಗಿ ತಿಳಿದು ಹೋಗುತ್ತಿದೆಯೆಂಬ ಖಚಿತ ನಂಬಿಕೆ ಸ್ವಸ್ಥವಾಗಿ ಪ್ರಸ್ಥಾನಗೊಂಡುಬಿಟ್ಟಿತ್ತು - ಯಾವುದೆ ಸಾಕ್ಷ್ಯಾಧಾರಗಳ ಹಂಗಿರದೆ. ಆ ಅರಿವಿನ ಪ್ರಜ್ಞೆಯೊಡಮೂಡಿಸಿದ ಶ್ರದ್ಧಾಪೂರ್ಣ ಭಕ್ತಿ ಭಾವದ ವಿನೀತ, ವಿನಮ್ರ ಸ್ವರದಲ್ಲಿ ,'ಮಾಸ್ಟರ್, ನಿಮಗೆಲ್ಲವು ಅರಿವಿರುವಂತೆ ತೋರುತ್ತಿದೆ.. ನನ್ನೊಳಗಿನ 'ನಾನೆಷ್ಟು ನಿಕೃಷ್ಟ' ನೆಂಬ ಭಾವ ತಿರಿದು ಕೊಲ್ಲುತ್ತಿದೆ ಒಳಗೊಳಗೆ.. ಇದಕ್ಕೇನು ಪರಿಹಾರವೆ ಇಲ್ಲವೇನೊ ಎಂಬ ಅಳುಕು, ಪಾಪಪ್ರಜ್ಞೆಯ ಜತೆ ಸೇರಿ ಮತ್ತಷ್ಟು ಅಧೀರನನ್ನಾಗಿಸುತ್ತಿದೆ, ನನ್ನನ್ನು... ಜತೆಗೆ ನಡೆಯಬಾರದ್ದೆ ನಡೆದರೂ ಅದರ ಅರಿವಿದ್ದೂ ನಿಯಂತ್ರಿಸಲಾಗದ ಅಸಹಾಯಕತೆಯೊಂದು ಕಡೆ ಕಾಡುವ ಪರಿ ಬೇರೆ...' ಎಂದು ತನ್ನ ಅಸಹಾಯಕತೆಯ ಅಳಲನ್ನು ತೋಡಿಕೊಂಡಿದ್ದ ಅದುವರೆವಿಗೂ ತನಗವನು ಅಪರಿಚಿತನಿರುವನೆಂಬ ಯಾವ ಅಡ್ಡಿಯೂ ಕಾಡದವನಂತೆ. ಅದುವರೆವಿಗೂ ಅಣೆಕಟ್ಟು ಕಟ್ಟಿದಂತೆ ತಡೆಹಿಡಿದಿದ್ದ ಒಡ್ಡಿನ ನೀರಿಗೊಂದು ಹರಿವ ದಾರಿ ಸಿಕ್ಕಿದಂತಾಗಿತ್ತು, ಆ ಸನ್ಯಾಸಿಯ ಮಾತಿನಿಂದ.
ಆ ಮಾತಿಗೆ ಮತ್ತೆ ಗಂಭೀರವಾಗಿ ಅರೆಕಾಲ ಕಣ್ಮುಚ್ಚಿ ಮೌನದ ಸೆರಗಿಡಿದಾತ ಮತ್ತೆ ಕಣ್ಣು ತೆರೆದಾಗ ಮುಖದಲ್ಲಿ ಸ್ನಿಗ್ದ ಮುಗುಳ್ನಗೆಯೊಂದು ಹರಡಿಕೊಂಡಿತ್ತು - ಮತ್ತೇನನ್ನೊ ನೋಡಿಬಂದ ಭಾವದಲ್ಲಿ. 'ಕರ್ಮಬಂಧನದಲ್ಲಿ ಸಿಲುಕಿಕೊಂಡವರೆಲ್ಲರೂ ತಪ್ಪದೆ ಅನುಭವಿಸುವ ಯಾತನೆ, ತಪನೆ ಇದು.. ನಿನ್ನ ಮಾತೇನು ಬಿಡು.. ಇಲ್ಲಿ ನಿನ್ನ ನಿಜವಾದ ತೊಡಕೆಂದರೆ ನೀನು ಈ ಸಂಧರ್ಭವನ್ನು ಇಡಿಯಾಗಿ ನೋಡದೆ ಎಲ್ಲವನ್ನು ಬಿಡಿಬಿಡಿಯಾಗಿ ನೋಡಿ ಸರಿ ತಪ್ಪುಗಳ ತುಲನೆ ಮಾಡುತ್ತಿರುವೆ. ಆದರೆ ನೈಜ ಲೆಕ್ಕಾಚಾರದ ವ್ಯವಹಾರ ಇಡಿ ಸಮಷ್ಟಿಯ ತಕ್ಕಡಿಯಲ್ಲಿ, ಒಟ್ಟಾರೆ ಸಮೀಕರಣದ ಲೆಕ್ಕದಲ್ಲಿ ತೂಗಿ ತುಲನೆ ಮಾಡಲ್ಪಡುತ್ತದೆ.. ಕರ್ಮಾಕರ್ಮದ ಸಮೀಕರಣದಲ್ಲಿ ಸಮತೋಲಿತ ನಿವ್ವಳ ಫಲಿತವೆ, ಮಿಕ್ಕೆಲ್ಲ ಬಿಡಿ ಭಾಗಗಳ ಸಂಕಲಿಸಿದ ಮೊತ್ತವಾಗುವ ಕಾರಣ, ಭಾಗವಾಗಿ ನೋಡಿದರೆ ಸರಿಸೂಕ್ತವಾದ ಸಮಗ್ರ ಚಿತ್ರಣ ಸಿಗುವುದಿಲ್ಲ..' ಎಂದವರ ಮುಖವನ್ನೆ ಅರ್ಥವಾಗದ ಸಂದಿಗ್ದ, ಗೊಂದಲದೊಡನೆ ನೋಡುತ್ತ ನುಡಿದಿದ್ದ ಶ್ರೀನಾಥ..
' ಕ್ಷಮಿಸಿ ಮಾಸ್ಟರ್.. ಸ್ವಲ್ಪ ಸರಳವಾಗಿ ಬಿಡಿಸಿ ಹೇಳಲಿಕ್ಕೆ ಸಾಧ್ಯವಾದೀತಾ? ನಿಮ್ಮ ಮಾತಿನ ಸೂಕ್ಷ್ಮ ನನಗರ್ಥವಾಗುತ್ತಿಲ್ಲ..'
