ಕರಾವಳಿ ಕರ್ನಾಟಕದ ಅಭಿವೃದ್ಧಿಯ ಹರಿಕಾರ - ಉಳ್ಳಾಲ ಶ್ರೀನಿವಾಸ ಮಲ್ಯ

ಕರಾವಳಿ ಕರ್ನಾಟಕದ ಅಭಿವೃದ್ಧಿಯ ಹರಿಕಾರ - ಉಳ್ಳಾಲ ಶ್ರೀನಿವಾಸ ಮಲ್ಯ

ಉಳ್ಳಾಲ ಶ್ರೀನಿವಾಸ ಮಲ್ಯರನ್ನು ಇಂದಿನ ರಾಜಕಾರಣಿಗಳು ಮರೆತು ಬಹಳವೇ ಸಮಯವಾಗಿದೆ. ಆದರೆ ಸರ್ವಕಾಲಕ್ಕೂ ಸಲ್ಲುವ ದೂರದೃಷ್ಟಿಯುಳ್ಳ ರಾಜಕಾರಣಿಯಾಗಿದ್ದ ಶ್ರೀನಿವಾಸ ಮಲ್ಯರವರು ಕರಾವಳಿ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಎಂದು ನಾವು ಹೆಮ್ಮೆಯಿಂದ ಹೇಳಬಹುದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀ ರಾಜೇಂದ್ರ ಭಟ್ ಇವರು ಉಳ್ಳಾಲ ಶ್ರೀನಿವಾಸ ಮಲ್ಯರ ಕುರಿತಾಗಿ ಬರೆದ ಲೇಖನವನ್ನು ಸಂಗ್ರಹಿಸಿರುವೆ. ಲೇಖನ ಬರೆದ ಶ್ರೀ ರಾಜೇಂದ್ರ ಭಟ್ ಅವರಿಗೆ ಕೃತಜ್ಞತೆಗಳು.     

1946ರ ಹೊತ್ತಿಗೆ ಉಡುಪಿ ಮತ್ತು ದಕ್ಷಿಣಕನ್ನಡ ಉಭಯ ಜಿಲ್ಲೆಗಳು ಒಂದೇ ಲೋಕಸಭಾ ಕ್ಷೇತ್ರ ಆಗಿತ್ತು. 1946ರಿಂದ 1965ರವರೆಗಿನ ಸುದೀರ್ಘ ಅವಧಿಯಲ್ಲಿ( ಒಟ್ಟು 18 ವರ್ಷ) ಮಂಗಳೂರು ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದು ಅವರು ಮಾಡಿದ ಅಭಿವೃದ್ಧಿಯ ಕೆಲಸ, ವಿವಿಧ ಕಾಮಗಾರಿಗಳು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತವೆ. ಲೋಕಸಭೆಯಲ್ಲಿ ಅತ್ಯಂತ ಪ್ರಭಾವಿ ಸದಸ್ಯರಾಗಿದ್ದರೂ, ಪ್ರಧಾನಿ ನೆಹರೂ, ರಾಜಗೋಪಾಲಾಚಾರಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮೊದಲಾದವರ ಆಪ್ತ ವಲಯದಲ್ಲಿ ಇದ್ದರೂ ಯಾವುದೇ ಮಂತ್ರಿ  ಪದವಿಯನ್ನು ಅಪೇಕ್ಷೆ ಮಾಡದೆ ತನ್ನ ಲೋಕಸಭಾ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಮಲ್ಯರನ್ನು ಮರೆಯುವುದು ಹೇಗೆ? 

ಮಲ್ಯರು ಜನಿಸಿದ್ದು 1902 ನವಂಬರ್ 21ರಂದು. ಅವರದ್ದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬ. ಕೊಂಕಣಿ ಅವರ ಮಾತೃಭಾಷೆ. ಮಂಗಳೂರು ರಥಬೀದಿಯ ಸಮೀಪ ಇರುವ ಬಜೀಲಕೇರಿಯಲ್ಲಿ ಅವರು ಹುಟ್ಟಿದ ಮನೆ ಇದೆ. ಅವರ ತಂದೆ ಬಂಡಸಾಲೆ ಹೊಂದಿದ್ದು ಬಹು ದೊಡ್ಡ ವ್ಯಾಪಾರಿ ಆಗಿದ್ದರು. ಅವರ ಕುಟುಂಬ ಶತಮಾನಗಳಷ್ಟು ಹಿಂದೆ ಉಳ್ಳಾಲದಿಂದ ಮಂಗಳೂರಿಗೆ ವಲಸೆ ಬಂದಿತ್ತು. ಮಲ್ಯರು ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಮೆಟ್ರಿಕ್ ಮುಗಿಸಿ ಪದವಿ ಪಡೆಯಲು ಮಂಗಳೂರಿನ ಸರಕಾರಿ ಕಾಲೇಜಿಗೆ ಸೇರಿದರು. 

