ಕನ್ನಡ ಪತ್ರಿಕಾ ಲೋಕ (೧೩) - ಪ್ರಜಾಮತ
*ಬಿ. ಎನ್. ಗುಪ್ತರು ಆರಂಭಿಸಿದ "ಪ್ರಜಾಮತ"*
"ಪ್ರಜಾಮತ" ವಾರಪತ್ರಿಕೆಯನ್ನು ಆರಂಭಿಸಿದವರು ಪ್ರಸಿದ್ಧ ಪತ್ರಿಕೋದ್ಯಮಿಯಾಗಿದ್ದ ಬಿ. ಎನ್. ಗುಪ್ತ (೧೮೯೫ - ೧೯೭೬) ಅವರು. ಆರಂಭಿಸಿದ್ದು ೧೯೨೯ರಲ್ಲಿ. ಮೈಸೂರಿನ ಪ್ರಥಮ ರಾಜಕೀಯ ಪಕ್ಷವೂ, ಜವಾಬ್ದಾರಿ ಸರಕಾರಕ್ಕಾಗಿ ಪ್ರಥಮವಾಗಿ ಬೇಡಿಕೆ ಮಂಡಿಸಿದ ಪಕ್ಷವೂ ಆದ "ಪ್ರಜಾಪಕ್ಷ" ವನ್ನು ಬೆಳೆಸುವ ಸಲುವಾಗಿ "ಪ್ರಜಾಮತ" ವಾರಪತ್ರಿಕೆಯನ್ನು ಪ್ರಕಟಿಸುವ ನಿರ್ಧಾರವನ್ನು ಬಿ. ಎನ್. ಗುಪ್ತ ಅವರು ತೆಗೆದುಕೊಂಡಿದ್ದರು. ಆದರೆ ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದ ಮೈಸೂರು ಸರಕಾರ "ಪ್ರಜಾಮತ" ವಾರಪತ್ರಿಕೆಯನ್ನು ಆರಂಭಿಸಲು ಬಿ. ಎನ್. ಗುಪ್ತರಿಗೆ ಅನುಮತಿಯನ್ನು ನೀಡಲಿಲ್ಲ. ಬಳಿಕ ಬಿ. ಎನ್. ಗುಪ್ತ ಅವರು ಮದರಾಸಿನಿಂದ "ಪ್ರಜಾಮತ" ವನ್ನು ಆರಂಭಿಸಿದರು.
ಬಳಿಕ ಹಲವು ಬಾರಿ ವಿವಿಧ ಕಾರಣಗಳಿಗಾಗಿ ಪ್ರಕಟಣೆಯ ಸ್ಥಳ ಮೈಸೂರು, ಹುಬ್ಬಳಿ ಹೀಗೆ ಸ್ಥಳಾಂತರಗೊಳ್ಳುತ್ತಲೇ ಇತ್ತು. ಆದರೆ ಒಂದೇ ಒಂದು ವಾರವೂ "ಪ್ರಜಾಮತ" ದ ಪ್ರಕಟಣೆ ಮಾತ್ರ ನಿಲ್ಲಲೇ ಇಲ್ಲ.
೧೯೪೬ರ ವರೆಗೆ ಮಾಲೀಕರು ಮತ್ತು ಸಂಪಾದಕರಾಗಿದ್ದ ಬಿ. ಎನ್. ಗುಪ್ತರು ಬಳಿಕ "ಪ್ರಜಾಮತ"ವನ್ನು ಮಾರಾಟ ಮಾಡಿದರು. ಈ ಅವಧಿಯಲ್ಲಿ " ಪ್ರಜಾಮತ" ದ ಪ್ರಸಾರ ಸಂಖ್ಯೆ ೩೬ ಸಾವಿರವನ್ನು ದಾಟಿತ್ತು. ಇದು ಕನ್ನಡ ವಾರ ಪತ್ರಿಕೆಗಳಲ್ಲಿಯೇ ಆ ಕಾಲದಲ್ಲಿ ಅತೀ ಹೆಚ್ಚಾಗಿತ್ತು. ಇದು "ಪ್ರಜಾಮತ"ದ ಹೆಗ್ಗಳಿಕೆಯೂ ಆಗಿತ್ತು. "ಪ್ರಜಾಮತ" ದ ಕೆಲವು ಸಂಚಿಕೆಗಳನ್ನು "ಪ್ರಜಾಮಿತ್ರ" ಎಂಬ ಹೆಸರಲ್ಲಿಯೂ ಪ್ರಕಟಿಸಲಾಗಿತ್ತು. ಮಾತ್ರವಲ್ಲ, ತೆಲುಗು ಆವೃತ್ತಿಯನ್ನೂ ಬಿ. ಎನ್. ಗುಪ್ತರು ನೂತನವಾಗಿ ಆರಂಭಿಸಿದ್ದರು.
