ಕನ್ನಡ ಪತ್ರಿಕಾ ಲೋಕ (ಭಾಗ ೭೨) - ಜನತಾವಾಣಿ

ಕನ್ನಡ ಪತ್ರಿಕಾ ಲೋಕ (ಭಾಗ ೭೨) - ಜನತಾವಾಣಿ

ದಾವಣಗೆರೆ ಜಿಲ್ಲೆಯಿಂದ ಹೊರಬರುತ್ತಿರುವ, ೫ ದಶಕಗಳನ್ನು ಕಂಡ ಜನಪ್ರಿಯ ಪತ್ರಿಕೆ 'ಜನತಾವಾಣಿ'. ಕಳೆದ ೪೯ ವರ್ಷಗಳಿಂದ ನಿರಂತರವಾಗಿ ಹೊರಬರುತ್ತಿರುವ ದಿನಪತ್ರಿಕೆ 'ಜನತಾವಾಣಿ' ತನ್ನ ಚಿನ್ನದ ಹಬ್ಬದ ಸಂಭ್ರಮದ ಹೊಸ್ತಿಲಲ್ಲಿದೆ. ದಾವಣಗೆರೆ ಮಾತ್ರವಲ್ಲದೇ ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಧಾರವಾಡ, ಶಿವಮೊಗ್ಗ ಜಿಲ್ಲೆಗಳಲ್ಲೂ ಪ್ರಸಾರಹೊಂದಿರುವ ಮಧ್ಯ ಕರ್ನಾಟಕದ ಪತ್ರಿಕೆ ಇದು.

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಡಿಸೆಂಬರ್ ೪, ೨೦೧೦ರದ್ದು. ಈ ಪತ್ರಿಕೆಯು ವಾರ್ತಾ ಪತ್ರಿಕೆಯ ಗಾತ್ರದಲ್ಲಿದ್ದು ನಾಲ್ಕು ಪುಟಗಳನ್ನು ಹೊಂದಿದೆ. ಎಲ್ಲಾ ಪುಟಗಳು ಕಪ್ಪುಬಿಳುಪು ಆಗಿವೆ. ಬಿಡಿ ಪ್ರತಿಯ ಬೆಲೆ ರೂ ೨.೦೦ ಆಗಿದೆ. ದಾವಣಗೆರೆಯ ಜಿಲ್ಲಾವಾರು ಸುದ್ದಿಗಳಿಗೆ ಪ್ರಮುಖ ಪ್ರಾಶಸ್ತ್ಯ ನೀಡಲಾಗಿದೆ. ಅಂದಿನ ಸಂಪಾದಕರಾಗಿದ್ದರು ಹೆಚ್ ಎನ್ ಷಡಾಕ್ಷರಪ್ಪ ಇವರು. ಸಹ ಸಂಪಾದಕರು ಎಂ.ಎಸ್.ವಿಕಾಸ್. ಜನತಾವಾಣಿಯು ದಾವಣಗೆರೆಯ ಜಯಧಾರಾ ಆಫ್ ಸೆಟ್ ಪ್ರಿಂಟರ್ಸ್ ನಲ್ಲಿ ಮುದ್ರಿತವಾಗುತ್ತಿದ್ದು, ಕಸ್ತೂರ್ಬಾ ಬಡಾವಣೆ, ದಾವಣಗೆರೆ ಇಲ್ಲಿ ಕಚೇರಿಯನ್ನು ಹೊಂದಿದೆ.

ಪತ್ರಿಕೆಯು ಇಂದಿಗೂ ಮುದ್ರಿತವಾಗುತ್ತಿದ್ದು, ಸದ್ಯದಲ್ಲೇ ತನ್ನ ಪ್ರಕಟಣೆಯ ೫೦ ನೇ ವರ್ಷವನ್ನು ಪೂರೈಸಲಿದೆ. ಪ್ರಸ್ತುತ ವಿಕಾಸ್ ಷಡಾಕ್ಷರಪ್ಪ ಮೆಳ್ಳೇಕಟ್ಟೆ ಇವರು ಸಂಪಾದಕರಾಗಿದ್ದು, ವರ್ಣರಂಜಿತ ಫೋಟೋಗಳೊಂದಿಗೆ ಮುದ್ರಿತವಾಗುತ್ತಿದೆ. ಈಗ ಪುಟಗಳು ೬ ಆಗಿದ್ದು ಮುಖ ಬೆಲೆ ರೂ.೫.೦೦ ಆಗಿರುತ್ತದೆ. ಪತ್ರಿಕೆಯು ತನ್ನ ಸುವರ್ಣ ಸಂಭ್ರಮವನ್ನು ಆಚರಿಸಿ ಇನ್ನೂ ಹಲವಾರು ವರ್ಷಗಳ ಕಾಲ ಪತ್ರಿಕಾ ಲೋಕದಲ್ಲಿ ಬೆಳಗಲಿ ಎಂದು ಹಾರೈಕೆ.