ಕನ್ನಡ ಪತ್ರಿಕಾ ಲೋಕ (ಭಾಗ ೫೩) - ಹೊಸ ಸಂಜೆ

ಕನ್ನಡ ಪತ್ರಿಕಾ ಲೋಕ (ಭಾಗ ೫೩) - ಹೊಸ ಸಂಜೆ

" ಹೊಸಸಂಜೆ" , ಮಂಗಳೂರು ನಗರದಿಂದ ಪ್ರಕಟವಾಗುತ್ತಿದ್ದ ಸಂಜೆ ದೈನಿಕ. ೧೯೯೨ರಲ್ಲಿ ಹಿರಿಯ ಪತ್ರಕರ್ತರಾದ ಗಾವಳಿ ಪ್ರಭಾಕರ ಕಿಣಿ, ಉದ್ಯಮಿಗಳಾದ ಎಂ. ಸಂದೀಪ್ ಕುಮಾರ್, ವಿದ್ಯಾಧರ ಶೆಟ್ಟಿ, ಜೇಮ್ಸ್ ಎಂಬವರ ಸಹಿತ ನಾಲ್ಕೈದು ಮಂದಿ ಸಮಾನ ಮನಸ್ಕರು ಸೇರಿ ಪಾಲುದಾರಿಕೆಯ ಮಾಲಕತ್ವದಲ್ಲಿ ಆರಂಭವಾದ "ಹೊಸಸಂಜೆ", ದಶಕಕ್ಕೂ ಅಧಿಕ ಕಾಲ ನಡೆದು ಬಳಿಕ ಸ್ಥಗಿತಗೊಂಡಿತು.

ಗಾವಳಿ ಪ್ರಭಾಕರ ಕಿಣಿ ಸಂಪಾದಕರಾಗಿದ್ದರು. ಸಂದೀಪ್ ಕುಮಾರ್ ಪ್ರಕಾಶಕರಾಗಿದ್ದರು. ಮೋಹನ್ ಬೋಳಂಗಡಿ ಹಾಗೂ ಪೂರ್ಣಚಂದ್ರ ಅವರು ಪ್ರಧಾನ ವರದಿಗಾರರಾಗಿದ್ದರು. ಚಿದಾನಂದ, ಶ್ರೀರಾಮ ದಿವಾಣ ಮೊದಲಾದವರು ವರದಿಗಾರರು ಮತ್ತು ಉಪಸಂಪಾದಕರಾಗಿದ್ದರು.

ದಿನಪತ್ರಿಕೆಗಳ ಆಕಾರದಲ್ಲಿ ನಾಲ್ಕು ಪುಟಗಳಲ್ಲಿ ಪ್ರಕಟವಾಗುತ್ತಿದ್ದ ಹೊಸಸಂಜೆ, ಯೆಯ್ಯಾಡಿಯ ದಿಗಂತ ಮುದ್ರಣಾಲಯದಲ್ಲಿ ಪ್ರಕಟವಾಗುತ್ತಿತ್ತು. ಬಿಡಿ ಸಂಚಿಕೆಯ ಬೆಲೆ ೧.೫೦ ಇತ್ತು. ಪತ್ರಿಕೆಯಲ್ಲಿ ಕ್ರೈಂ ಹಾಗೂ ತನಿಖಾ ಸುದ್ದಿಗಳು, ಕ್ರೀಡಾ ಸುದ್ದಿಗಳು, ಸಿನೆಮಾ ಸುದ್ದಿಗಳು ಹಾಗೂ ಮಕ್ಕಳ ಪುಟ ಪ್ರಕಟವಾಗುತ್ತಿತ್ತು. ಮಂಗಳೂರು ನಗರದ ಹೃದಯಭಾಗವಾಗಿದ್ದ ಹಂಪನಕಟ್ಟೆ ಬಳಿಯ ಗಣಪತಿ ಹೈಸ್ಕೂಲ್ ರಸ್ತೆಯ  ಜಿ ಎಚ್ ಎಸ್ ಸಿ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಪತ್ರಿಕೆ ತನ್ನ ಕಚೇರಿಯನ್ನು ಹೊಂದಿತ್ತು.

~ ಶ್ರೀರಾಮ ದಿವಾಣ, ಉಡುಪಿ