ಕನ್ನಡ ಪತ್ರಿಕಾ ಲೋಕ (೭) - ನಾಡಪ್ರೇಮಿ

ಕನ್ನಡ ಪತ್ರಿಕಾ ಲೋಕ (೭) - ನಾಡಪ್ರೇಮಿ

*ಎಂ. ವಿ. ಬಳ್ಳುಳ್ಳಾಯರ "ನಾಡಪ್ರೇಮಿ"*

ತುಳುನಾಡಿನ ಅತೀ ಮುಖ್ಯ ಭಾಗವಾಗಿದ್ದ ಕಾಸರಗೋಡು ಪ್ರದೇಶವನ್ನು ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಕರ್ನಾಟಕದ ಜೊತೆಗೆ ಸೇರಿಸುವ ಬದಲು ಅನ್ಯಾಯವಾಗಿ, ಮೋಸದಿಂದ ಕೇರಳದ ಜೊತೆಗೆ ಸೇರಿಸಿದಾಗ ಕಾಸರಗೋಡಿನಲ್ಲಿ ಆರಂಭವಾದ, ನಡೆದ ನಿರಂತರವಾದ ಕನ್ನಡಪರವಾದ ಚಳುವಳಿಯ ಮುಖವಾಣಿಯಂತಿದ್ದ ಸಾಪ್ತಾಹಿಕವೇ "ನಾಡಪ್ರೇಮಿ".

"ನಾಡಪ್ರೇಮಿ" ಆರಂಭವಾಗಲು ಮೂಲ ಮತ್ತು ಮುಖ್ಯ ಕಾರಣಕರ್ತರು "ಕಾಸರಗೋಡಿನ ಶ್ರೀಗಂಧ" ಕಳ್ಳಿಗೆ ಮಹಾಬಲ ಭಂಡಾರಿಯವರು. ಕಾಸರಗೋಡು ಕನ್ನಡಿಗರ ಒಂದು ದಶಕದ ಚಳುವಳಿಯ ಬಳಿಕ ಕೇಂದ್ರ ಸರಕಾರ, "ಮಹಾಜನ ಆಯೋಗ" ವನ್ನು ನೇಮಿಸಿದ ಬಳಿಕ ಆರಂಭಗೊಂಡು; ಒಂದು ದಶಕಕ್ಕೂ ಅಧಿಕ ಕಾಲ ಪ್ರಕಟವಾದ "ನಾಡಪ್ರೇಮಿ" ಕನ್ನಡಿಗರ ಮನೆಮಾತಾಗಿದ್ದ ಸಾಪ್ತಾಹಿಕವಾಗಿತ್ತು. 

1964ರ ನವೆಂಬರ್ ಒಂದರಂದು ಆರಂಭವಾದ "ನಾಡಪ್ರೇಮಿ", ಬಿಡುಗಡೆಗೊಂಡದ್ದು ಮಧೂರು ಶ್ರೀ ಮಹಾಗಣಪತಿಯ ಸನ್ನಿಧಿಯಲ್ಲಿ. " ಕಾಸರಗೋಡು - ಕನ್ನಡನಾಡು" ಎಂಬ ಘೋಷಣೆ ಮತ್ತು "ನಮ್ಮ ಧ್ಯೇಯ: ಕಾಸರಗೋಡನ್ನು ಮೈಸೂರಿನೊಂದಿಗೆ ವಿಲೀನೀಕರಿಸುವುದು" ಎಂಬ ಧ್ಯೇಯವಾಕ್ಯ "ನಾಡಪ್ರೇಮಿ" ಯದ್ದಾಗಿತ್ತು.

ಎಂ. ವಿ. ಬಳ್ಳುಳ್ಳಾಯರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದ ನಾಡಪ್ರೇಮಿ, ಪಿ. ವಿ. ಪ್ರಭುಗಳ ಪ್ರಕಾಶ್ ಪ್ರಿಂಟರ್ಸ್ ಕಾಸರಗೋಡು ಇಲ್ಲಿ ಮುದ್ರಣಗೊಳ್ಳುತ್ತಿತ್ತು. ಕಾಸರಗೋಡು ನಗರದ ಎಸ್. ವಿ. ಟಿ. ರಸ್ತೆಯ ಕಟ್ಟಡವೊಂದರಲ್ಲಿ ಪತ್ರಿಕಾಲಯವಿತ್ತು. ಆರಂಭದಲ್ಲಿ ಕೆಲ ವರ್ಷ ಟಿ. ಎಸ್. ಕಾರ್ಯಹಳ್ಳಿ, ಬಳಿಕ ಕೆಲ ವರ್ಷ ಕೆ. ಆರ್. ಸಾರಂಗ, ನಂತರ ಕೆಲ ವರ್ಷ ಕೆ. ಜಿ. ಕೆ. ಭಟ್ ಅವರು ವ್ಯವಸ್ಥಾಪಕ ಸಂಪಾದಕರಾಗಿಯೂ, ಕಥೆಗಾರರಾದ ಎಂ. ವ್ಯಾಸ, ಕೆ. ಪಿ. ಶಿವ ರಾವ್ ಉಪ ಸಂಪಾದಕರುಗಳಾಗಿಯೂ, ಆಚಾರ್ ಅರವಿಂದ ಕುಮಾರ್ ಅವರು ಪ್ರಸರಣಾ ವಿಭಾಗದ ವ್ಯವಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಕೆ. ಪಿ. ಪಾಂಡುರಂಗ ರಾವ್, ಬಿ. ಸುಧಾಕರ, ಬಿ. ಪ್ರಭಾಕರ ಹಾಗೂ ಇತರ ಕೆಲವರೂ ಪತ್ರಿಕೆಯ ಆಡಳಿತದೊಂದಿಗೆ ಪ್ರಸರಣಾ ವಿಭಾಗದ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ್ದರು. ಗಣಪತಿ ದಿವಾಣ ಹಾಗೂ ಬೈಲಂಗಡಿ ದಾಮೋದರ ಅಗ್ಗಿತ್ತಾಯ (ಡಿ. ಎ. ಬೈಲಂಗಡಿ) ಅವರು ಸಲಹೆಗಾರರಾಗಿಯೂ ಇದ್ದರು. ದಾಮೋದರ ಅಗ್ಗಿತ್ತಾಯರು ಅವಿವಾಹಿತರಾಗಿದ್ದು ನಾಡಪ್ರೇಮಿಗಾಗಿ ಪೂರ್ಣಾವಧಿ ಸಕ್ರಿಯವಾಗಿಯೇ ತಮ್ಮನ್ನು ತೊಡಗಿಸಿಕೊಂಡಿದ್ದರು.

