ಕನ್ನಡದ ಭಾಗ್ಯಶಿಲ್ಪಿಗಳು
ಜ್ಞಾನಪೀಠ ಪ್ರಶಸ್ತಿ ಪಡೆದ ಐವರು (೧೯೯೧ರ ವರೆಗೆ) ಕನ್ನಡ ಸಾಹಿತಿಗಳ ಸಮಗ್ರ ಮಾಹಿತಿಯನ್ನು ನೀಡುವ ಪುಸ್ತಕವೇ ಎಸ್. ಮಹಾಬಲೇಶ್ವರ ಇವರು ಬರೆದ ‘ಕನ್ನಡದ ಭಾಗ್ಯಶಿಲ್ಪಿಗಳು'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ಕುವೆಂಪು, ದ ರಾ ಬೇಂದ್ರೆ, ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕು ಹಾಗೂ ಬರಹವನ್ನು ಜನಸಾಮಾನ್ಯರಿಗೂ ಅರ್ಥವಾಗುವಂತಹ ತಿಳಿಯಾದ ಕನ್ನಡದಲ್ಲಿ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಈ ಐವರು ಮಹನೀಯರು ತಮ್ಮ ಕೃತಿಗಳಿಂದ ಕನ್ನಡದ ಸಿರಿವಂತಿಕೆಯನ್ನು ಹೆಚ್ಚಿಸಿರುವಂತೆಯೇ ತಮ್ಮ ಉದಾತ್ತ ಮೌಲ್ಯಗಳಿಂದ ಕನ್ನಡಿಗರ ಬದುಕನ್ನು ಶ್ರೀಮಂತಗೊಳಿಸಿದ್ದಾರೆ. ಈ ಅಂಶಗಳನ್ನು ಸೂಕ್ತ ನಿದರ್ಶನಗಳ ಮೂಲಕ ಇದರಲ್ಲಿ ಒತ್ತಿ ಹೇಳಲಾಗಿದೆ. ಇದು ಶಾಲಾ ಮಕ್ಕಳು, ನವಸಾಕ್ಷರರು ಹಾಗೂ ಕನ್ನಡದ ಬಗ್ಗೆ ಅಭಿಮಾನ ಹೊಂದಿರುವ ಎಲ್ಲ ಜನರಿಗೂ ತುಂಬಾ ಉಪಯುಕ್ತವಾದ ಪುಸ್ತಕವೆನ್ನುವುದರಲ್ಲಿ ಅನುಮಾನವಿಲ್ಲ. ‘ಕನ್ನಡದ ಭಾಗ್ಯಶಿಲ್ಪಿಗಳು' ಎಲ್ಲ ಶಾಲೆಗಳಲ್ಲಿ, ಎಲ್ಲ ಮನೆಗಳಲ್ಲಿ ಅಗತ್ಯವಾಗಿ ಇರಬೇಕಾದ ಕೃತಿ ಎಂದು ಬೆನ್ನುಡಿಯಲ್ಲಿ ಹೇಳಲಾಗಿದೆ.
ಪುಸ್ತಕದ ಪ್ರಕಾಶಕರು ತಮ್ಮ ‘ನಿವೇದನೆ’ಯಲ್ಲಿ ಹೇಳುವುದು ಹೀಗೆ “ ಕನ್ನಡಪರ ಚಟುವಟಿಕೆಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಬರುತ್ತಿರುವ ನಮ್ಮ ‘ಸಿರಿಗನ್ನಡ ಪ್ರಕಾಶನ'ಕ್ಕೆ ಎರಡು ವರ್ಷ ತುಂಬಿದ ನೆನಪಿಗಾಗಿ ಈ ಹೊತ್ತಿಗೆ ಪ್ರಕಟವಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿ ಪಡೆದ ಐವರು ಕನ್ನಡ ಸಾಹಿತಿಗಳ ಬದುಕು ಮತ್ತು ಬರಹವನ್ನು ಸಂಕ್ಷಿಪ್ತವಾಗಿ, ಸರಳವಾದ ಭಾಷೆಯಲ್ಲಿ ಸಚಿತ್ರವಾಗಿ ಪರಿಚಯಿಸುವ ವಿನಮ್ರ ಪ್ರಯತ್ನವಿದು. ಇಂತಹ ಪುಸ್ತಿಕೆಯೊಂದರ ಕೊರತೆಯನ್ನು ಇದು ತಕ್ಕಮಟ್ಟಿಗಾದರೂ ನೀಗಿಸುತ್ತದೆಯೆಂಬ ವಿಶ್ವಾಸ ನಮ್ಮದು. ಈ ಕೃತಿಯನ್ನು ರಚಿಸಿಕೊಟ್ಟ ಶ್ರೀ ಎಸ್. ಮಹಾಬಲೇಶ್ವರ ಅವರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.” ಎಂದಿದ್ದಾರೆ.
ಪರಿವಿಡಿಯಲ್ಲಿ ಐವರು ಜ್ಞಾನಪೀಠ ಪುರಸ್ಕೃತರ ಪರಿಚಯ ಹಾಗೂ ಜ್ಞಾನಪೀಠ ಪ್ರಶಸ್ತಿ ಬಗ್ಗೆ ವಿವರ ನೀಡಿದ್ದಾರೆ. ಅಂತರ್ಜಾಲ ಇಲ್ಲದ ಕಾಲದ ಈ ಪುಸ್ತಕ ಜ್ಞಾನಪೀಠ ಪುರಸ್ಕೃತರ ಮಾಹಿತಿಯನ್ನು ನೀಡುವಲ್ಲಿ ಬಹಳಷ್ಟು ಸಫಲವಾಗಿದೆ. ೪೪ ಪುಟಗಳನ್ನು ಹೊಂದಿರುವ ಪುಟ್ಟ ಪುಸ್ತಕವನ್ನು ಒಂದೇ ಗುಟುಕಿಗೆ ಓದಿ ಮುಗಿಸಬಹುದಾಗಿದೆ.