ಕನ್ನಡಕ್ಕಿದು ಕಷ್ಟ ಕಾಲ...

ಕನ್ನಡಕ್ಕಿದು ಕಷ್ಟ ಕಾಲ...

ಬರಹ

ಕನ್ನಡಕ್ಕಿದು ಕಷ್ಟ ಕಾಲ...

ಅಂತೂ ಹೊಗೇನಕಲ್ ವಿವಾದ ತಾತ್ಕಾಲಿಕವಾಗಿಯಾದರೂ ಅಂತ್ಯ ಕಂಡಿದೆ. ಬಹುಶಃ ಸೋನಿಯಾ ಗಾಂಧಿ ಹಾಗೂ ಮನಮೋಹನ ಸಿಂಗರ ಮಧ್ಯಸ್ಥಿಕೆಯಿಂದಾಗಿ ಇದು ಸಾಧ್ಯವಾಗಿದೆ. ತಮ್ಮ ಪಕ್ಷ ಭಾಗವಹಿಸಿರುವ ಸಂಯುಕ್ತ ಪ್ರಗತಿ ರಂಗವೆಂಬ(ಯುಪಿಎ) ಮೈತ್ರಿಕೂಟದ ಧರ್ಮ ಪರಿಪಾಲಿಸುವ ಒತ್ತಡಕ್ಕೆ ಸಿಲುಕಿ ಕರುಣಾನಿಧಿಯವರು ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ತಡೆಹಿಡಿದಿರುವುದಾಗಿ ಪ್ರಕಟಿಸಿದ್ದಾರೆ. ಇದನ್ನು ಈಗ ರಾಜಕೀಯ ಮುತ್ಸದ್ದಿತನದ ನಿರ್ಧಾರವೆಂದು ಕರೆಯಬಹುದಾದರೂ, ಈ ನಿರ್ಧಾರ ಪ್ರಕಟವಾಗುವ ಮುನ್ನ ಎರಡೂ ರಾಜ್ಯಗಳ ನಡುವೆ ಉಂಟಾದ ಉದ್ವಿಗ್ನತೆ, ಕಹಿ ಭಾವನೆಗಳು ಮತ್ತು ಇದರಿಂದ ಎರಡೂ ಕಡೆ ಸಂಭವಿಸಿದ ಪುಂಡಾಟಿಕೆಯ ಘಟನೆಗಳಿಗೆ ಯಾರು ಜವಾಬ್ದಾರರು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ಹಾಗೇ, ತಮಿಳರು ಮತ್ತು ಕನ್ನಡಿಗರ ನಡುವೆ ಪದೇ ಪದೇ ಈ ತರಹದ ಘರ್ಷಣೆಗಳು ಏಕೆ ತಲೆದೋರುತ್ತವೆ ಮತ್ತು ಕರ್ನಾಟಕ ಏಕೀಕರಣದ ನಂತರ ಕಟ್ಟಿಕೊಂಡ ಕನ್ನಡ ಚಳುವಳಿಗಳ ಪ್ರಚೋದಕ ಶಕ್ತಿ ಮುಖ್ಯವಾಗಿ ಏಕೆ ತಮಿಳು ವಿರೋಧವೇ ಆಗಿದೆ ಎಂಬ ಪ್ರಶ್ನೆಗಳನ್ನೂ.

ಇತ್ತೀಚೆಗೆ ಪ್ರಕಟಗೊಂಡ ಡಾ|| ಷ.ಶೆಟ್ಟರ್ ಅವರ 'ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಪುಸ್ತಕವು ಕನ್ನಡ ಭಾಷೆ ಹಾಗೂ ಸಂಸ್ಕೃತಿ ಚರಿತ್ರೆಯನ್ನು ಈವರೆಗೆ ನಮ್ಮ ಗಮನಕ್ಕೆ ಬಾರದಿದ್ದ ನೆಲೆಗಳ ಆಧಾರದ ಮೇಲೆ ಪುನಾರಚಿಸುವ ಅಗತ್ಯವನ್ನು ಮನಗಾಣಿಸುತ್ತದೆ. ಮುಖ್ಯವಾಗಿ ಈ ಪುಸ್ತಕ ಕನ್ನಡವನ್ನು ಕಟ್ಟಿದ್ದೆಂದು ಈವರೆಗೆ ನಾವು ಭಾವಿಸಿರುವ ಕನ್ನಡ - ಸಂಸ್ಕೃತ 'ಬಾಂಧವ್ಯ'ಕ್ಕಿಂತ ಮೂಲಭೂತವಾದ ಹಾಗೂ ಅರ್ಥಪೂರ್ಣವಾದ ಕನ್ನಡ - ತಮಿಳು 'ಬಾಂಧವ್ಯ'ವನ್ನು ನಮಗೆ ಎತ್ತಿ ತೋರಿಸುತ್ತದೆ. ಆದಿ ತಮಿಳಿನ ಮತ್ತು ತಮಿಳು 'ಪ್ರದೇಶ'ದ (ತಮಿಳಗಂ) ಒಡನಾಟದಲ್ಲೇ ಒಡಮೂಡಿದ ಕನ್ನಡ ಮತ್ತು ಕನ್ನಡ ಸಮುದಾಯ, ತಮಿಳು ತನ್ನದೇ ಲಿಪಿಯನ್ನು ಪಡೆಯುವ ಸಾಕಷ್ಟು ಮುನ್ನವೇ ತನ್ನದೇ ಲಿಪಿಯನ್ನು ಪಡೆದುಕೊಂಡು; ತಮಿಳು ಭಾಷೆ, ಸಾಹಿತ್ಯ ಮತ್ತು ರಾಜ್ಯ ವ್ಯವಸ್ಥೆಯ ಮೇಲೂ ಪ್ರಭಾವ ಬೀರುವಷ್ಟು ಆತ್ಮ ವಿಶ್ವಾಸದಿಂದ ಬೆಳೆದಿದ್ದ ಒಂದು ಕಾಲ ಘಟ್ಟದ ಚರಿತ್ರೆಯನ್ನು ಷ.ಶೆಟ್ಟರ್ ಅನೇಕ ಶಾಸನ ಹಾಗೂ ಸಾಹಿತ್ಯ ಕೃತಿಗಳ ಸೂಕ್ಷ್ಮ ವಿಶ್ಲೇಷಣೆಯ ಮೂಲಕ ನಮ್ಮ ಮುಂದೆ ಬೆರಗಾಗುವಂತೆ ಮಂಡಿಸುತ್ತಾರೆ. ಆ ಮೂಲಕ ಪರೋಕ್ಷವಾಗಿ; ಕನ್ನಡ ಕುಲ ಮೂಲದ ನಿಜ ಚರಿತ್ರೆ ಹೀಗಿದ್ದರೂ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಚರಿತ್ರೆಯನ್ನು ಸಂಸ್ಕೃತದ ಒಡನಾಟದ ಆಧಾರದ ಮೇಲೇ ಕಟ್ಟಲಾಗಿರುವ ಸಾಂಸ್ಕೃತಿಕ ರಾಜಕಾರಣದ ಕಡೆ ನಮ್ಮ ಗಮನ ಸೆಳೆಯುತ್ತಾರೆ. ತಮಿಳು ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿಗಳ ನಡುವೆ ಈ ಸಾಂಸ್ಕೃತಿಕ ರಾಜಕಾರಣ ಉಂಟು ಮಾಡಿದ ಬಿರುಕೇ ಈ ದಿನಗಳ ಕನ್ನಡ - ತಮಿಳರ ಘರ್ಷಣೆಗಳ ಹಿಂದೆ ಕೆಲಸ ಮಾಡುತ್ತಿರಬಹುದೇ ಎಂಬ ಅನುಮಾನ ನನ್ನದು.

