ಕರ್ನಾಟಕದ ಕೇಸರೀಕರಣ:

ಕರ್ನಾಟಕದ ಕೇಸರೀಕರಣ:

ಬರಹ

ಕರ್ನಾಟಕದ ಕೇಸರೀಕರಣ:

ಕವಲು ದಾರಿಯಲ್ಲಿ ರಾಜ್ಯ ರಾಜಕಾರಣ

ಮೊನ್ನೆ ’ಔಟ್ ಲುಕ್’ ಪತ್ರಿಕೆಯ ಸುಗತಾ ದೂರವಾಣಿ ಕರೆ ಮಾಡಿ, ’ಕರ್ನಾಟಕದ ಕೇಸರೀಕರಣ’ ಕುರಿತ ತಮ್ಮ ವಿಶೇಷ ವರದಿಗಾಗಿ; ನಿಮ್ಮ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಯಾರು ಎಂದು ಕೇಳಿದಾಗ, ಅದು ನನ್ನನ್ನು ಪ್ರಶ್ನೆಯಾಗಿ ಮಾತ್ರ ಕಾಡಲಿಲ್ಲ. ಅದು ತನ್ನ ವ್ಯಾಪಕತೆಯಲ್ಲಿ ಕರ್ನಾಟಕದ ಇಂದಿನ ರಾಜಕೀಯ ಸಂದರ್ಭದ ಹತ್ತಿರದ ನೋಟಕ್ಕೂ ಕಾರಣವಾಯಿತು.

ಬಿಜೆಪಿ ಕರ್ನಾಟಕದಲ್ಲಿ ಏಕಾಕಿಯಾಗಿ ಅಧಿಕಾರಕ್ಕೆ ಬಂದು ಈಗಾಗಲೇ ಆರು ತಿಂಗಳುಗಳು ಕಳೆದಿವೆ. ಈ ಅವಧಿಯಲ್ಲಿ ಕರ್ನಾಟಕದ ರಾಜಕಾರಣಕ್ಕೆ ಅದು ನೀಡಿರುವ ಕೊಡುಗೆ ಏನು ಎಂದು ಒಮ್ಮೆ ಹಿಂತಿರುಗಿ ನೋಡಿದರೆ, ಆಘಾತವೇ ಆಗುತ್ತದೆ. ಆಡಳಿತದಲ್ಲಿ ಯಾವ ವೈಶಿಷ್ಟ್ಯವನ್ನಾಗಲೀ, ವಿಶೇಷ ದಕ್ಷತೆಯನ್ನಾಗಲೀ ತೋರದ ಈ ಸರ್ಕಾರ; ಹಾವೇರಿಯಲ್ಲಿ ರೈತರ ಮೇಲಿನ ಗೋಲೀಬಾರ್‌ನಿಂದ ಹಿಡಿದು, ಇತ್ತೀಚಿನ ಸಂಪಂಗಿ ಲಂಚದ ಪ್ರಕರಣದವರೆಗೆ ರಾಜಕೀಯ ಅನಾಚಾರದ ವಿಷಯದಲ್ಲಿ ಹೊಸ ದಾಖಲೆಗಳನ್ನೇ ನಿರ್ಮಿಸಿದೆ. ಅಷ್ಟೇ ಅಲ್ಲ, ಪದ್ಮಪ್ರಿಯ ಸಾವಿನ ಪ್ರಕರಣದಿಂದ ಹಿಡಿದು ಇತ್ತೀಚಿನ ಮಂಗಳೂರು ಪಬ್ ಮೇಲಿನ ಶ್ರೀರಾಮ ಸೇನೆಯ ಗೂಂಡಾಗಿರಿ ಪ್ರಕರಣದವರೆಗೆ, ಅದು ಅಪರಾಧ ಪ್ರಕರಣಗಳ ನಿರ್ವಹಣೆಯಲ್ಲಿ ಸಂಶಯಾಸ್ಪದ ರೀತಿಯಲ್ಲೇ ವರ್ತಿಸಿದೆ. ಗಣಿ ವ್ಯವಹಾರದ ತನಿಖಾ ವರದಿ ಕುರಿತ ನಿಲುವೂ ಸೇರಿದಂತೆ ಲೋಕಾಯುಕ್ತರಿಂದ ಈ ಸರ್ಕಾರ ಇಷ್ಟು ಚಿಕ್ಕ ಅವಧಿಯಲ್ಲಿ ಎದುರಿಸಿದಷ್ಟು ಟೀಕೆ-ಖಂಡನೆ-ಅಸಮಾಧಾನಗಳನ್ನು ಇನ್ನಾವ ಸರ್ಕಾರವೂ ಎದುರಿಸಿಲ್ಲ ಎಂಬುದೂ ಗಮನಾರ್ಹ. ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಇಂದಿನ ಲೋಕಾಯುಕ್ತರ ಧೃತಿಗೆಡಸಲೋ ಎಂಬಂತೆ, ಅದು ತನ್ನ ಪಕ್ಷದ ಶಾಸಕನೊಬ್ಬನನ್ನು ಲಂಚ ಸ್ವೀಕರಿಸುತ್ತಿದ್ದಾಗಲೇ ಹಿಡಿದು ಹಾಕಿದ ಮರುದಿನವೇ, ತರಾತುರಿಯಲ್ಲಿ ’ಮಂತ್ರಕ್ಕಿಂತ ಉಗುಳೇ ಜಾಸ್ತಿ’ ಖ್ಯಾತಿಯ ಮಾಜಿ ಲೋಕಾಯುಕ್ತ ವೆಂಕಾಟಾಚಲ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಭ್ರಷ್ಟಾಚಾರ ಕುರಿತ ತನ್ನ ಬದ್ಧತೆ ಎಂತಹುದೆಂಬುದನ್ನು ಸ್ಪಷ್ಟಪಡಿಸಿದೆ. ಈ ವೆಂಕಟಾಚಲ ಬೇರೆ, ಸಂದರ್ಭದ ವಿಪರ್ಯಾಸದ ಪರಿವೆಯೇ ಇಲ್ಲದಂತೆ, ತಾನು ಭ್ರಷ್ಟಾಚಾರ ನಿರ್ಮೂಲನಕ್ಕಾಗಿ ಬಿಜೆಪಿ ಸೇರಿದ್ದೇನೆ ಎಂದು ಘೋಷಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ! ಇತರೆಲ್ಲ ರಾಜಕೀಯ ಪಕ್ಷಗಳೂ ಕಳಕಿಂತ; ತಾನು ಈ ಇತರೆಲ್ಲರಿಗಿಂತ ಭಿನ್ನವೆಂದು ಹೇಳಿಕೊಂಡು ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಈ ಪಕ್ಷದ ಸ್ಥಿತಿ ಇಂದು ನೈತಿಕವಾಗಿ ಚಿಂತಾಜನಕವಾಗಿದೆ.

