ಕನ್ನಡ ನುಡಿ ನಮ್ಮ ಉಸಿರಾಗಲಿ…

ಕನ್ನಡ ನುಡಿ ನಮ್ಮ ಉಸಿರಾಗಲಿ…

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಪ್ರತೀ ವರ್ಷ ಕನ್ನಡ ರಾಜ್ಯೋತ್ಸವದ ದಿನ ಹತ್ತಿರ ಬಂದಾಗಲೇ ನಮ್ಮ ಕನ್ನಡ ಭಾಷಾ ಪ್ರೇಮ ಮುಗಿಲುಮುಟ್ಟುತ್ತದೆ. ಆದರೆ ಒಂದು ಸಮಾಧಾನಕರ ಸಂಗತಿಯೆಂದರೆ ಹಲವು ಕಡೆಗಳಲ್ಲಿ ನವೆಂಬರ್ ತಿಂಗಳಿಡೀ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಪೂರಕವಾದ ಕಾರ್ಯಕ್ರಮಗಳು ಆಯೋಜನೆಯಾಗುತ್ತದೆ. ಹಲವಾರು ಜವಾಬ್ದಾರಿಯುತ ಕನ್ನಡ ಸಂಘಗಳು ಈ ಕುರಿತಾಗಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಈ ವರ್ಷ ರಾಜ್ಯ ಸರಕಾರವೂ ಕೆಲವೊಂದು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದಕ್ಕೆಲ್ಲಾ ನಾವು ಪಕ್ಷಾತೀತವಾಗಿ ಬೆಂಬಲ ನೀಡುವ.

ನವೆಂಬರ್ ೧ ಎಂದ ಕೂಡಲೇ ನಾವು ಕನ್ನಡದ ಕಟ್ಟಾ ಅಭಿಮಾನಿಗಳಾಗುತ್ತೇವೆ. ಕಳೆದ ವರ್ಷವೇ ಬರೆದಂತೆ ಕೆಲವರಿಗೆ ಹೊಟ್ಟೆ ಪಾಡಿನ ದಾರಿ ಆಗಿರಲೂ ಬಹುದು. ಆದರೆ ಒಂದಲ್ಲಾ ಒಂದು ರೀತಿಯಲ್ಲಿ ಕನ್ನಡದ ಪರವಾಗಿಯೇ ಕೂಗು ಏಳುತ್ತದೆ. ತಿಂಗಳಿಡೀ ಕನ್ನಡ, ಕನ್ನಡ ಎಂದು ಬೊಬ್ಬೆ ಹಾಗುವ ನಾವು ನವೆಂಬರ್ ಮುಗಿಯುತ್ತಿದ್ದಂತೇ ಶಾಂತವಾಗುತ್ತೇವೆ. ಸುದೀರ್ಘ ಹನ್ನೊಂದು ತಿಂಗಳ ನಿದ್ರೆಗೆ ಜಾರಿ ಬಿಡುತ್ತೇವೆ. ಹಾಗೆ ಆಗ ಬಾರದು. ಕನ್ನಡದ ಕೆಲಸಗಳು ನಿರಂತರ ನಡೆಯುತ್ತಲೇ ಇರಬೇಕು. ಹೊರಗಡೆ ಕೆಲಸಗಳು ಕಾಣಿಸದೇ ಹೋದರೂ ಕನ್ನಡದ ನದಿ ಗುಪ್ತಗಾಮಿನಿಯಾಗಿಯಾದರೂ ಹರಿಯುತ್ತಲೇ ಇರಬೇಕು. ಇದನ್ನು ಕನ್ನಡದ ಬಗ್ಗೆ ಪ್ರೀತಿ ಮತ್ತು ಕಳಕಳಿ ಇರುವ ಎಲ್ಲರೂ ಮಾಡಬೇಕು. ಆಗಲೇ ಕನ್ನಡ ಭಾಷೆ, ಸಂಸ್ಕೃತಿ ಮತ್ತು ರಾಜ್ಯ ಸಮೃದ್ಧವಾಗುತ್ತದೆ.