ಆಗ 1920 ಆಗಸ್ಟ್ 19ರಂದು ಮಂಗಳೂರಿಗೆ ಗಾಂಧೀಜಿ ಬಂದು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದರು. ಆಗ ಕಾರ್ನಾಡು ಸದಾಶಿವ ರಾಯರು ಯುವಕ ಶ್ರೀನಿವಾಸ ಮಲ್ಯರನ್ನು  ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಪ್ರೇರಣೆ ನೀಡಿದರು. ತಮ್ಮ ಪದವಿ ಶಿಕ್ಷಣದ ಆಸೆಯನ್ನು ತೊರೆದು ಮಲ್ಯರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಖಾದಿ ಬಟ್ಟೆ ಧರಿಸಿದರು. ತಲೆಗೆ ಗಾಂಧಿ ಟೋಪಿ ಬಂದಿತು. 1930ರ ಉಪ್ಪಿನ ಸತ್ಯಾಗ್ರಹ, 1942ರ ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕ್ವಿಟ್ ಇಂಡಿಯಾ ಚಳುವಳಿ ಹೊತ್ತಿನಲ್ಲಿ ಸೆರೆಮನೆಯ ವಾಸ ಅನುಭವಿಸಿದರು. ಮತ್ತೆ ಸುದೀರ್ಘ ಅವಧಿಗೆ ಮುಂಬೈಯಲ್ಲಿ ಭೂಗತ ಆದರು .

1946ರ ಹೊತ್ತಿಗೆ ಭಾರತಕ್ಕೆ ಸ್ವಾತಂತ್ರ್ಯದ ಸಾಧ್ಯತೆ ಗೋಚರ ಆಗತೊಡಗಿತು. ಆಗ ಕಾಂಗ್ರೆಸ್ ಪಕ್ಷವು ಮಧ್ಯಾವದಿ ಸರಕಾರವನ್ನು ರಚಿಸಿತು. ಆಗ ಮೊದಲ ಬಾರಿ ಮಲ್ಯರು ಎಂಪಿ ಆಗಿ ದೆಹಲಿಯನ್ನು ಪ್ರವೇಶ ಮಾಡಿದರು. ಹೃದಯದಲ್ಲಿ  ರಾಷ್ಟ್ರಪ್ರೇಮ, ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಅವರನ್ನು ಮುಂದೆ ಗೆಲ್ಲಿಸುತ್ತಾ ಹೋಯಿತು. 1952, 1957 ಮತ್ತು 1962 ಹೀಗೆ ಪ್ರತೀ ಚುನಾವಣೆಯಲ್ಲಿ ಮಲ್ಯರು ಸುಲಭವಾಗಿ ಗೆದ್ದು ಬಂದರು. 

