ಕನ್ನಡ ಪತ್ರಿಕಾ ಲೋಕ (ಭಾಗ ೧೧೭) - ಜೈ ಕನ್ನಡಮ್ಮ
ಬೆಳ್ತಂಗಡಿ ತಾಲೂಕಿನಾದ್ಯಂತ ಉತ್ತಮ ಪ್ರಸಾರವನ್ನು ಹೊಂದಿರುವ ವಾರ ಪತ್ರಿಕೆ - ಜೈ ಕನ್ನಡಮ್ಮ. ಕಳೆದ ಎರಡು ದಶಕಗಳಿಂದ ಬೆಳ್ತಂಗಡಿ ತಾಲೂಕಿನ ಸಾಮಾಜಿಕ, ರಾಜಕೀಯ, ಕ್ರೈಂ, ಸಾಂಸ್ಕೃತಿಕ, ಕ್ರೀಡೆ ಹೀಗೆ ಹತ್ತು ಹಲವಾರು ವಿಷಯಗಳನ್ನು ಹೊತ್ತು ಬರುತ್ತಿರುವ ಈ ಪತ್ರಿಕೆ ಬಹು ಜನಪ್ರಿಯ. ದೇವಿಪ್ರಸಾದ್ ಈ ಪತ್ರಿಕೆಯ ಸಂಪಾದಕರು, ಮುದ್ರಕರು ಹಾಗೂ ಪ್ರಕಾಶಕರು.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೨೪, ೨೦೨೨ (ಸಂಪುಟ ೨೩, ಸಂಚಿಕೆ ೫) ರ ವಾರದ ಸಂಚಿಕೆ. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು, ೧೨ ಪುಟಗಳನ್ನು ಹೊಂದಿದೆ. ಪತ್ರಿಕೆಯ ಎಂಟು ಪುಟಗಳು ವರ್ಣದಲ್ಲೂ, ನಾಲ್ಕು ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಪತ್ರಿಕೆಯಲ್ಲಿ ಸಂಪಾದಕರಾದ ದೇವಿಪ್ರಸಾದ್ ಅವರು ‘ದೇವಿ ಮಹಾತ್ಮೆ' ಎಂಬ ಹೆಸರಿನಲ್ಲಿ ಸಂಪಾದಕೀಯ ಬರೆಯುತ್ತಾರೆ. ‘ಕರಾವಳಿಯ ಜನತಾ ಬಂಡಾಯ ೧೮೩೪-೩೭’ ಬಗ್ಗೆ ಅರವಿಂದ ಚೊಕ್ಕಾಡಿಯವರು ಲೇಖನ ಬರೆದಿದ್ದಾರೆ. ಇದರೊಂದಿಗೆ ಕೆಲವು ರಾಜಕೀಯ ಹಾಗೂ ಸಭೆ ಸಮಾರಂಭಗಳ ವಿವರಗಳು ಇವೆ. ದೀಪಾವಳಿ ಸಮಯದ ಕಾರಣ ಪತ್ರಿಕೆಯಲ್ಲಿ ಬಹಳಷ್ಟು ಜಾಹೀರಾತುಗಳಿವೆ.
ಪತ್ರಿಕೆಯು ಜೈ ಪಬ್ಲಿಕೇಷನ್ಸ್, ಬೆಳ್ತಂಗಡಿ ಇಲ್ಲಿಂದ ಪ್ರಕಟವಾಗುತ್ತಿದೆ. ಬೆಳ್ತಂಗಡಿಯ ಶ್ರೀ ಮಂಜುನಾಥ ಮುದ್ರಣಾಲಯದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಬಿಡಿಪ್ರತಿಯ ಬೆಲೆ ರೂ.೩.೦೦. ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಕ್ಲಪ್ತಕಾಲಕ್ಕೆ ಮುದ್ರಣವಾಗಿ ಮಾರುಕಟ್ಟೆಗೆ ಬರುತ್ತಿದೆ.