ನಾನು ಈ ಹಿಂದೆ ಇದೇ ಅಂಕಣದಲ್ಲಿ ನನ್ನ ಕೆಲವು ಗೆಳೆಯರು ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದನ್ನೇ ತಮ್ಮ ಒಂದು ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿಕೊಂಡಾಗ ಅದನ್ನು ಟೀಕಿಸಿದ್ದೆ. ಅದು ಪ್ರಜಾಪ್ರಭುತ್ವ ಪದ್ಧತಿಯ ಬಗೆಗಿನ ನಮ್ಮ ಬದ್ಧತೆಯನ್ನೇ ಪ್ರಶ್ನಾರ್ಹಗೊಳಿಸುವುದು ಮತ್ತು ಇತರ ರಾಜಕೀಯ ಪಕ್ಷಗಳ ರಾಜಕೀಯ ಕಾರ್ಯಕ್ರಮಗಳ ಪ್ರಸ್ತುತತೆಯನ್ನೇ ಅಲ್ಲಗೆಳೆಯುವುದು ಎಂಬುದು ನನ್ನ ವಾದವಾಗಿತ್ತು. ಅದಕ್ಕಿಂತ ಹೆಚ್ಚಾಗಿ, ಈ ಧೋರಣೆ ರಾಜಕೀಯವಾಗಿ ತಟಸ್ಥರಾಗಿರುವ ಮತದಾರರಲ್ಲಿ ಬಿಜೆಪಿ ಬಗೆಗೆ ಅನಗತ್ಯ ಸಹಾನುಭೂತಿ ಹುಟ್ಟಿಸುವ ಮೂಲಕ ಚುನಾವಣಾ ಸಂದರ್ಭವನ್ನೇ ವಿಕೃತಗೊಳಿಸಬಹುದು ಎಂಬುದೂ ನನ್ನ ಆತಂಕವಾಗಿತ್ತು. ಅಷ್ಟೇ ಅಲ್ಲ, ಈ ಧೋರಣೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಅದನ್ನು ಎದುರಿಸಲಾಗದೆಂಬ ಭಯ, ಅಸಹಾಯಕತೆ ಮತ್ತು ಆಂತರಿಕ ರಾಜಕೀಯ ಶಕ್ತಿ ದಾರಿದ್ರ್ಯದ ಪ್ರತೀಕ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಜೊತೆಗೆ ಜಾತ್ಯತೀತ ಪ್ರಜಾಪ್ರಭುತ್ವವಾದಿ ಸಂವಿಧಾನದ ಚೌಕಟ್ಟಿನಲ್ಲಿ ಅದು ತನ್ನ ಕೋಮುವಾದಿ ರಾಜಕಾರಣದ ಬಾಲ ಬಿಚ್ಚುವುದು ಅಷ್ಟು ಸುಲಭವಾಗಲಾರದು ಮತ್ತು ಅಧಿಕಾರ ನಡೆಸುವ ಹಾಗೂ ಉಳಿಸಿಕೊಳ್ಳುವ ಒತ್ತಡ-ಒತ್ತಾಯಗಳಲ್ಲಿ ಅದು ರಾಜಕೀಯವಾಗಿ ’ಮೆದು’ವಾಗುವುದು ಎಂಬುದು ನಮ್ಮಂತಹವರ ನಿರೀಕ್ಷೆಯಾಗಿತ್ತು. ಅದರೆ ಕಳೆದ ಆರು ತಿಂಗಳುಗಳ ಬಿಜೆಪಿ ಸರ್ಕಾರದ ವೈಖರಿ ಈ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಬಿಜೆಪಿ ಕುರಿತ ಉದಾರವಾದಿ ಧೋರಣೆ ಬಗ್ಗೆ ನಮ್ಮಂತಹವರು ಮರುಚಿಂತನೆ ಮಾಡುವಂತೆ ಒತ್ತಾಯಿಸುತ್ತಿದೆ.