1951ರಲ್ಲಿ ಲಾಲಬಹದ್ದೂರ ಶಾಸ್ತ್ರಿ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆದಾಗ ಮಲ್ಯರು ಕಾರ್ಯದರ್ಶಿ ಹುದ್ದೆಗೆ ಏರಿದರು. ಮುಂದೆ ಕೇಂದ್ರ ಸರ್ಕಾರದ ಮುಖ್ಯ ಸಚೇತಕ ಆದರು. ಆದರೆ ಯಾವುದೇ ಮಂತ್ರಿ ಪದವಿಯು ಅವರ ಕಾಲ ಬುಡಕ್ಕೆ ಬಂದಾಗಲೂ ಸ್ವೀಕರಿಸಲು ಹಿಂದೇಟು ಹಾಕಿದರು. ಅಧಿಕಾರದ ಸ್ಥಾನಗಳಿಗೆ ಆಸೆ ಪಡಲಿಲ್ಲ. ಅಂದು ಕಾಂಗ್ರೆಸ್ ಪಕ್ಷದ ನೀತಿ ನಿರೂಪಣೆಯ ನೇತೃತ್ವ ವಹಿಸಿದ್ದ  ಕಾಂಗ್ರೆಸ್ ಸಿಂಡಿಕೇಟ್  ಸದಸ್ಯರಾಗಿ ಕಿಂಗ್ ಮೇಕರ್ ಆದರು. ನೆಹರೂ ನಂತರ ಶಾಸ್ತ್ರೀ ಪ್ರಧಾನಿಯಾಗಿ ಆಯ್ಕೆ ಆಗಲು, ಇಂದಿರಾ ಗಾಂಧಿ ಸಂಸ್ಕೃತಿ ಮಂತ್ರಿ ಆಗಿ ಮೊದಲ ಬಾರಿಗೆ ಆಯ್ಕೆ ಆಗಲು ಮಲ್ಯರ ಅಭಿಪ್ರಾಯವು ನಿರ್ಣಾಯಕ ಆಗಿತ್ತು! 

ಆದರೆ ಇಂದು ನಾವು ಮಲ್ಯ ಅವರನ್ನು ನೆನಪಿಸಲು ಮುಖ್ಯ ಕಾರಣ ಅವರ ಅಭಿವೃದ್ದಿ ಕೆಲಸಗಳು. ತನ್ನ ಸಂಸದ ಕ್ಷೇತ್ರಕ್ಕೆ ಅವರು ಅತೀ ಹೆಚ್ಚು ಕೊಡುಗೆಗಳನ್ನು ತಂದು ನೀಡಿದರು. ವಿವಿಧ ಕೇಂದ್ರ  ಮಂತ್ರಾಲಯಗಳನ್ನು ಸುತ್ತಿ ಅನುದಾನ ತರುವುದರಲ್ಲಿ  ಅವರಿಗೆ ಅವರೇ ಸಮ! ಅವರ ವಿಶೇಷ ಮುತುವರ್ಜಿಯಿಂದ ಮಂಗಳೂರು ಬಂದರು, ಮಂಗಳೂರು ಆಕಾಶವಾಣಿ, ಸರ್ಕ್ಯುಟ್ ಹೌಸ್, ಬಜಪೆ ವಿಮಾನ ನಿಲ್ದಾಣ,  ಮಂಗಳೂರು ರಸಗೊಬ್ಬರ ಕಾರ್ಖಾನೆ( ಎಂಸಿಎಫ್), ಮಂಗಳೂರು ಬೆಂಗಳೂರು ರೈಲು ಮಾರ್ಗ, ವೆನ್ಲಾಕ್ ಆಸ್ಪತ್ರೆಯ ನವೀಕರಣ, ಎರಡು ರಾಷ್ಟ್ರೀಯ ಹೆದ್ದಾರಿಗಳು, ಹತ್ತಾರು ಸೇತುವೆಗಳು, ಸುರತ್ಕಲ್ (NITK)....ಹೀಗೆ ದೊಡ್ಡ ದೊಡ್ಡ ಕೊಡುಗೆಗಳು ಕರಾವಳಿಗೆ ಹರಿದು ಬಂದವು. 

