ಕನ್ನಡ ಪತ್ರಿಕಾ ಲೋಕ (೪೧) - ಕಾಸರಗೋಡು ದರ್ಪಣ

ಕನ್ನಡ ಪತ್ರಿಕಾ ಲೋಕ (೪೧) - ಕಾಸರಗೋಡು ದರ್ಪಣ

ದಿವಾಣ ಕುಟುಂಬದ "ದರ್ಪಣ" / "ಕಾಸರಗೋಡು ದರ್ಪಣ"

ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಕುಂಬಳೆ ಬಳಿಯ ಎಡನಾಡು ಗ್ರಾಮದಿಂದ ಹೊರಬರುತ್ತಿದ್ದ ಮಾಸಪತ್ರಿಕೆ " ದರ್ಪಣ" ಅಥವಾ "ಕಾಸರಗೋಡು ದರ್ಪಣ".

ಹಿರಿಯ ಕವಿ, ಸಾಹಿತಿ, ಕನ್ನಡ ಹೋರಾಟಗಾರ ಗಣಪತಿ ದಿವಾಣ ಅವರು ಈ ಪತ್ರಿಕೆಯ ಗೌರವ ಸಂಪಾದಕರಾಗಿ, ಮಾರ್ಗದರ್ಶಕರಾಗಿದ್ದರು. ಇವರ ಮಕ್ಕಳಾದ ಶ್ರೀರಾಮ ದಿವಾಣ ಸಂಪಾದಕರು ಹಾಗೂ ರವಿರಾಜ ದಿವಾಣ ಪ್ರಕಾಶಕರಾಗಿದ್ದರು.

೧೯೯೩ರ ಮೇ ತಿಂಗಳ ಸಂಚಿಕೆಯೊಂದಿಗೆ "ದರ್ಪಣ" ಆರಂಭವಾಯಿತು. ‘ದರ್ಪಣ' ಎಂಬ ಹೆಸರಿನಿಂದ ಖಾಸಗೀ ಮಾಸಪತ್ರಿಕೆಯಾಗಿ ಆರಂಭವಾದ ಪತ್ರಿಕೆ, ವರ್ಷದ ಬಳಿಕ ನೋಂದಣಿಗೊಂಡು "ಕಾಸರಗೋಡು ದರ್ಪಣ" ಎಂದು ಹೆಸರು ಬದಲಾವಣೆಯೊಂದಿಗೆ ಮುಂದುವರಿಯಿತು.

ನಾಲ್ಕು ಪುಟಗಳ ಪತ್ರಿಕೆ, ಸೀತಾಂಗೋಳಿಯ ಎಸ್ ಕೆ ಎಸ್ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿತ್ತು. ಪತ್ರಿಕೆಯಲ್ಲಿ  ಅಖಿಲ ಕರ್ನಾಟಕದ ಬರಹಗಾರರ ಸಣ್ಣ ಕಥೆ, ಕವನ, ಹನಿಕವನ, ಚುಟುಕು, ನಗೆಹನಿ, ಪುಸ್ತಕ ಪರಿಚಯ, ಲೇಖನ ಇತ್ಯಾದಿಗಳು ಪ್ರಕಟವಾಗುತ್ತಿತ್ತು. ಒಂದೂವರೆ ವರ್ಷ ನಡೆದ ಪತ್ರಿಕೆ ಬಳಿಕ ಸ್ಥಗಿತಗೊಂಡಿತು.

~ ಶ್ರೀರಾಮ ದಿವಾಣ, ಉಡುಪಿ