ಇದಕ್ಕೆ ಒಂದು ಕಾರಣ, ಬಿಜೆಪಿ ಈ ಅಲ್ಪಾವಧಿಯಲ್ಲೇ ಭ್ರಷ್ಟತೆ, ಜಾತಿವಾದ ಮತ್ತು ಕಾನೂನುಗಳನ್ನೇ ತಲೆಕೆಳಗು ಮಾಡುವ ನಿರ್ಲಜ್ಜ ಮಾರ್ಗಗಳಲ್ಲಿ ಎಲ್ಲ ಪಕ್ಷಗಳನ್ನೂ ಮೀರಿಸುವ ಮೂಲಕ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡು; ಈಗ ನಿಧಾನವಾಗಿ ತನ್ನ ಕೋಮುವಾದಿ ಬಾಲವನ್ನು ಬಿಚ್ಚತೊಡಗಿರುವುದು. ಇದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣವೆಂದರೆ, ಇದನ್ನು ಗುರುತಿಸುವಲ್ಲಿ, ಅದರ ದೀರ್ಘಕಾಲಿಕ ಪರಿಣಾಮಗಳನ್ನು ಸ್ವತಃ ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಅವುಗಳನ್ನು ಸಾಮಾನ್ಯ ಜನತೆಗೆ ಮನವರಿಕೆ ಮಾಡಿ ಅದನ್ನು ಎದುರಿಸುವಲ್ಲಿ ನಮ್ಮ ಅಧಿಕೃತ ವಿರೋಧ ಪಕ್ಷವೆನಿಸಿದ ಕಾಂಗ್ರೆಸ್ ಪ್ರದರ್ಶಿಸುತ್ತಿರುವ ಜೋಭದ್ರಗೇಡಿತ!

