ಕನ್ಯಾ ಮರಿಯಮ್ಮ ಜನ್ಮದಿನಾಚರಣೆ

ಕನ್ಯಾ ಮರಿಯಮ್ಮ ಜನ್ಮದಿನಾಚರಣೆ

ಸೆಪ್ಟೆಂಬರ್ 8 ಕರಾವಳಿ ಭಾಗದಲ್ಲಿ ಕೆಥೋಲಿಕ್ ಕ್ರಿಶ್ಚಿಯನ್ನರಿಗೆ ಸಂಭ್ರಮದ ಹಬ್ಬ. ಅಂದು ಮರಿಯಮ್ಮ ಜನ್ಮದಿನಾಚರಣೆ ಹಬ್ಬ ಹಾಗೂ ಹೊಸ ಅಕ್ಕಿ ಊಟ ಅಥವಾ ಹೊಸ್ತಾರೋಗಣೆ. ಬೇರೆ ಬೇರೆ ಊರಿನಲ್ಲಿ ದುಡಿಯುವ ಕುಟುಂಬದ ಎಲ್ಲಾ  ಸದಸ್ಯರು ಅಂದು ಮೂಲ ಮನೆಯಲ್ಲಿ ಸೇರಿ ಒಟ್ಟಿಗೇ ಸೇರುವುದು ವಾಡಿಕೆ.

ಕನ್ಯಾ ಮರಿಯಮ್ಮ ಯೇಸುವಿನ ತಾಯಿ. ಅವರು ದೇವಮಾತೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ತಂದೆ ಸಂತ ಜೋಕಿಂ. ತಾಯಿ ಸಂತ ಅನ್ನಾ. ಸೆಪ್ಟೆಂಬರ್​ ಅಂದರೆ ಸಾಮಾನ್ಯವಾಗಿ ಈ ಅವಧಿಯು ಭಾದ್ರಪದ ಮಾಸ. ಶುಕ್ಲ ಪಕ್ಷದ ಚೌತಿಯ ಸಮಯ. ಚರ್ಚಿನಲ್ಲಿ ಶುದ್ಧೀಕರಿಸಿದ ಭತ್ತದ ತೆನೆಗಳನ್ನು ಮನೆಗೆ ತಂದು ಹೊಸ ಅಕ್ಕಿ ಊಟ ಮಾಡಲಾಗುತ್ತದೆ.  ಚರ್ಚ್ ಗಳಲ್ಲಿ ಒಂಬತ್ತು ದಿನಗಳ ಕಾಲ ನವೇನಾ ಎಂಬ ವ್ರತಾಚರಣೆ ಕಡ್ಡಾಯವಾಗಿದೆ. ಈ ಅವಧಿಯಲ್ಲಿ ಬಾಲ ಮರಿಯಮ್ಮನ ಉತ್ಸವ ಮೂರ್ತಿಯನ್ನು ಇರಿಸಿ ಬಣ್ಣದ ಹೂಗಳಿಂದ ಅಲಂಕರಿಸುತ್ತಾರೆ. ಹೂಗಳ ಅಭಿಷೇಕ ತುಂಬಾ ಆಕರ್ಷಕವಾಗಿರುತ್ತದೆ​. ಚೌತಿಯ ಆಸುಪಾಸಿನ ಅವಧಿಯಲ್ಲಿ ಬರುವ ಹೊಸ ಅಕ್ಕಿ ಹಬ್ಬ. 

ಕರಾವಳಿ ಕರ್ನಾಟಕದ ಹಲವಾರು ಚರ್ಚ್ ಗಳಲ್ಲಿ ಈ ದಿನದಂದು ಕಬ್ಬನ್ನು ನೀಡುತ್ತಾರೆ. ನಾವು ಸಣ್ಣವರಿರುವಾಗ ಚರ್ಚ್ ಗೆ ಹೂವನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಎಲ್ಲರೂ ತಂದ ಹೂವನ್ನು ಬಳಸಿ ಚರ್ಚ್ ಮುಂಭಾಗದಲ್ಲಿ ಸುಂದರವಾದ ಚಿತ್ತಾರವನ್ನು ರಚಿಸುತ್ತಿದ್ದರು. ನಮಗೆ ಕಬ್ಬು ನೀಡುತ್ತಿದ್ದರು. ಆಗೆಲ್ಲಾ ಕಬ್ಬನ್ನು ಜಗಿದು, ಸಿಗಿದು ತಿನ್ನುವುದೇ ಒಂದು ಸಂಭ್ರಮ. ಈಗ ಕಬ್ಬು ಕೊಡುವುದನ್ನು ಕೆಲವೆಡೆ ನಿಲ್ಲಿಸಿದ್ದಾರೆ, ಏಕೆಂದರೆ ಮೊದಲಿನಂತೆ ಮಕ್ಕಳು ಕಬ್ಬು ತಿನ್ನುವುದೂ ಇಲ್ಲ. ಕಬ್ಬು ಸುಮ್ಮನೇ ವ್ಯರ್ಥವಾಗುತ್ತದೆ. ಆದರೆ ಆ ದಿನಗಳ ನೆನಪು ಇನ್ನೂ ನನ್ನಲ್ಲಿ ಹಸುರಾಗಿದೆ. 

ಕರಾವಳಿಯ ಕ್ರೈಸ್ತರು ಸಸ್ಯಾಹಾರವನ್ನು​ ಅಭ್ಯಾಸ ಮಾಡಿರಬೇಕೆಂದು ತಜ್ಞರ ಅಭಿಮತ. ಈ ಹಬ್ಬವನ್ನು​ ಮೊಂತಿ ಹಬ್ಬ ಎಂದು ಸಹ ಕರೆಯುತ್ತಾರೆ. ಹೃನ್ಮನಗಳನ್ನು ಸಂತೃಪ್ತಿಗೊಳಿಸುವ ತೆನೆ ಹಬ್ಬವನ್ನು ಮಾತೆ ಮರಿಯಮ್ಮನವರ ಹುಟ್ಟುಹಬ್ಬವಾಗಿ ಆಚರಿಸುವ ಹಬ್ಬವೇ ‘ಮೊಂತಿ ಹಬ್ಬ’. ಸರ್ವರಿಗೂ ಮೊಂತಿ ಹಬ್ಬದ ಶುಭಾಶಯ ಗಳು...

-ಅರುಣ್ ಡಿ'ಸೋಜ, ಶಕ್ತಿನಗರ

ಚಿತ್ರ ಕೃಪೆ: ಇಂಟರ್ನೆಟ್ ತಾಣ