ಕನ್ನಡ ಪತ್ರಿಕಾ ಲೋಕ (ಭಾಗ ೯೬) - ಮಂಗ್ಳೂರ್ ಬೀಟ್
ರಂಜಿತ್ ಮಡಂತ್ಯಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ವಾರಪತ್ರಿಕೆ ‘ಮಂಗ್ಳೂರ್ ಬೀಟ್'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೧೬ ಪುಟಗಳನ್ನು ಹೊಂದಿದೆ. ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಪತ್ರಿಕೆಯ ವಿನ್ಯಾಸ ‘ಹಾಯ್ ಬೆಂಗಳೂರು' ಪತ್ರಿಕೆಯನ್ನು ಬಹಳಷ್ಟು ಹೋಲುತ್ತಿದೆ. ಪತ್ರಿಕೆಯೊಳಗಿರುವ ಅಂಕಣಗಳೂ ‘ಹಾಯ್ ಬೆಂಗಳೂರು' ಪತ್ರಿಕೆಯಿಂದ ಪ್ರಭಾವಿತವಾಗಿವೆ ಎಂದು ನೋಡುವಾಗ ಅರಿವಾಗುತ್ತದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ೧೩ ಮೇ ೨೦೨೨ (ಸಂಪುಟ ೧, ಸಂಚಿಕೆ ೪೦). ಪತ್ರಿಕೆಯ ಮುಖಪುಟದಲ್ಲಿ ಕನ್ನಡ ಕಿರುತೆರೆಯ ನಿರೂಪಕಿ ಅನುಶ್ರೀ ಬಗ್ಗೆ ವಿಷಯವಿದೆ. ಒಳಪುಟಗಳಲ್ಲಿ ಸಂಪಾದಕರಾದ ರಂಜಿತ್ ಮಡಂತ್ಯಾರ್ ಅವರ ‘ಹಾಯ್' ಎನ್ನುವ ಹೆಸರಿನ ಸಂಪಾದಕೀಯವಿದೆ. ‘ಪ್ರೇಮಪುತ್ರ’ ಅವರು ಬರೆದ ‘ಲವ್ ಲೈನ್'ಎಂಬ ಅಂಕಣವಿದೆ. ಪತ್ರಿಕೆಯಲ್ಲಿ ರಾಜಕೀಯ, ಕ್ರೈಂ ಹಾಗೂ ಸಿನೆಮಾ ಕುರಿತ ಮಾಹಿತಿಗಳಿವೆ. ಸಂಕ್ರಾಂತಿ ಸತೀಶ್ ಅವರು ಅನುಶ್ರೀ ಬಗ್ಗೆ ಬರೆದ ಮುಖಪುಟದ ಪ್ರಧಾನ ಲೇಖನವಿದೆ. ಉಳಿದಂತೆ ‘ವಿಶ್ವದ ಟಾಪ್ ೧೦ ಅತ್ಯಂತ ವಿನಾಶಕಾರಿ ಖನಿಜಗಳು'ಎಂಬ ಮಾಹಿತಿಪೂರ್ಣ ಲೇಖನವಿದೆ.
ಪತ್ರಿಕೆಯ ಕಚೇರಿ ಮಂಗಳೂರಿನ ಕದ್ರಿ ಎಂಬಲ್ಲಿದ್ದು, ಬೆಂಗಳೂರಿನ ಎಂ ಎನ್ ಎಸ್ ಪ್ರಿಂಟರ್ಸ್ ಪ್ರೈ. ಲಿ. ಇಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿ ರೂ.೧೦.೦೦, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ ಎಂಬ ಮಾಹಿತಿ ಇದೆ.