ಕನ್ನಡ ಪತ್ರಿಕಾ ಲೋಕ (ಭಾಗ ೫೮) - ಚುಟುಕ

ಸಂಗಮ ಪ್ರಕಾಶನದಿಂದ ಪ್ರಕಟವಾಗುತ್ತಿದ್ದ ಸಮಗ್ರ ಸುದ್ಧಿ ಸಾರ ಭರಿತ ಮಾಸ ಪತ್ರಿಕೆ -ಚುಟುಕ. ಈಗಾಗಲೇ ನೀವು ಇದೇ ರೀತಿಯ ಹೆಸರಿನ (ಸುದ್ದಿಸ್ವಾರಸ್ಯಗಳ ಚುಟುಕ) ಒಂದು ಪತ್ರಿಕೆಯ ಬಗ್ಗೆ ತಿಳಿದುಕೊಂಡಿದ್ದೀರಿ. ಸುಮಾರು ಒಂದು ದಶಕಗಳ ಕಾಲ ಅಂತರ್ಜಾಲ ಪ್ರಾರಂಭವಾಗುವ ಮುನ್ನ ಪ್ರಕಟವಾಗುತ್ತಿದ್ದ ಪತ್ರಿಕೆ ಇದು. ‘ಚುಟುಕ’ ಇದು ‘ನಿಮ್ಮ ಏಳಿಗೆಗೆ ಒಂದು ಕೈಪಿಡಿ' ಎಂದು ಹೇಳುತ್ತಿದ್ದ ಪತ್ರಿಕೆ. ರಾಗಸಂಗಮ, ಸಿನಿರೇಖಾ, ಧಾರವಾಹಿ ಸಾಪ್ತಾಹಿಕ ಮುಂತಾದ ಪತ್ರಿಕೆಗಳ ಜೊತೆಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಈ ಪತ್ರಿಕೆಯ ಅಧಿಕಾಂಶ ಓದುಗರು ವಿದ್ಯಾರ್ಥಿಗಳೇ ಆಗಿದ್ದರು. ಜ್ಞಾನವನ್ನು ತಣಿಸುವ ಪ್ರಚಲಿತ ವಿದ್ಯಮಾನಗಳನ್ನು ತಿಳಿಸುವ ಉತ್ತಮ ಮಾಸ ಪತ್ರಿಕೆ ಇದಾಗಿತ್ತು.
ಪತ್ರಿಕೆ ಪ್ರಾರಂಭವಾಗುವಾಗ ೧/೮ ಸೈಜ್ ಅಂದರೆ ನಮ್ಮ ತುಷಾರ, ಮಯೂರ ಆಕಾರದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಪತ್ರಿಕೆ ಕಾಲಾನುಕ್ರಮೇಣ ಸುಧಾ-ತರಂಗ ಆಕಾರದಲ್ಲಿ ಮುದ್ರಿತವಾಗಲು ಪ್ರಾರಂಭವಾಯಿತು. ಪ್ರತೀ ಪುಟದಲ್ಲಿ ನುಡಿಮುತ್ತುಗಳು, ಕ್ವಿಝ್ ಪ್ರಶ್ನಾವಳಿಗಳನ್ನು ಈ ಪತ್ರಿಕೆಯಲ್ಲಿ ಮುದ್ರಿಸಲಾಗುತ್ತಿತ್ತು. ಪ್ರಾರಂಭದಲ್ಲಿ ಕಮಲಾ ಸುಂದರ್ ರಾಜನ್ ಅವರು ಸಂಪಾದಕಿಯಾಗಿದ್ದು, ಅವರ ಪತಿ ಎನ್ ಸುಂದರ್ ರಾಜನ್ ಅವರು ಪ್ರಕಾಶಕರಾಗಿದ್ದರು. ಸಂಗಮ ಪ್ರಕಾಶನದಿಂದ ಬಿಡುಗಡೆಯಾಗಿ ಹೊರಬರುತ್ತಿದ್ದ ಪತ್ರಿಕೆ ಪ್ರಾರಂಭದ ದಿನಗಳಲ್ಲಿ ಜಾಹೀರಾತು ರಹಿತವಾಗಿ ಮುದ್ರಿತವಾಗುತ್ತಿತ್ತು.