ಇದೊಂದೇ ಅಲ್ಲ. ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತು, ಅದರ ಪರಿಣಾಮವಾಗಿ ಚಾರಿತ್ರಿಕ ಕನ್ನಡ ನಾಡಿನ ಕೊನೆಯ ರೂಪ ಎನ್ನಬಹುದಾದ ಮೈಸೂರು ಸಂಸ್ಥಾನ ಮೂರು ಭಾಗಗಳಾಗಿ ಛಿದ್ರವಾಗಿ ಒಂದು ಭಾಗ ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದಾಗ, ಬ್ರಿಟಿಷರು ಅಲ್ಲಿಂದ ದುಡಿಮೆಗಾಗಿ ತಮಿಳು - ತೆಲುಗರನ್ನು ಭಾರಿ ಪ್ರಮಾಣದಲ್ಲಿ ಇಲ್ಲಿಗೆ ಸಾಗಿಸಿ ಮೈಸೂರು ಕನ್ನಡಿಗರ ಮಧ್ಯೆ ಉಂಟು ಮಾಡಿದ ಸಾಂಸ್ಕೃತಿಕ ಆಘಾತದ ಸುಪ್ತ ನೆನಪುಗಳೂ ಇಲ್ಲಿ ಕೆಲಸ ಮಾಡುತ್ತಿರಬಹುದು. ಹಾಗಾಗಿಯೇ ಕನ್ನಡ ಚಳುವಳಿ ತಮಿಳರು ಗಣನೀಯ ಸಂಖ್ಯೆಯಲ್ಲಿರುವ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲೇ ತನ್ನನ್ನು ವಿವಿಧ ರೂಪಗಳಲ್ಲಿ ಕಟ್ಟಿಕೊಂಡು, ತಮಿಳರನ್ನು ತನ್ನ ದೃಷ್ಟಿಕೇಂದ್ರವನ್ನಾಗಿ ಮಾಡಿಕೊಂಡಿದೆ. ಕನ್ನಡ ಚಳುವಳಿಯ ಈ ತಮಿಳು ವ್ಯಸನದಿಂದಾಗಿ ಇತರ ಭಾಷಾ ಸಮುದಾಯಗಳು - ಉದಾ: ಮಲೆಯಾಳಿಗಳು, ಹಿಂದೀಯರು, ಇತ್ತೀಚೆಗೆ ರಾಜಸ್ಥಾನಿಗಳು ಮತ್ತು ಬಿಹಾರಿಗಳು - ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ವಲಸೆ ಬಂದು ನೆಲೆಗೊಂಡು ಇಲ್ಲಿನ ಜನ ಸಮುದಾಯದೊಂದಿಗೆ ಬೆರೆಯುವ ಪ್ರಕ್ರಿಯೆಯಲ್ಲಿ ತೊಡಗದೇ ಹೋಗಿರುವುದು ಯಾರ ಗಮನಕ್ಕೂ ಬಾರದೆ ಹೋಗಿ, ತಮಿಳರು ತಮಿಳರಾಗಿಯೇ ಉಳಿದಿರುವುದು ಮಾತ್ರ ಈ ಕನ್ನಡ ಚಳುವಳಿಕಾರರನ್ನು ಬಾಧಿಸುವ ದೊಡ್ಡ ಸಮಸ್ಯೆಯಾಗಿದೆ! ಕನ್ನಡ ಚಳುವಳಿಯ ಈ ದೃಷ್ಟಿದೋಷದಿಂದಾಗಿ ಕನ್ನಡದ ಪೂರ್ವ ಗಡಿ ಪೂರ್ತಾ ರಾಜಕೀಯವಾಗಿ (ಇದೇ ಅಂತಿಮ ಹಂತ ತಾನೇ?) ತೆಲುಗರ ವಶವಾಗುತ್ತಿರುವುದು ಯಾರಿಗೂ ದೊಡ್ಡ ಸಮಸ್ಯೆಯಾಗಿ ಕಾಣುತ್ತಿಲ್ಲ. ಇದು ಕನ್ನಡ ಚಳುವಳಿಯ ಇಂದಿನ ದುರಂತ.

ಈ ದುರಂತಕ್ಕೆ ಕಾರಣ, ಕನ್ನಡ ಚಳುವಳಿಯು ಕನ್ನಡನಾಡಿನ ಛಿದ್ರೀಕರಣದ ಚರಿತ್ರೆಯ ಗಾಯಗಳ ನೆನಪಿನ ಜಾಲದಲ್ಲ್ಕಿ ಸಿಕ್ಕಿಬಿದ್ದಿದ್ದು (ಹಾಗಾಗಿಯೇ ಏನೋ, ಅದು ನೋವು ನಿವಾರಕವೆಂಬಂತೆ ಕರ್ನಾಟಕದ ಗತವೈಭವವನ್ನು ಅಷ್ಟು ಮೆರೆಸುವುದು!) ವರ್ತಮಾನದ ಕನ್ನಡದ ನಿಜ - ಬೇರು ಮಟ್ಟದ - ಸಮಸ್ಯೆಗಳ ಕಡೆ ಗಮನವನ್ನೇ ಕೊಡದೇ ಹೋಗಿರುವುದು. ಕನ್ನಡ ಚಳುವಳಿಯು ಕನ್ನಡದ ಅಸ್ಮಿತೆಗೆ, ಅದರ ಅಳಿವು - ಉಳಿವುಗಳಿಗೆ ಆಧಾರಭೂತವಾಗಿರುವ, ಶಿಕ್ಷಣದಲ್ಲಿನ ಕನ್ನಡದ ಪ್ರಶ್ನೆ ಅಥವಾ ಗಣಕ ಯಂತ್ರಜ್ಞಾನದಲ್ಲಿನ ಕನ್ನಡದ ಪ್ರಶ್ನೆಯನ್ನು ಎಂದಾದರೂ ಕೈಗೆತ್ತಿಕೊಂಡಿರುವುದನ್ನು ಕಂಡಿದ್ದೀರಾ? ಶಾಲಾ ಶಿಕ್ಷಣದ ಒಂದು ಹಂತದವರೆಗಾದರೂ ಕರ್ನಾಟಕದಲ್ಲಿ ಕನಿಷ್ಠ ಕನ್ನಡದ ಮಕ್ಕಳಿಗೆ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಬಹುದೆಂಬ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವಂತೆ ಇವರೆಂದಾದರೂ ಸರ್ಕಾರದ ಮೇಲೆ ಒತ್ತಡ ಹಾಕಿದ್ದುಂಟಾ? ಈ ತೀರ್ಪಿಗೆ ತಡೆಯಾಜ್ಞೆ ತಂದ ಬೆಂಗಳೂರಿನ ಖಾಸಗಿ ಶಾಲಾ ಸಾಮ್ರಾಜ್ಯದ ವಿರುದ್ಧ ಮತ್ತು ಈ ತಡೆಯಾಜ್ಞೆಯನ್ನು ತೆರವುಗೊಳಿಸುವ ಆಸಕ್ತಿಯನ್ನೇ ತೋರದ ಕರ್ನಾಟಕ ಸರ್ಕಾರದ ವಿರುದ್ಧ ಇವರೇಕೆ ಚಳುವಳಿ ಹೂಡದೇ ಹೋದರು?

ಈ ಮಧ್ಯೆ ಬೆಂಗಳೂರು ಕೇಂದ್ರಿತವಾದ ಕನ್ನಡದ್ದೇ ಆದ ಒಂದು ಗುಂಪು ಚಾರಿತ್ರಿಕ ಸನ್ನಿವೇಶವೇ ಬದಲಾಗಿದೆ ಎಂದು ವಾದಿಸುತ್ತಾ; ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧಿಸುವ ಆಜ್ಞೆಯನ್ನು ಸರ್ಕಾರ ಹೊರಡಿಸುವಂತೆ (ಸರ್ಕಾರವೂ ಇಂತಹ ಒತ್ತಡಕ್ಕೆ ಕಾಯುತ್ತಿತ್ತೋ ಅಥವಾ ಅದೇ ಇಂತಹ ಒತ್ತಡವನ್ನು ಸೃಷ್ಟಿಸಿತೋ ಇನ್ನೂ ತಿಳಿಯದು!) ದಲಿತ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಯ ಹೆಸರಲ್ಲಿ ಸತತ ಒತ್ತಡ ಹೇರಿ ಯಶಸ್ವಿಯಾಗಿ ಕನ್ನಡ ಶಿಕ್ಷಣದ ಪ್ರಶ್ನೆಯನ್ನೇ ಅಪ್ರಸ್ತುತ ಹಾಗೂ ಅಸಂಗತಗೊಳಿಸಿದಾಗ, ಕನ್ನಡ ಮತ್ತು ಕನ್ನಡ ಸಮಾಜಕ್ಕೆ ಸಂಬಂಧಿಸಿದಂತೆ ಇದರ ಮುಂದಿನ ಪರಿಣಾಮಗಳೇನು ಎಂಬುದರ ಬಗ್ಗೆ ಯೋಚಿಸುವ ತಾಕತ್ತನ್ನೇ ಕಳೆದುಕೊಂಡಂತೆ ಈ ಚಳುವಳಿಗಳು ನಿಷ್ಕ್ರಿಯವಾಗಿದ್ದುದಾದರೂ ಯಾಕೆ? ರಾಜ್ಯ ಸರ್ಕಾರದ ಅನಾಸಕ್ತಿಯಿಂದಾಗಿ ಹದಿಮೂರು ವರ್ಷಗಳವರೆಗೆ ತಡೆಯಾಜ್ಞೆಗೆ ಸಿಕ್ಕಿ ನೆನೆಗುದಿಗೆ ಬಿದ್ದಿದ್ದ ಸರ್ವೋಚ್ಛ ನ್ಯಾಯಾಯಲಯದ ತೀರ್ಪು ಕೊನೆಗೂ ವಿಚಾರಣೆಗೆ ಬಂದು, ವಿಚಾರಣೆ ಮುಗಿದು ಒಂದು ವರ್ಷದ ಮೇಲಾದರೂ ನಮ್ಮ ಉಚ್ಛ ನ್ಯಾಯಾಲಯದಿಂದ ಆ ಬಗೆಗಿನ ತೀರ್ಪು ಹೊರಬರದಿರುವ 'ವಿಶಿಷ್ಠ ಸನ್ನಿವೇಶ'ದ ಕಡೆ ಈ ಚಳುವಳಿಗಳ ಗಮನವೇಕೆ ಹರಿದಿಲ್ಲ? ಏಕೆಂದರೆ, ವ್ಯಕ್ತಿಗತ ಖಾಸಗಿ ಕಂಪನಿಗಳಂತೆ ಬೆಳೆದಿರುವ ಈ ಚಳುವಳಿಗಳು ರೂಪಿತವಾಗಿರುವುದೇ ಮೂಲತಃ ಅನ್ಯರ ವಿರುದ್ಧ. ಹೀಗಾಗಿ, ಇಂದು ಕನ್ನಡ ಚಳುವಳಿ ತನ್ನ ವಿರುದ್ಧವೂ ಚಳುವಳಿ ಹೂಡಬೇಕಾದ ಸಾಧ್ಯತೆಗಳ ಅರಿವಿರದ, ಸಂಪೂರ್ಣ ಹೊರ ಹೋರಾಟದ - ಬರೀ ಗಲಾಟೆ ಹುಟ್ಟಿಸುವ - ಚಳುವಳಿಯಾಗಿ ಮೂಡಿ ನಿಂತಿದೆ.