         ಸುರತ್ಕಲ್ಲಿನ ಅಂದಿನ ಕೆ.ಆರ್.ಇ.ಸಿ (NITK) ಅವರು ನಾಡಿಗೆ ನೀಡಿದ ಬಹು ದೊಡ್ಡ ಕೊಡುಗೆ. ಆಗ ಶಾಸ್ತ್ರೀಜಿ ಮಾನವ ಸಂಪನ್ಮೂಲ ಮಂತ್ರಿ ಆಗಿದ್ದರು. ದಕ್ಷಿಣ ಭಾರತಕ್ಕೆ ಒಂದೇ ಒಂದು ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜು ಮಂಜೂರಾದ ಸುದ್ದಿ ಮಲ್ಯರಿಗೆ ಅದು ಹೇಗೋ ತಿಳಿಯಿತು. ಅವರು ಶಾಸ್ತ್ರೀ ಅವರ ಮುಂದೆ ಹೋಗಿ ಅದನ್ನು ಮಂಗಳೂರಿಗೆ ಕೊಡಬೇಕು ಎಂದು ಧರಣಿ ಕೂತರು. ಶಾಸ್ತ್ರೀಜಿ ಅವರು ನಯವಾಗಿ "ಇಲ್ಲ ಇಲ್ಲ, ಅದನ್ನು ಹೈದರಾಬಾದ್ ಅಥವಾ ಚೆನ್ನೈಯಲ್ಲಿ ಮಾಡೋಣ, ನಿಮ್ಮಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ನೀವು ಹಟ ಮಾಡಬೇಡಿ"  ಅಂದರು. ಆದರೆ ಮಲ್ಯರು ಗಂಟೆಗಟ್ಟಲೆ ಕುಳಿತಲ್ಲಿಂದ ಏಳಲೇ ಇಲ್ಲ! ಶಾಸ್ತ್ರಿಗಳಿಗೆ ಉಭಯ ಸಂಕಟ ಆರಂಭ ಆಯಿತು. ಒಂದಿಷ್ಟು ಶರತ್ತುಗಳನ್ನು ಮುಂದಿಟ್ಟು ತಾನು ಒಂದು ವಾರದಲ್ಲಿ ಸಮೀಕ್ಷೆ ಮಾಡಲು ಬರುತ್ತೇನೆ ಎಂದರು. ಮಲ್ಯರು ಅಲ್ಲಿಂದ ತಮ್ಮ ಗೆಳೆಯರಾದ ಕುಡ್ವ ಮೊದಲಾದವರನ್ನು ಸಂಪರ್ಕಿಸಿ ಮಾರ್ಗದರ್ಶನ  ಮಾಡಿದರು. ಶಾಸ್ತ್ರಿಯವರು ಸಮೀಕ್ಷೆ ಮಾಡಲು ಸುರತ್ಕಲ್ಲಿಗೆ ಬಂದಾಗ ಮಲ್ಯರು ಮಾಡಿದ ವ್ಯವಸ್ಥೆ ನೋಡಿ ಬೆರಗಾದರು. ಮುಂದೆ ಶಾಸ್ತ್ರಿಯವರ  ಕೈಯ್ಯಿಂದ NITK ಸಂಸ್ಥೆಗೆ  ಶಂಕುಸ್ಥಾಪನೆ ಆಯಿತು. ಎಲ್ಲಿಗೋ ಮಂಜೂರು ಆಗಿದ್ದ NITK (ಮೊದಲ ಹೆಸರು KREC) ಸುರತ್ಕಲ್ಲಿಗೆ ಬಂದ ಕಥೆ ಇದು! ಈಗಲೂ ಮಂಗಳೂರು ಕಡೆಗೆ ಪ್ರಯಾಣಿಸುವಾಗ  ಹೆದ್ದಾರಿ ಪಕ್ಕದಲ್ಲಿ ಮೈ ಚಾಚಿ ಮಲಗಿರುವ ಭವ್ಯವಾದ NITK ಕಟ್ಟಡ  ನೋಡುವಾಗ  ರೋಮಾಂಚನ ಆಗುತ್ತದೆ. ಮಲ್ಯರ ಬಗ್ಗೆ ಅಭಿಮಾನ ಮೂಡುತ್ತದೆ. 

