ಕನ್ನಡ ಉಳಿಸುವಿಕೆ: ಭಿನ್ನ ನಿಲುವು
ಕನ್ನಡದ ಕೊರತೆ ಚರ್ಚೆಯ ಸರಣಿಯಲ್ಲಿ ನಾನು ಮಂಡಿಸಿದ ಅಭಿಪ್ರಾಯವೊಂದಕ್ಕೆ ಶ್ರೀ ಬೆನಕ ಸ್ವಲ್ಪ ದೀರ್ಘವಾದ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ನನ್ನ ಪ್ರತಿಕ್ರಿಯೆ ನಿರೀಕ್ಷಿಸಿದ್ದಕ್ಕಿಂತ ದೊಡ್ಡದಾಗಿದೆ ಎನಿಸಿದ್ದರಿಂದ ಲೇಖನವಾಗಿ ಪ್ರಕಟಿಸಿದ್ದೇನೆ.
ಸಂವಹನ ಮುಖ್ಯ ಎಂದು ಹೇಳಿದಾಗಲೆಲ್ಲಾ ಸಂವಹನ ಮುಖ್ಯ ಎಂದು ಮಾತನಾಡುವವರು ಕನ್ನಡವನ್ನು ಹಾಳು ಮಾಡಲು ನಿಂತಿದ್ದಾರೆ ಎಂಬ ಟೀಕೆಯನ್ನು ಎದುರಿಸಬೇಕಾಗುತ್ತದೆ. ಡಿ. ಎನ್. ಶಂಕರಭಟ್ಟರಂಥ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ಭಾಷಾ ವಿಜ್ಞಾನಿ ಕೂಡಾ ಇದೇ ಬಗೆಯ ಟೀಕೆಯನ್ನು ಎದುರಿಸಬೇಕಾಗಿರುವುದರಿಂದ ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಭಾಷೆಗೆ ಸಂಬಂಧಿಸಿದಂತೆ ಈ ಶುದ್ಧ, ಅಶುದ್ಧ ಮುಂತಾದ ಪರಿಕಲ್ಪನೆಗಳು ಸಾಪೇಕ್ಷವಾದವು. ಇದು ಶುದ್ಧ ಇದು ಅಶುದ್ಧ ಎಂದು ಹೇಳುವುದು ಆ ಕ್ಷಣದ ಸತ್ಯಗಳು ಮಾತ್ರ.
ಈಗ ಎಕ್ಸಿಕ್ಯುಟಿವ್ ಇಂಜಿನಿಯರ್ ಪದದ ವಿಷಯವನ್ನೇ ತೆಗೆದುಕೊಳ್ಳಿ. ಬರೆಹದಲ್ಲಿ ಕನ್ನಡ ಉಳಿಸಲು ಹೊರಟಿರುವ ನಮ್ಮಂಥವರು ಇದನ್ನು ಕಷ್ಟಪಟ್ಟು ಬಳಸಬೇಕು. ಆಡು ನುಡಿಯಲ್ಲಿ ಇಇ ಆಗಿಯೋ ಎಕ್ಸಿಕ್ಯುಟೀವ್ ಇಂಜಿನಿಯರ್ ಆಗಿಯೋ ಇರುತ್ತದೆ. ಹೊಸ ಪರಿಕಲ್ಪನೆಗಳ ಅಭಿವ್ಯಕ್ತಿಗಳು ಹೀಗೆಯೇ ರೂಪುಗೊಳ್ಳುತ್ತವೆ. ಇದಕ್ಕೊಂದು ಒಳ್ಳೆಯ ಉದಾಹರಣೆಯೆಂದರೆ ಹಳೆ ಮೈಸೂರು ಭಾಗದಲ್ಲಿ ಯಾವ ಕುಗ್ರಾಮದಲ್ಲೂ, ಎಂಥಾ ಅನಕ್ಷರಸ್ಥನೂ ಶಾಲೆಯನ್ನು ಇಸ್ಕೂಲು, ಸ್ಕೂಲು ಎಂದೇ ಕರೆಯುತ್ತಾನೆ. ಇದಕ್ಕೆ ಸಾಮಾಜಿಕ ಮತ್ತು ಚಾರಿತ್ರಿಕ ಕಾರಣಗಳಿವೆ. ನಾವು ಈಗ ಹೇಳುವ ಶಾಲೆಗಳು ಬರುವುದಕ್ಕಿಂತ ಮುನ್ನ ಇಲ್ಲಿ ಇದ್ದದ್ದು ಐಗಳ ಮಠಗಳು-ಇವುಗಳನ್ನು ಕೂಲಿ ಮಠ ಎಂದೂ ಕರೆಯುತ್ತಾರೆ. ಇನ್ನುಳಿದದ್ದು ವೇದ ಪಾಠ ಶಾಲೆಯಂಥವು. ಇವುಗಳ ಒಳಕ್ಕೆ ನಿರ್ದಿಷ್ಟ ಜಾತಿಯವರನ್ನು ಹೊರತು ಪಡಿಸಿ ಉಳಿದವರಿಗೆ ಪ್ರವೇಶವಿರಲಿಲ್ಲ. ಅವರ ಮಟ್ಟಿಗೆ ಐಗಳ ಮಠವಂತೂ ಶಾಲೆಯಲ್ಲ. ಹಾಗೆಂದು ಬ್ರಿಟಿಷರ ತಂದ ಸ್ಕೂಲ್ ಗಳೂ ಶಾಲೆಯಲ್ಲ. ಹಾಗಾಗಿ ಸ್ಕೂಲ್ ಅವರ ಬಾಯಲ್ಲಿ ಇಸ್ಕೂಲು, ಇಸ್ಕೋಲು ಹೀಗೆ ಏನೋ ಒಂದು ಆಗಿ ಉಳಿಯಿತು.