ಕನ್ನಡವನ್ನು ಕೈಬಿಡುವುದು ಅನಿವಾರ್ಯವೆಂದು ಕನ್ನಡಿಗರೇ ಹೇಳುವಂತಾಗಿರುವ ಈ 'ಬದಲಾದ ಚಾರಿತ್ರಿಕ ಸನ್ನಿವೇಶ'ದಲ್ಲ್ಲಿ ಕನ್ನಡ ಚಳುವಳಿಯ ಮೂಲ ಆಶಯಗಳೇ ಸಂಪೂರ್ಣ ಬದಲಾಗಬೇಕಿತ್ತು. ಆದರೆ ಹಾಗಾಗದೇ ಅದು, ಇಂಗ್ಲಿಷ್ - ಹಿಂದಿಗಳನ್ನು ತಮ್ಮ ವ್ಯಕ್ತಿತ್ವದ ಹಿರಿಮೆ - ಗರಿಮೆಗಳನ್ನಾಗಿ ಮಾಡಿಕೊಳ್ಳಲು ಹಾತೊರೆಯುತ್ತಿರುವ ಅನ್ಯ ಮನಸ್ಕ 'ಕನ್ನಡಿಗ'ರ ನೆಲ ಜಲಗಳಿಗಾಗಿ ಹೋರಾಟ ಮಾಡುವುದನ್ನು ತನ್ನ ಗುರಿಯಾಗಿಸಿಕೊಂಡಿರುವ ವಿಪರ್ಯಾಸವನ್ನು ನಾವಿಂದು ನೋಡುತ್ತಿದ್ದೇವೆ. ಇದರ ಅಂತಿಮ ಪರಿಣಾಮವೆಂದರೆ, ತಮಿಳರ ಸ್ವಭಾವಕ್ಕೆ ವಿರುದ್ಧವಾಗಿ ಅನ್ಯರ ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾಗುವ ಚಾರಿತ್ರಿಕ ದೌರ್ಬಲ್ಯವುಳ್ಳ ಕನ್ನಡಿಗರು ತಮ್ಮ ನೆಲ ಜಲಗಳನ್ನು ಹಿಂದಿ - ಇಂಗ್ಲಿಷ್‌ಗಳ ನವ ಸಾಮ್ರಾಜ್ಯಶಾಹಿಯ ವಶಕ್ಕೆ (ಅಂದರೆ ರಾಷ್ಟ್ರೀಯ ಬಹುರಾಷ್ಟ್ರೀಯ ಕಂಪನಿ ವ್ಯಾಪಾರಿಗಳಿಗೆ) ಬಿಟ್ಟುಕೊಡುವಂತಹ, ಕನ್ನಡದ ಬೇರುಗಳೇ ನಿರ್ನಾಮವಾಗುವಂತಹ ವಾತಾವರಣ ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಾರಂಭಿಸುವುದು. ಈ ಅಪಾಯಕ್ಕೆ ಮುಖ್ಯ ಕಾರಣ, ಕನ್ನಡ ಚಳುವಳಿ ಈಗ ಮೂಲತಃ ನಗರ ಕೇಂದ್ರಿತ ಮಧ್ಯಮ ಮತ್ತು ಕೆಳ ಮಧ್ಯಮ ಜಾತಿಗಳ ಚಳುವಳಿಯಾಗಿರುವುದು. ಅದು ರೈತರು, ದಲಿತರು, ಕಾರ್ಮಿಕರು, ಪರಿಸರವಾದಿಗಳು - ಹೀಗೆ ಕನ್ನಡದ ವಿವಿಧ ಚಲನಶೀಲ ಹಾಗೂ ಮುಖ್ಯವಾಹಿನಿಯ ಚಳುವಳಿಗಳನ್ನು ಒಳಗೊಂಡು ಬೆಳೆಯುವಂತಾಗಿದ್ದರೆ ತನ್ನ ಬುಡವನ್ನೇ ಕತ್ತರಿಸುವ ಕೊಡಲಿಗೆ ತಾನೇ ಕಾವಾಗುವಂತಹ ಈ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಿರಲಿಲ್ಲ.

ಈ ಇಕ್ಕಟ್ಟಿನಿಂದ ಕನ್ನಡ ಚಳುವಳಿಯನ್ನು ಪಾರುಮಾಡಬಲ್ಲುದಾಗಿದ್ದುದು ಕನ್ನಡ ಬುದ್ಧಿಜೀವಿ ವರ್ಗ. ಆದರೆ ಗೋಕಾಕ್ ಚಳುವಳಿಯವರೆಗೆ ಕನ್ನಡ ಚಳುವಳಿಯೊಂದಿಗೆ ಸ್ಥೂಲವಾಗಿಯಾದರೂ ಗುರುತಿಸಿಕೊಂಡಿದ್ದ ಈ ವರ್ಗ ಇತ್ತೀಚಿನ ವರ್ಷಗಳಲ್ಲಿ ಕಾಲಧರ್ಮಕ್ಕನುಸಾರವಾಗಿಯೋ ಏನೋ, ಜಾಗತೀಕರಣದ ಇಕ್ಕಟ್ಟಿಗೆ ಸಿಲುಕಿಕೊಂಡಿರುವ ಮಧ್ಯಮ ವರ್ಗದವರ ಕಷ್ಟ ಸುಖಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳಲಾರಂಭಿಸಿದೆ. ಹಾಗೇ, ಕನ್ನಡ ಚಳುವಳಿ, ರೈತ ಚಳುವಳಿ ಹಾಗೂ ಪರಿಸರ ಚಳುವಳಿಗಳು ಕೈಬಿಟ್ಟ ದಲಿತ ವರ್ಗವನ್ನು ಮುಂದೆ ಮಾಡಿಕೊಂಡು, ಕನ್ನಡವನ್ನು ಜಾಗತೀಕರಣದ ಇಕ್ಕಟ್ಟುಗಳಿಂದ ಪಾರುಮಾಡಲು ಇಂಗ್ಲಿಷ್‌ನೊಡನೆ ಅನುಸಂಧಾನ ನಡೆಸುವುದೇ ಶ್ರೇಷ್ಠ ಮಾರ್ಗವೆಂದು ಅದು ಪ್ರತಿಪಾದಿಸತೊಡಗಿದೆ. ಈ ವರ್ಗ ದಲಿತರಿಗೆ ಮತ್ತು ಇತರ ಶೂದ್ರರಿಗೆ ಈಗ ಶಿಕ್ಷಣ ಮತ್ತು ಆಡಳಿತಗಳಲ್ಲಿ ಬಳಸಲಾಗುತ್ತಿರುವ 'ಪ್ರಮಾಣಿತ' ಶಿಷ್ಟ ಕನ್ನಡ ಕ್ಲಿಷ್ಟವೂ, ಸಾಮಾಜಿಕವಾಗಿ ಕೀಳರಿಮೆ ಉಂಟುಮಾಡುವಂತಹದಾಗಿದ್ದು; ಅವರು ಇವುಗಳಿಂದ ಪಾರಾಗಲು ಇಂಗ್ಲಿಷ್ ಶಿಕ್ಷಣವನ್ನು ಬಯಸತೊಡಗಿದ್ದಾರೆಂಬ ವಿಚಿತ್ರ ವಾದದ ಮೂಲಕ ಕನ್ನಡ ಶಿಕ್ಷಣದ ಹಿಂದಿರುವ ತಾತ್ವಿಕತೆ ಹಾಗೂ ನೈತಿಕತೆಗಳಿಗೆ ಮತ್ತು ಆ ಮೂಲಕ ಕನ್ನಡ ಸಮಾಜದ ಮೂಲ ಅಸ್ಮಿತೆಗೇ ಕೊಡಲಿ ಪೆಟ್ಟು ಹಾಕತೊಡಗಿದೆ.