ಆಗ ಮಂಗಳೂರಿನಿಂದ ಕಾರವಾರಕ್ಕೆ ಹೋಗುವ ದಾರಿಯಲ್ಲಿ 16 ಹೊಳೆಗಳು ಅಡ್ದ ಇದ್ದವು. ಮಂಗಳೂರಿನಿಂದ ಕುಂದಾಪುರಕ್ಕೆ ನಡುವೆ 6 ಹೊಳೆಗಳು. ದಾಟಿ ಹೋಗಲು ಬಸ್ಸು ಇಳಿದು ಫೆರ್ರಿ ಬೋಟ್ ಏರಬೇಕು. ಹಾಗೆ ಹೀಗೆ ಅಂತ ಮಂಗಳೂರಿನಿಂದ ಕುಂದಾಪುರ ತಲುಪಲು ಕನಿಷ್ಟ 10 ಘಂಟೆ ಬೇಕಿತ್ತು. ಮಲ್ಯರ ಕಾಲದಲ್ಲಿ ನೇತ್ರಾವತಿ, ಕೂಳೂರು, ಮೂಲ್ಕಿ, ಉದ್ಯಾವರ, ಬ್ರಹ್ಮಾವರ, ಕಲ್ಯಾಣಪುರ,  ಗಂಗೊಳ್ಳಿ ಸೇತುವೆಗಳು ಪೂರ್ತಿ ಆದವು. ಈಗ ಕೇವಲ ಎರಡು ಘಂಟೆಯಲ್ಲಿ ಮಂಗಳೂರಿನಿಂದ  ಕುಂದಾಪುರಕ್ಕೆ ಹೆದ್ದಾರಿಯ ಮೂಲಕ ತಲುಪಲು ಸಾಧ್ಯ ಆಗಿದೆ. ಮತ್ತೆ ಮತ್ತೆ ಮಲ್ಯರು ನೆನಪಾಗುವುದು ಇಂತಹ ಕಾರಣಕ್ಕೆ! 

ಶ್ರೀನಿವಾಸ್ ಮಲ್ಯರು ಮಾಡಿದ ಅಭಿವೃದ್ಧಿ ಕೆಲಸಗಳಿಂದ ಇಂದು ಕರಾವಳಿ ಕರ್ನಾಟಕವು ಭಾರೀ ಅಭಿವೃದ್ದಿ ಹೊಂದಲು ಸಾಧ್ಯವಾಯಿತು. ಅವರ ದೂರದೃಷ್ಟಿಯು ಅಸಾಧಾರಣ ಆಗಿತ್ತು. 1965ರ ಡಿ.19ರಂದು ಶ್ರೀನಿವಾಸ ಮಲ್ಯರು  ದೆಹಲಿಯಲ್ಲಿ  ಹೃದಯಾಘಾತದಿಂದ ನಿಧನ ಹೊಂದಿದರು. ಇಡೀ ರಾಷ್ಟ್ರವು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿತು.ಅವರಿಗೆ ಮಕ್ಕಳು ಇರಲಿಲ್ಲ. ಮುಂದೆ ಮಂಗಳೂರಿನ ಪಣಂಬೂರು ಬಂದರು ಮತ್ತು ನಂತೂರು ಪದುವಾ ಪ್ರೌಢಶಾಲೆಗಳ ಮುಂಭಾಗದಲ್ಲಿ ಅವರ ಪ್ರತಿಮೆಗಳು ಅನಾವರಣ ಆದವು. NITK ಸಂಸ್ಥೆಯಲ್ಲಿ ಅವರ ಹೆಸರಿನ ಒಂದು ಸುಸಜ್ಜಿತ ಸಭಾಂಗಣ ಇದೆ. 2002ರಲ್ಲಿ ಜಿಲ್ಲಾಡಳಿತವು ಅವರ ಜನ್ಮ ಶತಾಬ್ದಿಯನ್ನು ಅತ್ಯಂತ ಅದ್ದೂರಿ ಆಗಿ ಆಚರಿಸಿ ಅವರನ್ನು ಗೌರವಿಸಿತು. ನಗರದ  ಕೇಂದ್ರದಲ್ಲಿ ಇರುವ ಪಡೀಲ್ ಪಂಪವೆಲ್ ಜೋಡಿಸುವ ರಸ್ತೆಗೆ ಅವರ ಹೆಸರಿಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕರಾವಳಿ ಕರ್ನಾಟಕದ ಪ್ರತೀ ಒಬ್ಬರೂ ಅವರನ್ನು ಹೃದಯದಲ್ಲಿ ಧಾರಣೆ ಮಾಡುವ ಅಗತ್ಯ ಇದೆ. 

ಡಿಸೆಂಬರ್ ೧೯ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಪುಣ್ಯತಿಥಿ. ಅವರ ಚಿರಸ್ಮರಣೆ ಸದಾ ಕಾಲ ನಮ್ಮ ಮನಸ್ಸಿನಲ್ಲಿರಲಿ. 

ಲೇಖನ ಕೃಪೆ - ರಾಜೇಂದ್ರ ಭಟ್ ಕೆ.

ಚಿತ್ರ ಕೃಪೆ - ಮಂಗಳೂರು ಟುಡೇ