ಕನ್ನಡ ಭಾಷೆ, ನಾಡು ಮತ್ತು ಕನ್ನಡಿಗನ ಕರ್ತವ್ಯ

ಕನ್ನಡ ಭಾಷೆ, ನಾಡು ಮತ್ತು ಕನ್ನಡಿಗನ ಕರ್ತವ್ಯ

ಕರ್ನಾಟಕ ರಾಜ್ಯೋತ್ಸವದ ತಿಂಗಳು ಇಂದು ಮುಗಿಯುತ್ತಿದೆ. ಆದರೆ ಕನ್ನಡ ಭಾಷೆ ಮತ್ತು ನಾಡನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ನಡೆಯುತ್ತಲೇ ಇರಬೇಕಾದ ಅನಿವಾರ್ಯತೆ ಇದೆ. ಸಂಪದದಲ್ಲಿ ಈ ನವೆಂಬರ್ ತಿಂಗಳಲ್ಲಿ ಈಗಾಗಲೇ ನಾವು ಹಲವಾರು ಕನ್ನಡ ಭಾಷಾ ಪರ, ಕನ್ನಡಕ್ಕಾಗಿ ದುಡಿದವರ ಬಗ್ಗೆ, ಕನ್ನಡ ಪುಸ್ತಕದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಮುಂದೆಯೂ ಕನ್ನಡ ಭಾಷೆಗಾಗಿ ನಮ್ಮ ಪ್ರೀತಿ ಮತ್ತು ಕಳಕಳಿ ಮುಂದುವರೆಯಲಿದೆ. ಇನ್ನೂ ಆಗಬೇಕಾದ ಕೆಲವು ಕೆಲಸಗಳ ಬಗ್ಗೆ ಪುನರ್ ಮನನ ಮಾಡುವ ಸಮಯ ಬಂದಿದೆ.

ನವೆಂಬರ್ ೧ ಎಂದ ಕೂಡಲೇ ನಾವು ಕನ್ನಡದ ಕಟ್ಟಾ ಅಭಿಮಾನಿಗಳಾಗುತ್ತೇವೆ. ಈ ಹಿಂದೆಯೇ ಬರೆದಂತೆ ಕೆಲವರಿಗೆ ಹೊಟ್ಟೆ ಪಾಡಿನ ದಾರಿ ಆಗಿರಲೂ ಬಹುದು. ಆದರೆ ಒಂದಲ್ಲಾ ಒಂದು ರೀತಿಯಲ್ಲಿ ಕನ್ನಡದ ಪರವಾಗಿಯೇ ಕೂಗು ಏಳುತ್ತದೆ. ತಿಂಗಳಿಡೀ ಕನ್ನಡ, ಕನ್ನಡ ಎಂದು ಬೊಬ್ಬೆ ಹಾಗುವ ನಾವು ನವೆಂಬರ್ ಮುಗಿಯುತ್ತಿದ್ದಂತೇ ಶಾಂತವಾಗುತ್ತೇವೆ. ಸುದೀರ್ಘ ಹನ್ನೊಂದು ತಿಂಗಳ ನಿದ್ರೆಗೆ ಜಾರಿ ಬಿಡುತ್ತೇವೆ. ಹಾಗೆ ಆಗ ಬಾರದು. ಕನ್ನಡದ ಕೆಲಸಗಳು ನಿರಂತರ ನಡೆಯುತ್ತಲೇ ಇರಬೇಕು. ಹೊರಗಡೆ ಕೆಲಸಗಳು ಕಾಣಿಸದೇ ಹೋದರೂ ಕನ್ನಡದ ನದಿ ಗುಪ್ತಗಾಮಿನಿಯಾಗಿಯಾದರೂ ಹರಿಯುತ್ತಲೇ ಇರಬೇಕು. ಇದನ್ನು ಕನ್ನಡದ ಬಗ್ಗೆ ಪ್ರೀತಿ ಮತ್ತು ಕಳಕಳಿ ಇರುವ ಎಲ್ಲರೂ ಮಾಡಬೇಕು. ಆಗಲೇ ಕನ್ನಡ ಭಾಷೆ, ಸಂಸ್ಕೃತಿ ಮತ್ತು ರಾಜ್ಯ ಸಮೃದ್ಧವಾಗುತ್ತದೆ.

ನಾವು ಭಾಷಾಧಾರಿತ ರಾಜ್ಯ ವ್ಯವಸ್ಥೆಯಲ್ಲಿ ವಿಂಗಡನೆಗೊಂಡ ಬಳಿಕ ಹಲವಾರು ಸಮಸ್ಯೆಗಳು ತಲೆದೋರಿದವು. ಈಗ ಕೇರಳ ರಾಜ್ಯಕ್ಕೆ ಸೇರಿ ಹೋದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಬಹಳಷ್ಟು. ಅದೇ ಬೆಳಗಾವಿ ಕಡೆಗೆ ಹೋದರೆ ಮಹಾರಾಷ್ಟ್ರ ಗಡಿಯಲ್ಲಿನ ಕೆಲವು ಭಾಗಗಳಲ್ಲಿ ಮರಾಠಿ ಭಾಷೆಯದ್ದೇ ಪಾರಮ್ಯ. ಮಹಾರಾಷ್ಟ್ರದ ಗಡಿಯಲ್ಲಿ ನಿಧಾನವಾಗಿ ಭಾಷೆಯ ತಾರತಮ್ಯದ ಕೂಗು ಜೋರಾಗುತ್ತಿದೆ. ಇವೆಲ್ಲಾ ನಿಲ್ಲಬೇಕು. ನಾವಾಡುವ ಭಾಷೆ ಯಾವುದೇ ಇರಲಿ, ನಾವು ಭಾರತಾಂಬೆಯ ಮಕ್ಕಳು ಎಂಬ ನಿಲುವು ನಮ್ಮದಾಗಬೇಕು. ನಮ್ಮ ರಾಜ್ಯದಲ್ಲಿ ನಾವು ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು. ಅನ್ಯ ಭಾಷಾ ಹೇರಿಕೆಯನ್ನು ನಾವು ನಿಲ್ಲಿಸಬೇಕು. ಹೊಸದಾದ ಭಾಷೆ ಕಲಿಯುವುದಾದರೆ ಅಡ್ಡಿ ಇಲ್ಲ. ಆದರೆ ನಮ್ಮ ಕನ್ನಡಕ್ಕೆ ಅದು ಕುತ್ತಾಗಬಾರದು. 

ಕನ್ನಡ ಭಾಷೆ ಮಾತನಾಡಲು, ಬರೆಯಲು ಗೊತ್ತಿರುವವನೊಬ್ಬ ಕರ್ನಾಟಕ ರಾಜ್ಯದಲ್ಲೇ ಅನ್ಯಭಾಷಿಕರ ಜೊತೆ ಅವರದ್ದೇ ಭಾಷೆಯಲ್ಲಿ ಮಾತನಾಡಿದರೆ ಏನು ಸಾಧಿಸಿದಂತಾಯಿತು. ಆ ಅನ್ಯಭಾಷಿಕ ಯಾವತ್ತೂ ನಮ್ಮ ಭಾಷೆ ಕಲಿಯುವುದೇ ಇಲ್ಲ. ಅದರ ಬದಲು ಅವನ ಬಳಿ ಸಾಧ್ಯವಾದಷ್ಟು ಮಟ್ಟಿಗೆ ಕನ್ನಡ ಭಾಷೆಯಲ್ಲೇ ಸಂವಹನ ಮಾಡಿದರೆ ನಿಧಾನವಾಗಿ ಅವನು ಕನ್ನಡ ಕಲಿಯುತ್ತಾನೆ. ಕಡೇ ಪಕ್ಷ ವ್ಯವಹಾರಿಕವಾಗಿ ಬೇಕಾಗುವಷ್ಟಾದರೂ ಕನ್ನಡ ಕಲಿಯುತ್ತಾನೆ. ಆದರೆ ಇದು ಪ್ರೀತಿಯಿಂದ ಆಗಬೇಕು. ಅವನ ಮೇಲೆ ದಬ್ಬಾಳಿಕೆ ಮಾಡಿ, ನೀನು ಕನ್ನಡವನ್ನೇ ಮಾತನಾಡಬೇಕು ಎಂದು ಬಲವಂತ ಮಾಡಬಾರದು. ಇದರ ಪರಿಣಾಮ ನಾವು ಬೇರೆ ರಾಜ್ಯಕ್ಕೆ ಹೋದರೆ ನಮಗೂ ಅದೇ ರೀತಿ ಬಲವಂತದ ಅನುಭವವಾಗುತ್ತದೆ. ಕನ್ನಡ ಬರುವ ಕನ್ನಡಿಗರೇ ಅನ್ಯಭಾಷೆ ಮಾತನಾಡುತ್ತಾ ಬದುಕುವವರನ್ನು ನಾವು ಬಹಳಷ್ಟು ಮಂದಿಯಲ್ಲಿ ಕಾಣುತ್ತೇವೆ. ಇದು ಸರ್ವಥಾ ತಪ್ಪು. ನಮ್ಮ ಭಾಷೆಯನ್ನು ನಾವೇ ಪ್ರೀತಿಸದಿದ್ದರೆ ಇನ್ನು ಯಾರು ಬಯಸುತ್ತಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಯಥೇಚ್ಛ ಕನ್ನಡ ಬಳಸಿ, ಬೆಳೆಸಿ.

