ಕನ್ನಡ ಹಬ್ಬ ಹಾಗೂ ಆಚರಣೆ
ಕನ್ನಡದ ಬಗ್ಗೆ ಸ್ವಾಭಿಮಾನವುಳ್ಳ ಸಮಸ್ತ ಮೃದು ಮನಸ್ಸುಗಳಿಗೆ ರಾಜ್ಯೋತ್ಸವ ಎಂಬ ಹಬ್ಬದ ಶುಭಕಾಮನೆಗಳು.
ಸ್ವಾಭಿಮಾನ ಎಂಬ ಪದದ ಬಳಕೆ ಏಕೆಂದರೆ, ನಾವು ದುರಾಭಿಮಾನದ ಸೋಂಕು ಇರದವರು.ಮೃದು ಎಂಬ ಸಂಭೋದನೆ ಏಕೆಂದರೆ,ನಮ್ಮಲ್ಲಿ ಕಠೋರತೆ ಎಂದೂ ಸುಳಿಯದು.ಇಂಥÀ ಎರಡು ಅದ್ಭುತಗಳಿಂದಲೇ ನಮ್ಮ ಭಾಷೆ ಇಂದಿಗೂ ಉಳಿದಿದೆ, ಮುಂದೆಯೂ ಇರುತ್ತದೆ,ಇದಕ್ಕೆ ಅಳಿವೆಂಬುದಿಲ್ಲಾ. ಚಿರಂಜೀವಿ ಭಾಷೆ ನಮ್ಮ ಕನ್ನಡ. ನೃಪತುಂಗನ ಕಾವ್ಯದಿಂದ ಇಂದಿಗೂ ಪದಗಳ ಕಟ್ಟುವ ಕುಸುರಿ ಕೆಲಸ ಯಥೇಚ್ಛವಾಗಿ ಸಂಭ್ರಮಿಸುತ್ತಿದೆ.
ಮಾತೃಭೂಮಿಯ ಬಗ್ಗೆ ನಮಗೆ ಇರುವ ಕಳಕಳಿಯಿಂದಲೇ ನಮ್ಮ ಅಧೀಕೃತ ಗಡಿಗಳಲ್ಲಿ ಗಂಧದ ಕಂಪು ಇಂದಿಗೂ ಇದೆ. ಮಾತೃಭಾಷೆಯ ಬಗ್ಗೆ ಇರುವ ಉತ್ಕಟತೆಯೇ ಕನ್ನಡಿಗರಿಗೆ ಉಸಿರಾಗಿ,ಕನ್ನಡವೆಂಬುದು ಕಂಗೊಳಿಸುತ್ತಿದೆ.
ಭಾಷೆಯ ಬಗ್ಗೆ ಅತಿಯಾದ ಮಡಿವಂತಿಕೆ ಹಾಗೂ ತಾತ್ಸಾರ ಸಲ್ಲ. ಕೆಲವು ಬಿಗಿ ಚೌಕಟ್ಟುಗಳನ್ನು ಮೀರಿ ಕನ್ನಡವು ವಿಸ್ತøತಗೊಂಡಿದೆ. ಅದು ಹೀಗೆಯೇ ಇರಲಿ ಎಂದು ಹಿಡಿದಿಡುವ ವ್ಯರ್ಥ ಪ್ರಯತ್ನದಿಂದ ಕಾಲಾಂತರದಲ್ಲಿ ಭಾಷೆಗೆ ಕಂಟಕ ಎದುರಾಗಲೂಬಹುದು.ಕನ್ನಡದ ನೆಲದಲ್ಲಿ ಜನಿಸಿ,ಬಾಲ್ಯ ಕಳೆದು,ನಂತರದಲ್ಲಿ ಯಾವುದೋ ಮೋಹಕ್ಕೊಳಗಾಗಿ ತನ್ನತನವನ್ನೇ ಕಳೆದುಕೊಳ್ಳುವ ಕೆಲವು ತಾತ್ಸಾರ ಮನೋಭಾವದ ಮನಸ್ಸುಗಳಿಂದಲೂ ಭಾಷೆಗೆ ಗ್ರಹಣ ಬಡಿದಂತಾಗುತ್ತದೆ. ಗ್ರಹಣದ ಕಪ್ಪಿನಿಂದ ಹೊರಬರಲು ಒಂದಿಷ್ಟು ಚಿಂತನೆ,ಸಂಘಟನೆ,ಹೋರಾಟ ಹೀಗೆ ಹಲವು ಸಂಗತಿಗಳಿಗೆ ಮುಗ್ಧ ಕನ್ನಡಿಗ ತೊಡಗಿಸಿಕೊಳ್ಳಬೇಕಾಗುತ್ತದೆ. ಬೇರೆಯವರನ್ನು ದೂಷಿಸುವ ಮೊದಲು ನಮ್ಮ ಅಂತರಾಳದಲ್ಲೊಮ್ಮೆ ಇಣುಕಿ ನೋಡುವುದೂ ಒಂದು ಧನಾತ್ಮಕ ವಿಚಾರವೇ.
ಹಬ್ಬವೆಂಬುದು ಒಂದು ದಿನ ಇರುತ್ತದೆ. ಸಂಭ್ರಮಿಸುತ್ತ, ಕುಣಿದು ಕುಪ್ಪಳಿಸುತ್ತ, ಭಾವೋದ್ವೇಗದಲ್ಲಿ ಆನಂದಿಸುತ್ತ ಮನವನ್ನು ಉಲ್ಲಸಿತಗೊಳಿಸಬಹುದು. ಆದರೆ ಆಚರಣೆ ಎಂಬುದು ನಿತ್ಯ ಕರ್ಮ. ಭಾಷೆಯ ಹಬ್ಬದಂದು ಅದರ ಆಚರಣೆಗೆ ಪಣ ತೊಡೋಣ.