ಕದಡುವ/ಕಾಡುವ ಚಿತ್ರಗಳು-೧
ನನಗಾಗ ಸುಮಾರು ಐದೋ ಆರೋ ವರ್ಷಗಳಿದ್ದಿರಬಹುದು. ಅಮ್ಮನ ತವರೂರಾದ ಬಾಗಲಕೋಟೆಗೆ ಬೇಸಿಗೆಯ ರಜೆ ಕಳೆಯಲು ನಾವೆಲ್ಲರೂ ಅಲ್ಲಿಗೆ ಹೋಗಿದ್ದು. ಆಗೆಲ್ಲ ಈಗಿನಂತೆ ಹಳೆ ನಗರ ಮುಳುಗಿರಲಿಲ್ಲ. ಹಳೇಪೇಟೆ, ಕಿಲ್ಲಾ ಪ್ರದೇಶ, ದನದ ಪೇಟೆ, ಕುಂಬಾರ ಓಣಿಗಳಲ್ಲೆಲ್ಲಾ ಹುಡುಗಾಟ ಆಡುತ್ತ ಕಾಲಕಳೆಯುತ್ತಿದ್ದೆವು. ಒಂದು ಮುಂಜಾವು, ಮುಸ್ಲಿಂ ಬಾಂಧವರ ಮಸೀದಿಯ ಆಜಾನಿನ ಕೂಗಿಗೆ ಎಚ್ಚರವಾಗಿ ಬೆಳಗಿನ ಕೆಲಸಗಳನ್ನ ಮುಗಿಸಿ ಮನೆ ಮುಂದಿನ ಅಜ್ಜ ಕಟ್ಟಿಸಿದ ಬಾವಿಕಟ್ಟೆ ಮೇಲೆ ಕುಳಿತು ಆರು ಗಂಟೆಗೆ ಬರುವ ನಲ್ಲಿ ನೀರಿಗಾಗಿ ಜಗಳಾಡುತ್ತ, ನೀರು ಹಿಡಿಯಲು ಓಡಾಡುತ್ತಿರುವ ಓಣಿಯ ಜನರ ಸುಪ್ರಭಾತ ಕೇಳುತ್ತ ಕುಳಿತಿರಲು - ಲುಂಗಿ ಉಟ್ಟುಕೊಂಡು, ಜುಬ್ಬಾ ಧರಿಸಿ, ತೆಲೆ ಮೇಲೆ ಕುರಿ ಚರ್ಮದ ಟೋಪಿ ಹಾಕಿಕೊಂಡು, ತನ್ನ ಸೈಕಲ್ಲಿನ ಹ್ಯಾಂಡಲ್ಗೆ ಆಡಿನ ಚರ್ಮ ಹಾಕಿಕೊಂಡು ಬಂದ ಲಬ್ಬೇರ ಸಾಬ " ಏನಪಾ ರವಿ ಚಾ ಕುಡಿದಿಲ್ಲೋ?" ಎಂದು ಅಕ್ಕರೆಯಿಂದ ಮಾತಾಡಿಸಿ ತನ್ನ ಕಸುಬನ್ನು ಮುಂದುವರೆಸಲು ಮನೆ ಒಳಗೆ ಹೋದ. ಅವನ ಮನೆ ಮುಂದಿನ ಹಿರೇಮಠದ ಎತ್ತರದ ಕಲ್ಲಿನ ಕಮಾನಿಗೆ ಸೂರ್ಯ ತನ್ನ ರಶ್ಮಿಗಳ ಚಾದರ ಹೊದಿಸಿ, ಒಳಗಿನ ಗುಡಿಯ ದೇವರ ಮೂರ್ತಿಗೆ ಆರತಿಯೆತ್ತುವ ಹುನ್ನಾರದಲ್ಲಿದ್ದ. ಹಸಿರು ಧ್ವಜ ಮತ್ತು ಭಾಗವಾ ಧ್ವಜಗಳು ಸುತ್ತಲಿನ ಪ್ರದೇಶದ ಮನೆಗಳ ತಾರಸಿಗಳ ಮೇಲೆ ಬೀಸುವ ಗಾಳಿಗೆ ಪಟಪಟನೆ ಹಾರಾಡುತ್ತಾ ಬೆಳಗಿನ ಸ್ವಾಗತ ಮಾಡುತ್ತಾ ಜುಗಲ್ಬಂದಿ ಮಾಡುತ್ತಿರಲು...........................