ನಾವು ಭಾಷಾಧಾರಿತ ರಾಜ್ಯ ವ್ಯವಸ್ಥೆಯಲ್ಲಿ ವಿಂಗಡನೆಗೊಂಡ ಬಳಿಕ ಹಲವಾರು ಸಮಸ್ಯೆಗಳು ತಲೆದೋರಿದವು. ಈಗ ಕೇರಳ ರಾಜ್ಯಕ್ಕೆ ಸೇರಿ ಹೋದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಬಹಳಷ್ಟು. ಅದೇ ಬೆಳಗಾವಿ ಕಡೆಗೆ ಹೋದರೆ ಮಹಾರಾಷ್ಟ್ರ ಗಡಿಯಲ್ಲಿನ ಕೆಲವು ಭಾಗಗಳಲ್ಲಿ ಮರಾಠಿ ಭಾಷೆಯದ್ದೇ ಪಾರಮ್ಯ. ಮಹಾರಾಷ್ಟ್ರದ ಗಡಿಯಲ್ಲಿ ನಿಧಾನವಾಗಿ ಭಾಷೆಯ ತಾರತಮ್ಯದ ಕೂಗು ಜೋರಾಗುತ್ತಿದೆ. ಇವೆಲ್ಲಾ ನಿಲ್ಲಬೇಕು. ನಾವಾಡುವ ಭಾಷೆ ಯಾವುದೇ ಇರಲಿ, ನಾವು ಭಾರತಾಂಬೆಯ ಮಕ್ಕಳು ಎಂಬ ನಿಲುವು ನಮ್ಮದಾಗಬೇಕು. ನಮ್ಮ ರಾಜ್ಯದಲ್ಲಿ ನಾವು ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು. ಅನ್ಯ ಭಾಷಾ ಹೇರಿಕೆಯನ್ನು ನಾವು ನಿಲ್ಲಿಸಬೇಕು. ಹೊಸದಾದ ಭಾಷೆ ಕಲಿಯುವುದಾದರೆ ಅಡ್ಡಿ ಇಲ್ಲ. ಆದರೆ ನಮ್ಮ ಕನ್ನಡಕ್ಕೆ ಅದು ಕುತ್ತಾಗಬಾರದು. 

ಕನ್ನಡ ಭಾಷೆ ಮಾತನಾಡಲು, ಬರೆಯಲು ಗೊತ್ತಿರುವವನೊಬ್ಬ ಕರ್ನಾಟಕ ರಾಜ್ಯದಲ್ಲೇ ಅನ್ಯಭಾಷಿಕರ ಜೊತೆ ಅವರದ್ದೇ ಭಾಷೆಯಲ್ಲಿ ಮಾತನಾಡಿದರೆ ಏನು ಸಾಧಿಸಿದಂತಾಯಿತು. ಆ ಅನ್ಯಭಾಷಿಕ ಯಾವತ್ತೂ ನಮ್ಮ ಭಾಷೆ ಕಲಿಯುವುದೇ ಇಲ್ಲ. ಅದರ ಬದಲು ಅವನ ಬಳಿ ಸಾಧ್ಯವಾದಷ್ಟು ಮಟ್ಟಿಗೆ ಕನ್ನಡ ಭಾಷೆಯಲ್ಲೇ ಸಂವಹನ ಮಾಡಿದರೆ ನಿಧಾನವಾಗಿ ಅವನು ಕನ್ನಡ ಕಲಿಯುತ್ತಾನೆ. ಕಡೇ ಪಕ್ಷ ವ್ಯವಹಾರಿಕವಾಗಿ ಬೇಕಾಗುವಷ್ಟಾದರೂ ಕನ್ನಡ ಕಲಿಯುತ್ತಾನೆ. ಆದರೆ ಇದು ಪ್ರೀತಿಯಿಂದ ಆಗಬೇಕು. ಅವನ ಮೇಲೆ ದಬ್ಬಾಳಿಕೆ ಮಾಡಿ, ನೀನು ಕನ್ನಡವನ್ನೇ ಮಾತನಾಡಬೇಕು ಎಂದು ಬಲವಂತ ಮಾಡಬಾರದು. ಇದರ ಪರಿಣಾಮ ನಾವು ಬೇರೆ ರಾಜ್ಯಕ್ಕೆ ಹೋದರೆ ನಮಗೂ ಅದೇ ರೀತಿ ಬಲವಂತದ ಅನುಭವವಾಗುತ್ತದೆ. ಕನ್ನಡ ಬರುವ ಕನ್ನಡಿಗರೇ ಅನ್ಯಭಾಷೆ ಮಾತನಾಡುತ್ತಾ ಬದುಕುವವರನ್ನು ನಾವು ಬಹಳಷ್ಟು ಮಂದಿಯಲ್ಲಿ ಕಾಣುತ್ತೇವೆ. ಇದು ಸರ್ವಥಾ ತಪ್ಪು. ನಮ್ಮ ಭಾಷೆಯನ್ನು ನಾವೇ ಪ್ರೀತಿಸದಿದ್ದರೆ ಇನ್ನು ಯಾರು ಬಯಸುತ್ತಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಯಥೇಚ್ಛ ಕನ್ನಡ ಬಳಸಿ, ಬೆಳೆಸಿ.

