ಕನ್ನಡಕ್ಕಾಗಿ ದುಡಿದ ಕಿಟೆಲ್ ರನ್ನು ನೆನಪಿಸಿಕೊಳ್ಳುತ್ತಾ...
’ಕಿಟೆಲ್ ನಿಘಂಟು' ಬಗ್ಗೆ ಕೇಳದವರೇ ಅಪರೂಪ. ದೂರದ ಜರ್ಮನಿಯಿಂದ ಭಾರತಕ್ಕೆ ಬಂದದ್ದು ಮತಪ್ರಚಾರಕ್ಕಾಗಿ, ಆದರೆ ಕರ್ನಾಟಕದ ಮಣ್ಣು ಅವರಿಂದ ಮಹತ್ತರವಾದ ಕೆಲಸವನ್ನೇ ಮಾಡಿಸಿಬಿಟ್ಟಿತು. ರೆವರೆಂಡ್ ಫರ್ಡಿನ್ಯಾಂಡ್ ಕಿಟೆಲ್ ರವರ ಆದ್ಯ ಕರ್ತವ್ಯ ಮತಪ್ರಚಾರವಾದಾಗ್ಯೂ, ಅವರು ಮಾನವೀಯ ಮೌಲ್ಯಗಳ ಗಣಿಯಾಗಿದ್ದರು. ಕಿಟೆಲ್ ರವರು, ಕನ್ನಡದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು.
ರೆವರೆಂಡ್ ಕಿಟೆಲ್ ಅವರು ಹುಟ್ಟಿದ್ದು ೮ ಎಪ್ರಿಲ್ ೧೮೩೨ರಲ್ಲಿ. ಯೂರೋಪಿಯನ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅವರಿಗೆ ದೂರದ ಭಾರತದ ಕರ್ನಾಟಕದಲ್ಲಿ ಧಾರವಾಡ, ಮಂಗಳೂರು, ಮಡಿಕೇರಿಯ ಪರಿಸರ, ನಿಸರ್ಗಸೌಂದರ್ಯ, ಅಲ್ಲಿನ ಮುಗ್ಧಜನರ ಭಾಷೆ, ಸರಳ ಆಚಾರ ವ್ಯವಹಾರ, ಉಡುಗೆ-ತೊಡುಗೆಗಳು ಬಹು ಮೆಚ್ಚುಗೆಯಾಗಿರಬೇಕು.
ಕನ್ನಡ ಭಾಷೆಯನ್ನಂತೂ ಅವರು ತುಂಬಾ ಹಚ್ಚಿಕೊಂಡಿದ್ದರು. ಭಾರತದ ಜನತೆಗೆ ಮೊದಲು ವಿದೇಶೀಯರಂತೆ ತೋರಿದರೂ, ಅವರು ತಮ್ಮ ತಾಯ್ನಾಡಿಗೆ ವಾಪಸ್ ಹೋಗುವ ಹೊತ್ತಿಗೆ, ಅವರು ನಮ್ಮವರಲ್ಲಿ ಒಬ್ಬರಾಗಿ ಹೋಗಿದ್ದರು. ಇದಕ್ಕೆ ಕಾರಣ, ಕಿಟೆಲ್ ರ ಅಪಾರ ಕನ್ನಡನಾಡಿನ ಭಾಷೆಯ ಬಗ್ಗೆ ಇದ್ದ ಅನುಭೂತಿ, ವಿಶ್ವಾಸ, ಪ್ರೀತಿ. ಕನ್ನಡ ನುಡಿಯ ಸಂವರ್ಧನೆಗೆ ಅವರು ಮಾಡಿದ ಕಾರ್ಯ, ಸೇವೆ ಅನನ್ಯ.
ನಮ್ಮ ವರಕವಿ ದ.ರಾ.ಬೇಂದ್ರೆಯವರ ಮಾತಿನಲ್ಲಿ ಹೇಳಬೇಕೆಂದರೆ, "ಕನ್ನಡಕೆ ಕನ್ನಡಿಯ ಹಿಡಿದು, ದುಡಿದವ ನೀನು" ಎಂದಿದ್ದಾರೆ. ಇದಕ್ಕಿಂತ ಉತ್ತಮ ಮಾತು ಹೇಳಲು ಸಾಧ್ಯವಿಲ್ಲ.
ಕಿಟೆಲ್ ಶಬ್ದಕೋಶವನ್ನು ಕಾದಂಬರಿಯಾಗಿ, ಕಾವ್ಯವಾಗಿ ಓದುತ್ತಿದ್ದ ವರಕವಿ ಬೇಂದ್ರೆ ಕನ್ನಡದ ರಸವನ್ನು ಕಾವ್ಯದ ಮೂಲಕ ಉಣಬಡಿಸಿದರು. ಕುವೆಂಪು ಅವರಂಥ ಕವಿಗಳು ಆಂಗ್ಲ ಭಾಷೆಯ ಮೋಹವನ್ನು ತೊಡೆದು ಹಾಕಿ ಮಾತೃ ಭಾಷೆ ಕನ್ನಡಕ್ಕೆ ಒತ್ತು ನೀಡಿ ‘ರಾಮಾಯಣದರ್ಶನಂ’ ಕೃತಿಯ ಮೂಲಕ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಕನ್ನಡದ ನಿಘಂಟು ಕೆಲಸಕ್ಕೆ ಡಾಕ್ಟರೇಟು ಪದವಿಗಳಿಸಿದ ಮೊದಲಿಗರೆನಿಸಿದರು ಕಿಟೆಲ್.
ಅಂತಿಮ ದಿನಗಳಲ್ಲಿ ಹಾಸಿಗೆ ಹಿಡಿದಿದ್ದ ತಮ್ಮನ್ನು ನೋಡಲು ಬಂದ ಕನ್ನಡಿಗನನ್ನು ಕಂಡಾಗ ಕಿಟೆಲ್‌ರಿಗೆ ಜೀವ ಬಂದಷ್ಟು ಹಿಗ್ಗು . ಆ ಮನುಷ್ಯನೋ ಇಂಗ್ಲೀಷ್‌ನಲ್ಲಿ ಮಾತು ಪ್ರಾರಂಭಿಸಿದ. ದಯವಿಟ್ಟು ಕನ್ನಡದಲ್ಲಿ ಮಾತನಾಡಿ ಎಂದು ಕಿಟೆಲ್ ಆ ಮನುಷ್ಯನನ್ನು ಒತ್ತಾಯಿಸಿದರಂತೆ!
ಇಂಥ ಹೆಮ್ಮೆಯ ಕನ್ನಡ ಪ್ರೇಮಿಯ ಹುಟ್ಟುಹಬ್ಬ ಎಪ್ರಿಲ್ ೮ರಂದು. ಅವರ ಅದಮ್ಯ ಚೇತನಕ್ಕೆ ನಮ್ಮ ಸಾವಿರ ಶರಣು.
(ಆಧಾರ)