ಕನ್ನಡ ಬೋಧನೆ ಸ್ವಾಗತಾರ್ಹ
ಬಿ ಇ, ಬಿಟೆಕ್ ನಂತಹ ತಾಂತ್ರಿಕ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅವರದ್ದೇ ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಯಲ್ಲಿ ಬೋಧನೆ (ಸಂವಹನ) ಮಾಡಿ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿ ಇ) ಕಾಲೇಜುಗಳಿಗೆ ಮಹತ್ವದ ಸೂಚನೆ ನೀಡಿದೆ. ಮಾತೃಭಾಷೆಯಲ್ಲೆ ಬೋಧನೆ, ಕಲಿಕೆ ವಿಧಾನ ಮತ್ತು ಬೋಧನಾ ವಸ್ತುಗಳನ್ನು ರೂಪಿಸುವುದರಿಂದ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಹುದು ಎಂದೂ ಪರಿಷತ್ ಹೇಳಿದೆ. ತಾಯ್ನುಡಿಯಲ್ಲಿ ಶಿಕ್ಷಣ ಪಡೇಯುವ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ ಎನ್ನುವುದನ್ನು ತಜ್ಞರ ಅನೇಕ ವರದಿಗಳು ಸಾಕ್ಷಿ ಸಮೇತ ಸಾಬೀತು ಪಡಿಸಿವೆ. ಈ ದಿಸೆಯಲ್ಲಿ ಎ ಐ ಸಿ ಟಿ ಇ ಯ ಈ ಸೂಚನೆ ತುಂಬ ಅರ್ಥಪೂರ್ಣ.
ಕಲಿಕೆ ಶಿಕ್ಷೆಯಾಗಬಾರದು. ನಲಿ-ಕಲಿ ಎನ್ನುವುದು ಯುಕ್ತವಾದ ಮಾತು. ಖುಷಿಯೊಂದಿಗೆ ಕಲಿತ ಮಕ್ಕಳು ಹೊಸತನ್ನು ಸೃಷ್ಟಿಸಬಲ್ಲರು. ಕಲಿಕೆಯ ಜತೆ ಖುಷಿ ಮೇಳೈಸಬೇಕೆಂದರೆ ಯುಕ್ತ ಬೋಧನಾ ಮಾಧ್ಯಮವೇ ಮಾರ್ಗ. ಶಿಕ್ಷಕರು ಕಲಿಸುವ ಪಾಠ ಸುಲಭವಾಗಿ ಅರ್ಥವಾದರೆ ಮಾತ್ರ ವಿದ್ಯಾರ್ಥಿಗಳಲ್ಲಿ ಕಲಿಕೆಯ ಖುಷಿ ಮೂಡಲು ಸಾಧ್ಯ. ಅಂಥ ಸುಲಭ ಗ್ರಹಿಕೆ ಸಾಧ್ಯವಾಗುವುದು ಮಾತೃಭಾಷೆ ಒಂದರಿಂದಲೇ ಎನ್ನುವುದು ಸ್ಪಷ್ಟ. ಕನ್ನಡ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳು ತುಂಬ ಸಂಪನ್ನವಾಗಿವೆ. ವಿಜ್ಞಾನ, ತಂತ್ರಜ್ಞಾನವನ್ನೂ ಸರಳವಾಗಿ ಹೇಳಿಕೊಡುವಷ್ಟು ಸಮೃದ್ಧಿ ಇವುಗಳಲ್ಲಿದೆ. ಭಾಷೆಯ ಈ ಸಾಮರ್ಥ್ಯ ಬಳಸಿಕೊಳ್ಳುವುದರಲ್ಲಿ ಸಾರ್ಥಕತೆ ಇರಲಿ. ಕೀಳಿರಿಮೆ ಬೇಕಿಲ್ಲ. ತಂತ್ರಜ್ಞಾನವನ್ನು ಇಂಗ್ಲಿಷ್ ನಲ್ಲಿ ಕಲಿಸಿದರೆ ಮಾತ್ರ ಪರಿಪೂರ್ಣ ಎನ್ನುವುದು