ಸರಕಾರಗಳೂ ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಸರಕಾರಿ ನೌಕರಿಯಲ್ಲಿ ಸಾಧ್ಯವಾದಷ್ಟು ಮೀಸಲಾತಿಯನ್ನು (ಅಂಕಗಳನ್ನೂ ಪರಿಗಣನೆಗೆ ತೆಗೆದುಕೊಂಡು) ತರಬೇಕು. ಇದರಿಂದ ನೌಕರಿಯ ಆಸೆಗಾದರೂ ಒಂದಷ್ಟು ಜನ ಕನ್ನಡ ಮಾಧ್ಯಮದಲ್ಲಿ ಓದುವ ಸಾಧ್ಯತೆ ಇದೆ. ಈಗಲೂ ಕನ್ನಡ ಮಾಧ್ಯಮಕ್ಕೆ ಸರಕಾರಿ ನೌಕರಿಯಲ್ಲಿ ಸಣ್ಣದಾದ ಮೀಸಲಾತಿ ಇದೆ ಎಂದು ನನ್ನ ಅನಿಸಿಕೆ. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಖಾಸಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳ ರೀತಿ ಅಭಿವೃದ್ಧಿ ಪಡಿಸಬೇಕು. ಆ ಮೂಲಕ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳು ಬರುವಂತೆ ಮಾಡ ಬಹುದು. ಆಂಗ್ಲ ಭಾಷೆಯನ್ನು ಒಂದು ವಿಷಯವಾಗಿ ಕಡ್ಡಾಯವಾಗಿ ಕಲಿಸಬೇಕು. ಕನ್ನಡದೊಂದಿಗೆ ಚೆನ್ನಾಗಿ ಇಂಗ್ಲೀಷ್ (spoken english) ಮಾತಾಡುವುದನ್ನೂ ಕಲಿಸಬೇಕು. ಇದರಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಎಂಬ ಭೂತವನ್ನು ಹೊಡೆದೋಡಿಸುವ ಆತ್ಮ ವಿಶ್ವಾಸ ಬೆಳೆಯುತ್ತದೆ. ನಮ್ಮ ಭಾಷೆಯನ್ನು ಮರೆಯದೇ ಉಳಿದಂತೆ ಎಷ್ಟು ಭಾಷೆಗಳನ್ನು ಕಲಿತರೂ ಅದು ಒಳ್ಳೆಯದೇ.

