ಕನ್ನಡ ಪತ್ರಿಕಾ ಲೋಕ (ಭಾಗ ೧೯೩) - ಸಹಜ ಸಾಗುವಳಿ

ಕನ್ನಡ ಪತ್ರಿಕಾ ಲೋಕ (ಭಾಗ ೧೯೩) - ಸಹಜ ಸಾಗುವಳಿ

ಸಹಜ ಕೃಷಿಗೆ ಮೀಸಲಾದ ದ್ವೈಮಾಸಿಕ ‘ಸಹಜ ಸಾಗುವಳಿ’

ಬೆಂಗಳೂರಿನ Other Karnataka Book Center (OKBC) ಪ್ರತೀ ಎರಡು ತಿಂಗಳಿಗೊಮ್ಮೆ ಹೊರತರುತ್ತಿರುವ ಪತ್ರಿಕೆಯೇ ಸಹಜ ಸಾಗುವಳಿ. ಇದು ಕಾರ್ಪೊರೇಟ್ ದುರಾಕ್ರಮಣ ವಿರೋಧಿಸಿ ಸುಸ್ಥಿರ ಸಾವಯವ ಮತ್ತು ಸಹಜ ಕೃಷಿಗೆ ಮೀಸಲಾಗಿರುವ ಪತ್ರಿಕೆ ಎಂದು ಮುಖಪುಟದಲ್ಲೇ ಹೇಳಿಕೊಂಡಿದ್ದಾರೆ. ಕಳೆದ ೨೨ ವರ್ಷಗಳಿಂದ ಹೊರ ಬರುತ್ತಿರುವ ಪತ್ರಿಕೆಯಲ್ಲಿ ಸಹಜ ಮತ್ತು ಸಾವಯವ ವಿಧಾನದ ಕೃಷಿ ಪದ್ಧತಿಗಳಿಗೆ ಆದ್ಯತೆ ನೀಡುವ ಬರಹಗಳು ಪ್ರಕಟವಾಗುತ್ತಿವೆ. ಪ್ರಾರಂಭದ ದಿನಗಳಲ್ಲಿ ಮಾಸ ಪತ್ರಿಕೆಯಾಗಿ ಹೊರ ಬರುತ್ತಿದ್ದ ‘ಸಹಜ ಸಾಗುವಳಿ’ ಕ್ರಮೇಣ ದ್ವೈಮಾಸಿಕ ಪತ್ರಿಕೆಯಾಗಿ ಬದಲಾಗಿದೆ. 

ವಿ.ಗಾಯತ್ರಿ ಇವರು ಸಂಪಾದಕರಾಗಿ, ಬಸವರಾಜು ಬಿ. ಸಂತೇಶಿವರ, ಸುರೇಶ್ ಬಿ.ದೇಸಾಯಿ, ಕೆ.ಎಂ.ಕುಂಬಳ್, ಸೋಮನಾಥ ರೆಡ್ಡಿ ಪೂರ್ಮ ಇವರುಗಳು ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೆಯ ವಿನ್ಯಾಸವನ್ನು ಎಂ ಆರ್ ಗುರುಪ್ರಸಾದ್ ಅವರು ಮಾಡುತ್ತಿದ್ದಾರೆ. ಸುಧಾ/ತರಂಗ ಆಕಾರದ೨೮ ಪುಟಗಳು. ಮುಖಪುಟ ಮಾತ್ರ ದ್ವಿ ವರ್ಣ ಹಾಗೂ ಉಳಿದ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿದೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯಲ್ಲಿ ಭ್ರೂಣದ ಮೇಲೆ ಕಳೆನಾಶಕದ ಪರಿಣಾಮ, ಬಾಳೆ ಬೇಸಾಯ, ವೈವಿಧ್ಯಮಯ ಕೋಸುಗಳ ವಿಸ್ಮಯಕಾರಿ ಪ್ರಪಂಚ, ಖಾಲಿ ಮಾಡಿರುವ ನೀರು ಇಂಗಿಸಲು ಮತ್ತೊಂದು ಅವಕಾಶ, ಮೈಕ್ರೋಫೈನಾನ್ಸ್ ಅಕ್ರಮದ ಸುತ್ತ, ಮೊದಲಾದ ಬರಹಗಳು ಇವೆ. ಸಂಪಾದಕರು ‘ನಿಮ್ಮೊಂದಿಗೆ’ ಎನ್ನುವ ಸಂಪಾದಕೀಯ ಬರಹವನ್ನು ಬರೆಯುತ್ತಾರೆ. ಪತ್ರಿಕೆಯ ವಾರ್ಷಿಕ ಸದಸ್ಯತ್ವ ರೂ ೧೦೦.೦೦ ಮತ್ತು ದಶ ವರ್ಷಗಳ ಸದಸ್ಯತ್ವ ೧೦೦೦ ರೂ. ಆಗಿರುತ್ತದೆ. ಪತ್ರಿಕೆಯ ಕಚೇರಿ ಬೆಂಗಳೂರಿನ ಮೈಖೇಲ್ ಪಾಳ್ಯದಲ್ಲಿದ್ದು, ಮುದ್ರಣ ಕೆಲಸ ಬೆಂಗಳೂರಿನ ಇಳಾ ಮುದ್ರಣಾಲಯದಲ್ಲಿ ನಡೆಯುತ್ತದೆ.