ತಪ್ಪು ಗ್ರಹಿಕೆ. ಅಕ್ಷರದ ಜ್ಞಾನವೇ ಇರದ ವ್ಯಕ್ತಿಯೊಬ್ಬ ಮೋಟಾರ್ ಸೈಕಲ್, ಮೋಟಾರ್ ವಾಹನಗಳ ಸಂಕೀರ್ಣ ಯಂತ್ರಗಳನ್ನು ಬಿಚ್ಚಿ ಸುಲಲಿತವಾಗಿ ರಿಪೇರಿ ಮಾಡುವುದನ್ನು ಗಲ್ಲಿಗಳಲ್ಲಿ ಕಾಣುವುದುಂಟು. ಅಂಥ ವ್ಯಕ್ತಿಗಳಿಗೆ ಅದ್ಯಾವ ಇಂಗ್ಲಿಷ್ ಬೋಧೆಯೂ ಇರುವುದಿಲ್ಲ. ಆತನಲ್ಲಿ ಇರುವುದು ಕೇವಲ ‘ತಾಂತ್ರಿಕ ಜ್ಞಾನ' ಮಾತ್ರ. ಆ ಜ್ಞಾನವನ್ನು ಆತ ಮಾತೃಭಾಷೆ ಮೂಲಕವೇ ಸಂಪಾದಿಸಿರುತ್ತಾನೆ ಎನ್ನುವುದು ದಿಟ. ಈ ಸೂತ್ರವೇ ಬಿ ಇ, ಬಿಟೆಕ್ ವಿದ್ಯಾರ್ಥಿಗಳ ಕಲಿಕೆಗೆ ಮಾದರಿಯಾದರೆ ತಪ್ಪೇನಿಲ್ಲ.
ಗ್ರಾಮೀಣ ಹಾಗೂ ನಗರ ಪ್ರದೇಶದ ಕೆಲವು ಮಕ್ಕಳಿಗೆ ಇಂಗ್ಲಿಷ್ ಭಾಷೆ, ತೊಡಕು ಇರುತ್ತದೆ. ತಾಂತ್ರಿಕ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಂಡರೂ ಈ ಭಾಷೆ ಅವರಿಗೆ ಅಡ್ಡಿಯಾಗುತ್ತದೆ. ಅನೇಕರು ಇಂಗ್ಲಿಷ್ ಗೆ ಹೆದರಿ ಶಿಕ್ಷಣ ಮೊಟಕುಗೊಳಿಸುವುದುಂಟು. ಇದು ಆಗಬಾರದು. ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಬೋಧಿಸಿದಾಗ ಇಂತಹ ಎಡವಟ್ಟುಗಳು ತಪ್ಪುತ್ತವೇ. ತಂತ್ರಜ್ಞಾನದ ಕನ್ನಡ ಬೋಧನೆ ಎಂದರೆ ವಿಷಯದ ತರ್ಜುಮೆಯಲ್ಲ. ಇರುವ ಜ್ಞಾನವನ್ನು ಕನ್ನಡದ ಮೂಲಕ ದಾಟಿಸುವುದು. ಕನ್ನಡದ ಮೂಲಕ ಐ ಎ ಎಸ್ ಪಾಸ್ ಮಾಡಿದ ನಿದರ್ಶನಗಳಿರುವಾಗ ಕನ್ನಡದ ಬೋಧೆ ತಂತ್ರಜ್ಞಾನ, ವಿಜ್ಞಾನ ಶಿಕ್ಷಣಕ್ಕೂ ಅಗತ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಮ್ಮ ವಿದ್ಯಾರ್ಥಿಗಳು ಇಂಗ್ಲಿಷ್ ಅನ್ನೂ ಕಲಿಯಲಿ, ಆಸಕ್ತಿ ಇರುವವರು ನೂರು ಭಾಷೆ ಕಲಿಯಲಿ. ಪ್ರಶ್ನೆ, ವಿದ್ಯಾರ್ಥಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಕಲಿಕೆ ಇರಬೇಕಷ್ಟೇ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೮-೦೪-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