' ಇಲ್ಲಿ ಕಠಿಣವಾದುದ್ದು ಏನೂ ಇಲ್ಲ ಮಗು... ಆದರೆ ಅರ್ಥ ಮಾಡಿಕೊಳ್ಳುವ ಪಕ್ವತೆಯಿನ್ನು ಒದಗಿ ಬರದಿದ್ದ ಕಡೆ, ಕಠಿಣವೆನಿಸುವುದು ಸಹಜವೆ... ಹೇಗೆ ಬೌದ್ಧ ಧರ್ಮವೆನ್ನುವುದು ಒಂದೆ ಆದರು, ಬುದ್ಧನೆಂಬುವನು ಒಬ್ಬನೆ ಆಗಿದ್ದರೂ ಮಹಾಯಾನ, ಹೀನಯಾನ, ತೇರವಾದಗಳೆಂಬ ಶಾಖೆಗಳಡಿ ವಿಭಜಿಸಿಕೊಂಡು, ಪ್ರತಿಯೊಂದಕ್ಕೂ ಪ್ರತ್ಯೇಕ ಅಸ್ಥಿತ್ವವನ್ನು ಆರೋಪಿಸಿ ವೈಭವೀಕರಿಸುವರೊ, ಹಾಗೆಯೆ ಈ ಕರ್ಮಗಳ ಸಂಚಯವೂ ಸಹ . ಒಂದು ಚೀಲದಲಿಟ್ಟ ಸಮಷ್ಟಿಯ ಮೊತ್ತವನ್ನು ವಿಭಜಿಸಿ ನಿನಗಿಷ್ಟ ಬಂದ ಹಾಗೆ ವಿಭಾಗಿಸಿದ ಮಾತ್ರಕ್ಕೆ ಅದು ಅನನ್ಯತೆಯಿಂದ ಅನ್ಯತೆಯಾಗಿ ಬದಲಾಗುವುದಿಲ್ಲ. ನೀನು ಎಲ್ಲಿಯವರೆಗೆ ಅಖಂಡ ಸಮಗ್ರತೆಯಲ್ಲಿ ಛಿದ್ರ ವಿಛಿದ್ರಗಳ ಮೊಹರನ್ನು ಸಮಗ್ರವಾಗಿ ಕಾಣಲಾಗುವುದಿಲ್ಲವೊ, ಅಲ್ಲಿಯವರೆಗೂ ನಾನು ಹೇಳುವ ಮಾತು ನಿನಗರ್ಥವಾಗದು ..'
'ಮಾಸ್ಟರ್ ನಿಮ್ಮ ಮಾತಲ್ಲಿ ಅಲ್ಲೊಂದು ಇಲ್ಲೊಂದು ಮಿಂಚು ಹೊಳೆದಂತೆ, ಏನೊ ಅರೆಬರೆ ಅರ್ಥವಾದಂತೆ ಕಂಡರೂ, ನೀವು ಹೇಳುತ್ತಿರುವುದರ ಪೂರ್ಣಸಾರ ಗ್ರಹಿಸಿದೆನೆಂದು ಹೇಳುವ ಧಾರ್ಷ್ಟ್ಯ ನನಗಿಲ್ಲ... ಆದರೆ ಸದ್ಯಕ್ಕಂತೂ ನನ್ನನ್ನು ಪ್ರಮುಖವಾಗಿ ಕಾಡುತ್ತಿರುವುದು ಒಂದು ವಿಷಯವೆಂದು ಮಾತ್ರ ನಿಖರವಾಗಿ ಹೇಳಬಲ್ಲೆ.. ನನ್ನೆಲ್ಲಾ ಚಿಂತನೆ ಕೂಡ ಅದೊಂದರ ಸುತ್ತಲೆ ಸುತ್ತುತ್ತಿದೆಯೆಂದು ಖಚಿತವಾಗಿ ಗೊತ್ತಾಗುತ್ತಿದೆ..'
' ಆ ಸುತ್ತುತ್ತಿರುವ ವಿಷಯಯವನ್ನೆ ನಾನು ಸಹ ಹೇಳುತ್ತಿರುವುದು.. ಎಲ್ಲ ಸಾಮಾನ್ಯರಲ್ಲಾಗುವಂತೆ ನಿನ್ನಿಂದ ಮಾಡಲ್ಪಡುತ್ತಿರುವ ಅನೇಕಾನೇಕ ಕರ್ಮಗಳಲ್ಲಿ ಒಂದಷ್ಟು ಒಳಿತಿನ ಶುಭಫಲದ ಪ್ರಣತಿಗೆ ದೀಪ ಹಚ್ಚುವ ಕರ್ಮಫಲ ಹೊಂದಿದ್ದರೆ, ಮಿಕ್ಕ ಮತ್ತಷ್ಟು ಪಾಪದ ಕೂಪಕ್ಕೆ ಜಾರಿಸಿ ಮತ್ತಷ್ಟು ಕೆಸರಿನ ರಾಡಿಯಾಗುವ ಪ್ರವೃತ್ತಿಯನ್ನುಳ್ಳವಾಗಿರುತ್ತದೆ. ಅಂತಹವುಗಳ ಅರಿವಾಗಿಸಿಕೊಂಡು, ಅವನ್ನು ಸೂಕ್ತವಾಗಿ ನಿಭಾಯಿಸುವ ಪೂರಕ ಪರಿಹಾರ, ಪ್ರಾಯಶ್ಚಿತಕ್ಕೆ ಹೆಣಗಾಡಿದಂತೆಲ್ಲ, ಅದರ ಋಣಾತ್ಮಕ ಪಾಪಾವಶೇಷ ಕರಗುತ್ತ ಏನಿಲ್ಲವೆಂದರೂ ಕನಿಷ್ಠ ಶೂನ್ಯ-ಪಾತಕದತ್ತ ಹೆಜ್ಜೆ ಹಾಕಿಸಿ ನಡೆಸುತ್ತದೆ.. ಆದರೆ ಅದೆಷ್ಟೊ ಬಾರಿ, ಮಾಡಿದೆಲ್ಲ ಪಾಪಕರ್ಮಗಳ ಪ್ರಜ್ಞಾಪೂರ್ವಕ ಅರಿವಿಲ್ಲದೆ ಹೋದಾಗ ಋಣಾತ್ಮಕತೆಯ ಬಟ್ಟಲಿನ ಮೊತ್ತ ನಿನಗೆ ಅರಿವಿಲ್ಲದೆಯೆ ಏರುತ್ತಾ ಹೋಗುತ್ತದೆ... ತುಸು ಆಳವಾಗಿ ಯೋಚಿಸಿ ನೋಡು, ನಿನಗೆ ಅರಿವಾಗುತ್ತದೆ ನಾನು ಹೇಳುತ್ತಿರುವುದರ ಮರ್ಮ, ತಥ್ಯ..'
