ಕನ್ನಡದ ಸ್ಥಿತಿಗತಿ (ಹಾಸ್ಯ ಲೇಖನ)
ಬರಹ
ಮಂಜುನಾಥ್ ವಿ
modmani @ gmail.com
೨೦೦೨
ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.೧
'ಋ" ಅಕ್ಷರವು ಬಳಕೆಯಲ್ಲಿಲ್ಲದ ಕಾರಣ ಹಾಗೂ ಭಾಷೆಯನ್ನು ಸರಳಗೊಳಿಸುವ ಅಂಗವಾಗಿ "ಋ"
ಅಕ್ಷರವನ್ನು ಕೈಬಿಡಲಾಗಿದೆ. ಮತ್ತು "ಋ" ಅಕ್ಷರದ ಬದಲಾಗಿ "ರು" ಅಕ್ಷರವನ್ನು
ಬಳಸಬಹುದೆಂದು ಈ ಮೂಲಕ ಸರ್ಕಾರವು ಆದೇಶ ಹೊರಡಿಸಿದೆ.
ಉದಾಹರಣೆ :
ಋಷಿ - ರುಷಿ
ಕೃಷ್ಣ - ಕ್ರಿಷ್ಣ
ಋತು - ರುತು
ಋಜುತ್ವ - ರುಜುತ್ವ
೨೦೦೭
ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ. ೨
"ಋ" ಅಕ್ಷರವನ್ನು ಕನ್ನದ ಭಾಷೆಯಿಂದ ಕೈಬಿಡುವುದಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತವಾದ ಸರ್ಕಾರ ಕನ್ನಡವನ್ನು ಮತ್ತಷ್ಟು ಸರಳಗೊಳಿಸುವ ದಿಕ್ಕಿನತ್ತ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನಿಡುತ್ತಿದೆ. ಅದರ ಪರಿಣಾಮವಾಗಿ "ಲ" ಮತ್ತು "ಳ" ಅಕ್ಷರಗಳು ಉಚ್ಚಾರಣೆಯಲ್ಲಿ ಅಲ್ಪವೈವಿಧ್ಯವನ್ನು ಹೊಂದಿರುವುದರಿಂದ ಮತ್ತು "ಳ" ಅಕ್ಷರದ ಉಚ್ಚಾರಣೆ ಕ್ಲಿಷ್ಟಕರವಾಗಿರುವದರಿಂದ "ಳ" ಅಕ್ಷರದ ಬದಲಾಗಿ "ಲ" ಅಕ್ಷರವನ್ನೇ ಎಲ್ಲಾ ಕಡೆ ಬಳಸಬೇಕೆಂದೂ, ಪದ ವಿನ್ಯಾಸವನ್ನು ಗಮನಿಸಿ ಅರ್ಥವ್ಯತ್ಯಾಸವನ್ನು ಅರಿತುಕೊಳ್ಳಬೇಕೆಂದೂ ಈ ಮೂಲಕ ಆದೇಶಿಸಲಾಗಿದೆ.
ಉದಾಹರಣೆಗೆ
"ಬಾಳಬೆಳಕು ಕನ್ನಡ
ಬೆಳೆಯಬೇಕು ಕನ್ನಡ
ಬಾಳಿನೊಡನೆ ಕೂಡಿ ತಾನು ಬೆಳಗಬೇಕು ಕನ್ನಡ" ಇದು
"ಬಾಲಬೆಲಕು ಕನ್ನಡ
ಬೆಲೆಯಬೇಕು ಕನ್ನಡ
ಬಾಲಿನೊದನೆ ಕೂಡಿ ತಾನು ಬೆಲಗಬೇಕು ಕನ್ನಡ" ಎಂದಾಗುತ್ತದೆ.
೨೦೧೧
ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.೩
ಕನ್ನಡ ಭಾಷೆಯ ಸರಲೀಕರಣ ಕಾರ್ಯದಲ್ಲಿ ಸಿಗುತ್ತಿರುವ ಪ್ರೊತ್ಸಾಹದಿಂದ ಉತ್ತೇಜಿತವಾಗಿ
ಕನ್ನಡವನ್ನು ಮತ್ತೂ ಸರಲಗೊಲಿಸಲು ಸರ್ಕಾರವು ಕೆಲಗಿನ ಅದೇಶವನ್ನು ಹೊರಡಿಸುತ್ತಿದೆ.
