ಕನ್ನಡ ಪತ್ರಿಕಾ ಲೋಕ (ಭಾಗ ೫೬) - ಓ ಮನಸೇ...
ರವಿ ಬೆಳಗೆರೆಯವರ ಸಾರಥ್ಯದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿದ್ದ ಪಾಕ್ಷಿಕ ‘ಓ ಮನಸೇ...' ಸುಮಾರು ಒಂದು ದಶಕದ ಹಿಂದೆ ಪ್ರಾರಂಭವಾದ ಓ ಮನಸೇ ಪತ್ರಿಕೆ ಯುವಕ ಯುವತಿಯರ ಅಚ್ಚುಮೆಚ್ಚಿನ ಪಾಕ್ಷಿಕವಾಗಿತ್ತು. ಮನಸು ಮನಸುಗಳ ಪಿಸುಮಾತಿಗೊಂದು ಪಾಕ್ಷಿಕ ಎಂದು ರವಿ ಬೆಳಗೆರೆಯವರೇ ಟ್ಯಾಗ್ ಲೈನ್ ಹಾಕಿದ್ದರು. ತಮ್ಮ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯ ಜೊತೆಗೇ ಎರಡೂ ವಾರಕ್ಕೊಮ್ಮೆ ಓ ಮನಸೇ ಪತ್ರಿಕೆಯನ್ನು ಹೊರತರುತ್ತಿದ್ದರು. ಹಲವಾರು ಬಾರಿ ಪ್ರಕಟಣೆ ತಾತ್ಕಾಲಿಕವಾಗಿ ಸ್ಥಗಿತವಾದದ್ದೂ ಇದೆ. ಜಾಹೀರಾತುಗಳಿಲ್ಲದ ಅಪರೂಪದ ಪತ್ರಿಕೆ ಇದಾಗಿತ್ತು.
ಮಾರ್ಚ್ ೧೬-೩೧, ೨೦೨೦ರ ಸಂಚಿಕೆ ‘ಓ ಮನಸೇ’ ಪತ್ರಿಕೆಯ ಕೊನೆಯ ಸಂಚಿಕೆ. ಆ ಸಮಯದಲ್ಲೇ ಕೊರೊನಾ ಮಹಾಮಾರಿ ಪ್ರಾರಂಭವಾಯಿತು. ಕನ್ನಡದ ಹಲವಾರು ಪತ್ರಿಕೆಗಳು ಕಣ್ಣುಮುಚ್ಚಿದ ಸಮಯದಲ್ಲೇ ಈ ಪತ್ರಿಕೆಯೂ ಸ್ಥಗಿತಗೊಂಡಿತು. ಅದೇ ವರ್ಷ ರವಿ ಬೆಳಗೆರೆಯವರ ನಿಧನದ ನಂತರವಂತೂ ಪತ್ರಿಕೆ ಶಾಶ್ವತವಾಗಿ ಕಣ್ಣು ಮುಚ್ಚಿತು.
‘ಸುಧಾ’ ಆಕಾರದ ೫೨ ಪುಟಗಳ ಪತ್ರಿಕೆಯ ರಕ್ಷಾಪುಟಗಳು ವರ್ಣಮಯವಾಗಿದ್ದು, ಒಳಪುಟಗಳು ಕಪ್ಪು ಬಿಳುಪು ಆಗಿದ್ದವು. ಪತ್ರಿಕೆಯ ಮುಖಬೆಲೆ ೨೦.೦೦ ರೂ ಆಗಿದ್ದು, ಬೆಂಗಳೂರಿನ ಗೀತಾಂಜಲಿ ಗ್ರಾಫಿಕ್ಸ್ ನಲ್ಲಿ ಮುದ್ರಣಗೊಂಡು ಹೊರಬರುತ್ತಿತ್ತು. ಪತ್ರಿಕೆಯ ಕಚೇರಿಯು ಬೆಂಗಳೂರಿನ ಪದ್ಮನಾಭನಗರದಲ್ಲಿತ್ತು. ಒಳ ರಕ್ಷಾಪುಟಗಳಲ್ಲಿ ವಿಜ್ಞಾನದ ಮಾಹಿತಿಯುಳ್ಳ ‘ಸೈನ್ಸ್ ಪೇಜ್' ಅಂಕಣವಿತ್ತು.
ಪತ್ರಿಕೆಯ ಪ್ರಧಾನ ಸಂಪಾದಕರಾಗಿ ರವಿ ಬೆಳಗೆರೆ, ಸಂಪಾದಕರಾಗಿ ರವಿ ಅಜ್ಜೀಪುರ, ಸಹ ಸಂಪಾದಕಿಯಾಗಿ ಭಾವನಾ ಬೆಳಗೆರೆ ಕಾರ್ಯ ನಿರ್ವಹಣೆ ಮಾಡುತ್ತಿದ್ದರೆ, ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉಮೇಶ್ ಹೆಗಡೆ, ಪ್ರಸರಣಾಧಿಕಾರಿಯಾಗಿ ರವಿ ಕುಮಾರ್ ಬಿ. ಇದ್ದರು. ಕಲೆ ಮತ್ತು ವಿನ್ಯಾಸವನ್ನು ಮೋನಪ್ಪ, ನಂಜುಂಡ ಸ್ವಾಮಿ ಹುಲಿಕೆರೆ, ಉಷಾ ಎಂ.ಎಸ್. ಇವರು ನಿರ್ವಹಿಸುತ್ತಿದ್ದರು. ಈ ಹಿಂದಿನ ಸಂಚಿಕೆಗಳಿಗೆ ನಾಗೇಶ್ ಹೆಗಡೆ, ಉದಯ ಮರಕ್ಕಿಣಿ ಮುಂತಾದವರು ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ..
ಪ್ರಧಾನ ಸಂಪಾದಕರಾದ ರವಿ ಬೆಳಗೆರೆಯವರು ‘ಹಾಯ್', ‘ಮನಸ್ಸಿನ್ಯಾಗಿನ ಮಾತು', ಸೈಡ್ ವಿಂಗ್, ಸಮಾಧಾನ ಮೊದಲಾದ ಅಂಕಣಗಳನ್ನು ಬರೆಯುತ್ತಿದ್ದರು. ಜೋಗಿ, ಭುವನೇಶ್ವರಿ ಹೆಗಡೆ, ಎನ್ ಎಸ್ ಶ್ರೀಧರ ಮೂರ್ತಿ, ಜಯಂತ್ ಕಾಯ್ಕಿಣಿ ಮೊದಲಾದ ಖ್ಯಾತ ನಾಮರು ತಮ್ಮ ಲೇಖನಗಳನ್ನು ಬರೆಯುತ್ತಿದ್ದರು. ಪತ್ರಿಕೆಯ ಪ್ರಸಾರ ಸಂಖ್ಯೆಯೂ ಚೆನ್ನಾಗಿತ್ತು. ಓದುಗರ ಬೆಂಬಲವೂ ಇತ್ತು. ಅನಿವಾರ್ಯ ಪರಿಸ್ಥಿತಿಯಲ್ಲಿ ಪತ್ರಿಕೆಯು ನಿಂತು ಹೋದದ್ದು ಬೇಸರದ ಸಂಗತಿ.