ಕನ್ನಡಿಗರ ಹೃದಯ ಕದವ ತಟ್ಟಿದ ಕವಿವರೇಣ್ಯ
ಮೆಲ್ಲೆದೆಯ ಸವಿಯೊಲುಮೆ ಕರಗಿ ಕಬ್ಬನಿಯಾಗಿ
ಹೆಣ್ಣ ಕಣ್ಣಂಚಿನಲಿ ತುಳುಕುವಂತೆ,
ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು
ಮರವನಪ್ಪಿದ ಬಳ್ಳಿ ಬಳುಕುವಂತೆ.
ಈ ಸಾಲುಗಳು ಎಷ್ಟೊಂದು ಸೊಗಸು ಅಲ್ಲವೇ?
ಕನ್ನಡದ ಸಮನ್ವಯ ಕವಿ, ಹೊಸಗನ್ನಡ ಪ್ರಕಾರದಲ್ಲೂ ಪ್ರಸಿದ್ಧಿಯಾದ, ಖ್ಯಾತ ವಿದ್ವಾಂಸರಾದ ಕವಿ ಮತ್ತು ಬರಹಗಾರರಾದ ಚನ್ನವೀರ ಕಣವಿಯವರ ಜನುಮ ದಿನ (ಜೂನ್ ೨೮) ಪ್ರಯುಕ್ತ ಬರೆದ ಲೇಖನ. ತಂದೆ ಸಕ್ಕರೆಪ್ಪನವರು ಶಾಲಾ ಮಾಸ್ತರರಾಗಿ, ಜಾನಪದ ಕವಿಗಳಾಗಿ, ಸಾಹಿತ್ಯದ ಬಗ್ಗೆ ಒಲವುಳ್ಳರಾಗಿದ್ದವರು. ತಾಯಿ ಪರವತವ್ವನ ಕುಟುಂಬ ಸಾಹಿತ್ಯಕ್ಕೆ ಪ್ರೋತ್ಸಾಹಿಸುತ್ತಿದ್ದರೆಂದು ತಿಳಿದು ಬರುತ್ತದೆ. ವಾತಾವರಣ, ಪರಿಸರ ಶ್ರೀಯುತರ ಸಾಹಿತ್ಯ ಬರವಣಿಗೆಗೆ ಪೂರಕ ಮತ್ತು ಪೋಷಕವಾಯಿತು.
ಕರ್ನಾಟಕ ನೆಲದಲ್ಲಿ, ಕನ್ನಡಮ್ಮನ ಸೇವೆಯಲಿ ಹಿರಿಯ ಸಾಹಿತಿ ಕವಿ ನಾಡೋಜ ಚನ್ನವೀರ ಕಣವಿಯವರು ಓರ್ವರು. ಗದಗದ ಹೊಂಬಳ ಊರಿನಲ್ಲಿ ಜನಿಸಿದ ಇವರು ಕರ್ನಾಟಕ ವಿ.ವಿಯಿಂದ ಗೌರವ ಡಾಕ್ಟರೇಟ್ ಮುಡಿಗೇರಿಸಿಕೊಂಡ ಮಹನೀಯರು.
ವಿಶ್ವ ವಿದ್ಯಾನಿಲಯದ ಪ್ರಸಾರಾಂಗ ವಿಭಾಗದಲ್ಲಿ ಕಾರ್ಯದರ್ಶಿಯಾಗಿ ದುಡಿದವರು. ನಿಷ್ಠುರ ಮತ್ತು ನೇರ ಮಾತಿನ ಬರಹಗಾರ.ತಮ್ಮ ಬರವಣಿಗೆಯಲ್ಲಿ, ಸ್ನೇಹ, ಪ್ರೀತಿ, ಸತ್ಯ, ಸಹನಶೀಲತೆ, ವಾತ್ಸಲ್ಯ ಮುಂತಾದ ಮೌಲ್ಯಗಳನ್ನು ಅಳವಡಿಸಿದವರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ನೃಪತುಂಗ ಸಾಹಿತ್ಯ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರ ಶಸ್ತಿ, ಹಂಪಿಯ ನಾಡೋಜ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಗೌರವ, ಸಾಹಿತ್ಯ ಕಲಾ ಕೌಸ್ತುಭ ಮತ್ತು ಪಂಪ ಪ್ರಶಸ್ತಿ ಅರಸಿ ಬಂದು ದೊರೆತ ಹೆಮ್ಮೆಯ ಸಾಹಿತಿ.ಜೀವಧ್ವನಿ,ಕಾವ್ಯಾಕ್ಷಿ,ಮಧುಚಂದ್ರ, ನೆಲಮುಗಿಲು, ಮಣ್ಣಿನ ಮೆರವಣಿಗೆ ಮುಂತಾದ ವಿವಿಧ ಸ್ತರದ ಕೃತಿಗಳನ್ನು ರಚಿಸಿದ್ದಾರೆ .
'ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ',ಕವಿತೆ ಎನ್ನುವುದು ಗಂಭೀರ ಮತ್ತು ಜವಾಬ್ದಾರಿಯ ಕಲೆ' ಎನ್ನುತ್ತಿದ್ದರು. ಕಾಲ, ದೇಶ, ಪರಿಸರದ ಪ್ರಭಾವ ರಚನೆಯಲ್ಲಿರಬೇಕು. ಮೊದಲು ನಮ್ಮನ್ನು ನಾವೇ ಪ್ರೀತಿಸಬೇಕು. ಆ ಮೇಲೆ ಇತರರನ್ನು.
ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಅರಿವೇ ಗುರು, ನುಡಿ ಜೋತಿರ್ಲಿಂಗ
ಒಂದೇ ಮಾನವ ಜಾತಿ ಸ್ತಂಭ ದೀಪಿಕೆಯಂತೆ
ಜಯವೇ ಧರ್ಮದ ಮೂಲತರಂಗ ಎಂದು ಬರೆದರು ಒರೆದರು.
ನಾಲಿಗೆಯ ಮೇಲೆ ಸದಾ ನಲಿದಾಡುವ ಕವನ
ಮುಂಜಾವದಲ್ಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತವು ಹೂವ ಸುರಿಸಿದಂತೆ
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ.
ಹೊಂಬೆಳಕಿನ ಕವಿ ಡಾ ನಾಡೋಜ ಚೆನ್ನವೀರ ಕಣವಿಯವರ ಜನ್ಮ ದಿನದಂದು ನಾಡು ನುಡಿ ಸೇವೆಗಾಗಿ ಅವರನ್ನು ನೆನಪಿಸಿಕೊಳ್ಳೋಣ.
(ಆಕರ: ಕನ್ನಡ ಕವಿ ಸಾಹಿತಿಗಳು)
ಸಂಗ್ರಹ:ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