ಕನ್ನದ ವರ್ಣಮಾಲೆಯ "ಶ" "ಷ" ಮತ್ತು "ಸ" ಅಕ್ಷರಗಲಲ್ಲಿ ಏಕರೀತಿಯ
ಉಚ್ಚಾರಣೆಯಿರುವುದರಿಂದ ಮತ್ತು "ಶ, ಷ" ಅಕ್ಷರಗಲು ಉಚ್ಚಾರಣೆಗೆ ಕಷ್ಟವಾಗಿರುವುದು
ಬಹಲ ಕಾಲದಿಂದಲೂ ತಿಲಿದಿರುವುದರಿಂದ "ಶ ಮತ್ತು ಷ " ಅಕ್ಷರಗಲ ಬದಲಾಗಿ "ಸ"
ಅಕ್ಷರವನ್ನೇ ಬಲಸಬೇಕೆಂದು ಈ ಮೂಲಕ ಆದೇಶಿಸಲಾಗಿದೆ.
ಉದಾಹರಣೆ
ಮೂಲ ಕನ್ನಡ
" ಆ ಶೂರರಿಬ್ಬರೂ ಶರಭ-ಶಾರ್ದೂಲಗಳಂತೆ ಕಾದಾಡುತ್ತಿರಲು, ನೆರೆದಿದ್ದ ಜನಸ್ತೋಮ
ಯಾರೊಬ್ಬರೂ ಸೋಲದೆಯೇ ಇಬ್ಬರನ್ನೂ ಗೆಲ್ಲಿಸುವಂತೆ ಶಂಕರನಲ್ಲಿ ಮೊರೆಯಿಡುತ್ತಿತ್ತು.
ಆದರೂ ಏನಾದರೂ ಅನಾಹುತವಾದರೆ ಎಂಬ ಶಂಕೆ ಜನಸಮಷ್ಟಿಯನ್ನು ಕಾಡುತ್ತಿತ್ತು."
ಇನ್ನು ಮುಂದಿನ ಕನ್ನಡ
"ಆ ಸೂರರಿಬ್ಬರೂ ಸರಭ-ಸಾರ್ದೂಲಗಲಂತೆ ಕಾದಾಡುತ್ತಿರಲು ನೆರೆದಿದ್ದ ಜನಸ್ಥೋಮ
ಯಾರೊಬ್ಬರೂ ಸೋಲದೆಯೇ ಇಬ್ಬರನ್ನೂ ಗೆಲ್ಲಿಸುವಂತೆ ಸಂಕರನಲ್ಲಿ ಮೊರೆಯಿಡುತ್ತಿತ್ತು.
ಆದರೂ ಏನಾದರೂ ಅನಾಹುತವಾದರೆ ಎಂಬ ಸಂಕೆ ಜನ ಸಮಸ್ಟಿಯನ್ನು ಕಾಡುತ್ತಿತ್ತು."
೨೦೧೫
ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.೪
ಸರ್ಕಾರದ ಈ ಮುನ್ನಿನ ನಿರ್ಧಾರಗಲಿಂದ ಕನ್ನಡ ಭಾಸೆಯು ಸಾಕಸ್ಟು ಸರಲಗೊಂಡು,
ಹೊರಭಾಸಿಕರೂ ಸಹ ಕನ್ನಡ ಕಲಿಯುವಲ್ಲಿ ಆಸಕ್ತಿ ತೋರಿಸುತ್ತಿರುವುದನ್ನು ಮನಗಂಡ
ಸರ್ಕಾರ, ಕನ್ನಡವನ್ನು ಇನ್ನೂ ಸರಲಗೊಲಿಸುವತ್ತ ಮತ್ತೊಂದು ಕ್ರಾಂತಿಕಾರಿ
ನಿರ್ಧಾರವನ್ನು ತೆಗೆದುಕೊಂಡು ಕೆಲಗಿನ ಅದೇಸವನ್ನು ಹೊರಡಿಸಿದೆ.