ಈ ವಿಷಯ ಕಳೆದ 5 ಹಾಗೂ 6ರಂದು ಶಿವಮೊಗ್ಗದಲ್ಲಿ ನಡೆದ 'ನಮಗೆ ಬೇಕಾದ ಕನ್ನಡ' ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ (ಇದನ್ನು ಆಯೋಜಿಸಿದ್ದುದು ಮುಖ್ಯವಾಗಿ, ಕುವೆಂಪು ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘ) ಬಹು ಆಯಾಮಗಳಲ್ಲಿ ಚರ್ಚಿತವಾಯಿತು. ಕನ್ನಡದ ತಮಿಳು ಒಡನಾಟದ ಬಗ್ಗೆ ಇತ್ತೀಚೆಗೆ ಹೊಸ ಬೆಳಕು ಚೆಲ್ಲಿರುವ ಷ.ಶೆಟ್ಟರ್, ಕನ್ನಡದಲ್ಲಿನ ಆಧುನಿಕ 'ತೋಂಡಿ' ಸಂಪ್ರದಾಯದ ಪಿತಾಮಹರೆನಿಸಿರುವ ಕಿ.ರಂ.ನಾಗರಾಜ ಹಾಗೂ ಕನ್ನಡದ ಆಧುನಿಕ ಭಾಷಾಶಾಸ್ತ್ರಜ್ಞರೆನಿಸಿರುವ ಕೆ.ವಿ.ನಾರಾಯಣ ಮುಖ್ಯವಾಗಿ ಈ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳು. ವಿಚಾರ ಸಂಕಿರಣದ ಭಾಗವಾಗಿ ಇವರೆಲ್ಲರ ಎದುರಿನಲ್ಲಿ ನಾನು ಮೇಲೆ ವಿವರಿಸಿದಂತಹ ಕನ್ನಡಕ್ಕೊದಗಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡಿದಾಗ ಅದು ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು, ಕೆ.ವಿ.ನಾರಾಯಣರ ಇತ್ತೀಚಿನ 'ಕನ್ನಡ ಜಗತ್ತು:ಅರ್ಧ ಶತಮಾನ' ಎಂಬ ಪುಸ್ತಕವೇ ಕನ್ನಡದ ಇಂದಿನ ಬಿಕ್ಕಟ್ಟನ್ನು ಸಮರ್ಥವಾಗಿ ಬಿಂಬಿಸುತ್ತದೆ ಎಂದು ಕಿ.ರಂ. ಪ್ರತಿಪಾದಿಸತೊಡಗಿದಾಗ ಅದನ್ನು ನಾನು ತೀವ್ರವಾಗಿಯೇ ವಿರೋಧಿಸಬೇಕಾಯಿತು. ಏಕೆಂದರೆ ಸದಾ ಇತರ ಭಾಷೆಗಳ (ತಮಿಳು,ಸಂಸ್ಕೃತ, ಪರ್ಷಿಯನ್, ಇಂಗ್ಲಿಷ್, ಈಗ ಅಮೆರಿಕನ್) ಮುಖಾಮುಖಿಯಲ್ಲೇ ಉಳಿದು ಬೆಳೆಯುವ ಸಂಕಟದಲ್ಲೇ ತನ್ನ ಚರಿತ್ರೆಯನ್ನು ಕಟ್ಟಿಕೊಳ್ಳುತ್ತಾ ಬಂದಿರುವ ಕನ್ನಡ, ತನ್ನ ನಿಜವಾದ ಸ್ವಾಯತ್ತತೆಯನ್ನು ಸ್ಥಾಪಿಸಿಕೊಳ್ಳುವ ಹೋರಾಟದಲ್ಲಿ ಎಲ್ಲ ಅಡೆ ತಡೆಗಳನ್ನೂ ದಾಟಿ; ಸರ್ವೋನ್ನತ ನ್ಯಾಯಾಲಯದ ತೀರ್ಪಿನ ಮೂಲಕ ಒಂದು ಹಂತದವರೆಗಾದರೂ ಶಿಕ್ಷಣದ ಭಾಷೆಯಾಗಿ ಸ್ಥಾಪಿತವಾಗುವ ಸಂದರ್ಭ ಒದಗಿ ಬಂದಾಗ, ಅದನ್ನು ತಮ್ಮ 'ಒಂದನೇ ತರಗತಿಯಿಂದ ಇಂಗ್ಲಿಷ್' ಚಳುವಳಿಯ ಮೂಲಕ ಹಾಳು ಮಾಡಲು ಒಟ್ಟುಗೂಡಿದ ಹೊಸ ಪಟ್ಟಭದ್ರರ ಎಲ್ಲ ವಾದಗಳಿಗೂ ನನ್ನ ಪ್ರಕಾರ ಈ ಪುಸ್ತಕ ತಾನು ವಿನ್ಯಾಸಗೊಳಿಸಿಕೊಂಡಿರುವ ತಾತ್ವಿಕತೆ ಮತ್ತು ಶೈಲಿಯ ಮೂಲಕ ಒಂದು ಸಾಧುತ್ವವನ್ನು ಒದಗಿಸಲು ಹವಣಿಸುತ್ತದೆ.

ಈ ಪುಸ್ತಕ ಹೇಳುವ ಅತಿಯಾದ ಸಂಸ್ಕೃತೀಕರಣದಿಂದ ಕನ್ನಡ ಭಾಷೆಯ ರಚನೆ ಮತ್ತು ಲಿಪಿಗಳಲ್ಲಿ ಉಂಟಾಗಿರುವ ಸಾಮಾಜಿಕ ನೆಲೆಯ ತೊಡಕುಗಳು ಇಂದಿನ ಸಂದರ್ಭದಲ್ಲಿ ಈ ಭಾಷೆ ಬೆಳೆಯಲು ಇರುವ ತೊಂದರೆಗಳು ಎಂಬುದನ್ನು ನಾನು ಒಪ್ಪುವೆನಾದರೂ; ಇವನ್ನು ಈಗಾಗಲೇ ಹಿರಿಯರಾದ ಡಿ.ಎನ್.ಶಂಕರಭಟ್ಟರು ಪ್ರತಿಪಾದಿಸಿರುವ ಹಾದಿಯಲ್ಲಿ ಸರಿಪಡಿಸಿಕೊಳ್ಳುವ ರೀತಿಯಲ್ಲಿ ಭಾಷಾ ಆಂದೋಲನವನ್ನು ಸಾಮಾಜಿಕವಾಗಿ ಪುನರ್ರೂಪಿಸಬೇಕೇ ಹೊರತು, ಈ ಇಕ್ಕಟ್ಟನ್ನು ಇಂಗ್ಲಿಷ್ ಶಿಕ್ಷಣದ ಹಪಾಹಪಿಯನ್ನು ಪ್ರತ್ಯಕ್ಷವಾಗಿಯಲ್ಲದಿದ್ದರೂ (ಅದಕ್ಕೂ ಧೈರ್ಯ ಬೇಕಾದ ಸ್ಥಿತಿ ಇನ್ನೂ ಉಳಿದಿದೆ ಎಂಬುದೇ ಸದ್ಯದ ಸಂತೋಷದ ಸಂಗತಿ!) ಪರೋಕ್ಷವಾಗಿ ಬೆಂಬಲಿಸುವ ವಾದಗಳನ್ನು ಮಂಡಿಸಲು ಸುಲಭದ ದಾರಿಯಾಗಿ ಬಳಸಿಕೊಳ್ಳಬಾರದೆಂಬುದು ನನ್ನ ವಾದವಾಗಿತ್ತು. ಈ ಪುಸ್ತಕದಲ್ಲಿ ಕೆ.ವಿ.ನಾರಾಯಣರು 'ಅಂತಸ್ಥ ಜಾಗತಿಕ ವ್ಯಾಕರಣ'ವೆಂಬ ಸಿದ್ಧಾಂತದ ಆಧಾರದ ಮೇಲೆ ಮಂಡಿಸಿರುವ ಹಲವು ವಾದಗಳು ಅನುಮಾನಾಸ್ಪದವೂ, ಪ್ರಶ್ನಾರ್ಹವೂ ಆಗಿವೆ. ಭಾಷಾ ಪರಿಸರದ ಪ್ರಸ್ತಾಪವೇ ಇಲ್ಲದೆ, ಒಂದು ಮಗು ಎಷ್ಟು ಭಾಷೆಗಳನ್ನಾದರೂ ಕಲಿಯಬಲ್ಲುದು, ಶಿಕ್ಷಣ ಮಾಧ್ಯಮಕ್ಕೂ ಕಲಿಕೆಗೂ ಸಂಬಂಧವಿಲ್ಲ, ಭಾಷಾ ಕಲಿಕೆಗೂ ಸಾಂಸ್ಕೃತಿಕ ಅಸ್ಮಿತೆಯ ಪ್ರಶ್ನೆಗೂ ಸಂಬಂಧವಿಲ್ಲ, ಕನ್ನಡ ತನ್ನ ಸಹ ಭಾಷೆಗಳ (ತುಳು, ಕೊಂಕಣಿ, ಕೊಡವ) ಜೊತೆ ಯಾಜಮಾನ್ಯ ಸಂಬಂಧಗಳನ್ನು ಬೆಳೆಸಿಕೊಂಡು ಆ ಭಾಷೆಗಳ ಸಹಜ ಬೆಳವಣಿಗೆಗೆ ಅಡ್ಡಿಯಾಗಿದೆ ಮುಂತಾದ ಇವರ ವಾದಗಳನ್ನು ಪ್ರಶ್ನೆಗಳಿಲ್ಲದೆ ಒಪ್ಪಿಕೊಂಡುಬಿಟ್ಟರೆ, ಕನ್ನಡ ಚಳುವಳಿಯ - ಈಗಾಗಲೇ ಕ್ಷೀಣ ಸ್ಥಿತಿ ತಲುಪಿರುವ - ಹೃದಯವೇ ನಿಂತು ಹೋದಂತಾಗುತ್ತದೆ.

