ಕನ್ನಡ ಪತ್ರಿಕಾ ಲೋಕ (ಭಾಗ ೧೨೧) - ಹರಪನಹಳ್ಳಿ ಟೈಮ್ಸ್
ನೇಮಿರಾಜ ನಾಯ್ಕ ಇವರ ಸಾರಥ್ಯದಲ್ಲಿ ಕಳೆದ ಆರು ವರ್ಷಗಳಿಂದ ಹೊರ ಬರುತ್ತಿರುವ ವಾರ ಪತ್ರಿಕೆ “ಹರಪನಹಳ್ಳಿ ಟೈಮ್ಸ್”. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು ಹತ್ತು ಪುಟಗಳನ್ನು ಹೊಂದಿದೆ. ಪತ್ರಿಕೆಯಲ್ಲಿ ರಾಜಕೀಯ, ಅಪರಾಧ, ಸಿನೆಮಾ ಮತ್ತು ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಲಾಗಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಡಿಸೆಂಬರ್ ೨೬, ೨೦೨೨ (ಸಂಪುಟ: ೫, ಸಂಚಿಕೆ: ೧೬) ರ ಸಂಚಿಕೆ.
ಈ ಸಂಚಿಕೆಯಲ್ಲಿ ಉಡುಪಿಯ ಮನೆಹಾಳು ಮಟ್ಕಾ ದಂಧೆ, ಕಾಂತಾರ ಚಿತ್ರದ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು?, ಮೈಸೂರಿನಲ್ಲಿ ನಕಲ ವಿಕಲ ಚೇತನರ ದಂಧೆ ಎಂಬ ವಿಷಯಗಳ ಮುಖಪುಟ ಬರಹಗಳಿವೆ. ಸಂಪಾದಕರಾದ ನೇಮಿರಾಜ ನಾಯ್ಕ ಇವರು 'ಮನದಾಳದ ಮಾತು' ಎಂಬ ಹೆಸರಿನ ಸಂಪಾದಕೀಯ ಬರೆಯುತ್ತಾರೆ. ಈ ಸಂಚಿಕೆಯಲ್ಲಿ ಅವರು ಸಾಲುಮರದ ತಿಮ್ಮಕ್ಕ ‘ವೃಕ್ಷ ಮಾತೆ' ಆದ ಕಥೆಯನ್ನು ಹಂಚಿಕೊಂಡಿದ್ದಾರೆ.
ಪತ್ರಿಕೆಯು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನಿಂದ ಹೊರಬರುತ್ತಿದೆ. ಪ್ರೀತಮ್ ಪ್ರಿಂಟಿಂಗ್ ಪ್ರೆಸ್, ಹರಪನಹಳ್ಳಿ, ಬಳ್ಳಾರಿ ಇಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಸಂಪಾದಕ, ಮುದ್ರಕ, ಮಾಲೀಕರಾಗಿ ನೆಮಯ ನಾಯ್ಕ ಇವರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆಯ ಮುಖ ಬೆಲೆ ರೂ. ೧೦.೦೦, ಚಂದಾ ವಿವರಗಳ ಬಗ್ಗೆ ಹಾಗೂ ಈಗಲೂ ಪತ್ರಿಕೆ ಮುದ್ರಿತವಾಗುತ್ತಿದೆಯೇ ಎನ್ನುವ ಬಗ್ಗೆ ಯಾವುದೇ ಮಾಹಿತಿಗಳು ದೊರೆಯುತ್ತಿಲ್ಲ.