ಇದನ್ನು ಸರಿಪಡಿಸಬೇಕು ಎಂದು ವಾದಿಸಬಹುದು. ಆದರೆ ಸರಿಪಡಿಸುವುದು ಮಾತ್ರ ಸಾಧ್ಯವಾಗದ ಕೆಲಸ. ಸಾಮಾಜಿಕ, ಚಾರಿತ್ರಿಕ, ಆರ್ಥಿಕ ಒತ್ತಡ ಕೆಲ ಸಂದರ್ಭಗಳಲ್ಲಿ ರಾಜಕೀಯ ಒತ್ತಡಗಳೂ ಭಾಷೆಯ ಸುತ್ತ ದಂಡೆಯೊಂದನ್ನು ರೂಪಿಸುತ್ತಲೋ, ಹುಚ್ಚು ಪ್ರವಾಹಕ್ಕೆ ಕಾರಣವಾಗುತ್ತಲೋ ಇರುತ್ತವೆ.
ಇನ್ನು ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಸೇರಿಸುವುದರಿಂದ ಕನ್ನಡ ಹಾಳಾಗುತ್ತದೆ ಎಂದು ಭಾವಿಸಬೇಕಾಗಿಲ್ಲ. ಕನ್ನಡದಲ್ಲಿ ಸಂಸ್ಕೃತದ ಪದಗಳನ್ನು ನಾವು ಸಲೀಸಾಗಿ ಬಳಸಬಹುದಾದರೆ ಇಂಗ್ಲಿಷ್ ನ ಪದಗಳನ್ನೂ ಹಾಗೆಯೇ ಬಳಸಬಹುದು. ಭಾರತದ ಮಟ್ಟಿಗೆ ಒಂದು ಕಾಲದಲ್ಲಿ ಸಂಸ್ಕೃತ ಲಿಂಗ್ವಾ ಫ್ರಾಂಕಾ ಆಗಿತ್ತು. ಈಗ ಆ ಸ್ಥಾನ ಇಂಗ್ಲಿಷಿಗೆ ಬಂದಿದೆ. ಇದೊಂದು ಚಾರಿತ್ರಿಕ-ರಾಜಕೀಯ ಒತ್ತಡದ ಪರಿಣಾಮ. ಇದನ್ನು ನಾವು ಹೇಗೆ ಬದಲಾಯಿಸುವುದಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಕನ್ನಡದೊಳಗೆ ಕೆಲವು ಇಂಗ್ಲಿಷ್ ಪದಗಳು ನುಸುಳುವುದನ್ನೂ ತಪ್ಪಿಸುವುದು ಸಾಧ್ಯವಿಲ್ಲ.
ಹೀಗೆ ನುಸುಳಿದ ಕನ್ನಡೇತರ ಭಾಷೆಯ ಪದಗಳು ಕ್ರಮೇಣ ಕನ್ನಡೀಕರಣಕ್ಕೆ ಗುರಿಯಾಗುತ್ತವೆ. ಬಸ್ ಎಂಬ ಪದ ಕನ್ನಡದ್ದೆಂದೇ ನಮಗನ್ನಿಸುವುದಿಲ್ಲವೇ. ರೈಲು ಕೂಡಾ ಇದೇ ಪಟ್ಟಿಗೆ ಸೇರುತ್ತದೆ. ಬಸ್, ರೈಲುಗಳು ಕನ್ನಡಕ್ಕೆ ಬಂದ ಕಾಲಘಟ್ಟಕ್ಕೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ ಎಂಬುದು ನಿಜ. ಈ ವ್ಯತ್ಯಾಸವನ್ನು ಸೃಷ್ಟಿಸಿದವರೂ ನಾವೇ. ಅಂದರೆ ಕನ್ನಡವನ್ನು ಮೊದಲು ಮರೆತು ಇಂಗ್ಲಿಷ್ ಕನ್ನಡಕ್ಕಿಂತ ಶ್ರೇಷ್ಠ ಎಂದು ಕೊಂಡವರು ನಾವೇ ಅಂದರೆ ಈಗ ಕನ್ನಡವನ್ನು ಉಳಿಸಲು ಹೊರಟಿರುವ ನಮ್ಮಂಥ ಶಿಕ್ಷಿತ ಮಧ್ಯಮ ವರ್ಗ.
ಈಗಲೂ ನಮಗೆ ಕನ್ನಡವನ್ನು ಉಳಿಸುವುದು ಒಂದು ರೀತಿಯ ಅಂಚೆ ಚೀಟಿ ಸಂಗ್ರಹಿಸುವಂಥ ಹವ್ಯಾಸವೇ ಹೊರತು ಅದೊಂದು ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಅಗತ್ಯವಲ್ಲ. ನಾವು ಭಾಷೆಯ ಕುರಿತಂತೆ ನಡೆಸುವ ಚರ್ಚೆಗಳೆಲ್ಲವೂ ಕೇವಲ ವ್ಯಾಕರಣದ ಕುರಿತ ಒಣ ಚರ್ಚೆಯಾಗಿ ಬದಲಾಗುವುದು ಇದರಿಂದಲೇ. ಭಾಷೆಯನ್ನು ಉಳಿಸುವ ಕುರಿತ ಚರ್ಚೆಯಲ್ಲಿ ನಮಗೆ ಬೇಕಿರುವುದು ಬೌದ್ಧಿಕ ಸರ್ಕಸ್ ನಿಂದ ದೊರೆಯುವ ಆನಂದ ಮಾತ್ರ.