ಕನ್ನಡ ಪತ್ರಿಕಾ ಲೋಕ (ಭಾಗ ೧೨೫) - ಉಡುಪಿ ಮಿತ್ರ

ಕನ್ನಡ ಪತ್ರಿಕಾ ಲೋಕ (ಭಾಗ ೧೨೫) - ಉಡುಪಿ ಮಿತ್ರ

ಕಳೆದ ೨೪ ವರ್ಷಗಳಿಂದ ಬ್ರಹ್ಮಾವರ ತಾಲೂಕಿನಿಂದ ಹೊರ ಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಉಡುಪಿ ಮಿತ್ರ'. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳಲ್ಲಿ ೮ ಪುಟಗಳು ವರ್ಣದಲ್ಲೂ, ೪ ಪುಟಗಳು ಕಪ್ಪು ಬಿಳುಪು ಮುದ್ರಣ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಆಗಸ್ಟ್ ೧೫-೩೧, ೨೦೨೩ರ (ಸಂಪುಟ ೨೪, ಸಂಚಿಕೆ ೧) ರ ಪತ್ರಿಕೆ. 

ನಮ್ಮಲ್ಲಿರುವ ಪತ್ರಿಕೆಯ ಮುಖಪುಟದಲ್ಲಿ ಸೌಜನ್ಯ ಪ್ರಕರಣ, ಗೌರವ ಡಾಕ್ಟರೇಟ್ ಗೆ ಭಾಜನರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲೋಕಸಭಾ ಸ್ಪರ್ಧೆಯ ಆಕಾಂಕ್ಷಿ ಪ್ರಮೋದ್ ಮಧ್ವರಾಜ್ ಎಂಬ ಪ್ರಮುಖ ಸುದ್ದಿಗಳಿವೆ. ಪತ್ರಿಕೆಯಲ್ಲಿ ರಾಜಕೀಯ, ಅಪರಾಧ, ಸಾಮಾಜಿಕ ಹಾಗೂ ಸ್ಥಳೀಯ ಸುದ್ದಿಗಳಿವೆ. ಪತ್ರಿಕೆಯ ಸಂಪಾದಕರಾದ ಚಿತ್ತೂರು ಪ್ರಭಾಕರ ಆಚಾರ್ಯ ಇವರು ತಮ್ಮ ಸಂಪಾದಕೀಯದಲ್ಲಿ ಲೋಕಸಭೆಯಲ್ಲಿ ಮಂಡನೆಯಾದ ನೂತನ ಮಸೂದೆಗಳ ಬಗ್ಗೆ ಬರೆದಿದ್ದಾರೆ. ಪತ್ರಿಕೆಯಲ್ಲಿ ಹಲವಾರು ಜಾಹೀರಾತುಗಳಿವೆ. 

‘ಉಡುಪಿ ಮಿತ್ರ' ಪತ್ರಿಕೆಯ ಕಚೇರಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲುಕಿನ ಚಾಂತಾರು ಎಂಬಲ್ಲಿದೆ. ಪ್ರಭಾಕರ ಆಚಾರ್ಯ ಇವರು ಪತ್ರಿಕೆಯ ಸಂಪಾದಕ, ಮುದ್ರಕ, ಪ್ರಕಾಶಕ ಮತ್ತು ಮಾಲೀಕರಾಗಿದ್ದಾರೆ. ಪತ್ರಿಕೆಯನ್ನು ಮಿತ್ರ ಪಬ್ಲಿಕೇಷನ್ಸ್ ಇವರು ಪ್ರಕಾಶನ ಮಾಡುತ್ತಿದ್ದಾರೆ. ದಿಗಂತ ಮುದ್ರಣದ, ಯೆಯ್ಯಾಡಿ, ಮಂಗಳೂರು ಇಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ ೮.೦೦. ಚಂದಾ ವಿವರಗಳು ಲಭ್ಯವಿಲ್ಲ. ಉಡುಪಿ ಮಿತ್ರ ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.