ಕನ್ನಡದ ಇಂತಹ ಹೃದಯ ಸ್ತಂಭನವನ್ನು ನಾರಾಯಣರು ಬಯಸಲಾರರು ಎಂಬ ನಂಬಿಕೆಯಿಂದಲೇ ನಾನು ನನ್ನ ವಿಚಾರಗಳನ್ನು ಮಂಡಿಸಿದ್ದೆ. ಆದರೆ ಅವರು ನಾನು ಅವರ ವಿಚಾರಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ್ಲವೆಂಬ ಅಸಮಧಾನದಲ್ಲಿದ್ದಂತಿದ್ದು, ಏನೂ ಮಾತಾಡಲಿಲ್ಲ. ಕಿ.ರಂ. ಸಹಜವಾಗಿಯೇ ಉದ್ವಿಗ್ನರಾಗಿ, ಇಂದಿನಿಂದಲೇ ನೀವು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಮುಚ್ಚಿಸಿ, ನಾವು ನಿಮ್ಮ ಜೊತೆಗಿರುತ್ತೇವೆ ಎಂದು ಘೋಷಿಸಿದರು - ಇದು ಎಲ್ಲರೂ ಸೇರಿ ಮಾಡಬೇಕಾದ ದೀರ್ಘಕಾಲಿಕ ರಾಜಕಾರಣ ಎಂಬುದನ್ನೇ ಮರೆತವರಂತೆ. ಇವರು ಕನ್ನಡದ ಮಕ್ಕಳಿಗೆ ಕನ್ನಡ ಶಿಕ್ಷಣವೆಂಬುದು ಒಂದು ಸಾಮಾಜಿಕ ನೈತಿಕತೆಯ ಹಾಗೂ ಜವಾಬ್ದಾರಿಯ ಪ್ರಶ್ನೆಯೂ ಆಗಿದೆ ಮತ್ತು ಅದಕ್ಕೆ ತಕ್ಕನಾದ ಉದ್ಯೋಗ ಮಾರುಕಟ್ಟೆ ನಿರ್ಮಾಣವಾಗುವಂತೆ ಖಚಿತಪಡಿಸಿಕೊಳ್ಳುವ ದಾರಿಗಳನ್ನು ಹುಡುಕುವುದೇ ಇಂದು ನಾವು ಮಾಡಬೇಕಾದ ನಿಜವಾದ ರಾಜಕಾರಣವೆಂಬುದನ್ನು ಮರೆತು ಜಾಗತೀಕರಣದ ರಾಜಕೀಯ ಒತ್ತಡಗಳಿಗೆ ಸುಲಭವಾಗಿ ಮಣಿದವರಂತೆ ಕಂಡು ಖೇದವೆನಿಸಿತು. ಇವರ ಇನ್ನೊಬ್ಬ ಬೆಂಬಲಿಗರು ಅಂಬೇಡ್ಕರರ ಸಂಕಟಕ್ಕೆ ಇಂಗ್ಲಿಷ್ ಹೇಗೆ ಹೊರ ದಾರಿಯನ್ನು ಕಲ್ಪಿಸಿತು ಎಂಬುದನ್ನು ವಿವರಿಸುತ್ತಾ, ನನ್ನ ವಾದ ಆರ್.ಎಸ್.ಎಸ್. ವಾದಕ್ಕೆ ಸಮೀಪವಾಗಿದೆ ಎಂದು ಎಚ್ಚರಿಸಿದರು! ಕನ್ನಡ ವಿದ್ವದ್ವಲಯದ ತಾರೆಗಳಲೊಬ್ಬರಾದ ಇವರು, ಸಂಪೂರ್ಣ ದಿವಾಳಿಯೆದ್ದ ಒಬ್ಬ ಎಡಪಂಥೀಯರಂತೆ ನನ್ನ ಮುಂದೆ ಆರ್.ಎಸ್.ಎಸ್. ಗುಮ್ಮನನ್ನು ಇರಿಸಿ ಮಾತನಾಡತೊಡಗಿದ್ದು ಗಾಬರಿ ಹುಟ್ಟಿಸಿತಲ್ಲದೆ, ಅಂಬೇಡ್ಕರ್ ಇಡೀ ಶಾಲಾ ಶಿಕ್ಷಣವನ್ನು ಮುಗಿಸಿದ್ದು ಮರಾಠಿಯಲ್ಲಿ ಮತ್ತು ಅವರು ಇಂಗ್ಲಿಷ್ ಕಲಿತದ್ದು ಸ್ವಂತ ಪರಿಶ್ರಮದಿಂದ - ಹೆಚ್ಚಿನ ವಿದ್ವತ್ತಿಗಾಗಿ ಹಾಗೂ ರಾಜಕಾರಣಕ್ಕಾಗಿ ಎಂಬುದನ್ನು ಗಣನೆಗೇ ತೆಗೆದುಕೊಳ್ಳದೆ ಮಾಡಿದ ವಾದ ಕೇವಲ ಅಮಾಯಕವಾದುದಲ್ಲವೆನ್ನಿಸಿ ಜಿಗುಪ್ಸೆಯನ್ನೂ ಹುಟ್ಟಿಸಿತು.

ಯಾರೂ, ಯಾವುದೂ ಪವಿತ್ರ ಗೋವುಗಳಲ್ಲ ಎಂದು ಸರಿಯಾಗಿಯೇ ವಾದಿಸುವ ಈ ಗುಂಪು, ಅಂಬೇಡ್ಕರರನ್ನು ಮಾತ್ರ ಪವಿತ್ರ ಗೋವಿನಂತೆ ಕಾಪಾಡಿಕೊಂಡು ತಮ್ಮ ರಾಜಕೀಯ ವಾದಗಳಿಗೆ ಬಳಸಿಕೊಳ್ಳುವ ರೀತಿಯೇ ಅವರ ವಾದಗಳ ಹಿಂದಿರುವ ಟೊಳ್ಳು ರಾಜಕಾರಣವನ್ನು ಸೂಚಿಸುತ್ತದೆ ಎಂದು ನನಗನ್ನಿಸುತ್ತದೆ. ದಲಿತರ ಬೇಡಿಕೆಗಳನ್ನೆಲ್ಲ ಪ್ರಶ್ನೆಯೇ ಇಲ್ಲದೆ ಸಾರಾಸಗಟಾಗಿ ಒಪ್ಪಿಕೊಳ್ಳಬೇಕೆಂದು ವಾದಿಸುವವರ ಗುಂಪಿಗೆ ದಲಿತರು 'ಕರುಣೆ'ಗೆ ಅರ್ಹರಾದ 'ಅನ್ಯ'ರು; 'ಕರುಣಾ'ದ ವ್ಯಾಪ್ತಿಗೆ ಬರುವ ಜೊತೆಗಾರರಲ್ಲ. ಹೀಗೆ ದಲಿತರನ್ನು ಕೇವಲ ಒಂದು ರಾಜಕೀಯ ಸಮುದಾಯವೆಂಬಂತೆ ಕಲ್ಪಿಸಿಕೊಂಡು, ದಲಿತರಲ್ಲಿಯೂ ಕನ್ನಡದ ಸತ್ಯ ಮತು ಸತ್ವದ ಬಗ್ಗೆ ನಂಬಿಕೆ - ಗೌರವಗಳನ್ನು ಉಳಿಸಿಕೊಂಡಿರುವವರೂ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಇವರು ಗುರುತಿಸಲಾರದೇ ಹೋಗಿದ್ದಾರೆ. ಹಾಗಾಗಿಯೇ, ನಾವ್ಯಾರೂ ಇಂಗ್ಲಿಷನ್ನು ಕಲಿಸಬೇಡಿ ಎಂದು ಹೇಳುತ್ತಿಲ್ಲ; ಬದಲಿಗೆ ಕನ್ನಡ ಕಲಿಕೆಯ ನೆಲಗಟ್ಟಿನ ಮೇಲೆ ಇಂಗ್ಲಿಷನ್ನು ಚೆನ್ನಾಗಿ ಕಲಿಸಿ ಎಂದು ಹೇಳುತ್ತಿದ್ದೇವೆ ಮತ್ತು ನಮ್ಮ ನಿಜವಾದ ಆತಂಕ ಇರುವುದು ಒಂದನೇ ತರಗತಿಯ ಇಂಗ್ಲಿಷ್ ಕಲಿಕೆಯ ಬಗೆಗಲ್ಲ, ಬದಲಿಗೆ ಅದರ ಮುಂದಿನ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪರಿಣಾಮಗಳ ಬಗೆಗೆ ಎಂದು ಸಾರಿ ಸಾರಿ ಹೇಳುತ್ತಿದ್ದರೂ, ಇವರ ಕಿವಿಗಳಿಗೆ ಬೀಳದಾಗಿದೆ. ಜಾಗತೀಕರಣದೊಂದಿಗೆ ಚರಿತ್ರೆ ತನ್ನ ಅಂತ್ಯ ಮುಟ್ಟಿದೆ ಎಂದು ಹೇಳುತ್ತಿರುವ ಜಾಗತೀಕರಣವಾದಿಗಳ ಮಾತುಗಳಿಗೆ ಮರುಳಾದಂತೆ ಇವರು, ಕನ್ನಡವೂ ಸೇರಿದಂತೆ ತಮ್ಮೆಲ್ಲ ದೇಶೀ ಅಸ್ತ್ರಗಳನ್ನು ಕೆಳಗಿಟ್ಟಂತೆ ತೋರುತ್ತದೆ. ಇದು ಖಂಡಿತ ಬಾಣಲೆಯಿಂದ ಬೆಂಕಿಯ ಕಡೆಗಿನ ಪ್ರಯಾಣವೇ ಆಗಿದೆ ಎಂದು ನನಗನ್ನಿಸುತ್ತದೆ. ನನ್ನ ಈ ಅನ್ನಿಸಿಕೆ ಸುಳ್ಳಾಗಲಿ ಎಂಬುದರ ಹೊರತಾಗಿ ಇನ್ನಾವ ಹಾರೈಕೆಯ ಅವರಿಗಾಗಿ ನನ್ನ ಬಳಿ ಸದ್ಯಕ್ಕೆ ಇಲ್ಲದಾಗಿದೆ!

