ಕನ್ನಡ ಪತ್ರಿಕಾ ಲೋಕ (ಭಾಗ ೪೭) - ಪಿಸುಮಾತು
ಪ್ರಕಾಶ್ ಕಾಬೆಟ್ಟುರವರ "ಪಿಸುಮಾತು"
" ಪಿಸುಮಾತು" , ಪ್ರಕಾಶ್ ಕಾಬೆಟ್ಟು ಅವರು ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ. ಪತ್ರಕರ್ತ, ಲೇಖಕ, ಕವಿ, ಕಾರ್ಟೂನಿಸ್ಟ್, ಸಿನಿಮಾ ನಿರ್ದೇಶಕ ಹೀಗೆ ಬಹುಮುಖ ಪ್ರತಿಭೆಯ ಪ್ರಕಾಶ್ ಅವರು ೨೦೧೦ರ ಸೆಪ್ಟೆಂಬರ್ ತಿಂಗಳ ಸಂಚಿಕೆಯ ಮೂಲಕ ಆರಂಭಿಸಿದ "ಪಿಸುಮಾತು" ಒಂದು ವರ್ಷ ಕಾಲ ನಡೆದು ಬಳಿಕ ಸ್ಥಗಿತಗೊಂಡಿತು.
೪೪ ಪುಟಗಳ "ಪಿಸುಮಾತು" ಮಂಗಳ ವಾರಪತ್ರಿಕೆಯ ಆಕಾರದಲ್ಲಿ ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿತ್ತು. ಬಿಡಿ ಸಂಚಿಕೆಯ ಬೆಲೆ ೧೫ ರೂಪಾಯಿ.
ಸಂಪಾದಕರು ಮತ್ತು ಪ್ರಕಾಶಕರು ಪ್ರಕಾಶ್ ಕಾಬೆಟ್ಟು ಅವರಾಗಿದ್ದರೆ, ಸಂಪಾದಕೀಯ ವಿಭಾಗದಲ್ಲಿ ಜಯರಾಮ ನಾವಡ, ಸತೀಶ್ ಪೂಜಾರಿ, ಶ್ರೀಮತಿ ರತ್ನ ಪ್ರಕಾಶ್ ಇವರಿದ್ದರು. ಪ್ರಶು ಹಾಗೂ ಜನಾ ಇವರು ಕಲೆ ಮತ್ತು ವಿನ್ಯಾಸದಲ್ಲಿ, ದೀಪಿಕಾ ಹಾಗೂ ಹೇಮಲತಾ ಅಕ್ಷರ ಜೋಡಣೆಯ ಕಾರ್ಯದಲ್ಲಿ, ನವೀನ್ ಲೋಂಢೆ ಪ್ರಸರಣಾಧಿಕಾರಿಯಾಗಿ, ವೃಷಭ್ ರಾಜ್ ಹಾಗೂ ಉಮೇಶ್ ಶೆಟ್ಟಿ ಪ್ರಸರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
"ಪಿಸುಮಾತು" ವಿನಲ್ಲಿ ಕಥೆ - ಕವನ - ಧಾರಾವಾಹಿ, ಆರೋಗ್ಯ - ಶಿಕ್ಷಣ, ಜ್ಞಾನ - ವಿಜ್ಞಾನ, ವ್ಯಕ್ತಿತ್ವ ವಿಕಸನ - ಮನರಂಜನೆ ಹೀಗೆ ಎಲ್ಲವೂ ಇತ್ತು.
~ ಶ್ರೀರಾಮ ದಿವಾಣ