ಎಫ್ ಎಂ ರೇಡಿಯೋಗಳಲ್ಲಿ ಸ್ವಲ್ಪ ವಿಭಿನ್ನವಾದ್ರೂ ಸೊಗಸಾದ ಕನ್ನಡ ಬಳಸುತ್ತಾರೆ. ಕನ್ನಡದಲ್ಲೇ ಮಾತನಾಡೋಣ ಎಂದು ಪಂಥದ ಆಹ್ವಾನ ನೀಡುತ್ತಾ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಎಲ್ಲೆಲ್ಲಿ ಸಾಧ್ಯವೋ, ವೈಯಕ್ತಿಕವಾಗಿ ನಮಗೆ ಎಷ್ಟು ಸಾಧ್ಯವೋ ಅಲ್ಲಲ್ಲಿ ಕನ್ನಡ ಬಳಸೋಣ. ದೊಡ್ಡ ಹೋಟೇಲ್ ಗಳು, ಬಟ್ಟೆ ಬರೆಯ ಅಂಗಡಿಗಳು ಮೊದಲಾದೆಡೆ ಹೋದಾಗ ನಾವು ಕನ್ನಡವನ್ನೇ ಮಾತನಾಡಬೇಕು. ಆ ಹೋಟೇಲ್ ಅಥವಾ ಅಂಗಡಿಗಳು ವಿದೇಶೀ ಸಂಸ್ಥೆಯ ಭಾರತದ ಶಾಖೆಯಾಗಿರಲೂ ಬಹುದು. ಆದರೆ ಉದ್ಯೋಗಿಗಳು ೯೦% ಕರ್ನಾಟಕದವರೇ ಆಗಿರುತ್ತಾರೆ. ಅಂದ ಮೇಲೆ ಕನ್ನಡ ಮಾತಾಡಲು ಸಂಕೋಚ ಏಕೆ? ಭಾಷೆ ಒಂದು ಸಂವಹನ ಮಾಧ್ಯಮ. ನನಗೇನು ಬೇಕು? ಎಂಬುವುದನ್ನು ತಿಳಿಸಲು ನಾವು ಕನ್ನಡವನ್ನೇ ಬಳಸೋಣ. ಇತ್ತೀಚೆಗೆ ಬೆಂಗಳೂರಿನ ಒಂದು ಕೋಳಿಯ ಖಾದ್ಯವನ್ನು ಮಾರುವ ಹೋಟೇಲ್ ನಲ್ಲಿ ಕನ್ನಡ ಬಳಕೆಯಾಗುತ್ತಿಲ್ಲವೆಂದು ಕನ್ನಡ ಪರ ಸಂಘ ಸಂಸ್ಥೆಗಳು ಗಲಾಟೆ ಮಾಡಿದ್ದು ನೆನಪಾಗುತ್ತಿದೆ. ಹೀಗೇಕೆ? ಸಂಸ್ಥೆಯಲ್ಲಿರುವ ಉದ್ಯೋಗಿಗಳು ಕನ್ನಡಿಗರು, ಬರುವ ಗ್ರಾಹಕರಲ್ಲಿ ಬಹುಪಾಲು ಕರ್ನಾಟಕದವರೇ. ಹಾಗಿರುವಾಗ ಆಂಗ್ಲ ಭಾಷೆ ಅಥವಾ ಇನ್ನಿತರ ಭಾಷೆಗಳಲ್ಲಿ ಮಾತುಕತೆ ಏಕೆ? 