' ಅದೆಷ್ಟು ಅರಿವಾಯಿತೋ ಬಿಟ್ಟಿತೋ ಹೇಳ ಬರದಿದ್ದರೂ, ನನ್ನ ಪ್ರಜ್ಞಾಶಕ್ತಿಗೆ ಅರಿವಾಗಿರುವಂತೆ, ನಡೆದು ಹೋದ ತಪ್ಪಿಗೆ ಖಂಡಿತ ಪಶ್ಚಾತ್ತಾಪ ಪಡುತ್ತಿರುವೆ.. ಅದಕ್ಕೆಂದಲ್ಲವೆ ಅದೇ ಎಳೆಯನು ಇಲ್ಲಿಗೂ ಹುಡುಕಿಕೊಂಡು ಬಂದಿದ್ದು?'
' ಅದನ್ನು ನಾನು ಬಲ್ಲೆ.. ಆದರೆ ನಿನ್ನ ಕರ್ಮಾಕರ್ಮಗಳ ನಿವ್ವಳತೆಯನ್ನು ಇದೊಂದರಿಂದ ಮಾತ್ರ ಏಕೆ ಅಳೆಯಲೆತ್ನಿಸುತ್ತಿದ್ದೀಯಾ? ನಿನ್ನ ಜೀವನದಲ್ಲಿ ನೀನು ಇದೊಂದನ್ನು ಬಿಟ್ಟು ಬೇರೆ ಮತ್ತಾವ ತಪ್ಪನ್ನು ಎಸಗೆ ಇಲ್ಲವೆ? ನೀನದನ್ನು ಖಡಾಖಂಡಿತವಾಗಿ ಎದೆ ಮುಟ್ಟಿ ಹೇಳಬಲ್ಲೆಯಾ?' ಕೆಣಕುವ ದನಿಯಲ್ಲಿ ಕೇಳಿದ್ದ ಆ ಬೌದ್ಧ ಭಿಕ್ಷು.
'ಈಗಿನ ನನ್ನ ಪ್ರಜ್ಞೆಗರಿವಿರುವಂತೆ ನಡೆದಿರುವ ಇದೊಂದು ಬಿಟ್ಟರೆ, ಪ್ರಜ್ಞಾಪೂರ್ವಕವಾಗಿ ಗೊತ್ತಿರುವಂತೆ ಮತ್ತಾವುದು ಇಲ್ಲವೆಂದು ಹೇಳಬಲ್ಲೆನಾದರು, ಅದೆ ಅಂತಿಮವೆಂದು ಹೇಳಬಲ್ಲ ಎದೆಗಾರಿಕೆಯಂತೂ ಇಲ್ಲ - ಅದರಲ್ಲೂ ತಮ್ಮ ಮಾತನ್ನು ಕೇಳಿದ ಮೇಲೆ.. ನನಗೆ ಅರಿವಿಲ್ಲದ ಹಾಗೆ ಅಥವಾ ಗಮನಕ್ಕೆ ಬರದ ಹಾಗೆ ಆ ರೀತಿಯ ಸಾಕಷ್ಟು ತಪ್ಪುಗಳಾಗಿರಬಹುದಾದ ಸಾಧ್ಯತೆಯನ್ನು ಹೇಗೆ ಅಲ್ಲಗಳೆಯಲಿ, ಮಾಸ್ಟರ್..? ಅಲ್ಲದೆ ದಿನನಿತ್ಯ ಮಾಡುವೆಷ್ಟೊ ಕರ್ಮಗಳಲ್ಲಿ ಸರಿ ತಪ್ಪುಗಳೆಂಬ ಅರಿವೇ ಇಲ್ಲದ್ದೆ ಅದೆಷ್ಟೋ ಕಾರ್ಯಗಳು ಜರುಗುತ್ತಿರುವಾಗ ಯಾರು ತಾನೇ ಪರಿಪೂರ್ಣರೆಂದು ಹೇಳಿಕೊಳ್ಳಲು ಸಾಧ್ಯ? '
ಆತ ಮತ್ತೆ ಚಣಕಾಲ ಮೌನವಾದರು. ನಂತರ ನಿಧಾನವಾಗಿ ನಿಟ್ಟುಸಿರುಬಿಡುತ್ತ, 'ಯಾವುದೆ ವಿಷಯಗಳನ್ನು ನಿಖರವಾಗಿ ತಿಳಿಯುವುದಕ್ಕೂ ಪರಿಪಕ್ವ ಕಾಲ ಕೂಡಿ ಬರಬೇಕು.. ನಿನ್ನ ವಿಷಯದಲ್ಲೂ ಆ ಕಾಲಪಕ್ವತೆಯ ಘಟ್ಟ ಆಯಾಚಿತವಾಗಿ ಸಂಭವಿಸಿದಾಗ, ಮಿಕ್ಕೆಲ್ಲಾ ಆಯಾಮಗಳ ಸ್ಪಷ್ಟ ಅರಿವುಂಟಾಗುತ್ತದೆ, ಸ್ವಯಂ ತಾನೇ ತಾನಾಗಿ. ಈಗ ಗಣನೆಗೂ ಬಾರದಿದ್ದ ಹಲವಾರು ಪ್ರಮುಖ ಅಂಶಗಳು, ಆಗ ಇದ್ದಕ್ಕಿದ್ದಂತೆ ಎಲ್ಲೆಲ್ಲಿಂದಲೊ ಜಿಗಿದೆದ್ದು ಬಂದು ನಿನ್ನನ್ನು ಕಾಡಲು ತೊಡಗುತ್ತವೆ, 'ಎಲ್ಲಿದ್ದವಪ್ಪ ಇಲ್ಲಿಯವರೆಗೆ ?' ಎನ್ನುವ ನೂರೆಂಟು ಪ್ರಶ್ನೆಗಳ ಸರಮಾಲೆಯನ್ನು ಹುಟ್ಟುಹಾಕಿ.. ನಿಜ ಹೇಳುವುದಾದರೆ ಇಲ್ಲಿನವರೆಗೂ ನಿನ್ನನ್ನು ಇದಾವುದರ ಋಣಾತ್ಮಕ ಪರಿಣಾಮದಲ್ಲಿ ಸಿಕ್ಕಿ ನರಳದಂತೆ, ಕಾಪಾಡುತ್ತ ಬಂದಿದ್ದು ನಿನ್ನ ಕರ್ಮಾಚರಣೆಯಲ್ಲಿನ ಒಟ್ಟಾರೆ ನಿವ್ವಳ ಧನಾತ್ಮಕ ಮೊತ್ತ... ಆ ಧನಾತ್ಮಕತೆಯೇ ಒಂದು ರೀತಿಯ ತೊಡಕೂ ಸಹ ಆಗಿ, ನಿನಗದರ ಮಿಕ್ಕ ಆಯಾಮಗಳ ಪರಿಚಯವಾಗಲು ಬಿಡದೆ ಮರೆಮಾಚುತ್ತಿವೆ. ಆದರೆ ನೀನು ಸೂಕ್ಷ್ಮವಾಗಿ ಗಮನಿಸಿದರೆ ಅರಿವಾಗದಿರುವುದಿಲ್ಲ - ಆ ನಿನ್ನಯ ಎಲ್ಲಾ ಗೆಲುವುಗಳಲ್ಲೂ ಅದೆಷ್ಟೋ ಅಡಚಣೆ, ತೊಡಕು, ಅಳುಕು, ಗೊಂದಲಗಳನ್ನು ಸೃಷ್ಟಿಸಿದ್ದು ಅದರಲ್ಲಿ ಅಂತರ್ಗತವಾಗಿದ್ದ ಋಣಾತ್ಮಕ ಅಂಶಗಳೆ... ಈ ನಿವ್ವಳ ಸೂತ್ರ ನಿನ್ನನ್ನು ಇದುವರೆವಿಗೂ ಪೂರ್ತಿ ಪಾತಳಕ್ಕೆ ಬೀಳದಂತೆ ಕಾಪಾಡಿದೆಯಾದರೂ, ಅಲ್ಲಿಂದ ಸಂಪೂರ್ಣ ಮೇಲೆತ್ತಿ ಕಾಪಾಡಿ ಉನ್ನತ ಮೇರು ಶಿಖರದಲ್ಲಿ ಕೂರಿಸಲಾಗಿಲ್ಲ ಅನ್ನುವುದು ಅಷ್ಟೆ ಸತ್ಯವಲ್ಲವೆ?' ಎಂದರು ಅವನ ಕಣ್ಣೊಳಗೆ ಕಣ್ಣಿಟ್ಟು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತ..
'ನಿಮ್ಮ ಮಾತು ಸತ್ಯವೆಂದು ತಾರ್ಕಿಕವಾಗಿ ನೋಡಿದ ಯಾರಿಗಾದರೂ ಅನಿಸದಿರದು, ಮಾಸ್ಟರ್. ಆದರೆ, ಇದನ್ನು ನನ್ನ ಸ್ವಂತಕ್ಕೆ ಸರಳವಾಗಿ ಮತ್ತು ನೇರವಾಗಿ ಅನ್ವಯಿಸಿ ಹೇಗೆ ವಿಶ್ಲೇಷಿಸಬೇಕೆಂದು ಅರಿವಾಗಬಿಡದೆ ಕಂಗಾಲಾಗಿಸುತ್ತಿದೆ..' ಆತನ ಮಾತಿನ ನಂತರ ಪೂರ್ತಿ ಕಂಗಾಲಾಗಿ ಗೊಂದಲಕ್ಕೆ ಬಿದ್ದವನ ಅಸಹಾಯಕ ದನಿಯಲ್ಲಿ ನುಡಿದಿದ್ದ ಶ್ರೀನಾಥ.
' ಅದಕ್ಕೆ ನಾನು ಕಾಲ ಪಕ್ವವಾಗಿಲ್ಲ ಎಂದು ಹೇಳಿದ್ದು. ನಾನೇನು ಹೇಳಲಿ, ನೀನೆಷ್ಟೆ ಪ್ರಯತ್ನಿಸಲಿ ಎಲ್ಲ ಮತ್ತಷ್ಟು ಕಲಸುಮೇಲೋಗರಕ್ಕೆ ಕಾರಣವಾಗುತ್ತವೆಯೆ ಹೊರತು, ಪರಿಹಾರದ ದಾರಿ ತೋರುವುದಿಲ್ಲ. ಅದಕ್ಕೆ ಬದಲಾಗಿ, ಈಗಿನ ಗೊಂದಲವನ್ನೆಲ್ಲ ತಾತ್ಕಾಲಿಕವಾಗಿ ಬದಿಗಿಟ್ಟು, ಸದ್ಯಕ್ಕೆ ನಾನೊಂದು ಸಮಯೋಚಿತ ಸಲಹೆ ಕೊಡುತ್ತೇನೆ, ಅದರಂತೆ ನಡೆದುಕೊಳ್ಳುತ್ತಿಯಾ?' ಮತ್ತೆ ನುಡಿದಿದ್ದ ಆ ಬೌದ್ಧ ಸನ್ಯಾಸಿ..
' ಈಗಿರುವ ಮನಸ್ಥಿತಿಯಲ್ಲಿ ಬೇರೆ ಯಾವುದೆ ಸ್ಥಿತಿಯೂ ಈಗಿರುವುದಕ್ಕಿಂತಲೂ ವಾಸಿಯಿರುತ್ತದೆಂದೆ ಅನಿಸುತ್ತಿದೆ ಮಾಸ್ಟರ್.. ನಿಮ್ಮ ಸಲಹೆಯೇನು ಹೇಳಿ, ಖಂಡಿತ ಪ್ರಯತ್ನಿಸುತ್ತೇನೆ.. ಅದೇನೆಂದು ದಯವಿಟ್ಟು ಹೇಳಿ...' ಎಂದ ಪ್ರಾಮಾಣಿಕ ದನಿಯಲ್ಲಿ ಶ್ರೀನಾಥ.
