ಕನ್ನಡ ಪತ್ರಿಕಾ ಲೋಕ (ಭಾಗ ೧೦೨) - ಉದಯಕಾಲ

ಕನ್ನಡ ಪತ್ರಿಕಾ ಲೋಕ (ಭಾಗ ೧೦೨) - ಉದಯಕಾಲ

ಕಳೆದ ೨೫ ವರ್ಷಗಳಿಂದ ಹೊರಬರುತ್ತಿರುವ ‘ಕನ್ನಡಿಗರ ಜೀವಾಳ’ ಎನ್ನುವ ಘೋಷವಾಕ್ಯ ಹೊಂದಿರುವ ದಿನ ಪತ್ರಿಕೆ ‘ಉದಯಕಾಲ’. ಶಿವಮೊಗ್ಗ, ಕಲಬುರಗಿ, ಬೆಂಗಳೂರು, ಬೆಳಗಾವಿ, ಮಂಡ್ಯ, ಹುಬ್ಬಳ್ಳಿ - ಧಾರವಾಡ ಜಿಲ್ಲೆಗಳಿಂದ ಏಕಕಾಲಕ್ಕೆ ಪ್ರಕಟವಾಗಿ ಹೊರಬರುತ್ತಿದೆ. ಪತ್ರಿಕೆಗೆ ಕೆ ಎನ್ ಪುಟ್ಟಲಿಂಗಯ್ಯನವರು ಸಂಪಾದಕ ಹಾಗೂ ಪ್ರಕಾಶಕರಾಗಿ ಮತ್ತು ಡಿ ಬಿ ಬಸವರಾಜು ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಪತ್ರಿಕೆಯ ಆಕಾರ ವಾರ್ತಾಪತ್ರಿಕೆಯದ್ದಾಗಿದ್ದು , ೮ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ ಉಳಿದ ಆರು ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿದೆ.

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೨೨, ೨೦೨೨ರ ಸಂಚಿಕೆಯಾಗಿದೆ. ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ವಿಶೇಷ ಅಂಕಣಗಳು, ಸಿನೆಮಾ, ಕ್ರೀಡಾ ಸುದ್ದಿಗಳು ಮೂಡಿಬರುತ್ತಿವೆ. ಈ ಸಂಚಿಕೆಯಲ್ಲಿ ಡಾ. ಕರವೀರಪ್ರಭು ಕ್ಯಾಲಕೊಂಡ ಇವರ ‘ವಾಸ್ತವಕಾಲ’, ಎಲ್ ಪಿ ಕುಲಕರ್ಣಿ ಅವರ  ‘ಅನುದಿನ ವಿಜ್ಞಾನ', ಪ್ರಹ್ಲಾದ ಪತ್ತಾರ ಅವರ ‘ಶೈಕ್ಷಣಿಕ ದಾರಿ ದೀಪ', ನಾಗೇಶ್ ಜಿ ವೈದ್ಯ ಅವರ ‘ಚುಚ್ಚು ಮದ್ದು' ಮೊದಲಾದ ಅಂಕಣ ಬರಹಗಳು ಇವೆ. ಇವುಗಳ ಜೊತೆ ಬೇ ನ ಶ್ರೀನಿವಾಸ ಮೂರ್ತಿ, ನಾಗರಾಜ ಜಿ ನಾಗಸಂದ್ರ, ಶಿವನಗೌಡ ಪೋಲೀಸ್ ಪಾಟೀಲ್ ಅವರ ಲೇಖನಗಳೂ ಇವೆ. ಸಂಪಾದಕೀಯ ಬರಹ ಪತ್ರಿಕೆಯಲ್ಲಿ ಕಾಣಿಸುತ್ತಿಲ್ಲ. ಕಾಂತಾರ ಸಿನೆಮಾ ಬಗ್ಗೆ ಒಂದು ಲೇಖನ ‘ಸಿನಿ ಕಾಲ' ಪುಟದಲ್ಲಿದೆ.

ಪತ್ರಿಕೆಯನ್ನು ಅನಿಕೇತನ ಪಬ್ಲಿಕೇಶನ್ಸ್ ಮತ್ತು ಪ್ರಿಂಟರ್ಸ್ ಇವರು ಬೆಂಗಳೂರಿನ ಎಂ ಎನ್ ಎಸ್ ಪ್ರಿಂಟರ್ಸ್ ಪ್ರೈ.ಲಿ. ಇಲ್ಲಿ ಮುದಿಸುತ್ತಿದ್ದಾರೆ. ಪತ್ರಿಕೆಗೆ ಬೆಳಗಾವಿ, ಕಲಬುರಗಿ, ಮೈಸೂರು, ಶಿವಮೊಗ್ಗ, ಮಂಡ್ಯ ಮೊದಲಾದ ಕಡೆಗಳಲ್ಲಿ ಕಚೇರಿಗಳಿವೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ.೫.೦೦ ಆಗಿದ್ದು ಚಂದಾ ದರದ ಬಗ್ಗೆ ಮಾಹಿತಿ ಇಲ್ಲ. ಪತ್ರಿಕೆಗೆ ಎಬಿಸಿ ಮಾನ್ಯತೆ ದೊರೆತಿದ್ದು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗುತ್ತಿದೆ ಎಂಬ ಮಾಹಿತಿ ಇದೆ.