ಬಿ. ಎಂ. ಶ್ರೀನಿವಾಸಯ್ಯ , ಎಂ. ಎಸ್. ಗುರುಪಾದಸ್ವಾಮಿ , ತಿ. ಸಿದ್ದಪ್ಪ , ಹ. ವೆಂ. ನಾಗರಾಜ ರಾವ್, ಮ. ನ. ಮೂರ್ತಿ , ದ್ವಾರಕಾನಾಥ್, ಎಸ್. ಆರ್. ಕೃಷ್ಣಮೂರ್ತಿ (ಎಸ್ಸಾರ್ಕೆ) ಮೊದಲಾದವರು "ಪ್ರಜಾಮತ" ದಲ್ಲಿ ಸಂಪಾದಕರುಗಳಾಗಿದ್ದರು.
ತನ್ನದೇ ಆದ ಪಾಯಿಂಟ್ಸ್ ನ್ನು (ಯೂನಿಕ್ ಸೆಲ್ಲಿಂಗ್ ಪ್ರಪೋಸಿಷನ್ಸ್) ಆ ಕಾಲದಲ್ಲೇ ಹೊಂದಿದ್ದ ಪತ್ರಿಕೆಯಾಗಿತ್ತು "ಪ್ರಜಾಮತ". ಜಿ. ವೈ. ಹುಬ್ಳಿಕರ್ ಅವರ 'ಚಿಂಗಾರಿ' ವ್ಯಂಗ್ಯಚಿತ್ರ ಮಾಲಿಕೆ, ಯುವಕರು ಕದ್ದು ಮುಚ್ಚಿ ಓದುತ್ತಿದ್ದ 'ಗುಪ್ತ ಸಮಾಲೋಚನೆ' , ಕಾದಂಬರಿಕಾರರಾದ ಮ. ನ. ಮೂರ್ತಿ ಅವರು ನಿರ್ವಹಿಸುತ್ತಿದ್ದ 'ದಾಂಪತ್ಯ ಸಮಸ್ಯೆಗಳು' ದ್ವಾರಕಾನಾಥ್ ಅವರು ನಿರ್ವಹಿಸುತ್ತಿದ್ದ ಸಿನಿ ಬರಹಗಳ 'ರೂಪವಾಣಿ", ಕ್ರೀಡಾ ಬರಹಗಳು, ರಾಜಕೀಯ ವಿಶ್ಲೇಷಣೆಗಳು, ಹಾಸ್ಯ ಬರಹಗಳು, ಕತೆಗಳು, ಧಾರಾವಾಹಿಗಳು, 'ದೀಪಾವಳಿ ವಿಶೇಷಾಂಕ'ಗಳು ಇತ್ಯಾದಿಗಳು "ಪ್ರಜಾಮತ" ಬಹಳಷ್ಟು ಜನಪ್ರಿಯಗೊಳ್ಳಲು ಕಾರಣವಾಗಿತ್ತು. ಇವೆಲ್ಲವುಗಳಿಂದಾಗಿ ಪ್ರಸಾರ ಸಂಖ್ಯೆ ಲಕ್ಷವನ್ನೂ ಮೀರಿತ್ತು.