ವಿಪರ್ಯಾಸವೆಂದರೆ, ಬಿಜೆಪಿ ವಿರುದ್ಧ ಈಗ ಅತಿ ಹೆಚ್ಚು ಶಬ್ದ ಮಾಡುತ್ತಿರುವ ಪಕ್ಷವೆಂದರೆ, ಅದು ಅಧಿಕಾರಕ್ಕೆ ಬರಲು ತನ್ನ ಸಮಯ ಸಾಧಕ ಹಾಗೂ ಅನೈತಿಕ ರಾಜಕಾರಣದ ಮೂಲಕ ಕಾರಣವಾದ ಜಾತ್ಯತೀತ ಜನತಾ ದಳ! ತಾನು ಹುಟ್ಟಿದಾಗಿನಿಂದ ತನ್ನ ಹೆಸರಿನಲ್ಲಿರುವ ’ಜಾತ್ಯತೀತ’ ಎಂಬ ತತ್ವವೂ ಸೇರಿದಂತೆ ಎಲ್ಲ ರಾಜಕೀಯ ತತ್ವಗಳನ್ನೂ(ಇದರ ನಾಯಕ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದಾಗ ವ್ಯಂಗ್ಯವಾಗಿ ಹೇಳಿದ್ದು: ’ನಿಘಂಟಿನಲ್ಲೆಲ್ಲಾ ಹುಡುಕಿದರೂ ಜಾತ್ಯತೀತತೆ ಎಂಬ ಶಬ್ದ ಸಿಗಲಿಲ್ಲ!’) ತನ್ನ ರಾಜಕೀಯ ಉಳಿವಿನ ಹೆಸರಲ್ಲಿ ತಿಲಾಂಜಲಿ ನೀಡುತ್ತಾ ಬಂದಿರುವ ಈ ಪಕ್ಷದ ಯಾವುದೇ ರಾಜಕೀಯ ಹೋರಾಟದ ವಿಶ್ವಾಸಾರ್ಹತೆ ಸಂಶಯಾಸ್ಪದವಾಗಿಯೇ ಉಳಿದಿದೆ. ಅಧಿಕಾರವಿಲ್ಲದಿದ್ದಾಗ ದೊಡ್ಡ ದೊಡ್ಡ ತತ್ವ ಹೇಳಿ ಜನರ ಗಮನ ಸೆಳೆಯುವ ಈ ಪಕ್ಷ, (ಅದೆಷ್ಟು ಬಾರಿ ಕರ್ನಾಟಕದ ’ಪ್ರಗತಿಪರ’ರೆಂಬುವವರು - ಇತ್ತೀಚೆಗೆ ಯು.ಆರ್.ಅನಂತಮೂರ್ತಿಯವರು - ದೇವೇಗೌಡರ ಹೋರಾಟದ ಕೆಚ್ಚಿಗೆ ಮರುಳಾಗಿ, ಆನಂತರ ಅವರ ಅಧಿಕಾರದ ಆಟ ನೋಡಿ ಪೆಚ್ಚಾಗಿಲ್ಲ?) ಅಧಿಕಾರದ ವಾಸನೆ ಹತ್ತಿದೊಡನೆ ಅಷ್ಟೇ ಸುಲಭವಾಗಿ ಈ ತತ್ವಗಳನ್ನೆಲ್ಲ ಕೈ ಬಿಡಬಲ್ಲ ತತ್ವ ನಿರ್ಲಜ್ಜ ಪಕ್ಷವಾಗಿದೆ.