'ಸರಿ.. ಹಾಗಾದರೆ ಈಗ ನಾನು ಹೇಳಲಿರುವುದನ್ನು ಗಮನವಿಟ್ಟು ಕೇಳು.. ನೀನು ನಂಬಲಿ, ನಂಬದಿರಲಿ ಉಢಾಫೆ ಮಾತ್ರ ಮಾಡಬೇಡ. ಇನ್ನು ಕೆಲವು ವಾರಗಳಲ್ಲಿ ಇದ್ದಕ್ಕಿದ್ದಂತೆ ಒಂದೆರಡು ಆಕಸ್ಮಿಕ ಸಂಘಟನೆಗಳು ತಂತಾನೆ ನಡೆದು, ನೀನು ಕನಸಿನಲೂ ಎಣಿಸಿರದ ರೀತಿಯಲ್ಲಿ ಕೆಲವು ಅನಿರೀಕ್ಷಿತ ಬೆಳವಣಿಗೆಗಳನ್ನು ತರುತ್ತವೆ. ಅಂದ ಹಾಗೆ ನೀನೀಗಲೆ ಅದೇನಿರಬಹುದೆಂದು ಊಹಿಸಲು ಕೂಡ ಹೋಗಬೇಡ.. ನಿಜ ಹೇಳುವುದಾದರೆ ಅದು ನನಗೂ ಗೊತ್ತಿಲ್ಲ.. ಗೊತ್ತಿದ್ದರೂ ಅದರಿಂದ ಈಗ ನಿನಗೆ ಯಾವ ಪ್ರಯೋಜನವೂ ಇಲ್ಲ.. ಅದು ಸರಿಸೂಕ್ತ ಸಮಯದಲ್ಲಿ ಘಟಿಸಿದಾಗ ಮಾತ್ರ ನನ್ನೀ ಮಾತಿನ ನಿಖರ ಅರ್ಥ ನಿನಗಾಗುತ್ತದೆ . ಯಾರೂ ಹೇಳದೆ ನಿನ್ನಲ್ಲೆ ಅದರ ಮಹತ್ವ ಸ್ಪುರಿಸಿ ಇದ್ದಕ್ಕಿದ್ದಂತೆ ಏನೊ ಜ್ಞಾನೋದಯವಾದ ಹಾಗೆ ಭಾಸವಾಗುತ್ತದೆ. ನೀನೇನೊ ಮಹತ್ತರವಾದ, ವಿಭಿನ್ನವಾದದ್ದೇನನ್ನೊ ಮಾಡಬೇಕೆಂಬ ಅಂತಃಪ್ರೇರಣೆಯ ಒತ್ತಡ ಮನಕ್ಕೆ ಪ್ರೇರಣೆಯ ರೂಪದಲ್ಲಿ ಅರಿವಾಗುತ್ತದೆ. ಅದು ಘಟಿಸಿದಾಗ ಅದನ್ನೆ ಎಳೆಯಾಗಿ ಹಿಡಿದುಕೊಂಡು ನೀನೇನು ಮಾಡಬೇಕೆಂದು ನಿನ್ನಲ್ಲೇ ಪ್ರಶ್ನಿಸಿಕೊಂಡಾಗ ನಿನಗೆ ಉತ್ತರ ಹೊಳೆಯುತ್ತದೆ..'
' ಮಾಸ್ಟರ್ ಒಂದು ವೇಳೆ ನೀವಂದಂತೆ ಎಲ್ಲಾ ನಡೆಯುವುದೆಂದೆ ಅಂದುಕೊಂಡರೂ, ನಾನೇನು ಮಾಡಬೇಕೆಂದು ನನಗೆ ಗೊತ್ತಾಗುವುದೆಂದು ಅದು ಹೇಗೆ ಅಷ್ಟು ಖಚಿತವಾಗಿ ಹೇಳುವಿರಿ? ಉತ್ತರ ನನಗೆ ಗೊತ್ತಾಗದೆಯೇ ಇರಬಹುದಲ್ಲವೇ?' ಎಂದು ಸಂದೇಹ ವ್ಯಕ್ತಪಡಿಸಿದ ಶ್ರೀನಾಥ.
' ನಾನು ಹೇಳಿದ್ದು ನಿನಗೆ ಅಂತಿಮ ಉತ್ತರ ಸಿಕ್ಕಿಬಿಡುವುದು ಎಂದಲ್ಲ.. ಆ ಉತ್ತರಕ್ಕೆ ಎಳೆದೊಯ್ಯುವ ದಾರಿ ಗೋಚರಿಸುತ್ತದೆ ಎಂದಷ್ಟೆ..' ಎಂದವರೆ ತಮ್ಮ ಪಕ್ಕಕ್ಕೆ ಇಟ್ಟುಕೊಂಡಿದ್ದ ಕೈಚೀಲವೊಂದಕ್ಕೆ ಕೈ ಹಾಕಿ ಅದರಿಂದ ವಿಸಿಟಿಂಗ ಕಾರ್ಡೊಂದನ್ನು ಎತ್ತಿ ಅವನ ಕೈಗಿತ್ತರು. ಅದೇನು ಎಂಬ ಪ್ರಶ್ನಾರ್ಥಕದೊಡನೆ ಅದನ್ನೆತ್ತಿಕೊಂಡು ನೋಡಿದ ಶ್ರೀನಾಥನಿಗೆ ಅದರಲ್ಲಿದ್ದ ಇಂಗ್ಲೀಷು ಮತ್ತು ಥಾಯ್ ವಿನ್ಯಾಸದ ಚಿತ್ರಗಳಿಂದ ಅದಾವುದೊ ಮತ್ತೊಂದು ಬುದ್ದನ ದೇವಾಲಯದ ವಿಳಾಸ ಎಂದು ಗೊತ್ತಾಗಿತ್ತು. ಬಹುಷಃ ಅದರಲ್ಲಿದ್ದ ಹೆಸರು ಆತನದೆ ಇತ್ತೇನೊ - ಆದರೆ ಕೊನೆಯಲಿದ್ದ ಊರಿನ ಹೆಸರು ಮಾತ್ರ ಬ್ಯಾಂಕಾಕ್ ಆಗಿರದೆ ಮತ್ತೇನೊ ಇದ್ದ ಕಾರಣ ಬೇರೆಯ ಊರಿನ ದೇವಾಲಯವಿರಬೇಕೆಂದು ಅನಿಸಿತು. ಅವನ ಮುಖದ ಮೇಲೆ ಮೂಡುತ್ತಿದ್ದ ಪ್ರಶ್ನಾರ್ಥಕ ಭಾವನೆಯನ್ನೇ ಓದುತ್ತಿದ್ದ ಆ ಬೌದ್ಧ ಗುರು, ಶ್ರೀನಾಥನು ಕೇಳುವ ಮೊದಲೆ ತಾನೆ ಉತ್ತರಿಸಿದ್ದ..
