ಕನ್ನಡ ಪತ್ರಿಕಾ ಲೋಕ (ಭಾಗ ೬೫) - ಶಂಕರಭಾಸ್ಕರ

ಕನ್ನಡ ಪತ್ರಿಕಾ ಲೋಕ (ಭಾಗ ೬೫) - ಶಂಕರಭಾಸ್ಕರ

ಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ 'ಶಂಕರಭಾಸ್ಕರ'. ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪಬ್ಲಿಕ್ ಛಾರಿಟೇಬಲ್ ಟ್ರಸ್ಟ್, ಬೆಂಗಳೂರು ಇವರು ಪ್ರಕಾಶಿಸುತ್ತಿದ್ದ ಪತ್ರಿಕೆ ಇದು. ಪತ್ರಿಕೆಯ ಸಂಸ್ಥಾಪಕರು ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸ್ವರಸ್ವತೀ ಸ್ವಾಮಿಗಳವರು. ಬಿ ಆರ್ ಕೃಷ್ಣ ಪತ್ರಿಕೆಯ ಸಂಪಾದಕರಾಗಿದ್ದರು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ - ಜೂನ್ ೨೦೧೪ ರದ್ದು. ಆ ಸಮಯ ಪತ್ರಿಕೆಯ ಪ್ರಕಟಣೆ ಪ್ರಾರಂಭವಾಗಿ ೨೭ ವರ್ಷವಾಗಿತ್ತು. 

ಪತ್ರಿಕೆಯು ತುಷಾರ- ಮಯೂರ ಗಾತ್ರದಾಗಿದ್ದು ೫೨ ಪುಟಗಳನ್ನು ಹೊಂದಿದೆ. ಮುಖಪುಟ ವರ್ಣಮಯವಾಗಿದ್ದು, ಒಳಪುಟಗಳು ಕಪ್ಪುಬಿಳುಪು ಮುದ್ರಣ. ಪತ್ರಿಕೆಯಲ್ಲಿ ಶಂಕರಾಚಾರ್ಯರ ಸಿದ್ಧಾಂತಗಳನ್ನು ಪ್ರತಿಪಾದಿಸಲಾಗಿದೆ. ಶಂಕರ ಸಿದ್ಧಾಂತದಲ್ಲಿ ಭಕ್ತಿಯ ಸ್ಥಾನ, ಅದ್ವೈತ ದರ್ಶನ, ಸರಳ-ಸುಂದರ-ಸುಗಮ್ಯ ಆಧ್ಯಾತ್ಮಿಕತೆ, ಗ್ರಂಥಗಳ ಲೋಕಾರ್ಪಣೆ, ಅಂಡ-ಪಿಂಡ ಬ್ರಹ್ಮಾಂಡ, ಸ್ವಾಮೀಜಿಯವರ ಕೃತಿ ಪರಿಚಯ ಮೊದಲಾದ ವಿಷಯಗಳನ್ನು ಒಳಗೊಂಡಿದೆ. ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು, ಸ್ವಾಮಿ ವಿರಜಾನಂದರು, ಡಾ. ಎಸ್ ಹೇಮಲತಾ, ವಿದ್ವಾನ್ ಎನ್ ರಂಗನಾಥ ಶರ್ಮ, ಶತಾವಧಾನಿ ಡಾ. ರಾ ಗಣೇಶ್ ಇವರೆಲ್ಲಾ ಪತ್ರಿಕೆಗೆ ಬರೆಯುತ್ತಿದ್ದ ಖ್ಯಾತ ಲೇಖಕರಾಗಿದ್ದರು.

ಪತ್ರಿಕೆಯ ಬಿಡಿ ಪ್ರತಿಯ ಬೆಲೆಯನ್ನು ನಮೂದಿಸಿಲ್ಲವಾದರೂ ಪ್ರತಿಯೊಂದಕ್ಕೆ ೧೫.೦೦ ರೂ ಎಂದು ಅಂದಾಜಿಸ ಬಹುದಾಗಿದೆ. ವಾರ್ಷಿಕ ಚಂದಾ ರೂ ೬೦.೦೦ ಆಗಿತ್ತು. ಪತ್ರಿಕೆಯು ಬೆಂಗಳೂರಿನ ಶ್ರೀ ರಾಮ ಪ್ರಿಂಟರ್ಸ್ ಇಲ್ಲಿ ಮುದ್ರಿತವಾಗುತ್ತಿತ್ತು. ಪತ್ರಿಕೆಯು ಈಗಲೂ ಮುದ್ರಣವಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ದೊರಕಿಲ್ಲ.