ಕನ್ನಡದಲ್ಲಿರುವ ಅಲ್ಪಪ್ರಾಣ-ಮಹಾಪ್ರಾಣ (ಚಿಕ್ಕಕ್ಸರ - ದೊಡ್ಡಕ್ಸರ) ಎಂಬ ಭೇಧವನ್ನು
ಕೊನೆಗಾಣಿಸಿ ಎರಡೂ ಅಕ್ಸರಗಲಿಗೆ ಬದಲಾಗಿ ಕೇವಲ ಅಲ್ಪಪ್ರಾಣ (ಚಿಕ್ಕಕ್ಸರ)ವನ್ನು
ಮಾತ್ರ ಬಲಸಬೇಕು. ಇದರಿಂದಾಗಿ ವರ್ಣಮಾಲೆಯಲ್ಲಿ ಅಕ್ಸರ ಸಂಖ್ಯೆ ಕಡಿಮೆಯಾಗಿ ಭಾಸಾ
ಅಭ್ಯಾಸವು ಸರಲವಾಗುತ್ತದೆ. ಇದೇ ಅದೇಸದೊಂದಿಗೆ ಅನುನಾಸಿಕಗಲಾದ "ಙ" "ಞ"
ಅಕ್ಸರಗಲನ್ನು ಕೈ ಬಿಡುವಂತೆ ಸೂಚಿಸಲಾಗಿದೆ.
ಉದಾಹರಣೆ
ಮೂಲ ಕನ್ನಡ
"ಘನ ಭೀಮನು ತನ್ನ ಪಾಲಿನ ಖಂಡುಗ ಖಂಡುಗ ಅನ್ನದ ರಾಶಿಯನ್ನು ಖಾಲಿ
ಮಾಡುತ್ತಿರುವುದನ್ನು ಕಂಡು ಕಡುಕೋಪಗೊಂಡು, ಬಕಾಸುರನು ಛಟಿಲ್ಲೆಂದು ದೊಡ್ಡ
ಮರವೊಂದನ್ನು ಮುರಿದನು. ಅನಾಥ ರಕ್ಷಕ ಭೀಮನು ಅದನ್ನು ಕಂಡೂ ಕಾಣದವನಂತೆ ತನ್ನ
ಅನ್ನಧ್ವಂಸ ಕಾರ್ಯಕ್ರಮವನ್ನು ಮುಂದುವರಿಸಿದನು"
ಇನ್ನು ಮುಂದಿನ ಕನ್ನಡ
ಗನಬೀಮನು ತನ್ನ ಪಾಲಿನ ಕಂಡುಗ ಕಂಡುಗ ಅನ್ನದ ರಾಸಿಯನ್ನು ಕಾಲಿ ಮಾಡುತ್ತಿರುವುದನ್ನು
ಕಂಡು ಬಕಾಸುರನು ಕಡುಕೋಪಗೊಂಡು, ಚಟಿಲ್ಲೆಂದು ದೊಡ್ಡ ಮರವೊಂದನ್ನು ಮುರಿದನು.
ಅನಾತರಕ್ಸಕ ಬೀಮನು ಅದನ್ನು ಕಂಡೂ ಕಾಣದಂತೆ ತನ್ನ ಅನ್ನದ್ವಂಸ ಕಾರ್ಯಕ್ರಮವನ್ನು
ಮುಂದುವರೆಸಿದನು.
೨೦೧೯
ಆದೇಸ ಸಮ್ಕ್ಯೆ ಕ.ಬಾ.ಕೈ.ಬಿ.ಕ ೫
ಕನ್ನಡ ಬಾಸೆಯನ್ನು ಸರಲಗೊಲಿಸುವ ಸರ್ಕಾರದ ಎಲ್ಲಾ ಕ್ರಮಗಲೂ ಯಸಸ್ಸಿನತ್ತ
ಸಾಗಿರುವುದರಿಂದ ಸ್ಪೂರ್ತಿಗೊಂಡ ಸರ್ಕಾರವು, ನೆರೆಹೊರೆಯ ಬಾಸೆಗಲಲ್ಲಿರುವಂತೆ, ಅಲ್ಪ
ವೈವಿದ್ಯ ಉಚ್ಚಾರಣೆಯಿರುವ ವ್ಯಂಜನಾಕ್ಸರಗಲಿಗೆ ಬದಲಾಗಿ ವರ್ಗ ಮೂಲ
ವ್ಯಂಜನಾಕ್ಸರವೊಂದನ್ನೇ ಬಲಸಬೇಕೇಂದು ಈ ಮೂಲಕ ಆದೇಸಿಸುತ್ತದೆ.
ಉದಾಹರಣೆಗೆ.