ಮನೆಯಲ್ಲಿ ಹಾಲು ತರಲು ಕೆಳಗಿನ ಓಣಿಯ ಕಡೆಗೆ ಕಳಿಸಿದರು. ಈಶಾನ್ಯ ದಿಕ್ಕಿಗಿದ್ದ ರಸ್ತೆಯಲ್ಲಿ ಟಾಂಗಾ ನಡೆಸುವ ಷಫೀಕ್ ನ ಕುದುರೆ ಹಾಯಾಗಿ ಹುಲ್ಲು ಮೇಯುತ್ತಾ ಇರಲು ಅಗೋ ಅದರ ಕತ್ತಿನ ಕೂದಲುಗಳ ಮೇಲೆ ಮದರಂಗಿ ಹಚ್ಚಿದಂತೆ ತೋರುವ ಬೆಳಕಿನ ಚಮತ್ಕಾರ! ಕುದುರೆ ಲದ್ದಿಯ ವಾಸನೆ ರಸ್ತೆಯ ತುಂಬಾ ಸವಾರಿ ಹೊರಟಿತ್ತು, ಲೋಬಾನಗಳು, ಊದಿನಕಡ್ಡಿಗಳು ಲದ್ದಿಯ ವಾಸನೆಯೊಂದಿಗೆ ಯುದ್ಧ ಸಾರಿದಂತೆ ತೋರುತ್ತಿತ್ತು. ಹಡಪದ ಶಂಕ್ರಪ್ಪನ ಅಂಗಡಿಯ ಕತ್ತರಿಗಳು ನಿದ್ದೆ ಇಂದ ಎಚ್ಚರಗೊಂಡು ಕಚಕಚನೆ ಸದ್ದು ಮಾಡುತ್ತಾ ತಮ್ಮ ಒಡೆಯನನ್ನು ಶಪಿಸುತ್ತ ಇರಲು, ಅತ್ತ ರೇಡಿಯೋದ ಹೊಟ್ಟೆಯಿಂದ ಬರುತ್ತಿದ್ದ ಅಣ್ಣಾವ್ರ " ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ" ಎಂಬ ಹಾಡಿಗೆ ಹುರುಪು ತಂದು ಕೊಂಡು ತಮ್ಮ ಕಾಯಕವನ್ನ ಮುಂದುವರೆಸಿದ್ದವು. ಸೈಕಲ್ಲುಗಳು ಅಂಗಡಿಯ ಮುಂದೆ ಸಾಲಾಗಿ ಒರಗಿಕೊಂಡು ದಿನದ ಸವಾರಿಗೆ ಬರುವ ಗಿರಾಕಿಗಳು ಇವತ್ತು ಎಲ್ಲೆಲ್ಲಿ ಕರೆದುಕೊಂಡು ಹೋಗಬಹುದು, ಏನೇನು ಹೊರಿಸಿ ತಮ್ಮ ಬೆನ್ನು ಮುರಿಯಬಹುದು ಎಂದು ಚಿಂತಾಕ್ರಾಂತ ಮೋರೆ ಮಾಡಿಕೊಂಡಿದ್ದವು.