ಶಿವಮೊಗ್ಗದಲ್ಲಿನ ವಿಚಾರ ಸಂಕಿರಣದ ಈ ಪುರಾಣವನ್ನೆಲ್ಲ ನಾನು ಇಲ್ಲಿ ಇಷ್ಟು ವಿವರವಾಗಿ ಏಕೆ ಹೇಳಬೇಕಾಗಿ ಬಂತೆಂದರೆ, ಈಚಿನ ಹೊಗೇನಕಲ್ ಗಲಾಟೆಯಲ್ಲಿ ನಾವು ನೋಡಿದಂತೆ, ಕನ್ನಡ ಬೀದಿ ಚಳುವಳಿ ರೂಕ್ಷವಾಗಿ ಕಾಣುವಂತಾಗಿದ್ದರೆ ಅದಕ್ಕೆ ಕನ್ನಡದ ಕೆಲವು (ಅತಿ) ಬುದ್ಧಿಜೀವಿಗಳು ಹಿಡಿದಿರುವ ಇಂತಹ ಅಡ್ಡದಾರಿಗಳೂ ಕಾರಣವಾಗಿರಬಹುದೇ ಎಂಬ ನನ್ನ ಅನುಮಾನವನ್ನು ಸೂಚಿಸಲು. ಇದಕ್ಕೆ ಇಂದು ಯದ್ವಾತದ್ವಾ ವರ್ತಿಸುತ್ತಿರುವಂತೆ ತೋರುವ ಇವರಿಬ್ಬರಲ್ಲೂ ಸಾಮಾಜಿಕ ನೈತಿಕತೆಯ ಭಯ ಹುಟ್ಟಿಸುವ ಕನ್ನಡದ ಹಿರಿಯರೆಂಬುವವರು ಒಬ್ಬರೂ ಇಲ್ಲದೇ ಹೋಗಿರುವುದೇ ಕಾರಣವಾಗಿರಬಹುದು. ಕುವೆಂಪು, ಕಾರಂತ ಮತ್ತು ರಾಜಕುಮಾರ್ ನಮ್ಮ ಮಧೈ ಇದ್ದರೆಂಬುದೇ ಬುದ್ಧಿಜೀವಿಗಳನ್ನೂ ಒಳಗೊಂಡಿದ್ದ ಕನ್ನಡ ಚಳುವಳಿ ತನ್ನ ಸಾಮಾಜಿಕ ಸಭ್ಯತೆಯ ಎಲ್ಲೆಗಳನ್ನು ದಾಟದಂತೆ ಪ್ರತಿಬಂಧಿಸುತ್ತಿತ್ತು. ಅವರ ಕಾಲದಲ್ಲೂ ಕನ್ನಡ ಬೀದಿ ಚಳುವಳಿ (ಈ ಶಬ್ದವನ್ನು ನಾನು ಖಂಡಿತ ಅವಹೇಳನಕಾರಿ ಉದ್ದೇಶದಿಂದ ಬಳಸುತ್ತಿಲ್ಲ; ಬದಲಿಗೆ ಅದರ ಅಸ್ತಿತ್ವದ ಅಗತ್ಯವನ್ನು ಗೌರವಪೂರ್ಣವಾಗಿ ಒಪ್ಪಿಕೊಂಡೇ ಹೇಳುತ್ತಿರುವೆ) ಪುಂಡಾಟಿಕೆ, ಚಂದಾ ವಸೂಲಿಗಳನ್ನು ನಡೆಸುತ್ತಿದ್ದರೂ, ಅದು ಒಂದು 'ಚಿಲ್ಲರೆ' ಪ್ರಮಾಣದಲ್ಲಿ ಅಪರಾಧಿ ಮನೋಭಾವನೆಯೊಂದಿಗೇ ನಡೆಯುತ್ತಿತ್ತು. ಇಂದು ಅದಾದರೋ ಸೇನೆ, ವೇದಿಕೆ, ಕೇಂದ್ರಗಳ ಹೆಸರುಗಳಲ್ಲಿ ಸಾಂಸ್ಥಿಕ ಸ್ವರೂಪ ಪಡೆದು ರಾಜಾ - ರೋಷವಾಗಿ ನಡೆಯುತ್ತಿದೆ. ಇದರ ಅನಾಹುತಕಾರಿ ಪರಿಣಾಮಗಳನ್ನು ನಾವು ಒಂದೆರಡು ವರ್ಷಗಳಿಂದೀಚೆಗೆ ಕಾಣುತ್ತಾ ನಿಶ್ಚೇಷ್ಟಿತರಾಗುತ್ತಿದ್ದೇವೆ! ಬೆಳಗಾವಿಯ ಮೇಯರ್ ಆಯ್ಕೆಯ ಹಿಂದಿನ ರಾಜಕಾರಣವನ್ನು ನಿರ್ವಹಿಸಲು ಇಂತಹ 'ವೇದಿಕೆ'ಯೊಂದರ ನಾಯಕರು ಬೆಂಗಳೂರಿನಿಂದ ಹೋಗಿ ಅಲ್ಲಿ ಮೊಕ್ಕಾಂ ಮಾಡಿದ್ದರೆಂಬುದು ಈ ಕನ್ನಡ ಚಳುವಳಿಯ ರಾಜಕಾರಣ ಪಡೆಯುತ್ತಿರುವ ಹೊಸ ಹಾಗೂ ಆತಂಕಕಾರಿ ಆಯಾಮಗಳೆಂತಹುದು ಎಂಬುದನ್ನು ಸೂಚಿಸುತ್ತದೆ. ಕರ್ನಾಟಕದ ರಾಜಕೀಯ ಪಕ್ಷಗಳ ರಾಜಕಾರಣಕ್ಕೆ ಮತ್ತು ಬುದ್ಧಿಜೀವಿಗಳ ಕಾರ್ಯಶೀಲತೆಗೆ ಕನ್ನಡ ಒಂದು ನಿಜವಾದ ಕಳಕಳಿಯ ವಿಷಯವಾಗದಿರುವುದೇ ಇದಕ್ಕೆಲ್ಲ ಕಾರಣ ಎಂಬುದು ಸ್ಪಷ್ಟ.

