ಕನ್ನಡ ಪತ್ರಿಕಾ ಲೋಕ (ಭಾಗ ೧೮೩) - ಸ್ಲಂ ಜಗತ್ತು

ಕನ್ನಡ ಪತ್ರಿಕಾ ಲೋಕ (ಭಾಗ ೧೮೩) - ಸ್ಲಂ ಜಗತ್ತು

ಎಲ್. ಐಸೆಕ್ ಅರುಳ್ ಸೆಲ್ವ ಅವರ "ಸ್ಲಂ ಜಗತ್ತು"

ಪ್ರಗತಿಪರ ಚಿಂತಕರೂ, ಲೇಖಕರೂ, ಸಾಮಾಜಿಕ ಕಾರ್ಯಕರ್ತರೂ ಆದ ಬೆಂಗಳೂರು ಲಕ್ಷ್ಮಣರಾವ್ ನಗರದ ಎಲ್. ಐಸೆಕ್ ಅರುಳ್ ಸೆಲ್ವ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರು ಆಗಿರುವ ಮಾಸಪತ್ರಿಕೆಯಾಗಿದೆ "ಸ್ಲಂ ಜಗತ್ತು".

ಪಿ. ಸುರೇಶ್ ಅವರು ಸ್ಲಂ ಜಗತ್ತುವಿನ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ಕರೀಂಖಾನ್ ಅವರು ಪ್ರಸರಣಾ ವಿಭಾಗದ ವ್ಯವಸ್ಥಾಪಕರಾಗಿದ್ದರು. ಬೆಂಗಳೂರಿನ ಕಾಂಚನ ಎಂ., ಚಿತ್ರದುರ್ಗದ ಪಾಪಣ್ಣ ಕೆ., ತುಮಕೂರಿನ ಟಿ. ಕೆ. ದಯಾನಂದ ಹಾಗೂ ಮಂಡ್ಯದ ಎಂ. ಬಿ. ನಾಗಣ್ಣ ಗೌಡ ಅವರು ಸಂಪಾದಕ ಮಂಡಳಿ ಸದಸ್ಯರಾಗಿದ್ದರು. ಪಿಯುಸಿಎಲ್ (ಕರ್ನಾಟಕ) ನ  ಪ್ರೊ. ಹಸನ್ ಮನ್ಸೂರ್, ಹಿರಿಯ ಬರಹಗಾರರಾದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಜನ ಸಹಯೋಗದ ವೈ. ಜೆ. ರಾಜೇಂದ್ರ ಅವರು ಸಲಹಾ ಸಮಿತಿ ಸದಸ್ಯರಾಗಿದ್ದರು.

2000ನೇ ಇಸವಿಯಲ್ಲಿ ಆರಂಭವಾದ " ಸ್ಲಂ ಜಗತ್ತು" ಬೆಂಗಳೂರಿನ ಕ್ರಿಯಾ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿತ್ತು. 20 ಪುಟಗಳ ಸ್ಲಂ ಜಗತ್ತು ಮಾಸಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳಾಗಿತ್ತು. ವಾರ್ಷಿಕ ಚಂದಾ 50 ರೂಪಾಯಿಗಳಾಗಿತ್ತು. 

ಜನತೆಯ ಸಂಘರ್ಷ ವಾಣಿ ಎಂಬ ಘೋಷಣೆಯೊಂದಿಗೆ ಪ್ರಕಟವಾಗುತ್ತಿದ್ದ ಸ್ಲಂ ಜಗತ್ತುವಿನಲ್ಲಿ ಸ್ಲಂಗಳ ಸಮಸ್ಯೆಗಳು, ಸ್ಲಂ ಜನರ ಕಷ್ಟ ನಷ್ಟಗಳು, ದುಃಖ ದುಮ್ಮಾನಗಳು, ಹೋರಾಟದ ಬದುಕಿನ ಚಿತ್ರಣವನ್ನು ಮೊದಲ ಆದ್ಯತೆಯಲ್ಲಿ ಅನಾವರಣಗೊಳಿಸಲಾಗುತ್ತಿತ್ತು. ಪರಿಸರ, ಸಮಾಜ, ಸಂಸ್ಕೃತಿ, ರಾಜಕೀಯ ಇತ್ಯಾದಿ ವಿಷಯಗಳ ಮೇಲೂ ಬೆಳಕು ಚೆಲ್ಲಲಾಗುತ್ತಿತ್ತು. ಕವನಗಳೂ ಪ್ರಕಟವಾಗುತ್ತಿತ್ತು.

~ ಶ್ರೀರಾಮ ದಿವಾಣ