ಕನ್ನಡ ಪತ್ರಿಕಾ ಲೋಕ (ಭಾಗ ೧೫೮) - ಗ್ರಾಹಕ ಛಾಯಾ

ಕನ್ನಡ ಪತ್ರಿಕಾ ಲೋಕ (ಭಾಗ ೧೫೮) - ಗ್ರಾಹಕ ಛಾಯಾ

ಮಂಗಳೂರಿನ ಮಾಸಪತ್ರಿಕೆ "ಗ್ರಾಹಕ ಛಾಯಾ"

ದ‌. ಕ. ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಪ್ರಕಟಿಸುತ್ತಿದ್ದ ಮಾಸ ಪತ್ರಿಕೆಯಾಗಿದೆ "ಗ್ರಾಹಕ ಛಾಯಾ". 2009ರ ಎಪ್ರೀಲ್ ನಲ್ಲಿ ಆರಂಭವಾದ "ಗ್ರಾಹಕ ಛಾಯಾ", ಸುಮಾರು ಹತ್ತು ವರ್ಷಗಳ ಕಾಲ ನಿಯಮಿತವಾಗಿ ನಡೆದು 2019ರಲ್ಲಿ ಸ್ಥಗಿತವಾಯಿತು.

12 ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಬರುತ್ತಿದ್ದ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಮೊದಲ ನಾಲ್ಕು ವರ್ಷಗಳ ಕಾಲ ಐದು ರೂಪಾಯಿ ಇತ್ತಾದರೆ, ಆನಂತರ  ಹತ್ತು ರೂಪಾಯಿ ಆಯಿತು. ಪತ್ರಿಕೆಯ ಮುಖಪುಟ ದ್ವಿವರ್ಣದಿಂದ ಕೂಡಿತ್ತು.

ಕುಳಾಯಿಯ ಎಂ. ಜೆ. ಸಾಲಿಯಾನ್ (ಮಲ್ಪೆ ಜಯಕರ ಸಾಲಿಯಾನ್) ಪ್ರಕಾಶಕರು ಮತ್ತು ಮುದ್ರಕರಾಗಿದ್ದರು. ಹೊಸಬೆಟ್ಟುವಿನ ವಿಷ್ಣು ಪಿ. ಸಂಪಾದಕರಾಗಿದ್ದರು. ಸಿ. ಎಚ್. ಬಾಬು ಉಪ ಸಂಪಾದಕರಾಗಿದ್ದರು. ರಾಘವೇಂದ್ರ ರಾವ್, ಪ್ರಕಾಶ್ಚಂದ್ರ ರಾವ್ ಹಾಗೂ ಜಯಪ್ರಕಾಶ್ ಸಂಪಾದಕ ಮಂಡಳಿ ಸದಸ್ಯರಾಗಿದ್ದರು. ವಾಲ್ಟರ್ ಮಸ್ಕರೇನಸ್ ಮಾರುಕಟ್ಟೆ ವ್ಯವಸ್ಥಾಪಕರಾಗಿದ್ದರು. ಬಂದರುವಿನ ಕರಾವಳಿ ಪ್ರಿಂಟರ್ಸ್ ನಲ್ಲಿ ಗ್ರಾಹಕ ಛಾಯಾ ಮುದ್ರಣವಾಗುತ್ತಿತ್ತು.

ಗ್ರಾಹಕರ ಜಾಗೃತಿಗಾಗಿ ಈ ಪತ್ರಿಕೆ ಮೀಸಲಾಗಿತ್ತು. ಗ್ರಾಹಕ ನ್ಯಾಯಾಲಯಗಳ ಆದೇಶಗಳ ಸಹಿತ ಬಳಕೆದಾರರ ಹಿತರಕ್ಷಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಬರೆಹಗಳೂ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ವಿವಿಧ ಕಾಯಿದೆ, ಕಾನೂನುಗಳ ಬಗ್ಗೆ ಮಾಹಿತಿಗಳಲ್ಲದೆ ವ್ಯಕ್ತಿತ್ವ ವಿಕಸನ ಸಂಬಂಧಿತ ಬರೆಹಗಳನ್ನೂ "ಗ್ರಾಹಕ ಛಾಯಾ" ಪ್ರಕಟಿಸುತ್ತಿತ್ತು.

~ ಶ್ರೀರಾಮ ದಿವಾಣ