ಕನ್ನಡ ಪತ್ರಿಕಾ ಲೋಕ (ಭಾಗ ೭೫) - ಗುಬ್ಬಚ್ಚಿ ಗೂಡು

ಕನ್ನಡ ಪತ್ರಿಕಾ ಲೋಕ (ಭಾಗ ೭೫) - ಗುಬ್ಬಚ್ಚಿ ಗೂಡು

ಹಿಂದೆಲ್ಲಾ ಮಕ್ಕಳಿಗಾಗಿ ಹಲವಾರು ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಹಿಂದೆ ನಾವೆಲ್ಲಾ ಸಣ್ಣವರಿರುವಾಗ ಬಾಲಮಿತ್ರ, ಬೊಂಬೆಮನೆ, ಚಂದಮಾಮ ಪತ್ರಿಕೆಗಳನ್ನು ಓದುವುದೇ ಒಂದು ಸೊಗಸಾಗಿತ್ತು. ನಂತರ ಬಾಲಮಂಗಳ, ತುಂತುರು, ಗಿಳಿವಿಂಡು, ಚಂಪಕ ಹೀಗೆ ಪತ್ರಿಕೆಗಳು ಬಂದವು. ಆದರೆ ಮೊನ್ನೆಯ ಕೊರೋನಾ ಸಾಂಕ್ರಾಮಿಕದ ಬಳಿಕ ಬಹುತೇಕ ಮಕ್ಕಳ ಪತ್ರಿಕೆಗಳು ಬಾಗಿಲು ಮುಚ್ಚಿಕೊಂಡವು. ಅವುಗಳಲ್ಲಿ ಅಳಿಯದೇ ಉಳಿದ ಪತ್ರಿಕೆ ಎಂದರೆ 'ಗುಬ್ಬಚ್ಚಿ ಗೂಡು' ಮಾಸ ಪತ್ರಿಕೆ.

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲೈ-ಆಗಸ್ಟ್ ೨೦೨೨ ರ ನೂತನ ಸಂಚಿಕೆ. ತಾಂತ್ರಿಕ ಕಾರಣಗಳಿಂದ ಎರಡು ತಿಂಗಳ ಸಂಚಿಕೆಯನ್ನು ಜೊತೆಯಾಗೇ ಹೊರತಂದಿದ್ದಾರೆ. 'ಮಕ್ಕಳ ಕನಸು-ವಾಸ್ತವಗಳ ತಿಂಗಳ ಹಾಡು' ಎಂದು ಪತ್ರಿಕೆಯನ್ನು ಕರೆದಿದ್ದಾರೆ. ಪತ್ರಿಕೆಯು ಸುಧಾ-ತರಂಗ ರೀತಿಯ ಆಕಾರದಲ್ಲಿದ್ದು ೪೮ + ೪ ಪುಟಗಳನ್ನು ಹೊಂದಿದೆ. ರಕ್ಷಾಕವಚದ ಹೊದಿಕೆ ವರ್ಣರಂಜಿತವಾಗಿದ್ದು, ಒಳಪುಟಗಳು ಕಪ್ಪು ಬಿಳುಪಾಗಿವೆ. ಪತ್ರಿಕೆಯಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಹಾಗೂ ಮನೋರಂಜನೆಗೆ ಬೇಕಾದ ಹಲವಾರು ವಿಷಯಗಳಿವೆ. 

ಮಕ್ಕಳಿಗೆ ನೀತಿಯೊಂದಿಗೆ ಮುದನೀಡುವ ಪುಟ್ಟ ಪುಟ್ಟ ಕಥೆಗಳು, ಸೊಗಸಾದ ಕವಿತೆಗಳು, ಗಣಿತ, ವಿಜ್ಞಾನದ ಸ್ವಾರಸ್ಯಕರ ವಿಷಯಗಳು, ಮನರಂಜನೆ ಹಾಗೂ ಕೌಶಲಾಭಿವೃದ್ಧಿಗೆ ಸಂಬಂಧಿಸಿದ ಪುಟಗಳು, ಪದ ಜಗತ್ತು, ಸೋಜಿಗ ಜಗತ್ತು ಮೊದಲಾದ ವಿಷಯಗಳು ಅಡಕವಾಗಿವೆ. ಮಕ್ಕಳಿಗೆ ಸ್ವತಃ ಮಾಡಿ ಕಲಿಯುವಂತಹ ಪಝಲ್ ಗಳಿವೆ. ಪುಟ್ಟ ಮಕ್ಕಳಿಗೆ ಬಣ್ಣ ತುಂಬುವ, ಚುಕ್ಕಿಗಳನ್ನು ಜೋಡಿಸುವ ಆಟಗಳಿವೆ. ಪತ್ರಿಕೆಯ ಕೊನೆಯಲ್ಲಿ ಸಂಪಾದಕರ 'ಮನದೊಳಗಿನ ಮಾತು' ಇದೆ.

ಪತ್ರಿಕೆಯು ತನ್ನ ಹತ್ತನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಪತ್ರಿಕೆ ಮಾರುಕಟ್ಟೆಯಲ್ಲಿ ಸುಲಭದಲ್ಲಿ ಲಭ್ಯವಿಲ್ಲ. ಆದರೆ ಚಂದಾದಾರರಾಗಬಹುದಾಗಿದೆ. ಪತ್ರಿಕೆಯ ಬಿಡಿ ಪ್ರತಿ ೨೫.೦೦ ರೂ. ಹಾಗೂ ವಾರ್ಷಿಕ ಚಂದಾ ೨೫೦.೦೦ ರೂ. ಆಗಿರುತ್ತದೆ. ಚಂದಾದಾರರಾದರೆ ಪತ್ರಿಕೆ ಕ್ಲಪ್ತ ಕಾಲಕ್ಕೆ ಮನೆಗೆ ಬಂದು ತಲುಪುತ್ತದೆ. ಮಕ್ಕಳ ಪತ್ರಿಕೆ ಮಾಡುವುದೇ ಒಂದು ಸಾಹಸವಾಗಿರುವಾಗ ಪ್ರಧಾನ ಸಂಪಾದಕರಾಗಿರುವ ಶಂಕರ ಹಲಗತ್ತಿ ಹಾಗೂ ಸಂಪಾದಕರಾಗಿರುವ ರೇಣುಕಾ ಬರದೇಲಿ ಅವರ ಸಾಧನೆ ಮೆಚ್ಚತಕ್ಕದ್ದು. ಶಂಕರ ಹಲಗತ್ತಿ ಇವರು ಪ್ರಕಾಶಕ ಹಾಗೂ ಮುದ್ರಕರಾಗಿದ್ದಾರೆ. ಪತ್ರಿಕೆಯ ಕಚೇರಿಯು ಸುಭಾಸಚಂದ್ರ ಭೋಸ್ ರೋಡ, ಧಾರವಾಡದಲ್ಲಿದೆ. ಪತ್ರಿಕೆಯು ಧಾರವಾಡದ ಸರಸ್ವತಿ ಆಫ್ ಸೆಟ್ ಮುದ್ರಣಾಲಯದಲ್ಲಿ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ. ಚಂದಾದಾರರಾಗಲು ೯೪೪೮೦೨೨೯೫೦ ಸಂಖ್ಯೆಯನ್ನು ಸಂಪರ್ಕಿಸಿರಿ.