ಮೂಲ ಕನ್ನದ
"ತನ್ನ ವಿಜಯ ನಾರಸಿಂಹ ಖಡ್ಗದೊಂದಿಗೆ ತಿರುಚಿರಾಪಳ್ಳಿಗೆ ತೆರಳಿ, ಜಟ್ಟಿಯ
ಲಂಗೋಟಿಯನ್ನು ಎಡಗೈಯ ಕಟ್ಟಿಗೆಯಿಂದ ನಿವಾರಿಸಿ, ಮಲ್ಲಯುದ್ಡಕ್ಕೆ
ಪಂಥಾಹ್ವಾನವನ್ನೊಪ್ಪಿಕೊಂಡನು, ಜಗಜಟ್ಟಿಯಾದ ರಣಧೀರ. ಮದಿಸಿದ ಆನೆಯ ಮದವಡಗಿಸುವ
ಮೊದಲಸುತ್ತಿನಲ್ಲಿ ನಿರಾಯಾಸವಾಗಿಯೇ ಗೆದ್ದು, ಎರಡನೇ ಸುತ್ತಿನಲ್ಲಿ
ಜಟ್ಟಿಯನ್ನೆದುರಿಸುವಾಗ ಕ್ಷಣ ಮಾತ್ರದಲ್ಲೇ ಸೊಂಟದಲ್ಲಿ ಯಾರೂ ಅರಿಯಧಂತೆ ಕುಳಿತಿದ್ದ
"ವಿಜಯನಾರಸಿಂಹ"ನನ್ನೆಳೆದು ಜಟ್ಟಿಯ ಕೊರಳು ಕತ್ತರಿಸಿ ಅಖಾಡದಿಂದ ಹಿಂದೆ ಸರಿದು ಏನೂ
ತಿಳಿಯದವನಂತೆ ನಿಂತನು. ಪ್ರೇಕ್ಷಕವರ್ಗವು ಏನಾಯಿತೆಂದು ಬೆಕ್ಕಸ ಬೆರಗಾಗಿ
ನೋಡುತ್ತಿರುವಂತೆಯೇ, ಕೆಲವು ಕ್ಷಣಗಳಲ್ಲೇ ಜಟ್ಟಿಯ ರುಂಡ ಮುಂಡಗಳು ಬೇರೆಯಾಗಿ
ಧರೆಗುರುಳಲು, ಜನಸ್ಥೋಮವು ಹರ್ಷೋದ್ಗಾರಗೈದಿತು."
ಇನ್ನು ಮುಂದಿನ ಕನ್ನಡ
" ತನ್ನ "ವಿಜಯನಾರಸಿಂಹ" ಕಡ್ಕತೊಂತಿಕೆ ತಿರುಚಿರಾಪಲ್ಲಿಕೆ ತೆರಲಿ ಚಟ್ಟಿಯ
ಲಂಕೋಟಿಯನ್ನು ಎಡಕೈಯ ಕಟ್ಟಿಕೆಯಿಂದ ನಿವಾರಿಸಿ ಮಲ್ಲಯುತ್ತಕ್ಕೆ
ಪಂತಾಹ್ವಾನವನ್ನೊಪ್ಪಿಕೊಂಟನು, ಚಕಚತ್ತಿಯಾದ ರಣತೀರ. ಮತಿಸಿತ ಆನೆಯ ಮತವಟಗಿಸುವ ಮೊತಲ
ಸುತ್ತಿನಲ್ಲಿ ನಿರಾಯಾಸವಾಕಿಯೇ ಕೆತ್ತು, ಎರಟನೇ ಸುತ್ತಿನಲ್ಲಿ
ಚಟ್ಟಿಯನ್ನೆತುರಿಸುವಾಕ ಕ್ಸಣ ಮಾತ್ರತಲ್ಲೇ ಸೊಂತತಲ್ಲಿ ಯಾರೂ ಅರಿಯತಂತೆ ಕುಲಿತಿತ್ತ
"ವಿಜಯನಾರಸಿಂಹ"ನನ್ನೆಲೆತು, ಚತ್ತಿಯ ಕೊರಲು ಕತ್ತರಿಸಿ ಅಕಾಟತಿಂತ ಹಿಂತೆ ಸರಿತು ಏನೂ
ತಿಲಿಯತವನಂತೆ ನಿಂತನು. ಪ್ರೇಕ್ಸಕವರ್ಗವು ಏನಾಯಿತೆಂತು ಬೆಕ್ಕಸ ಬೆರಕಾಕಿ
ನೋಟುತ್ತಿರುವಂತೆಯೇ ಕೆಲವು ಕ್ಸಣಕಲಲ್ಲೇ ಚತ್ತಿಯ ರುಂಟ ಮುಂಟಗಲು ಬೇರೆಯಾಗಿ
ತರೆಕುರುಲಲು ಜನಸ್ತೋಮವು ಹರ್ಸೋತ್ಕಾರಕೈತಿತು.