ಆರಂಭಿಕ ವರ್ಷಗಳಲ್ಲಿ ನಾಡಪ್ರೇಮಿಯ ಬಿಡಿ ಸಂಚಿಕೆಯ ಬೆಲೆ ಹತ್ತು ಪೈಸೆಯಾಗಿತ್ತು. ವರ್ಷಕ್ಕೆರಡು ವಿಶೇಷ ಸಂಚಿಕೆಗಳನ್ನು ("ಯುಗಪುರುಷ" ಮಾಸಿಕದ ಮಾದರಿಯಲ್ಲಿ), ಹುಟ್ಟು ಹಬ್ಬದ  ವಿಶೇಷ ಸಂಚಿಕೆ ಮತ್ತು ಸ್ವಾತಂತ್ರ್ಯೋತ್ಸವ ವಿಶೇಷ ಸಂಚಿಕೆಗಳನ್ನು  ಪ್ರಕಟಿಸಲಾಗುತ್ತಿತ್ತು. ಇದಕ್ಕೆ 25 ಪೈಸೆ ಬೆಲೆ ನಿಗದಿಪಡಿಸಲಾಗುತ್ತಿತ್ತು.

"ನಾಡಪ್ರೇಮಿ"ಯ ಮೂಲಕ ಎಂ. ವಿ. ಬಳ್ಳುಳ್ಳಾಯರೂ ಕಾಸರಗೋಡಿನಲ್ಲಿ ಜನಪ್ರಿಯರಾಗಿದ್ದರು. ಬಳ್ಳುಳ್ಳಾಯರನ್ನು ಅಂದೂ, ಇಂದೂ ಸಹ "ನಾಡಪ್ರೇಮಿ ಬಳ್ಳುಳ್ಳಾಯ" ರೆಂದೇ ಕರೆಯಲಾಗುತ್ತಿದೆ. ಇದು ಬಳ್ಳುಳ್ಳಾಯರ ಹಾಗೂ ನಾಡಪ್ರೇಮಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ. 1939ರ ನವೆಂಬರ್ 30ರಂದು ಜನಸಿದ ಎಂ. ವಿ. ಬಳ್ಳುಳ್ಳಾಯರು ರಂಗಭೂಮಿ ನಟರಾಗಿ, ವಾಯಲಿನ್ ವಾದಕರಾಗಿ, ಕವಿಯಾಗಿ, ಲೇಖಕರಾಗಿ, ಕಾಸರಗೋಡಿನ ಕನ್ನಡ ಪರ ಚಳುವಳಿಯ ಅಗ್ರಗಣ್ಯ ನಾಯಕರಲ್ಲೊಬ್ಬರಾಗಿ ಖ್ಯಾತಿಪಡೆದವರು. ಪತ್ರಿಕೋದ್ಯಮದಲ್ಲಿ ಎಂ.ಎ. ಮಾಡಿದ್ದ ಬಳ್ಳುಳ್ಳಾಯರು, "ನಾಡಪ್ರೇಮಿ"ಯ ಪ್ರಕಟಣೆಯನ್ನು ಸ್ಥಗಿತಗೊಳಿಸಿದ ಬಳಿಕ "ಪ್ರಜಾವಾಣಿ" ಮತ್ತು "ಡೆಕ್ಕನ್ ಹೆರಾಲ್ಡ್" ಪತ್ರಿಕೆಗಳಿಗೆ ಕಾಸರಗೋಡು ಜಿಲ್ಲಾ ವರದಿಗಾರರಾಗಿ ವೃತ್ತಿ ನಿರತರಾಗಿದ್ದರು.

~ *ಶ್ರೀರಾಮ ದಿವಾಣ*