ಕನ್ನಡ ಪತ್ರಿಕಾ ಲೋಕ (ಭಾಗ ೨೧೭) - ಸರಸ್ವತಿ ಪ್ರಭಾ

ಸುರೇಶ ಆರ್ಗೋಡ ಅವರ "ಸರಸ್ವತಿ ಪ್ರಭಾ"
ಹುಬ್ಬಳ್ಳಿ ಬೆಂಗೇರಿ (ಉದಯ ನಗರ)ಯ ಶೆಣೈ ಸುರೇಶ ಆರ್ಗೋಡು ಅವರು 'ಆರ್ಗೋಡು ಪ್ರಕಾಶನ'ದ ಮೂಲಕ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆಸಿದ ಕೊಂಕಣಿ (ಕನ್ನಡ ಲಿಪಿ) ಮಾಸಪತ್ರಿಕೆಯಾಗಿದೆ "ಸರಸ್ವತಿ ಪ್ರಭಾ".
1988 - 89 ರ ಅವಧಿಯಲ್ಲಿ ಆರಂಭವಾದ ಪತ್ರಿಕೆ, ಸುಮಾರು ಒಂದೂವರೆ ದಶಕ ಕಾಲ ನಡೆದು ನಂತರ ಸ್ಥಗಿತಗೊಂಡಿತು. ಪ್ರಸ್ತುತ ಇ-ಪತ್ರಿಕೆಯಾಗಿ ಅಂತರ್ಜಾಲ ಓದುಗರಿಗೆ ಲಭ್ಯವಿದೆ ಎನ್ನುವ ಮಾಹಿತಿ ಇದೆ. 1990ರ ದಶಕದಲ್ಲಿ " ಹೋಟೇಲ ಸಂದೇಶ" ಎಂಬ ಪತ್ರಿಕೆಯನ್ನೂ ಇವರು ನಡೆಸುತ್ತಿದ್ದರು.
ಪುಸ್ತಕ ರೂಪದಲ್ಲಿ, ಇಪ್ಪತ್ತು ಪುಟಗಳೊಂದಿಗೆ ಬರುತ್ತಿದ್ದ ಸರಸ್ವತಿ ಪ್ರಭಾದ ವಾರ್ಷಿಕ ಚಂದಾ ಮೊತ್ತ 50.00 ರೂಪಾಯಿಗಳಾಗಿತ್ತು. ಅಜೀವಾ ಚಂದಾ (500.00 ರೂಪಾಯಿ) ಮತ್ತು ಪೋಷಕರು (1000.00 ರೂಪಾಯಿ) ಎಂದು ಪತ್ರಿಕೆಗಾಗಿ ಸಂಗ್ರಹಿಸಲಾಗುತ್ತಿತ್ತು. ಹುಬ್ಬಳ್ಳಿ ದಾಜೀಬಾನ ಪೇಟೆಯ ದುರ್ಗಾದೇವಿ ಕಾಂಪ್ಲೆಕ್ಸ್ ನಲ್ಲಿದ್ದ ಟಿ. ವ್ಹಿ. ಕೆ. ಗ್ರಾಫಿಕ್ಸ್ ನಲ್ಲಿ ಪತ್ರಿಕೆಯ ಡಿಟಿಪಿ ಕೆಲಸ ನಡೆಯುತ್ತಿತ್ತು. ಹೊಟೇಲ್ ಉದ್ಯಮಿ ಶೇಷಗಿರಿ ಪಾಂಡುರಂಗ ಕಾಮತ್ ಗೌರವ ಪೋಷಕರಾಗಿದ್ದರು. ಸಾಲಿಗ್ರಾಮ ಗಣೇಶ ಶೆಣೈ ದಾವಣಗೆರೆ ಸಹ ಸಂಪಾದಕರಾಗಿದ್ದರು. ಅಪ್ಪು ರಾಯ ಪೈ ಗೌರವ ಸಂಘಟನಾ ವ್ಯವಸ್ಥಾಪಕರಾಗಿದ್ದರು. ವಿಜಯ ಮಿಸ್ಕಿನ್ ಪತ್ರಿಕೆಯ ವಿನ್ಯಾಸಕಾರರಾಗಿದ್ದರು.
ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಬರೆಹಗಳು, ಸಾಧಕರ ಪರಿಚಯಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುವು. ಎಂ. ಮಾಧವ ಪೈ ಶಿವಮೊಗ್ಗ, ಎಸ್. ಜಿ. ಕಾಮತ್ ಹೆಜಮಾಡಿ, ಕೋಟೇಶ್ವರ ಪ್ರಭಾಕರ ಕೊಗ್ಗ ಭಟ್ಟ, ರಾಮಚಂದ್ರ ಎಂ. ಶೇಟ ಅಂಕೋಲಾ, ವಿಷ್ಣು ಕಾಮತ್ ಕಟಪಾಡಿ, ಶ್ರೀಮತಿ ಕಲಾವತಿ ಬಿ. ಕಾಮತ್ ಹುಬ್ಬಳ್ಳಿ, ಎನ್. ಬಿ. ಕಾಮತ್ ಅಂಕೋಲಾ, ಡಾ || ಶಿವರಾಮ ಕಾಮತ್, ವಿನೀತ ವೆರ್ಣೇಕರ, ಜಯಶ್ರೀ ನಾಯಕ ಎಕ್ಕಂಬಿ, ನಾರಾಯಣ ಗೋವಿಂದ ನಾಯಕ ಯಕ್ಕಂಬಿ, ವಿಶ್ವನಾಥ ಕಾಮತ್ ಬಸ್ರೂರು ಮೊದಲಾದವರು ಪತ್ರಿಕೆಗೆ ಬರೆಯುತ್ತಿದ್ದರು.
~ ಶ್ರೀರಾಮ ದಿವಾಣ