' ಇದು ನಿತ್ಯವೂ ನಾನಿರುವ ಬೌದ್ಧ ಮಾನೆಸ್ಟರಿಯ ವಿಳಾಸ.. ನಾನಿಲ್ಲಿ 'ವಾಟ್ ಪೋ'ಗೆ ಬಂದಿದ್ದು ಕೆಲ ದಿನದ ಮಟ್ಟಿಗೆ ಯಾವುದೊ ಕಾರ್ಯ ನಿಮಿತ್ತವಾಗಿಯಷ್ಟೆ.. ನಾನಿರುವ ಆ ಜಾಗ ಜನಗಳು ಹೆಚ್ಚಾಗಿ 'ಮಾಂಕ್ ಹುಡ್' ಆಚರಿಸಿಕೊಳ್ಳಲು ಬರುವ ಜಾಗ; ಅದರಲ್ಲೂ ಹೆಚ್ಚಾಗಿ ವಿದೇಶಿಗರು ಸದ್ದುಗದ್ದಲವಿಲ್ಲದ ಪ್ರಶಾಂತ ವಾತಾವರಣದಲ್ಲಿ, ಪ್ರಕೃತಿ ಸಹಜ ಪರಿಸರದ ನಡುವೆ ದಿನಗಳೆದು ಮನಶ್ಯಾಂತಿಯನ್ನು ಪಡೆದು ಹೋಗಲು ಬರುವ ತಾಣವದು.. ಕೆಲವರು ಮಾಂಕುಗಳಾಗೆ ಇರಬಯಸಿ ಬಂದರೆ ಮತ್ತಲವರು ಮನಸಿಗೆ ಶಾಂತಿ ಬಯಸಿ ಬರುವ ಯಾತ್ರಾರ್ಥಿಗಳಾಗಿ ಬರುತ್ತಾರೆ...'
' ನನಗುದ್ಭವಿಸುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾನು ಅಲ್ಲಿಗೆ ಬರಬೇಕಾಗುತ್ತದೆಯೆಂದು ಹೇಳುತ್ತಿರುವಿರಾ, ಮಾಸ್ಟರ ? ನಾನೂ 'ಮಾಂಕ್ ಹುಡ್' ವ್ರತ ಹಿಡಿದು ಉತ್ತರ ಹುಡುಕಲು ಅಲ್ಲಿ ನೆಲೆಸಿರಲು ಬರಬೇಕೆಂದು ಹೇಳುತ್ತಿಲ್ಲ ತಾನೇ ನೀವು ?' ಅರೆ ನಂಬಿಕೆಯ ದನಿಯಲ್ಲಿ ಅಚ್ಚರಿಯಿಂದ ಕೇಳಿದ ಶ್ರೀನಾಥ.
ಆ ಮಾತಿಗೆ ಮತ್ತೇನು ಉತ್ತರಿಸದೆ ಸುಮ್ಮನೆ ನಕ್ಕು ಕಣ್ಮುಚ್ಚಿ ಕುಳಿತುಬಿಟ್ಟ ಆ ಬೌದ್ಧ ಭಿಕ್ಷು. ಆ ಕೂತ ಭಂಗಿಯಲ್ಲಿಯೆ ಇನ್ನು ಮಾತೆಲ್ಲ ಮುಗಿಯಿತು, ಮತ್ತೇನು ಉಳಿದಿಲ್ಲವೆಂಬ ಭಾವ ಪ್ರಕಟವಾದಂತೆನಿಸಿ ಮತ್ತೆ ಪ್ರಶ್ನೆ ಕೇಳಿ ಮಾತನಾಡಿಸುವ ಧೈರ್ಯವಾಗದೆ ಅರೆಕ್ಷಣ ಏನು ಮಾಡಲೂ ತೋಚದೆ ಹಾಗೆ ನಿಂತುಬಿಟ್ಟ ಶ್ರೀನಾಥ. ಅಷ್ಟು ಹೊತ್ತು ಅಲ್ಲಿ ನಡೆದದ್ದು, ಅವನು ವಿಸ್ಮಯವೊಂದೇನನ್ನೊ ಅನಾವರಣಗೊಳಿಸಿದಂತೆ ಹೇಳಿದ್ದು, ಅದರ ಪ್ರಭಾವಳಿಯಲ್ಲೆ ತಾನೆಲ್ಲೋ ತನಗರಿವಿಲ್ಲದೆ ತೇಲಿ ಹೋಗಿದ್ದು - ಎಲ್ಲವನ್ನು ನಂಬಬೇಕೋ ಬಿಡಬೇಕೋ ಎಂಬ ಅಯೋಮಯ ಸ್ಥಿತಿಯಲ್ಲಿ ಯಾವುದೊ ವಿಸ್ಮಯ ಲೋಕದ ವಿಸ್ಮೃತಿಯಲ್ಲಿ ಕಳುವಾಗಿ ಹೋಗಿದ್ದವನಿಗೆ ಆ ಹೊತ್ತಿನಲ್ಲಿ ಬೀಸಿದ ಸುತ್ತಲಿನ ಮತ್ತದೆ ತಣ್ಣನೆ ಗಾಳಿಯ ಮೃದು ನೇವರಿಕೆಯಿಂದಾಗಿ ತಟ್ಟನೆ ಮತ್ತೆ ಬಾಹ್ಯಪ್ರಜ್ಞೆಯ ಅರಿವುಂಟಾದಂತಾಗಿ ವಾಸ್ತವಕ್ಕೆಳೆದು ತಂದುಬಿಟ್ಟಿತ್ತು . ಆ ಪ್ರಜ್ಞೆಯ ಅರಿವುಂಟಾಗಿಸಿದ ಲೌಕಿಕತೆ ಅಲ್ಲಿಯವರೆಗೆ ಕಳುವಾದಂತಿದ್ದ ಸಹಜ ಜ್ಞಾನೇಂದ್ರಿಯಗಳನ್ನು ಬಡಿದೆಬ್ಬಿಸಿದಂತೆ, ಅವನಲ್ಲಿದ್ದ ವ್ಯಾಪಾರಿ ಪ್ರಜ್ಞೆಯನ್ನು ಜಾಗೃತಗೊಳಿಸಿಬಿಟ್ಟಿತು. ಆ ವಿಸ್ಮೃತಿಯ ಆವೇಶವಿಳಿದ ಮನದಲ್ಲಿ ಭೌತಿಕ ತಿಳಿವು 'ಆತನು ಹೇಳಿದ್ದು ನಿಜವೋ ಸುಳ್ಳೊ, ಸಂಗತವೊ ಅಸಂಗತವೊ ಅದನ್ನು ಒತ್ತಟ್ಟಿಗಿಟ್ಟು - ಇಷ್ಟು ಹೊತ್ತು ಸ್ವಯಾಚಿತವಾಗಿ ಉಪದೇಶಿಸಿದ ಬೋಧೆ, ನೀತಿಯ ಋಣಭಾರವಾಗದಂತೆ ಏನಾದರೂ ಕಾಣಿಕೆಯ ರೂಪದಲ್ಲಿ ಮೊದಲು ಸಲ್ಲಿಸಿಬಿಡು..' ಎಂದಿತ್ತು. ಮತ್ತೆ ಆತನ ಭೇಟಿಯಾಗುವುದೊ ಇಲ್ಲವೋ - ಯಾವುದಕ್ಕೂ ಇರಲೆಂಬ ಉದ್ದೇಶದಿಂದ ಜೇಬಿನಿಂದ ಸಾವಿರ ಬಾತಿನ ನೋಟೊಂದನ್ನು ತೆಗೆದು ಅವನ ಮುಂದಿಡಲು ಹೊರಟ ಶ್ರೀನಾಥ.