ಕನ್ನಡ ಮಾತಾಡಲು ಗ್ರಾಹಕರಾದ ನಾವು ಮುಂದಡಿ ಇಡಬೇಕು. ನಾವು ಕನ್ನಡದಲ್ಲೇ ಮಾತು ಪ್ರಾರಂಭಿಸಿದರೆ ಅವರು ಅನಿವಾರ್ಯವಾಗಿ ಕನ್ನಡದಲ್ಲೇ ಮಾತನಾಡುತ್ತಾರೆ. ಅವರಿಗೂ ಗ್ರಾಹಕರು ಬೇಕಲ್ಲವೇ? ನಮ್ಮ ಬಳಿ ಕನ್ನಡ ಮಾತನಾಡದವರ ಬಳಿ ನಾವು ವ್ಯವಹಾರವನ್ನೇ ಮಾಡಬಾರದು. ಆಗ ಕನ್ನಡ ಗೊತ್ತಿಲ್ಲದವರೂ ಕನ್ನಡ ಕಲಿಯುತ್ತಾರೆ. ಹಾಗೆ ನೋಡ ಹೋದರೆ ಉತ್ತರ ಭಾರತದ ಹಿಂದಿ ಭಾಷಿಕರು (ಮಾರ್ವಾಡಿಗಳು) ಕನ್ನಡವನ್ನು ಬೇಗನೇ ಕಲಿತುಕೊಳ್ಳುತ್ತಾರೆ. ಅದೇ ಕೇರಳ, ತಮಿಳುನಾಡಿನವರಿಗೆ ತಮ್ಮ ಭಾಷೆಯ ಮೇಲೆ ವಿಪರೀತ ಮೋಹ. ಅದನ್ನು ಅವರು ಯಾವ ರಾಜ್ಯಕ್ಕೆ ಹೋದರೂ ಬಿಟ್ಟುಕೊಡಲಾರರು. ಅವರ ಭಾಷಾ ಪ್ರೇಮವನ್ನು ನಾವು ಕಲಿತು ಅಳವಡಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡದಲ್ಲೇ ಮಾತನಾಡಬೇಕು. ಮಾತನಾಡಲು ಬಾರದವರನ್ನು ನಯವಾಗಿ ಮಾತನಾಡುವಂತೆ ಪ್ರೋತ್ಸಾಹಿಸಬೇಕು. ಬಲವಂತ ಮಾಡಲೇ ಬಾರದು. ಗೊತ್ತಿಲ್ಲದ ಭಾಷೆಯನ್ನು ಒಂದೆರಡು ದಿನದಲ್ಲಿ ಕಲಿಯಲು ಸಾಧ್ಯವಿಲ್ಲ. 

ಕನ್ನಡ ರಾಜ್ಯೋತ್ಸವ ಒಂದು ದಿನದ ಕಾರ್ಯಕ್ರಮವಲ್ಲ. ಅದು ನಿರಂತರ ನಡೆಯಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನಾವು ನಮ್ಮ ಮಾತೃಭಾಷೆಯ ಪ್ರೇಮವನ್ನು ಉಳಿಸಿ ಬೆಳೆಸಬೇಕು. ಕರ್ನಾಟಕದಲ್ಲಿ ಕನ್ನಡದ ಜೊತೆಗೆ ತುಳು, ಕೊಂಕಣಿ, ಕೊಡವ, ಉರ್ದು, ಬ್ಯಾರಿ ಹೀಗೆ ಹಲವಾರು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಅವರೆಲ್ಲರ ಜೊತೆ ಹೊಂದಿಕೊಂಡು, ಕನ್ನಡವನ್ನು ಬೆಳೆಸುವತ್ತ ಗಮನ ನೀಡಬೇಕು. 

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು