ಕನ್ನಡ ಪತ್ರಿಕಾ ಲೋಕ (ಭಾಗ ೧೦೮) - ವಿಕ್ರಮ
ಕಳೆದ ೭೫ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವ ಪ್ರಖರ ರಾಷ್ಟ್ರೀಯ ವಿಚಾರಗಳ ‘ವಿಕ್ರಮ' ವಾರ ಪತ್ರಿಕೆಯು ಕೆಲವು ವರ್ಷಗಳಿಂದ ಬದಲಾದ ರೂಪದಲ್ಲಿ ಮಾರುಕಟ್ಟೆಯಲ್ಲಿದೆ. ಪ್ರಾರಂಭದಲ್ಲಿ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಪತ್ರಿಕೆಯು ಈಗ ಸುಧಾ/ತರಂಗ ಪತ್ರಿಕೆಯ ಆಕಾರದಲ್ಲಿ ವರ್ಣರಂಜಿತವಾಗಿ ಹೊರಬರುತ್ತಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೧೬, ೨೦೨೩ (ಸಂಪುಟ: ೭೫, ಸಂಚಿಕೆ : ೩೯) ರ ಸಂಚಿಕೆ.
ನ. ನಾಗರಾಜ್ ಅವರು ಗೌರವ ಸಂಪಾದಕರಾಗಿಯೂ, ವೃಷಾಂಕ ಭಟ್ ಇವರು ಸಂಪಾದಕರಾಗಿಯೂ, ಸು.ನಾಗರಾಜ್ ಅವರು ವ್ಯವಸ್ಥಾಪಕ ಸಂಪಾದಕರಾಗಿಯೂ, ದಿವ್ಯಾ ಹೆಗಡೆ ಕಬ್ಬಿನಗದ್ದೆ ಇವರು ಉಪ ಸಂಪಾದಕಿಯಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪ್ರತೀ ಸಂಚಿಕೆಯಲ್ಲಿ ಸಂಪಾದಕರಾದ ವೃಷಾಂಕ್ ಭಟ್ ಇವರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂಪಾದಕೀಯವನ್ನು ಬರೆಯುತ್ತಾರೆ. ೫೦ ವರ್ಷಗಳ ಹಿಂದಿನ ಸಂಚಿಕೆಯಿಂದ ಆಯ್ದ ಲೇಖನವೊಂದನ್ನು ಈಗ ಪ್ರಕಟಿಸುತ್ತಿದ್ದಾರೆ. ಈ ಸಂಚಿಕೆಯಲ್ಲಿ ಜಲಿಯಾನ್ ವಾಲಾಬಾಗ್ ಘಟನೆ, ಅಂಬೇಡ್ಕರ್ ಬಗ್ಗೆ ಲೇಖನ, ಅಮೇರಿಕನ್ನರ ಅಳತೆಯ ಮಾನಗಳು, ಕೃಷಿಯಿಂದ ಬದುಕು ಮೊದಲಾದ ಲೇಖನಗಳಿವೆ. ಖ್ಯಾತ ಅಂಕಣಕಾರರಾದ ಪ್ರೇಮಶೇಖರ ಇವರು ‘ಅಗ್ನಿ ದಿವ್ಯ' ಎಂಬ ಅಂಕಣ ಬರೆಯುತ್ತಾರೆ. ಈ ಸಂಚಿಕೆಯಲ್ಲಿ ಅವರು ‘ಎಪ್ಪತ್ತೈದರ ಭಾರತ' ಎನ್ನುವ ಸಂಗತಿಯನ್ನು ಬರೆದಿದ್ದಾರೆ. ಆಯುರ್ವೇದ ವೈದ್ಯರಾದ ಡಾ. ಶ್ರೀವತ್ಸ ಭಾರದ್ವಾಜ ಇವರು ‘ಆಯುರಾರೋಗ್ಯ' ಅಂಕಣ ಬರೆಯುತ್ತಾರೆ. ಮಕ್ಕಳಿಗಾಗಿ ‘ಬಾಲಗೋಕುಲ' ಹಾಗೂ ‘ಪದವ್ಯೂಹ' ಅಂಕಣಗಳಿವೆ.
‘ವಿಕ್ರಮ' ಪತ್ರಿಕೆಯು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಚೇರಿಯನ್ನು ಹೊಂದಿದ್ದು, ಮಂಗಳೂರಿನ ದಿಗಂತ ಮುದ್ರಣ ಇಲ್ಲಿ ಪ್ರತೀ ವಾರ ಮುದ್ರಿತವಾಗುತ್ತಿದೆ. ಜ್ಞಾನ ಭಾರತಿ ಪ್ರಕಾಶನ ಲಿ. ಈ ಸಂಸ್ಥೆಯು ಪತ್ರಿಕೆಯ ಪ್ರಕಾಶಕರಾಗಿದೆ. ಪತ್ರಿಕೆಯ ಮುಖ ಬೆಲೆ ರೂ ೧೫.೦೦ ಆಗಿದ್ದು, ವಾರ್ಷಿಕ ಚಂದಾ ದರ ರೂ ೭೫೦.೦೦, ದ್ವೈವಾರ್ಷಿಕ ರೂ.೧೪೦೦.೦೦ ಹಾಗೂ ಪಂಚ ವಾರ್ಷಿಕ ರೂ ೩೫೦೦.೦೦ ಆಗಿದೆ. ಪತ್ರಿಕೆಯು ವರ್ಷಕ್ಕೆ ಎರಡು ಸಲ ವಿಶೇಷ ಸಂಚಿಕೆಯನ್ನು ಹೊರತರುತ್ತದೆ. ಈಗಲೂ ಕ್ಲಪ್ತ ಕಾಲಕ್ಕೆ ಪತ್ರಿಕೆಯು ಮುದ್ರಣವಾಗಿ ಓದುಗರ ಕೈ ಸೇರುತ್ತಿದೆ.