ಶೆಟ್ಟರ ಅಂಗಡಿಯಲ್ಲಿ ಹಾಲು ಕೊಂಡು ಇನ್ನೇನು ಮರಳಬೇಕು ಎನ್ನುವಷ್ಟರಲ್ಲಿ ದನದ ಪೇಟೆಯ ರಸ್ತೆಯಲ್ಲ್ಲಿ ಇದ್ದ ಮಸೀದಿಯ ಮುಂದಿನ ಸರಕಾರಿ ತೊಟ್ಟಿಯ ಸುತ್ತ ನಮಾಜಿಗೆ ಬಂದ ಜನರು ಮತ್ತು ಸಾಕಷ್ಟು ಮಹಿಳೆಯರು ಜಮಾಯಿಸಿದ್ದು ನೋಡಿ ಅತ್ತ ಓಡಿದೆ. ಸುತ್ತಲೂ ಬಳ್ಳಾರಿ ಜಾಲಿ ಬೆಳೆದು ಹಾಳುಬಿದ್ದ ಜಾಗ ಇದ್ದುದರಿಂದ ಹಂದಿಗಳು ತಮ್ಮ ಜನ ಸಂಖ್ಯೆಯನ್ನ ನಿಯಂತ್ರಿಸಿರಲಿಲ್ಲ. ತೊಟ್ಟಿಯಲ್ಲ್ಲಿಆಗತಾನೆ ಹುಟ್ಟಿದ ಕೂಸನ್ನು ಯಾರೋ ಎಸೆದು ಹೋಗಿದ್ದರು ಮತ್ತು ಒಂದು ದೊಡ್ಡ ಹಂದಿ ಆ ಕಂದನ ಹೊಟ್ಟೆಗೆ ಬಾಯಿಹಾಕಿ ಕಚ್ಚಿದ್ದರಿಂದ ಆ ಪುಟ್ಟ ಜೀವದ ರೋಧನೆ ತಾರಕದಲ್ಲಿ ಕೇಳುತ್ತಿತ್ತು. ಹಂದಿಯನ್ನು ಓಡಿಸಲು ಜನ ಎಷ್ಟೇ ಪ್ರಯತ್ನ ಪಟ್ಟರೂ ಆ ಮಗುವಿನ ಜೀವ ಉಳಿಯಲಿಲ್ಲ. ಕರುಳು ಕಿತ್ತು ಹೊರಬಂದಿದ್ದ ಆ ಮಗುವಿನ ಚಿತ್ರ ತಲೆತಿರುಗುವಂತೆ ಮಾಡಿತು. ಮತ್ತೆಂದೂ ಅವತ್ತಿನಿಂದ ನಾನು ಮಗು ಸಹಜ ಬೆರಗಿನಿಂದ ಇರಲು ಆಗಲಿಲ್ಲ. 'ಪಾಪ' ಮತ್ತು 'ಸಾವು' ಎಂಬ ಪದಗಳು ಚಿಂತನೆಯನ್ನು ಹುಟ್ಟಿಸಲು ಶುರುವಾಗುವುದರೊಂದಿಗೆ ..............ಬಾಲ್ಯದ ನೆನಪಿನಂಗಳದ ಈ ಕಾಡುವ ಚಿತ್ರ ಈಗಲೂ ನನ್ನನ್ನು ಕದಡುತ್ತದೆ.
Comments
ಉ: ಕದಡುವ/ಕಾಡುವ ಚಿತ್ರಗಳು-೧
In reply to ಉ: ಕದಡುವ/ಕಾಡುವ ಚಿತ್ರಗಳು-೧ by ravi kumbar
ಉ: ಕದಡುವ/ಕಾಡುವ ಚಿತ್ರಗಳು-೧
In reply to ಉ: ಕದಡುವ/ಕಾಡುವ ಚಿತ್ರಗಳು-೧ by partha1059
ಉ: ಕದಡುವ/ಕಾಡುವ ಚಿತ್ರಗಳು-೧
In reply to ಉ: ಕದಡುವ/ಕಾಡುವ ಚಿತ್ರಗಳು-೧ by ravi kumbar
ಉ: ಕದಡುವ/ಕಾಡುವ ಚಿತ್ರಗಳು-೧
In reply to ಉ: ಕದಡುವ/ಕಾಡುವ ಚಿತ್ರಗಳು-೧ by partha1059
ಉ: ಕದಡುವ/ಕಾಡುವ ಚಿತ್ರಗಳು-೧