ಭಾಷಾ ಉಳಿಕೆಗೆ ಕನ್ನಡ ಪುಸ್ತಕ, ಕನ್ನಡ ಚಲನ ಚಿತ್ರ, ಕನ್ನಡ ಪತ್ರಿಕೆ, ಕನ್ನಡ ನಾಟಕ, ಕನ್ನಡ ಯಕ್ಷಗಾನ ಮೊದಲಾದವುಗಳಿಗೆ ಉತ್ತೇಜನ ನೀಡಬೇಕು. ಓರ್ವ ಸಣ್ಣ ಪ್ರಕಾಶಕ ಅಥವಾ ಸಣ್ಣ ಪತ್ರಿಕೆಯ ಸಂಪಾದಕರ ಪುಸ್ತಕ ಅಥವಾ ಪತ್ರಿಕೆಯನ್ನು ಬೆಳೆಸಲು ಸರಕಾರ ಸಾಧ್ಯವಾದಷ್ಟು ಸಹಕಾರ ನೀಡಬೇಕು. ಅದು ಜಾಹೀರಾತು ಮೂಲಕವೂ ಆಗಬಹುದು, ಸಹಾಯಧನದ ಮೂಲಕವೂ ಆಗಬಹುದು. ಇಂತಹ ಸಹಕಾರದಿಂದ ಕನ್ನಡ ಪತ್ತಿಕೆ ಅಥವಾ ಪುಸ್ತಕ ಪ್ರಕಾಶಕ ತಲೆ ಎತ್ತಿ ನಿಂತರೆ ಕನ್ನಡ ಭಾಷಾ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಬಹುದಾಗಿದೆ. ಕೊರೋನಾ ಸಂಕಷ್ಟಗಳ ನಡುವೆ ಕನ್ನಡ ಪತ್ರಿಕೆಗಳ ಸ್ಥಿತಿ ಶೋಚನೀಯವಾಗಿದೆ. ಕನ್ನಡದ ಪತ್ರಕರ್ತರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಬರವಣಿಗೆಯನ್ನೇ ಬದುಕು ಮಾಡಿಕೊಂಡಿದ್ದವರ ಜೀವನ ಹದಗೆಟ್ಟುಹೋಗಿದೆ. ಅವರನ್ನು ಮೇಲೆತ್ತುವ ಕೆಲಸ ಆಗಬೇಕಾಗಿದೆ. ಒಂದು ಪತ್ರಿಕೆ ನಿಂತು ಹೋದರೆ ಅದನ್ನು ನಂಬಿದ ಹಲವಾರು ಜೀವಗಳು ಬೀದಿಗೆ ಬೀಳುತ್ತವೆ. ಕನ್ನಡ ಅಕ್ಷರವನ್ನು ನಂಬಿದ ಯಾವನೇ ಪತ್ರಕರ್ತ ಅಥವಾ ಲೇಖಕನ ಬಾಳು ಹಾಳಾಗಬಾರದು. ಒಬ್ಬ ಕನ್ನಡಿಗ ಒಂದು ಪತ್ರಿಕೆಯನ್ನು ಖರೀದಿಸಿ ಓದಿದರೆ ಅವನ ಪಾಕೆಟ್ ಗೆ ಅದು ಖಂಡಿತಾ ಭಾರವಾಗಲಾರದು. ತಿಂಗಳಿಗೆ ಅಬ್ಬಬ್ಬಾ ಎಂದರೆ ಇನ್ನೂರು ರೂಪಾಯಿ ಅಧಿಕ ವೆಚ್ಚವಾದೀತು ಅಷ್ಟೇ. ಇದು ಕನ್ನಡವನ್ನೇ ನಂಬಿದ ಒಬ್ಬ ಪತ್ರಕರ್ತ ಅಥವಾ ಲೇಖಕನ ಬಾಳಿನಲ್ಲಿ ಹೊಸ ಬೆಳಕು ಮೂಡಿಸಬಲ್ಲುದು. ಇದೇ ರೀತಿ ತಿಂಗಳಿಗೊಂದು ಕನ್ನಡ ಚಲನಚಿತ್ರ, ನಾಟಕ, ಪುಸ್ತಕ, ಯಕ್ಷಗಾನ ಹೀಗೆ ನಮ್ಮ ಆದ್ಯತಾ ಪಟ್ಟಿಯನ್ನು ಬೆಳೆಸುತ್ತಾ ಹೋದರೆ ಕನ್ನಡ ಭಾಷೆ, ನುಡಿ ಹಾಗೂ ಸಂಸ್ಕೃತಿ ಸಂಮೃದ್ಧವಾಗುವುದರಲ್ಲಿ ಸಂಶಯವೇ ಇಲ್ಲ. ನಾವು ದೊಡ್ಡ ಮನಸ್ಸು ಮಾಡಬೇಕಷ್ಟೇ.

ಇನ್ನಾದರೂ ರಾಜ್ಯೋತ್ಸವದ ಸಂಭ್ರಮ ನವೆಂಬರ್ ತಿಂಗಳಿಗೆ ಮುಗಿಯದಿರಲಿ. ಇಡೀ ವರ್ಷ ಮುಂದುವರೆಯಲಿ. ಒಂದಲ್ಲಾ ಒಂದು ಕನ್ನಡ ಪರವಾದ ಕೆಲಸ ಮಾಡೋಣ. ಕಡೇ ಪಕ್ಷ ಕನ್ನಡ ಮಾತಾಡೋಣ, ಕನ್ನಡ ಪತ್ರಿಕೆ, ಪುಸ್ತಕ ಓದೋಣ. ಕನ್ನಡ ಭಾಷೆ, ನಾಡು-ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸೋದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಲಿ.    

ಚಿತ್ರ ಕೃಪೆ: ಅಂತರ್ಜಾಲ ತಾಣ