ಕರೋನಾ ನಿರ್ವಹಣೆ : ಪಕ್ಷಗಳ ಪಾತ್ರ ಮಹತ್ವದ್ದು

ಕರೋನಾ ನಿರ್ವಹಣೆ : ಪಕ್ಷಗಳ ಪಾತ್ರ ಮಹತ್ವದ್ದು

ದೇಶದಾದ್ಯಂತ ಒಂದೇ ದಿನ ಹೊಸದಾಗಿ ೧೦,೧೫೮ ಕೋವಿಡ್ ಪ್ರಕರಣಗಳು ಧೃಢ ಪಟ್ಟಿದ್ದು, ೧೯ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆ ತಿಳಿಸಿದೆ. ಸರಿ ಸುಮಾರು ಎಂಟು ತಿಂಗಳಲ್ಲೇ ದಾಖಲಾದ ಗರಿಷ್ಟ ಪ್ರಕರಣ ಇದಾಗಿದೆ. ಈ ಸಂಖ್ಯೆ ಆತಂಕ ಹುಟ್ಟಿಸುವಂತದ್ದಲ್ಲ. ಆದರೆ, ಯಾವುದೇ ಅಪಾಯಕ್ಕೆ ಆಸ್ಪದ ಕೊಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಕರೋನಾದ ಹಿಂದಿನ ಅಲೆಗಳು ಕಲಿಸಿರುವ ಪಾಠವನ್ನು ಯಾರೂ ಸುಲಭವಾಗಿ ಮರೆಯುವಂತಿಲ್ಲ. ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದೆ. ಕರೋನಾದಿಂದ ಆರ್ಥಿಕ ಸಂಕಷ್ಟ ತೀವ್ರವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ನಮ್ಮ ಎಣಿಕೆಗಳನ್ನೆಲ್ಲಾ ಬುಡಮೇಲು ಮಾಡುವಂತೆ ಕರೋನಾ ರೂಪಾಂತರ ತಳಿಗಳು ವರ್ತಿಸುವುದರಿಂದ, ಸಂಭಾವ್ಯ ಬಿಕ್ಕಟ್ಟನ್ನು ಎದುರಿಸಲು ಈಗಿಂದೀಗಲೇ ಸಿದ್ಧತೆ ನಡೆಸುವುದು ಅನಿವಾರ್ಯ. ಇದೀಗ ರಾಜ್ಯದಲ್ಲಿ ಚುನಾವಣೆಯ ಅಬ್ಬರವಿರುವುದರಿಂದ ರಾಜಕೀಯ ಸಭೆ-ಸಮಾವೇಶಗಳೂ ದೊಡ್ದ ಸಂಖ್ಯೆಯಲ್ಲಿ ನಡೆಯುತ್ತವೆ. ಇದು ಸೋಂಕಿಗೆ ಆಹ್ವಾನ ಕೊಡುವ ಅಪಾಯ ಇರುತ್ತದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ರಾಜಕೀಯ ಸಮಾವೇಶಗಳನ್ನು ಹಮ್ಮಿಕೊಳ್ಳುವುದು ಜಾಣತನ. ಮಾಸ್ಕ್ ಕಡ್ಡಾಯವಾಗಿ ಧರಿಸುವುದು ಹಾಗೂ ಸ್ವಚ್ಛತಾ ಕ್ರಮಗಳನ್ನು ಪಾಲಿಸುವುದು ಮತ್ತೆ ನಮ್ಮ ದೈನಂದಿನ ಜೀವನದ ಭಾಗವಾಗಬೇಕಾಗಿದೆ. ಕರೋನಾ ಮಾತ್ರವಲ್ಲ, ಸುಲಭವಾಗಿ ಹರಡುವ ನೆಗಡಿ, ಕೆಮ್ಮಿನಂತಹ ಸೋಂಕುಗಳನ್ನು ತಡೆಗಟ್ಟಲು ಮಾಸ್ಕ್ ಬಳಕೆ ಅನುಕೂಲಕರ. ಹೊಸ ಕೋವಿಡ್ ಪ್ರಕರಣಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೈಯೆಲ್ಲ ಕಣ್ಣಾಗಿ ನಿರ್ವಹಿಸಬೇಕಾಗಿದೆ. ಅಗತ್ಯ ಔಷಧಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವುದರ ಜೊತೆಗೆ, ವೈದ್ಯಕೀಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಜನಸಾಮಾನ್ಯರ ಬದುಕನ್ನು ಬುಡಮೇಲು ಮಾಡುವ ಮತ್ತೊಂದು ಲಾಕ್ ಡೌನ್ ಗೆ ಅವಕಾಶ ನೀಡಬಾರದು. ಕರೋನಾ ನಿಯಂತ್ರಣದ ಹೋರಾಟದಲ್ಲಿ ರಾಜಕೀಯ ಸಮಾವೇಶಗಳನ್ನು ನಡೆಸುವಲ್ಲಿ ರಾಜಕೀಯ ಪಕ್ಷಗಳು ಹೊಣೆಗೇಡಿತನ ಪ್ರದರ್ಶಿಸಿರುವುದನ್ನು ಕರೋನಾದ ಹಿಂದಿನ ಅಲೆಗಳಲ್ಲಿ ನೋಡಿದ್ದೇವೆ. ಅವಿವೇಕದ ಮಾದರಿಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಎಲ್ಲರ ಜವಾಬ್ದಾರಿ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೪-೦೪-೨೦೨೩  

ಚಿತ್ರ ಕೃಪೆ: ಇಂಟರ್ನೆಟ್ ತಾಣ