ದೇವೇಗೌಡರ ಕುಟುಂಬ ರಾಜಕಾರಣದ ಸುತ್ತಲೇ ಗಿರಕಿ ಹೊಡೆಯುತ್ತಿರುವ ಈ ಪಕ್ಷ, ರಾಜ್ಯ ರಾಜಕಾರಣದ ಎಲ್ಲ ಬಿಕ್ಕಟ್ಟುಗಳ ಸಮಯದಲ್ಲೂ ಪಕ್ಷಾಂತರದ ಹಾವಳಿಗೆ ಸಿಕ್ಕಿ ತನ್ನ ಅಸ್ತಿತ್ವದ ಆತಂಕವೆನ್ನುದರಿಸುತ್ತದೆ. ಇದಕ್ಕೆ, ಅದು ಮೂಲತಃ ಸಮಯ ಸಾಧಕತ್ವದ ಮೂಲಕ ಅಧಿಕಾರ ಗಳಿಸುವ ತತ್ವವೊಂದನ್ನೇ ನಂಬಿ ಬೆಳೆದು ಉಳಿದಿರುವ ಪಕ್ಷವಾಗಿರುವುದೇ ಕಾರಣವಾಗಿದೆ. ಹಾಗಾಗಿ, ಈ ಪಕ್ಷ ಇದೇ ಸ್ಥಿತಿಯಲ್ಲಿರುವವರೆಗೂ ಕರ್ನಾಟಕದ ರಾಜಕಾರಣ ಸದ್ಯದ ಸಂಕಟದಿಂದ ಪಾರಾಗಲಾರದು. ಆದ್ದರಿಂದ ದೇವೇಗೌಡರು ತಮ್ಮ ರಾಜಕೀಯ ಜೀವಿತದ ಈ ಕೊನೆಯ ಘಟ್ಟದಲ್ಲಾದರೂ ಪಕ್ಷವನ್ನು ಕುಟುಂಬದ ನಿಯಂತ್ರಣದಿಂದ ಮುಕ್ತ ಮಾಡಿ, ಒಂದು ನಿಶ್ಚಿತ ರಾಜಕೀಯ ಸಿದ್ಧಾಂತದ ಮರ್ಯಾದೆಯ ಆಧಾರದ ಮೇಲೆ ಅದನ್ನು ಪುನಾರಚಿಸುವ ಪ್ರಯತ್ನ ಮಾಡಿದರೆ ಮಾತ್ರ ಕರ್ನಾಟಕದ ರಾಜಕಾರಣಕ್ಕೆ ಹೊಸತೊಂದು ತಿರುವು ದೊರೆತೀತು. ಅದನ್ನು ಅವರು ಮತ್ತ ಅವರ ಮಗ ಬಿಜೆಪಿಯೊಂದಿಗೆ ಸಮಯ ಸಾಧಕ ಸಖ್ಯ ಬೆಳೆಸಿ, ಅದೇ ಸಮಯ ಸಾಧಕತನದೊಂದಿಗೆ ಅದಕ್ಕೆ ಅಧಿಕಾರ ಹಸ್ತಾಂತರ ಮಾಡದೆ ಉಂಟು ಮಾಡಿರುವ ಅನಾಹುತಕ್ಕಾಗಿ, ಜನತೆಯ ಬಹಿರಂಗ ಕ್ಷಮೆ ಕೋರುವ ಮೂಲಕ ಆರಂಭಿಸಬಹುದಾಗಿದೆ. ಆಗ ಮಾತ್ರ ತಮ್ಮ ತಂದೆಯಂತಹುದೇ ದೈತ್ಯ ರಾಜಕೀಯ ಪರಿಶ್ರಮವನ್ನು ಪ್ರದರ್ಶಿಸುವ ಮೂಲಕ ಭರವಸೆ ಹುಟ್ಟಿಸಿರುವ ಕುಮಾರಸ್ವಾಮಿಯವರ ನಾಯಕತ್ವ ಒಂದು ನೈತಿಕತೆಯನ್ನೂ ಸ್ಥಾಪಿಸಿಕೊಂಡು, ರಾಜ್ಯಾದ್ಯಂತ ಎಲ್ಲರ ವಿಶ್ವಾಸಾರ್ಹತೆಯನ್ನೂ ಗಳಿಸಿ ಬೆಳೆಯಬಲ್ಲುದು.

