ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

ಬರಹ

ಹೌದು, ಅವರು ಕರ್ನಾಟಕದಲ್ಲಿ ಹುಟ್ಟಲೇ ಬಾರದಿತ್ತು. ಅವರಿಂದ ಬಂದ ಈ ನುಡಿಮುತ್ತುಗಳು ನೊಂದ ಜಿವದ ಬೆಂದ ಮಾತುಗಳು. ಇದನ್ನು ಅರಿಯುವಷ್ಟು ನಮ್ಮ ಕನ್ನಡಿಗರಿನ್ನೂ ಬುದ್ಧಿಮತ್ತೆಯನ್ನು ಪಡೆದಿಲ್ಲ. ಅದಕ್ಕಾಗಿಯೇ ಕರ್ನಾಟಕ ಕೇರಳ ಮತ್ತು ತಮಿಳುನಾಡಿನ ಮಧ್ಯದಲ್ಲಿ ಸಿಕ್ಕಿಕೊಂಡು, ಅಡಕೆಯಲ್ಲಿ ಸಿಕ್ಕ ಕತ್ತರಿಯಂತೆ, ಅಲ್ಲಲ್ಲ, ಕತ್ತರಿಯಲ್ಲಿ ಸಿಕ್ಕ ಅಡಿಕೆಯಂತೆ ವಿಲಿ ವಿಲಿ ಒದ್ದಾಡುತ್ತಾ, ಮೇಲಿಂದ ಆಂದ್ರದ ಭಾರವನ್ನೂ ಹೊರುತ್ತಾ ತೊಳಲಾಡುತ್ತಿದೆ. ಇಲ್ಲಿ ಹುಟ್ಟಿದ ಮಹಾಪುರುಷರು ನೊಂದಾಗ ಮೇಲಿನಂತೆ ನುಡಿದರೆ ತಪ್ಪೇನು? ಕುಂಬ್ಳೆ ಮೂತಿಯನ್ನು ಕುಂಬಳಕಾಯಿಯನ್ನಾಗಿ ಮಾಡುವ ಅವಶ್ಯಕತೆ ಇಲ್ಲವೇಇಲ್ಲ. ಏಕೆಂದರೆ:
ಅವರು ಪ್ರಧಾನ ಮಂತ್ರಿಯಾಗುವ ಮುಂಚೆ ಮುಖ್ಯ ಮಂತ್ರಿಯಾಗಿದ್ದವರು. ಹಲವಾರು ಉತ್ತಮ ಕೆಲಸಗಳನ್ನು ಮಾಡಿದವರು. ಅವರ ಶ್ರಮಕ್ಕೆ ಅವರ ಆಸ್ತಿ ಬೆಳೆದಿರುವುದೇ ನಿದರ್ಶನ. ನಂತರ ಪ್ರಧಾನಿಯಾದರು. ಕರ್ನಾಟಕಕ್ಕೆ ಏನೇನೋ ಮಾಡುತ್ತೇನೆಂದು ರೈಲು ಬಿಟ್ಟರು. ಅದು ಇನ್ನೂ ಕರ್ನಾಟಕಕ್ಕೆ ತಲಪದಿದ್ದರೆ ಅದು ಅವರ ತಪ್ಪೆ? ಅವರ ನಂತರ ಬಂದ ಎನ್.ಡಿ.ಎ ಹಾಗು ಕಾಂಗ್ರೆಸ್ ಪಕ್ಷಗಳೇ ಹೊಣೆ. ಅವರು ಅಂದುಕೊಂಡಿದ್ದೆಲ್ಲಾ ಆಗಿದ್ದರೆ ಕರ್ನಾಟಕದ ಪರಿಸ್ಥಿತಿ ಹೇಗಿರುತ್ತಿತ್ತು, ಕ್ಷಣಕಾಲ ಯೋಚಿಸಿ. ಅದನ್ನು ಯೋಚಿಸಿಯೇ ಅವರು ನೊಂದು ನುಡಿದದ್ದು, ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಎಂದು. ಅವರು ಮುಸ್ಲಿಂ ಪಂಥದಲ್ಲಿ ಹುಟ್ಟುವ ಆಸೆಯನ್ನೂ ಒಮ್ಮೆ ವ್ಯಕ್ತ ಪಡಿಸಿದ್ದರು. ಆದರೆ ಹಾಗೆ ಹುಟ್ಟಿದ್ದರೆ ಆ ಮತದಲ್ಲಿ ಆಗುತ್ತಿದ್ದ ಅಭಿವೃದ್ಧಿಕಾರ್ಯಗಳನ್ನು ಊಹಿಸಿಯೇ ಅವರು ನೊಂದು ನುಡಿದಿರುವುದು ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಎಂದು.