ಚುಟುಕ ಪ್ರಾರಂಭವಾಗಿ ಸ್ವಲ್ಪ ವರ್ಷಗಳ ಬಳಿಕ ಪ್ರಕಾಶಕರು ಪತ್ರಿಕೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದ್ದರು. ಕೊನೆಗೆ ಜನರ ಅಭಿಪ್ರಾಯಕ್ಕೆ ಮಣಿದು ತಮ್ಮ ನಿರ್ಧಾರವನ್ನು ಹಿಂದೆ ತೆಗೆದುಕೊಂಡಿದ್ದರು. ಪತ್ರಿಕೆಯ ಪ್ರಾರಂಭದಲ್ಲಿ ವಾರಪತ್ರಿಕೆಯಾಗಿದ್ದ ಚುಟುಕ ನಂತರದ ದಿನಗಳಲ್ಲಿ ಮಾಸ ಪತ್ರಿಕೆಯಾಗಿ ಬದಲಾಗಿತ್ತು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಜನವರಿ ೨೦೧೨ರ ಸಮಯದ್ದು. ಆ ಸಮಯ ಎನ್ ಸುಂದರ್ ರಾಜನ್ ಅವರು ಸ್ಥಾಪಕ ಸಂಪಾದಕರಾಗಿಯೂ, ನಾರಾಯಣ ಮಾಳ್ಕೋಡ್ ಅವರು ಸಂಪಾದಕರಾಗಿಯೂ, ಕಮಲಾ ಸುಂದರ್ ರಾಜನ್ ಅವರು ಪ್ರಕಾಶಕಿಯಾಗಿಯೂ, ಹರ್ಷಿಣಿಯವರು ವಿನ್ಯಾಸಗಾರ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
೭೦ ಪುಟಗಳ ಪತ್ರಿಕೆಯ ಮುಖಪುಟ ವರ್ಣರಂಜಿತವಾಗಿಯೂ, ಒಳಗಡೆಯ ಪುಟಗಳು ಕಪ್ಪು ಬಿಳುಪು ಬಣ್ಣದಲ್ಲಿಯೂ ಇರುತ್ತಿತ್ತು. ಪತ್ರಿಕೆಯ ಮುಖಬೆಲೆ ರೂ.೨೦.೦೦ ಆಗಿತ್ತು. ಪತ್ರಿಕೆಯ ವಾರ್ಷಿಕ ಚಂದಾ ೨೪೦.೦೦ ರೂ ಆಗಿತ್ತು. ವರ್ಷದಲ್ಲಿ ಒಂದೆರಡು ವಿಶೇಷಾಂಕಗಳೂ ಹೊರ ಬರುತ್ತಿದ್ದವು. ಪತ್ರಿಕೆಯಲ್ಲಿ ದೇಶ ವಿದೇಶಗಳ ಸುದ್ದಿಗಳು, ವಿಜ್ಞಾನ ಲೇಖನಗಳು, ಮಹಾನ್ ವ್ಯಕ್ತಿಗಳ ಬಗ್ಗೆ ಲೇಖನ, ನಮ್ಮ ಸುತ್ತಮುತ್ತಲಿನ ಸ್ವಾರಸ್ಯಕರ ಸಂಗತಿಗಳು, ಚರಿತ್ರೆಯ ಪುಟಗಳಿಂದ ಸುದ್ದಿಗಳು, ಕಲೆ, ಸಾಹಿತ್ಯ, ಕ್ರೀಡಾ ಸಮಾಚಾರ, ಪ್ರಾಣಿ-ಪಕ್ಷಿಗಳ ಸುದ್ದಿಗಳು, ಅದ್ಭುತ ದಾಖಲೆಗಳ ಬಗ್ಗೆ, ವಿದ್ಯಾರ್ಥಿಗಳಿಗಾಗಿ ವಿಶೇಷ ಪುಟಗಳು ಎಲ್ಲವೂ ಅಡಕವಾಗಿರುತ್ತಿತ್ತು.
ಚುಟುಕ ಪತ್ರಿಕೆಯು ಬೆಂಗಳೂರಿನ ಸುಮುಖ ಡಿಸ್ಟ್ರಿಬ್ಯೂಟರ್ಸ್ ನಿಂದ ಪ್ರಕಾಶಿತಗೊಂಡು, ಬೆಂಗಳೂರಿನ ಅನ್ನಪೂರ್ಣೇಶ್ವರಿ ಪ್ರಿಂಟರ್ಸ್ ನಲ್ಲಿ ಮುದ್ರಿತವಾಗುತ್ತಿತ್ತು. ಕಾಲ ಕ್ರಮೇಣ ಅಂತರ್ಜಾಲದಲ್ಲಿ ಮಾಹಿತಿಗಳು ಬೆರಳ ತುದಿಯಲ್ಲಿ ಸಿಗುವ ಸಮಯ ಬಂದಾಗ ಪತ್ರಿಕೆಗೆ ಓದುಗರ ಸಂಖ್ಯೆ ಕಡಿಮೆಯಾಗ ತೊಡಗಿತು. ೨೦೧೨-೧೩ರಲ್ಲಿ ಪತ್ರಿಕೆ ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು. ದಶಕಗಳ ಕಾಲ ಕನ್ನಡದ ಜ್ಞಾನಾಸಕ್ತ ಓದುಗರಿಗೆ ಉಪಯುಕ್ತವಾಗಿದ್ದ ಪತ್ರಿಕೆಯಾಗಿತ್ತು ‘ಚುಟುಕ’ ಎಂಬುವುದರಲ್ಲಿ ಎರಡು ಮಾತಿಲ್ಲ.