' ಸರ್ವ ತ್ಯಾಗಿಯಾದ ನನಗೇಕೆ ಧನದ ಪ್ರಲೋಭನೆ ? ಆ ಹಣ ನೀನಂದುಕೊಂಡ ಉದ್ದೇಶಕ್ಕೆ ಮತ್ತೊಂದು ರೀತಿ ಬಳಕೆಯಾಗಬೇಕಾಗುತ್ತದೊ ಏನೊ..? ಅದು ನಿನ್ನಲ್ಲೇ ಇರಲಿ.. ನನಗೀವ ಪ್ರಯತ್ನ ಮಾಡ ಬೇಡ ..' ಎಂದು ಕಂಚಿನ ಕಂಠದಲ್ಲಿ ಆದೇಶ ಬಂದಾಗ ಕಣ್ಣುಮುಚ್ಚಿದ್ದರೂ ತನ್ನ ಉದ್ದೇಶ ಹೇಗೆ ಅರಿವಾಯಿತೆಂದು, ಅದು ಹೇಗೆ ತಾನಿಡಬಯಸಿದ ಹಣ ಕಂಡಿತೆಂದು ಅರ್ಥವಾಗದೆ ಇದ್ದರು ಆತನ ಆದೇಶಕೆ ಎದುರಾಡದೆ ಮರು ಮಾತಿಲ್ಲದೆ ಹಣ ವಾಪಸ್ಸು ಜೇಬಿಗೆ ಸೇರಿಸಿ ಎರಡೂ ಕೈ ಜೋಡಿಸಿ ವಂದಿಸುತ್ತ, ಹಿಂದೆ ತಿರುಗಿ ನೋಡಿದರೆ ದೂರದಿಂದ ಕುನ್. ಸೋವಿ ವಾಪಸ್ಸು ಬರುವುದು ಕಂಡಿತ್ತು.
'ಐಯಾಮ್ ಸಾರೀ..ತುಂಬಾ ತಡವಾಗಿ ಹೋಯ್ತು.. ಹೋಪ್ ಯು ಆರ್ ನಾಟ್ ಬೋರಡ್..' ಎಂದ ಮೆಲುವಾದ ಅಪರಾಧಿ ಭಾವದಲ್ಲಿ. ಅವನ ವೈಯಕ್ತಿಕ ಭೇಟಿ ಮತ್ತು ಮಾತುಕತೆಯಲ್ಲಿ ತಲ್ಲೀನನಾದವನಿಗೆ ಈ ಕಡೆ ಏನು ನಡೆದಿತ್ತೆಂಬುದರ ಕುರಿತಾದ ಸ್ವಲ್ಪ ಮಾತ್ರ ಸುಳಿವೂ ಸಿಕ್ಕಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಬಂದ ತಾಣದಲ್ಲಿ, ಅದೂ ತನ್ನ ಜೊತೆಯಾಗಿಯೆ ಬಂದವನು ಯಾರೋ ಅಪರಿಚಿತನ ಜತೆ ಪರಿಚಯ ಬೆಳೆಸಿಕೊಂಡು ಮಾತಿಗಿಳಿದುದಷ್ಟೆ ಅಲ್ಲದೆ, ಆಳದ ವೈಯಕ್ತಿಕ ಸ್ತರದ ಗಹನ ಸಂಭಾಷಣೆಯೊಂದರಲ್ಲಿ ತೊಡಗಿಸಿಕೊಂಡಿದ್ದನೆಂದು ಹೇಳಿದ್ದರೆ - ಅದೂ ಕೇವಲ ಅವನಿಂದ ಬೇರ್ಪಟ್ಟಿದ್ದ ಆ ಹತ್ತಾರು ನಿಮಿಷಗಳ ಕಾಲಾವಧಿಯಲ್ಲಿ - ಕೇವಲ ಕುನ್. ಸೋವಿಯೆ ಏನು, ಸ್ವತಃ ತಾನೆ ನಂಬುತ್ತಿರಲಿಲ್ಲವೇನೊ ? ಹೀಗಾಗಿ ನಡೆದಿದ್ದೇನನ್ನು ಅವನ ಹತ್ತಿರ ಹೇಳಿಕೊಳ್ಳಬೇಕೆಂದು ಅನಿಸಲಿಲ್ಲ ಶ್ರೀನಾಥನಿಗೆ - ಆ ಆಗಾಧ ಅನುಭವದ ಸಾರವನ್ನು ಯಾರೊಂದಿಗಾದರೂ ಹಂಚಿಕೊಂಡು, ಕೂಲಂಕುಷವಾಗಿ ಚರ್ಚಿಸಿ, ವಿಮರ್ಶಿಸಬೇಕೆಂಬ ಅಪಾರ ತಪನೆ, ಕಾತುರತೆ ಒಳಗಿಂದುಧ್ಭವಿಸಿ ಅವನ ಬಾಹ್ಯ ಪ್ರಕ್ರಿಯೆಯ ಮೇಲೆ ಒತ್ತಡ ಹಾಕುತ್ತಿದ್ದರೂ ಸಹ. ಹಾಗೆಂದುಕೊಂಡು ಸುಮ್ಮನೆ ಕುಳಿತಿದ್ದರೂ, ಮನಸು ಮಾತ್ರ ಕಲ್ಲು ಹೊಡೆದು ಬಡಿದೆಬ್ಬಿಸಿದ ಜೇನು ಹುಟ್ಟಿನ ಹಾಗೆ ಪೂರ್ತಿ ಅಲ್ಲೋಲ ಕಲ್ಲೋಲವಾಗಿ ಆ ಸಂವಾದದ ಹಿನ್ನಲೆಯ ಸುತ್ತಲೆ ಗಿರಕಿ ಹೊಡೆಯುತ್ತ, ನಂಬಿಕೆ ಅಪನಂಬಿಕೆಗಳ ತೀರದ ನಡುವೆ ಜೋಲಾಡುತ್ತ ಅಸ್ಥಿರವಾಗಿ ಕುಣಿಯತೊಡಗಿತ್ತು, ಒಂದಿನಿತೂ ತಾಳ ಮೇಳವಿಲ್ಲದ ಹಾಗೆ. ಈ ನಡುವೆ ಡ್ರೈವ್ ಮಾಡುತ್ತಲೆ ತನ್ನ ಭೇಟಿಯ ಸಂಭಾಷಣೆಯ ಕುರಿತು ಏನನ್ನೊ ವಿವರಿಸಲೆತ್ನಿಸುತ್ತಿದ್ದ ಕುನ್. ಸೋವಿಯ ಮಾತು ಯಾಂತ್ರಿಕವಾಗಿ ಕಿವಿಯ ಮೇಲೆ ಬೀಳುತ್ತಿದ್ದರೂ, ಆತನೇನು ಹೇಳುತ್ತಿರುವನೆಂದು ಗಮನವಿಟ್ಟೂ ಕೇಳಲಾಗದಷ್ಟು ಅನ್ಯಮನಸ್ಕತೆಯಿಂದ ತುಂಬಿಹೋಗಿತ್ತು ಶ್ರೀನಾಥನ ಮನ. ಹೀಗಾಗಿ ಅವನ ಜತೆ ಮತ್ತೆ ಕಾರಿನಲ್ಲೇ ಆಫೀಸಿನತ್ತ ನಡೆದರೂ ಮೈ ಮನಸೆಲ್ಲ ಆ ಸನ್ಯಾಸಿಯೊಡನೆ ನಡೆದ ಸಂವಾದದ ಮೆಲುಕಲ್ಲೆ ತಲ್ಲೀನವಾಗಿ, ಮೈ ಮರೆತು ಹೋದಂತಾಗಿದ್ದ ಶ್ರೀನಾಥನಿಗೆ ಆಫೀಸಿನ ಹತ್ತಿರ ತಲುಪಿ ಕಾರನ್ನು ಟ್ರಾಫಿಕ್ ತುಂಬಿದ್ದ ರಸ್ತೆಯ ಬದಿಯೊಂದರಲ್ಲಿ ತಾತ್ಕಲಿಕವಾಗಿ ನಿಲ್ಲಿಸಿದಾಗಲೂ, ಅದು ಚಕ್ಕನೆ ತಾನಿಳಿದುಕೊಳ್ಳಲು ಅನುಕೂಲವಾಗಲೆಂದು ನಿಲ್ಲಿಸಿದ್ದೆಂದು ಅರಿವಿಗೆ ಬರದೆ, ಬೇಗನೆ ಇಳಿಯುವಂತೆ ಕುನ್. ಸೋವಿ ಅವಸರ ಪಡಿಸಿದಾಗಲೂ ಯಾವುದೊ ಲೋಕದಲ್ಲಿರುವವನಂತೆ ನಿಧಾನವಾಗಿಯೆ ಕೆಳಗಿಳಿದಿದ್ದ. ತನನ್ನು ಜತೆಗೊಯ್ದ ಕುನ್. ಸೋವಿಗೊಂದು ಥ್ಯಾಂಕ್ಸ್ ಕೂಡ ಹೇಳಲಿಲ್ಲವಲ್ಲ ಎಂದು ನೆನಪಾಗಿ 'ಛೇ! ಎಂತಹ ಕೆಲಸವಾಯ್ತು?' ಎಂದು ತನ್ನಲ್ಲೆ ಪೇಚಾಡಿಕೊಂಡಿದ್ದು ಕೂಡ ಆಫೀಸಿನ ಬಾಗಿಲನ್ನು ತಲುಪಿದ ಮೇಲಷ್ಟೆ ಎಂದರಿವಾದಾಗ, ತನ್ನನ್ನಾವರಿಸಿಕೊಂಡ ಭೂತದ ಕೊಸರನ್ನೆಲ್ಲ ಚದುರಿಸಿ ಹಾಕುವವನಂತೆ ತಲೆ ಕೊಡವಿಕೊಳ್ಳುತ್ತ ಒಳನಡೆದಿದ್ದ ಶ್ರೀನಾಥ !
(ಇನ್ನೂ ಇದೆ)
Comments
ಉ: ಕಥೆ: ಪರಿಭ್ರಮಣ..(34)
ಅವಧೂತರ ನಡೆಯೂ ಹೀಗೆಯೇ ಇರುತ್ತದೆ. ನನಗಂತೂ ಶ್ರೀನಾಥ ಕುನ್ ಸೂ ಅನ್ನು ವಿವಾಹವಾಗಬೇಕೆಂದು ಅನ್ನಿಸುತ್ತದೆ. ನೋಡೋಣ, ಕಥೆಯಲ್ಲಿ ಏನಿದೆಯೋ!!
In reply to ಉ: ಕಥೆ: ಪರಿಭ್ರಮಣ..(34) by kavinagaraj
ಉ: ಕಥೆ: ಪರಿಭ್ರಮಣ..(34)
ಕವಿಗಳೆ ಶ್ರೀನಾಥ ಈಗಾಗಲೆ ವಿವಾಹಿತನಾಗಿದ್ದು ಮಗುವಿನ ಹೆರಿಗೆಗೆಂದು ಊರಿನಲ್ಲಿ ಬಿಟ್ಟು ಬಂದಿದ್ದಾನೆ! ನಿಮ್ಮ ಅನಿಸಿಕೆಯಂತೆಯೆ ಆಗುವಂತಿದ್ದರೆ, ಕುನ್. ಸು ಜತೆಗಿನ ವಿವಾಹದ 'ಟ್ರೈಯಾಂಗಲ್ ಲವ್ ಸ್ಟೋರಿಯ' ಸಂದಿಗ್ದವನ್ನು ಹೇಗೆ ಪರಿಹರಿಸಿಕೊಂಡು ಬಿಡಿಸಿಕೊಳ್ಳುತ್ತಾನೆ ಎನ್ನುವುದು ಕುತೂಹಲಕಾರಿ ಆಯಾಮ - ಕಾದು ನೋಡೋಣ ! ಸದ್ಯಕ್ಕೆ ಅವನ ಪಕ್ವತೆ, ಪರಿಪಕ್ವತೆಯ ಮಟ್ಟವನ್ನಂತೂ ಮುಟ್ಟಿಲ್ಲ!