ಮಾರುಕಟ್ಟೆಯಲ್ಲಿ ಉಳಿಯಲು ಹೆಣಗುತ್ತಿರುವ ಕೆಲವು ಪತ್ರಿಕೆಗಳು ಮಾಡುತ್ತಿರುವ ಮಸಾಲಾ ಪತ್ರಿಕೋದ್ಯಮ, ಚಳುವಳಿ ಹೂಡಿ ನಾಯಕರಗಳು ಸಂದರ್ಭಕ್ಕಾಗಿ ಕಾಯುತ್ತಿರುವ ಕೆಲವು ಕನ್ನಡ ಪುಢಾರಿಗಳು ಮತ್ತು ಹತ್ತಿರ ಬಂದಿರುವ ಚುನಾವಣೆಗಳಲ್ಲಿ ಲಾಭ ಪಡೆಯಲು ಕೆಲವು ಪಕ್ಷಗಳು ನಡೆಸಿದ ಪ್ರಯತ್ನಗಳು ಸೃಷ್ಟಿಸಿದ ಹೊಗೇನಕಲ್ ಉದ್ವಿಗ್ನತೆಯು ಕರುಣಾನಿಧಿಯವರ 'ಬಿಸಿ' ಪ್ರತಿಕ್ರಿಯೆಯಿಂದಾಗಿ ಬೀದಿಗೆ ಹರಡಿ ತೆಗೆದುಕೊಂಡ ತಿರುವು, ಕನ್ನಡಿಗರಿಗೆ ಖಂಡಿತ ಮರ್ಯಾದೆ ತರುವಂತಹದಾಗಿರಲಿಲ್ಲ. ಹೊಗೇನಕಲ್ ಕುಡಿಯುವ ನೀರಿನ ಯೋಜನೆ ಹತ್ತು ವರ್ಷಗಳ ಹಿಂದೆಯೇ; ಕರ್ನಾಟಕದ ಪಾಲಿನ ಕಾವೇರಿ ನೀರಿನ ಅಗತ್ಯವಿಲ್ಲದಂತೆ ಮತ್ತು ಕರ್ನಾಟಕ ಸರ್ಕಾರದ ಒಪ್ಪಿಗೆಯೊಂದಿಗೇ ಕೇಂದ್ರ ಸರ್ಕಾರ ನೀಡಿದ್ದ ನಿರಪೇಕ್ಷಣಾ ಪತ್ರದ ಆಧಾರದ ಮೇಲೆ ರೂಪಿತವಾಗಿದ್ದು, ಅದು ಕರ್ನಾಟಕಕ್ಕೆ ಸೇರಿದ ನಡುಗಡ್ಡೆಯಲ್ಲಿ ಸ್ಥಾಪಿತವಾಗುತ್ತದೆ ಎಂಬುದು ಬರೀ ಹುಯ್ಲು ಮಾತ್ರವಾಗಿದೆ. ವಾಸ್ತವವೆಂದರೆ, ಈ ಯೋಜನೆ ಜಾರಿಗೆ ಬಂದರೆ ಆ ನಡುಗಡ್ಡೆ ಮುಳಗಬಹುದು ಎಂಬುದಷ್ಟೇ ಸದ್ಯದ ಆತಂಕ. ಈ ಯಾವ ವಿವರಗಳನ್ನೂ ಗಮನಕ್ಕೆ ತೆಗೆದುಕೊಳ್ಳದೆ ರಾಜ್ಯಾದ್ಯಂತ ನಡೆದ ಪ್ರತಿಭಟನೆ ಮತ್ತು ಬೆಂಗಳೂರಲ್ಲಿ ನಡೆದ ತಮಿಳು ವಿರೋಧಿ ಪುಂಡಾಟಿಕೆ ಮೂಲತಃ ಕನ್ನಡದ ಮನಸ್ಸಿನ ಎರಡು ಸುಪ್ತ ಆತಂಕಗಳಿಂದ ಹೊಮ್ಮಿದುದು ಎಂದು ನಾನೂ ಭಾವಿಸಿದ್ದೇನೆ. ಒಂದು: ಭಾರತದ ಒಕ್ಕೂಟದಲ್ಲಿ ಕರ್ನಾಟಕ ಸದಾ ಅನ್ಯಾಯಕ್ಕೆ ಒಳಗಾಗುತ್ತಿದೆ. ಎರಡು: ಬಹಳಷ್ಟು ಬಾರಿ ಈ ಅನ್ಯಾಯಗಳಿಗೆ ತಮಿಳ್ನಾಡೇ ಕಾರಣ.

ಇವೆರಡೂ ಆತಂಕಗಳನ್ನು ದೂರ ಮಾಡಬಲ್ಲ ರಾಜಕೀಯ ಮುತ್ಸದ್ದಿತನ ನಮ್ಮ ಯಾವ ರಾಜಕಾರಣಿಗಳಲ್ಲೂ ಇಲ್ಲವಾಗಿದೆ. ಅವರೆಲ್ಲರೂ ಶೇಕಡಾ ನೂರಕ್ಕೆ ನೂರು ರಾಜಕಾರಣಿಗಳೇ ಆಗಿದ್ದಾರೆ. ತಾವು, ತಮ್ಮ ಕುಟುಂಬ, ತಮ್ಮ ಜಾತಿ, ತಮ್ಮ ಪಕ್ಷ, ತಮ್ಮ ಪಕ್ಷಕ್ಕೆ ಹಣಕಾಸು ಒದಗಿಸುವ 'ಡಾನ್'ಗಳು - ಇಷ್ಟೇ ಇವರ ಕಳಕಳಿಯ ವಸ್ತುಗಳಾಗಿವೆ. ಹೊಗೇನಕಲ್ ಗಲಾಟೆ ಆರಂಭವಾದೊಡನೆ ದೇವೇಗೌಡರೋ, ಕೃಷ್ಣರೋ ಅಥವಾ ಖರ್ಗೆಯವರೋ ಅಥವಾ ಈ ಮೂವರೂ ಸೇರಿಯೋ ಚಳುವಳಿಕಾರರ ನಾಯಕರನ್ನು ಆಹ್ವಾನಿಸಿ, ನಾವು ತಮಿಳ್ನಾಡು ಮತ್ತು ಕೇಂದ್ರದೊಂದಿಗೆ ಮಾತಾಡಿ ಸಮಸ್ಯೆಗೆ ಒಂದು ಇತ್ಯರ್ಥ ರೂಪಿಸುತ್ತೇವೆ ಎಂದು ಹೇಳಿ ಅವರ ಮನವೊಲಿಸುವ ರಾಜಕೀಯ ವಿವೇಕವಾಗಲಿ, ಆತ್ಮ ವಿಶ್ವಾಸವಾಗಲೀ ಅವರಿಗಿಲ್ಲ ಎಂಬುದೇ ಕರ್ನಾಟಕದ ಇಂದಿನ ನಿಜವಾದ ಸಮಸ್ಯೆಯಾಗಿದೆ. ತಮ್ಮ ಪಕ್ಷದ ಧ್ವಜ ಹಾರಿಸಿಕೊಂಡು ಹೊಗೇನಕಲ್ ನಡುಗಡ್ಡಗೆ ದೋಣಿ ಪ್ರಯಾಣ ಮಾಡಿ ಬಂದ ಯಡಿಯೂರಪ್ಪ ಮತ್ತು ಅವರ ಸಂಗಾತಿಗಳಿಗೆ ಈ ಯೋಜನೆಗೆ ಅನುಮತಿ ದೊರೆತದ್ದೇ ತಮ್ಮ ನಾಯಕ ವಾಜಪೇಯಿ ಮಧ್ಯಸ್ಥಿಕೆಯಲ್ಲಿ ಎಂಬುದೇ ಮರೆತು ಹೋದಂತಿದೆ! ಈ ದೃಷ್ಟಿಯಿಂದ, ಕರ್ನಾಟಕದ ಇಂತಹ ಎಲ್ಲ ರಾಜಕಾರಣಿಗಳ ಬಗ್ಗೆ ರಜನೀಕಾಂತ್ ಆಡಿರುವುದಾಗಿ ವರದಿಯಾಗಿರುವ ಮಾತುಗಳು ಸಭ್ಯತೆಯ ಎಲ್ಲೆ ಮೀರಿದೆಯಾದರೂ, ಸರಿಯಾಗಿಯೇ ಇದೆ. ಅದೇನೇ ಇದ್ದರೂ, ಈ ಬಗ್ಗೆ ಪ್ರತಿಭಟಿಸಬೇಕಾದವರು ಕರ್ನಾಟಕದ ಹಾಲಿ ಮತ್ತು ಭಾವಿ ರಾಜಕಾರಣಿಗಳೇ ಹೊರತು ಚಳುವಳಿಕಾರರಲ್ಲ. ಆದರೂ ಪ್ರತಿಭಟನೆಗಳು ನಡೆದೇ ಇವೆ.