ಹ. ವೆಂ. ನಾಗರಾಜ ರಾವ್ ಸಂಪಾದಕರಾಗಿದ್ದ ೧೯೬೦ರ ದಶಕದಲ್ಲಿ ಪತ್ರಿಕೆಯ ಬೆಲೆ ೩೫ ಪೈಸೆ ಆಗಿತ್ತು. ಬೆಂಗಳೂರಿನ ಬಸವನಗುಡಿಯಲ್ಲಿ ದಿ ಮೈಸೂರು ಪ್ರೆಸ್ ಪ್ರೈವೆಟ್ ಲಿಮಿಟೆಡ್ ನ ಮೂಲಕ ಪ್ರಕಟವಾಗುತ್ತಿತ್ತು. ಟಿ. ಎ. ಪಂಪಾಪತಿಯವರು ಮುದ್ರಕರು ಮತ್ತು ಪ್ರಕಾಶಕರಾಗಿದ್ದರು. ಸಂಪಾದಕೀಯ ಲೇಖನ, ಗಣ್ಯರನ್ನು ಪರಿಚಯಿಸುವ ವ್ಯಕ್ತಿ ಸಂಗತಿ, ಎಲೆಮರೆಯ ಕಾಯಿ, ವಿಶೇಷ ಲೇಖನಗಳ ಕಾಲ ಪ್ರವಾಹ, ವಿಶಿಷ್ಟ ಅಂಕಣಗಳಾದ ಕುತೂಹಲದ ಕಣ್ಗಳಲ್ಲಿ, ಮಹಿಳೆ, ಸಂಗೀತ ಸೌರಭ, ವಾರ ಭವಿಷ್ಯ ಇತ್ಯಾದಿಗಳು ಪ್ರಜಾಮತ ಓದುಗರ ಆಕರ್ಷಣೆಗೆ ಕಾರಣವಾಗಿತ್ತು.
ಆರಂಭದ ಕೆಲವು ದಶಕಗಳ ಕಾಲ ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಬರುತ್ತಿದ್ದ "ಪ್ರಜಾಮತ" ಕೊನೆಗೆ ಪುಸ್ತಕ ರೂಪದಲ್ಲಿ ಪ್ರಕಟವಾಗತೊಡಗಿತು. ೧೯೮೭ರಲ್ಲಿ "ಪ್ರಜಾಮತ" ದ ಪ್ರಕಟಣೆ ಸ್ಥಗಿತಗೊಂಡಿತು. ಬಳಿಕ ೨೦೦೨ರಲ್ಲಿ ಮತ್ತೆ "ಪ್ರಜಾಮತ" ವನ್ನು ಪುನರಾರಂಭಿಸುವ ಪ್ರಯತ್ನ ನಡೆಯಿತು.
(ವಿವಿಧ ಮೂಲಗಳಿಂದ)
~ *ಶ್ರೀರಾಮ ದಿವಾಣ*
Comments
ಪ್ರಜಾಮತ ಪತ್ರಿಕೆ ೮ನೇ…
ಪ್ರಜಾಮತ ಪತ್ರಿಕೆ ೮ನೇ ತರಗತಿಯಿಂದ ನಿರಂತರವಾಗಿ ಓದುತ್ತಿದ್ದೆ. ನಂತರ ಸುಧಾ ವಾರಪತ್ರಿಕೆಯನ್ನು ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಓದಿದ್ದೆ. ಪ್ರಜಾಮತ ವಾರಪತ್ರಿಕೆ ಸುಂದರವಾಗಿ ಮೂಡಿ ಬರುತ್ತಿತ್ತು. ನಿಮ್ಮ ಪತ್ರಿಕಾ ಲೋಕ ಮಾಲಿಕೆಯಲ್ಲಿ ಪ್ರಜಾಮತ ಪತ್ರಿಕೆಯ ವಿವರ ನೋಡಿ ಇದೆಲ್ಲಾ ಮತ್ತೆ ನೆನಪಾಯಿತು. ಉತ್ತಮ ಮಾಲಿಕೆ ಮುಂದುವರೆಯಲಿ. ಈಗಿನವರು ನೋಡಿಯೇ ಇರದ ಹಳೆಯ ಪತ್ರಿಕೆಗಳ ಪರಿಚಯ ಮಾಡಿಕೊಡುತ್ತಿರುವುದು ಸ್ತುತ್ಯಾರ್ಹ. ಅಭಿನಂದನೆಗಳು.
- ತುಕ್ರಪ್ಪ ತೆಂಬರೆ (ನಿವೃತ್ತ ಮುಖ್ಯೋಪಾಧ್ಯಾಯರು)