ಕನ್ನಡ ಪತ್ರಿಕಾ ಲೋಕ (ಭಾಗ ೬೧) - ತತ್ವವಾದ
ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ಪ್ರಕಾಶಿತಗೊಳ್ಳುತ್ತಿರುವ ‘ತತ್ವವಾದ’ ಮಾಸ ಪತ್ರಿಕೆ. ಡಿ. ಪ್ರಹ್ಲಾದಾಚಾರ್ಯ ಇವರು ನಿರ್ವಾಹಕ ಸಂಪಾದಕರಾಗಿದ್ದು, ಪಂಡರೀನಥಾಚಾರ್ಯ ಗಲಗಲಿ ಹಾಗೂ ಹರಿದಾಸ ಭಟ್ಟ ಇವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ಮಾಸಿಕ. ನಮ್ಮ ಸಂಗ್ರಹದಲ್ಲಿರುವ ಸಂಚಿಕೆಯು ಆಗಸ್ಟ್ ೧೯೯೯ರದ್ದು. ಆ ಸಮಯ ಈ ಪತ್ರಿಕೆಯು ಐವತ್ತನೇ ವರ್ಷದಲ್ಲಿ ಮುನ್ನಡೆಯುತ್ತಿತ್ತು.
ಪತ್ರಿಕೆಯಲ್ಲಿ ದಾಸ ಸಾಹಿತ್ಯ, ಮಹಿಳಾ ಲೇಖನ, ಮಕ್ಕಳಿಗಾಗಿ ಲೇಖನ, ಅಗಲಿದ ಗಣ್ಯರ ಬಗ್ಗೆ, ಪುಸ್ತಕ ಪರಿಚಯ, ಪದಬಂಧ ಮೊದಲಾದ ಮಾಹಿತಿಗಳು ಅಡಕವಾಗಿರುತ್ತಿದ್ದವು. ಕೆ.ಹಯವದನ ಪುರಾಣಿಕ, ಶ್ರೀಹರಿ, ಕೆ.ಸೂರ್ಯನಾರಾಯಣ ರಾವ್, ರಾಘವೇಂದ್ರ ಉಪಾಧ್ಯಾಯ, ಎಚ್ ಕೆ ಸಾವಿತ್ರಮ್ಮ ಮುಂತಾದವರ ಲೇಖನಗಳು ಪ್ರಕಟವಾಗಿದ್ದವು.
ಪತ್ರಿಕೆಯ ಕೊನೆಯ ಪುಟದಲ್ಲಿ ರಸ ಪ್ರಶ್ನೆಗಳೂ ಇರುತ್ತಿದ್ದವು. ಪತ್ರಿಕೆಯು ಬೆಂಗಳೂರಿನ ಬೃಂದಾವನ ಪ್ರೆಸ್ಸಿನಲ್ಲಿ ಮುದ್ರಣಗೊಂಡು ಹೊರಬರುತ್ತಿತ್ತು. ಪತ್ರಿಕೆಯ ಆಕಾರವು ತುಷಾರ-ಮಯೂರ ಪತ್ರಿಕೆಯದ್ದಾಗಿದೆ. ಮುಖಪುಟ ವರ್ಣರಂಜಿತವಾಗಿದ್ದು, ಉಳಿದ ಪುಟಗಳು ಕಪ್ಪು ಬಿಳುಪು ಬಣ್ಣದಲ್ಲಿ ಮುದ್ರಿತವಾಗಿವೆ. ೫೦ ಪುಟಗಳ ಈ ಬಿಡಿ ಪ್ರತಿ ಬೆಲೆ ರೂ. ೩.೦೦ ಆಗಿದ್ದು ವಾರ್ಷಿಕ ಚಂದಾ ರೂ.೩೫.೦೦ ಆಗಿತ್ತು. ಪತ್ರಿಕೆಯು ಈಗಲೂ ಮುದ್ರಿತವಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ದೊರಕಿಲ್ಲ. ಈಗಲೂ ಮುದ್ರಣವಾಗುತ್ತಿದ್ದರೆ ಪತ್ರಿಕೆಗೆ ಸುಮಾರು ೭೨ ವರ್ಷ ತುಂಬುತ್ತಿತ್ತು.
(ವಿ.ಸೂ: ‘ಕನ್ನಡ ಪತ್ರಿಕಾ ಲೋಕ'ದಲ್ಲಿ ನಾವು ಬಹುತೇಕವಾಗಿ ಹಿಂದೆ ಒಂದು ಸಮಯದಲ್ಲಿ ಪ್ರಕಟವಾಗುತ್ತಿದ್ದ, ನಂತರದ ದಿನಗಳಲ್ಲಿ ಮುದ್ರಣವನ್ನು ನಾನಾ ಕಾರಣಕ್ಕಾಗಿ ಸ್ಥಗಿತಗೊಳಿಸಿದ ಪತ್ರಿಕೆಯ ವಿವರವನ್ನು ನೀಡುತ್ತಿದ್ದೇವೆ. ಆದರೂ ಕೆಲವೊಂದು ಪತ್ರಿಕೆಗಳು ಈಗಲೂ ಮುದ್ರಣವಾಗುತ್ತಿರುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಲಭ್ಯವಿಲ್ಲದೇ ನೇರ ಚಂದಾದಾರರಿಗೆ ಬಟವಾಡೆಯಾಗುವ ಪತ್ರಿಕೆಗಳೂ ಇವೆ. ಈ ಮಾಲಿಕೆ ಹಿಂದೆ (ಈಗಲೂ) ಹೀಗೊಂದು ಹೆಸರಿನ ಪತ್ರಿಕೆ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿತ್ತು ಎಂಬ ಮಾಹಿತಿ ನೀಡಲು ಮಾತ್ರ. ನಾವು ಮಾಹಿತಿ ನೀಡಿದ ಪತ್ರಿಕೆಗಳು ಈಗಲೂ ಮುದ್ರಣವಾಗುತ್ತಿದ್ದರೆ ಓದುಗರು ದಯವಿಟ್ಟು ತಿಳಿಸಬೇಕಾಗಿ ಕೋರಿಕೆ.)