ಕನ್ನಡ ಪತ್ರಿಕಾ ಲೋಕ (೩೮) - ಜನರಾಜ್

ಕನ್ನಡ ಪತ್ರಿಕಾ ಲೋಕ (೩೮) - ಜನರಾಜ್

ಎನ್. ಆರ್. ಉಭಯ ಅವರ "ಜನರಾಜ್"

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕೋಟೆಕಾರು ನಿವಾಸಿಯಾಗಿದ್ದ ಹಿರಿಯ ಪತ್ರಿಕೋದ್ಯಮಿ ಎನ್. ಆರ್. ಉಭಯ ಅವರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಕಾಲ ನಿರಂತರವಾಗಿ ನಡೆಸಿದ ದಿನಪತ್ರಿಕೆಯಾಗಿದೆ " ಜನರಾಜ್".

ಉಭಯ ಅವರು "ನ್ಯೂ ಇಂಡಿಯನ್ ಎಕ್ಸ್ ಪ್ರೆಸ್" ದೈನಿಕದ ದ. ಕ. ಜಿಲ್ಲಾ ವರದಿಗಾರರೂ ಅಗಿದ್ದವರು. ಕೋಟೆಕಾರಿನಲ್ಲಿ ಸ್ವಂತ ಮುದ್ರಣಾಲಯ (ಸದ್ಗುರು ಪ್ರೆಸ್) ಹೊಂದಿದ್ದ ಇವರು ತಮ್ಮ "ಜನರಾಜ್" ದೈನಿಕವನ್ನು ಇಲ್ಲಿಯೇ ಮುದ್ರಿಸುತ್ತಿದ್ದರು. ೧೯೭೯ರಲ್ಲಿ ಅರಂಭಿಸಿದ "ಜನರಾಜ್" ದೈನಿಕವನ್ನು ಎನ್. ಆರ್. ಉಭಯ ಅವರು ನಿಧನರಾಗುವವರೆಗೂ ನಡೆಸಿದ್ದರು. ೧೯೯೦ರ ದಶಕದಲ್ಲಿ "ಜನರಾಜ್" ದೈನಿಕವು ವಾರ್ತಾ ಸಾಪ್ತಾಹಿಕವಾಗಿ ಪರಿವರ್ತನೆಗೊಂಡಿತು. ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕತ್ವವನ್ನು ಕೆ. ಎಂ. ಶೆಟ್ಟಿ ಅವರು ವಹಿಸಿಕೊಂಡಿದ್ದರು.

ಎರಡು ಪುಟಗಳನ್ನು ಹೊಂದಿದ್ದ "ಜನರಾಜ್" ನಲ್ಲಿ ಸ್ಥಳೀಯ, ರಾಜ್ಯ ಮತ್ತು ದೇಶೀಯ ಮಟ್ಟದ ರಾಜಕೀಯ ಸುದ್ಧಿಗಳು ಹೆಚ್ಚಾಗಿ ಪ್ರಕಟಗೊಳ್ಳುತ್ತಿತ್ತು. ಆರಂಭದ ೧೯೮೦ರ ದಶಕದಲ್ಲಿ ಪತ್ರಿಕೆಯ ಬಿಡಿ ಸಂಚಿಕೆಗೆ ೧೫ ಪೈಸೆ ಬೆಲೆ ಇದ್ದರೆ, ೧೯೯೦ರ ದಶಕದಲ್ಲಿ ೫೦ ಪೈಸೆ ಬೆಲೆಯಿತ್ತು.

~ ಶ್ರೀರಾಮ ದಿವಾಣ, ಉಡುಪಿ