ಇದೆಲ್ಲದರಿಂದಾಗಿ ನಮ್ಮ ಕನ್ನಡ ಚಳುವಳಿಕಾರರು ತಮಿಳ್ನಾಡಿನ ವಿರುದ್ಧ ಚಳುವಳಿ ಹೂಡಲು ನೆಪಕ್ಕಾಗಿ ಕಾಯುತ್ತಿರುವವರಂತೆ ಇತರರಿಗೆ ಕಾಣಿಸತೊಡಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವೆಂದರೆ ಜಗಳಕೋರರ ರಾಜ್ಯವೆಂದೇ ಪ್ರತಿಬಿಂಬಿತವಾಗತೊಡಗಿದೆ. 'ಮುಟ್ಟಿದರೆ ಮುನಿ'ಯಂತಿರುವವರು ನಿಜವಾಗಿ ದುರ್ಬಲರು. ಕನ್ನಡಿಗರ ಈ ದೌರ್ಬಲ್ಯದ ಮೂಲವಿರುವುದು ಕನ್ನಡ ಸಮಾಜದ ಬುದ್ಧಿಜೀವಿ ನಾಯಕತ್ವ, ರಾಜಕೀಯ ನಾಯಕತ್ವ ಮತ್ತು ಬೀದಿ ಚಳುವಳಿಗಳ (ಕನ್ನಡ ಕಾರ್ಯಕರ್ತರ) ನಾಯಕತ್ವಗಳ ನಡುವಣ ಸಮನ್ವಯ ಹಾಗೂ ಏಕತೆಗಳು ಕಾಣೆಯಾಗಿ, ಮೂರೂ ಮೂರಾಬಟ್ಟೆಯಾಗಿರುವುದರಲ್ಲಿ. ಆದರೆ ತಮಿಳ್ನಾಡಿನಲ್ಲಿ ಆ ಜನರಲ್ಲಿ ಆಳವಾಗಿ ಬೇರು ಬಿಟ್ಟಿರುವ ಭಾಷಾ ಕುಲ ಪ್ರಜ್ಞೆ ಅವರ ಸಮಾಜ ಹೀಗೆ ಮೂರಾಬಟ್ಟೆಯಾಗದಂತೆ ನೋಡಿಕೊಂಡಿದೆ. ಅದೇ ನಮ್ಮ ಕಣ್ಣುರಿಸುತ್ತಿರುವ ತಮಿಳು ಸಮಾಜದ, ರಾಜಕಾರಣದ ಯಶಸ್ಸಿನ ಗುಟ್ಟೂ ಆಗಿದೆ. ತಮಿಳರು ಕಾವೇರಿ ಕೆಳ ಕಣಿವೆಯ ಮಕ್ಕಳಾದರೆ, ನಾವು ಕಾವೇರಿ ಮೇಲ್ಕಣಿವೆಯ ಮಕ್ಕಳು. ಅಂದರೆ ಇಬ್ಬರೂ ಒಂದೇ ನದಿಯ ನೀರು ಕುಡಿದು ಬೆಳೆದ ಮಕ್ಕಳು. ಷ.ಶೆಟ್ಟರ್ ಅವರ ಪುಸ್ತಕ ಈ ಇಬ್ಬರ ಒಡನಾಟವನ್ನು ಉತ್ತರದಿಂದ ಆಮದಾದ ಸಂಸ್ಕೃತೀಕರಣ ಹೇಗೆ ಭಂಗಗೊಳಿಸಿತು ಎಂಬುದನ್ನು ಸೂಕ್ಷ್ಮವಾಗಿ ಹೇಳುತ್ತದೆ. ಆದರೆ ಅರ್ಧ ಶತಮಾನದ ಕನ್ನಡ ಜಗತ್ತಿನ ಬಗ್ಗೆ ಬರೆಯಲಾಗಿರುವ ಕೆ.ವಿ.ನಾರಾಯಣರ ಪುಸ್ತಕ ಇದನ್ನು ಅನುಮೋದಿಸುತ್ತಾ, ಬೇರೆ ದಾರಿಯನ್ನೇ ಹಿಡಿಯುತ್ತದೆ. ಇದಕ್ಕೆ ಕಾರಣ ಅದು ಈ ಅರ್ಧ ಶತಮಾನದ ವಿದ್ಯಮಾನಗಳನ್ನೇ ತನ್ನ ಅಧ್ಯಯನದ ಮೂಲ ನೆಲೆಗಳನ್ನಾಗಿ ಮಾಡಿಕೊಂಡು ಸಮೀಪ ದೃಷ್ಟಿಯ ದೋಷಗಳಿಗೆ ಒಳಗಾಗಿರುವುದು. ನಾರಾಯಣರು ಕನ್ನಡದ ಪ್ರಗತಿಗಾಗಿ ಇಂಗ್ಲಿಷ್ ಭಾಷಾ ಸಂಶೋಧನೆಗಳ ಕಡೆ ಕಣ್ಣು ಹಾಯಿಸಿದಂತೆ ತಮಿಳು ಭಾಷಾ ಸಂಶೋಧನಾ ಲೋಕದ ಕಡೆಗೂ ಕಣ್ಣು ಹಾಯಿಸಿದ್ದರೆ ಚೆನ್ನಿತ್ತೇನೋ!

ಅದೇನೇ ಇರಲಿ, ನಾವು ಈಗ ಕನ್ನಡಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕಾರಣದಿಂದ ಒದಗಿರುವ ಆತಂಕಗಳನ್ನು ಎದುರಿಸಲು ನಮ್ಮ ಮೂಲ ಸೋದರರೇ ಆದ ತಮಿಳರಿಂದ ದೂರ ದೃಷ್ಟಿಯ ರಾಜಕಾರಣದ ಮೂಲ ಪಾಠಗಳನ್ನು ಕಲಿಯುವ ಅಗತ್ಯವನ್ನು ಮನಗಾಣಬೇಕಿದೆ. ಇದು ಅವರ ರಾಜಕಾರಣವನ್ನೂ ಎದುರಿಸಲು ಸಹಾಯವಾಗಬಹುದು! ಹಾಗಾಗಿ ಕನ್ನಡ ಚಳುವಳಿ ಮಾಡಬೇಕಾದ ಮೊದಲ ಕೆಲಸವೆಂದರೆ, ಕನ್ನಡಿಗರಲ್ಲಿ ಭಾಷಾ ಕುಲಪ್ರಜ್ಞೆಯನ್ನು ಬೆಳೆಸುವುದಾಗಿದೆ. ಇದಕ್ಕಾಗಿ ಕನ್ನಡ ಸಮಾಜ ಕನ್ನಡ ಭಾಷಾ ಕೇಂದ್ರಿತವಾಗಿ ಬೆಳೆಯುವಂತೆ ನೋಡಿಕೊಳ್ಳುವ ಕಾರ್ಯಕ್ರಮಗಳ ಕಡೆ ತನ್ನ ಗಮನವನ್ನು ಕೇಂದ್ರೀಕರಿಸಬೇಕಿದೆ. ಅಂದರೆ ಶಿಕ್ಷಣ ಕ್ಷೇತ್ರದ ಕನ್ನಡದ ಅಗತ್ಯಗಳ ಕಡೆಗೆ. ಇದಕ್ಕಾಗಿ ಅದು ತನ್ನ ಭೌಗೋಳಿಕ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತನ್ನ ಬೌದ್ಧಿಕ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಈ ಬೌದ್ಧಿಕ ವ್ಯಾಪ್ತಿಯೊಳಕ್ಕೆ ಕನ್ನಡ ಸಂಸ್ಕೃತಿಗೆ ಅಪರಿಚಿತವಾದ 'ರಾಕ್ಷಸ ಭಾಷೆ'ಯಲ್ಲಿ ಮಾತನಾಡುವ ದೇಜಗೌರಂತಹ ಕನ್ನಡ ಸಾಮ್ರಾಜ್ಯವಾದಿಗಳು ಎಂದೂ ಪ್ರವೇಶ ಪಡೆಯಲಾರರು ಎಂಬುದನ್ನೂ ಮುಖ್ಯವಾಗಿ ತಿಳಿಯಬೇಕಿದೆ.

ಅಂದ ಹಾಗೆ: ಇತ್ತೀಚೆಗೆ ನಿಪ್ಪಾಣಿ ಪುರಸಭೆಯ ಸದಸ್ಯನೊಬ್ಬ ತನ್ನ ಪಟ್ಟಣವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಗೊತ್ತುವಳಿಯನ್ನು ಮಂಡಿಸಿದನೆಂಬ ಕಾರಣಕ್ಕೆ ದೊಡ್ಡ ಗಲಾಟೆ ಮಾಡಿದ ಕನ್ನಡ ಚಳುವಳಿಕಾರರಿಗೆ, ಆತನ ಈ ಉಪಕ್ರಮ ಕರ್ನಾಟಕದ ಪರವಾಗಿಯೇ ಇತ್ತು ಎಂಬುದು ಗೊತ್ತೇ? ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕಾದರೆ, ಮಹಾಜನ ವರದಿ ಜಾರಿಯಾಗಬೇಕು. ಕರ್ನಾಟಕ ಬಹು ವರ್ಷಗಳಿಂದ ಒತ್ತಾಯಿಸುತ್ತಿರುವುದಾದರೂ ಇದನ್ನೇ ಅಲ್ಲವೆ? ಆದರೆ ಕನ್ನಡ ಚಳುವಳಿಕಾರರಿಗೆ ಇದೆಲ್ಲ ಗೊತ್ತಿರಬೇಕೆಂದೇನೂ ಇಲ್ಲವಲ್ಲ!