ಇತ್ತೀಚೆಗೆ ತಮ್ಮನ್ನು ಯಾರೂ ಕ್ಯಾರೆ ಎನ್ನುವುದಿಲ್ಲವೆಂದು, ಬೇರೆ ಅಪಾತ್ರರಿಗೆ ಮಣೆ ಹಾಕಲಾಗುತ್ತಿದೆ ಎಂದು ನೊಂದು ನುಡಿದಿದ್ದಾರೆ. ಕಣ್ಣೀರು ಸುರಿಸಿದ್ದಾರೆ. ಕರ್ನಾಟಕ ರಾಜ್ಯದ ಮಕ್ಕಳ ಉದ್ದಾರಕ್ಕಾಗಿ ಎಂಥಾ ತ್ಯಾಗವನ್ನೂ ಮಾಡಲು ಹಿಂಜರಿಯಲಿಲ್ಲ. ಸ್ವಂತ ಮಗನನ್ನೇ ಎದುರು ಹಾಕಿಕೊಂಡರು, ಮುಖ್ಯ ಮಂತ್ರಿಯಾಗಿ ಕಷ್ಟಗಳನ್ನು ಅನುಭವಿಸುವಂತೆ ಮಾಡಿದರು. ಹಿರಿ ಮಗನಿಗೆ ಹಿರಿ ಹಿರಿ ಹಿಗ್ಗುವ ಅವಕಾಶವಿರುವ ಖಾತೆಗಳನ್ನು ಕೊಡಿಸಿ ಕಷ್ಟ ಅನುಭವಿಸುವಂತೆ ಮಾಡಿದರು. ಆದರೆ ನಮ್ಮವರಿಗೆ ಅದರ ಅರಿವೇ ಇಲ್ಲ, ಯಾಕೆಂದರೆ ಇಲ್ಲಿನ ಹೆಚ್ಚಿನವರಿಗೆ ಅರಿವೇ (ಬಟ್ಟೆ) ಇಲ್ಲ, ಇನ್ನು ರೋಟಿ ಮತ್ತು ಮಕಾನ್ ಎಲ್ಲಿಂದ ಬರಬೇಕು, ಬುದ್ಧಿ ಹೇಗೆ ಬೆಳೆಯಬೇಕು. ಸತ್ಪಾತ್ರರನ್ನು ಹೇಗೆ ಗುರುತಿಸಬೇಕು? ಆದ್ದರಿಂದಲೇ ಕಳಕಳಿಯ ಕೊರಗು "ನಾನು ಕರ್ನಾಟಕದಲ್ಲಿ ಹುಟ್ಟಲೇ ಬಾರದಿತ್ತು" ಎಂದು.
ಕನ್ನಡಿಗರು ಇನ್ನಾದರೂ ಅರ್ಥಮಾಡಿಕೊಂಡು ಹತ್ತಿರದಲ್ಲಿಯೇ ಸುಳಿಯುತ್ತಿರುವ ಚುನಾವಣೆಯಲ್ಲಿ ಉತ್ತರಿಸುವರೇ? ಇಲ್ಲಾ ಸ್ವಾಮಿ, ನಾವಿರೋದೇ ಹೀಗೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet