ಕನ್ನಡ ಪತ್ರಿಕಾ ಲೋಕ (ಭಾಗ ೮೭) ಸಂಕ್ರಮಣ

ಕನ್ನಡ ಪತ್ರಿಕಾ ಲೋಕ (ಭಾಗ ೮೭) ಸಂಕ್ರಮಣ

ಖ್ಯಾತ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಇವರ ಸಾರಥ್ಯದಲ್ಲಿ ಹೊರಬರುತ್ತಿದ್ದ ಮಾಸ ಪತ್ರಿಕೆಯೇ ಸಂಕ್ರಮಣ. ೧೯೬೪ರಲ್ಲಿ ಸಮಾನ ಮನಸ್ಕರಾದ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಮೊದಲಾದವರ ಜೊತೆ ಸೇರಿ ಪತ್ರಿಕೆಯನ್ನು ಆರಂಭಿಸಿದರು. ಈಗ ಖ್ಯಾತನಾಮರಾಗಿರುವ ಹಲವಾರು ಮಂದಿ ಸಾಹಿತಿಗಳು 'ಸಂಕ್ರಮಣ' ದಲ್ಲಿ ತಮ್ಮ ಪ್ರಾರಂಭಿಕ ಬರಹಗಳನ್ನು ಬರೆದೇ ಮುಂದೆ ಬಂದವರು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಸೆಪ್ಟೆಂಬರ್-ಅಕ್ಟೋಬರ್ ೧೯೮೩ (ಸಂಪುಟ-೧೯, ಸಂಚಿಕೆ-೪-೫) ರ ಸಂಚಿಕೆ. 

ಪತ್ರಿಕೆಯ ಗಾತ್ರ ಮಯೂರ/ತುಷಾರ ಆಕಾರದಲ್ಲಿದ್ದು ೯೦+೪ ಪುಟಗಳನ್ನು ಹೊಂದಿದೆ. ಮುಖಪುಟ ದ್ವಿವರ್ಣದಲ್ಲಿದ್ದು, ಒಳಪುಟಗಳು ಕಪ್ಪು ಬಿಳುಪು ಮುದ್ರಣ. ಚಂಪಾ ಅವರು ಈ ಪತ್ರಿಕೆಯನ್ನು ‘ಮಾಸಿಕ ಸಾಹಿತ್ಯ ಸಂಕಲನ’ ಎಂದೇ ಕರೆದಿದ್ದಾರೆ. ಈ ಸಂಚಿಕೆಯಲ್ಲಿ ಎಸ್. ಜಿ. ಸಿದ್ದರಾಮಯ್ಯ, ಗುಲ್ವಾಡಿ ವೆಂಕಟರಾಯರು, ಬಸವಲಿಂಗ ಸೊಪ್ಪಿಮಠ, ಎಸ್ ಶಿವಾನಂದ, ಸತೀಶ ಕುಲಕರ್ಣಿ, ಸಿದ್ದನಗೌಡ ಪಾಟೀಲ, ಶ್ರೀನಾಥ ರಾಯಸಂ ಮುಂತಾದ ಮಹನೀಯರ ಬರಹಗಳಿವೆ.

ಪ್ರಥಮ ಸಂಕಲನದ ಕವಿಗಳ ವಿಭಾಗದಲ್ಲಿ ಖ್ಯಾತ ಪತ್ರಕರ್ತ, ಲೇಖಕರಾಗಿದ್ದ ರವಿ ಬೆಳಗೆರೆಯವರ ಎರಡು ಕವನಗಳಿವೆ. ರವಿ ಬೆಳಗೆರೆಯವರು ತಮ್ಮ ಬರವಣಿಗೆಯ ಪ್ರಾರಂಭಿಕ ದಿನಗಳಲ್ಲಿ ಕವನಗಳನ್ನೂ ಬರೆದಿದ್ದರು ಎಂದು ಬಹುತೇಕರಿಗೆ ತಿಳಿಯದ ವಿಷಯ. ಆ ಕವನಗಳು ‘ಅಗ್ನಿ ದಿವ್ಯ' ಎಂಬ ಕವನ ಸಂಕಲದಲ್ಲಿ ಮುದ್ರಿತವಾಗಿದೆ. ಈ ಕವನಗಳನ್ನು ಆ ಪುಸ್ತಕದಿಂದ ಚಂಪಾ ಅವರು ಆಯ್ದುಕೊಂಡಿದ್ದಾರೆ. ಚಂಪಾ ಅವರು ತಮ್ಮ ಸಂಪಾದಕೀಯ ಬರಹದಲ್ಲಿ ಎರಡು ಲೇಖನಗಳನ್ನು ಬರೆದಿದ್ದಾರೆ.

ಪತ್ರಿಕೆಯು ಸಂಕ್ರಮಣ ಪ್ರಕಾಶನ, ಧಾರವಾಡ ಇಲ್ಲಿಂದ ಪ್ರಕಟವಾಗುತ್ತಿತ್ತು. ಧಾರವಾಡದ ರಾಜಶ್ರೀ ಪ್ರಿಂಟಿಂಗ್ ಪ್ರೆಸ್ ಇಲ್ಲಿ ಮುದ್ರಣವಾಗುತ್ತಿತ್ತು. ಪತ್ರಿಕೆಯ ಬಿಡಿ ಪ್ರತಿಯ ಬೆಲೆಯನ್ನು ನೀಡಿಲ್ಲವಾದರೂ ವಾರ್ಷಿಕ ಚಂದಾ ರೂ.೨೪.೦೦ ಹಾಗೂ ಆಜೀವ ಚಂದಾ ರೂ.೨೦೦.೦೦ ಆಗಿತ್ತು. ಪತ್ರಿಕೆಯು ಐದು ದಶಕಗಳಿಗೂ ಅಧಿಕ ಕಾಲದ ತನಕ ಪ್ರಕಟವಾಗುತ್ತಿದ್ದು, ಚಂಪಾ ಅವರ ನಿಧನದ ನಂತರ ಪ್ರಕಟಣೆ ಸ್ಥಗಿತವಾಗಿರಬೇಕು ಎಂದು ಅಂದಾಜಿಸಲಾಗಿದೆ.