೨೦೨೪
ಆತೇಸ ಸಂಕ್ಯೆ ಕ. ಪಾ. ಕೈ . ಪಿ . ಕಾ. ೬.
ಕನ್ನಟ ಪಾಸೆಯನ್ನು ಸರಲಕೊಲಿಸುವ ಕಾರ್ಯಕ್ರಮತ ಮುಂತುವರಿತ ಅಂಕವಾಕಿ ಕೆಲಕಿನ
ಅತೇಸವನ್ನು ಸರ್ಕಾರ ಹೊರಟಿಸಿತೆ.
"ಕನ್ನತ ಪಾಸೆಯ ಒತ್ತಕ್ಸರಕಲು, ಕನ್ನಟವನ್ನು ಕಂಪ್ಯೂಟರಿಕೆ ಅಲವಟಿಸಲು ತೊಂತರೆಯಾಕುವ
ಕಾರಣ, ಒತ್ತಕ್ಸರವನ್ನು ಕೈಪಿತ್ತು, ಅತರ ಪತಲಿಗೆ ಪೂರ್ಣಾಕ್ಸರವನ್ನೇ ಪಲಸಪೇಕೆಂತು
ಆತೇಸಿಸಿತೆ.
ಉದಾಹರಣೆ
ಮೂಲ ಕನ್ನದ
ಜೈ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ಜೈ ಸುಂದರ ನದಿವನಗಳ ನಾಡೆ,
ಜಯಹೇ ರಸಋಷಿಗಳ ಬೀಡೆ,
ಭೂದೇವಿಯ ಮುಕುಟದ ನವಮಣಿಯೆ
ಗಂಧಧ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ.
ಇನ್ನು ಮುಂತಿನ ಕನ್ನಟ.
ಚಯ ಪಾರತ ಚನನಿಯ ತನುಚಾತೆ
ಚಯಹೆ ಕರನಾಟಕ ಮಾತೆ
ಚಯ ಸುಂತರ ನತಿವನಕಲ ನಾಟೆ,
ಚಯಹೇ ರಸರುಸಿಕಲ ಪೀಟೆ,
ಪೂತೇವಿಯ ಮುಕುತತ ನವಮಣಿಯೆ
ಕಂತತ, ಚಂತತ ಹೊನನಿಯ ಕಣಿಯೆ,
ರಾಕವ ಮತುಸೂತನರವತರಿಸಿತ
ಪಾರತ ಚನನಿಯ ತನುಚಾತೆ
ಜಯ ಹೇ ಕರನಾತಕ ಮಾತೆ.
೨೦೨೬
ಅತೇಸ ಸಂಕಯೆ ಕ. ಪಾ. ಕಯ್. ಪಿ. ಕಾ. ೭
ಕನನಟ ಪಾಸೆಯನನು ಸರಲಕೊಲಿಸುವ ಸಲುವಾಕಿ ತಂತ ಹಲವಾರು ಪತಲಾವಣೆಕಲಿಂತಾಕಿ ಮಾತಾಟುವ ಕನನಟಕಕೂ ಪರೆಯುವ ಕನನಟಕಕೂ ಪಹಲಸತು ವಯತಯಾಸಕಲು ಇರುವುತರಿಂತ ಇನನು ಮುಂತೆ ಕನನಟ ಲಿಪಿಯನನು ಕಯ್ ಪಿತತು ಆಟಲಿತತ ಎಲಲಾ ಹಂತತಲಲೂ ಇಮ್ಕಲಿಸ್ ( ) ಪಾಸೆಯನನೇ ಪಲಸುವಮ್ತೆ ಹಾಕೂ ಸಾಮಾನಯರಾರೂ ಕನನತ ಪಾಸೆಯನನು ಪಲಸತಂತೆ ಈ ಮೂಲಕ ಆತೇಸಿಸಲಾಕಿದೆ. ಈ ಅತೇಸವೇ ಸರಕಾರತ ಕತೆಯ ಕನನಟ ಆತೇಸ.