ಇನ್ನು ವಿಧಾನಸಭಾ ಚುನಾವಣಾ ಫಲಿತಾಂಶಗಳಿಂದ ಕಂಗಾಲಾದಂತೆ ತೋರುವ ಕಾಂಗ್ರೆಸ್, ಇನ್ನೂ ಆ ಕೋಮಾದಿಂದ ಹೊರಬಂದಂತೆ ಕಾಣುವುದಿಲ್ಲ. ಕೋಮಾದಿಂದ ಹೊರತರಲು ಅದರ ಹೈಕಮಾಂಡ್ ಪ್ರಕಟಿಸಿದ ಹೊಸ ನಾಯಕತ್ವದಲ್ಲೂ ಯಾವುದೇ ಹೊಸತನವಿಲ್ಲದೆ, ಈ ಹೊಸ ನಾಯಕತ್ವದ ಎರಡು ಮುಖಗಳೂ ಸಾರ್ವಜನಿಕರ ಕಣ್ಣುಗಳಲ್ಲಿ ಭ್ರಷ್ಟತೆ ಮತ್ತು ದುಷ್ಟತನಗಳಿಗೆ ಬದಲೀ ಹೆಸರುಗಳಂತಾಗಿಬಿಟ್ಟಿವೆ! ಇದರ ಮಧ್ಯೆ, ತಮ್ಮ ಮಾನಕ್ಕೆ ತಕ್ಕ ಸ್ಥಾನವಿಲ್ಲವೆಂದು ಮುನಿಸಿಕೊಂಡಿರುವ ಸಿದ್ದರಾಮಯ್ಯ ’ಆಪರೇಷನ್ ಕಮಲದ’ ಕಾರಣದಿಂದಾಗಿ ಸಂಭವಿಸಿದ ಉಪ ಚುನಾವಣೆಗಳಲ್ಲಿ ತಮ್ಮ ವೈಯುಕ್ತಿಕ ಅನುಯಾಯಿಗಳನ್ನು ತಮ್ಮದೇ ಪಕ್ಷದ ವಿರುದ್ಧ ಕೆಲಸ ಮಾಡಲು ಬಿಡುವ ಮೂಲಕ ಪ್ರದರ್ಶಿಸಿದ ರಾಜಕಾರಣ ಅತ್ಯಂತ ಬೇಜವಾಬ್ದಾರಿತನದ್ದಾಗಿದೆ. ಇದರಿಂದಾಗಿ ರಾಜ್ಯ ರಾಜಕಾರಣಕ್ಕೆ ಮತ್ತು ಪಕ್ಷಕ್ಕೆ ಆಗಿರುವ ಆಘಾತದ ಹೊರತಾಗಿಯೂ, ಅವರು ಆ ಪಕ್ಷದ ಆಯಕಟ್ಟಿನ ಅಧಿಕಾರ ಸ್ಥಾನಕ್ಕಾಗಿ ಪಕ್ಷದ ಹೈಕಮಾಂಡ್‌ನಿಂದ ಇನ್ನೂ ಗಂಭೀರವಾಗಿ ಪರಿಗಣಿಸಲ್ಪಡುತ್ತಿರುವ ಸನ್ನಿವೇಶವಂತೂ, ಆ ಪಕ್ಷ ನಾಯಕತ್ವದ ವಿಷಯದಲ್ಲಿ ಯಾವ ದರಿದ್ರ ಸ್ಥಿತಿಯನ್ನು ತಲುಪಿದೆ ಎಂಬುದನ್ನು ಸೂಚಿಸುತ್ತದಷ್ಟೆ. ಮೊನ್ನೆ ಕನ್ನಡ ಟಿವಿ ವಾಹಿನಿಯೊಂದರಲ್ಲಿ ಶ್ರೀರಾಮ ಸೇನೆಯ ಪಬ್ ದಾಳಿ ಕುರಿತ ಚರ್ಚೆಯಲ್ಲಿ ಬಿಜೆಪಿಯ ಹಿರಿಯ ಸಿದ್ಧಾಂತಿ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಡಿ.ಎಚ್.ಶಂಕರಮೂರ್ತಿಯವರ ಎದುರು ವಾದಿಸಲು ಈ ಪಕ್ಷದ ಮಹಿಳಾ ನಾಯಕ ಮಣಿಯೊಬ್ಬರು ಪಡುತ್ತಿದ್ದ ಫಜೀತಿ, ಈ ಪಕ್ಷ ತಲುಪಿರುವ ಬುದ್ಧಿ ದಾರಿದ್ರ್ಯಕ್ಕೆ ಸಾಕ್ಷಿಯಂತಿತ್ತು. ಅತಿಯಾದ ಆತ್ಮ ವಿಶ್ವಾಸ ಮತ್ತು ಜೋರು ಬಾಯಿಯ ಹೊರತಾಗಿ ಇನ್ನಾವ ಸಂಪನ್ಮೂಲಗಳನ್ನೂ ಹೊಂದದಂತೆ ತೋರಿದ ಈ ನಾಯಕಿ, ವಿಷಯದ ಬಗ್ಗೆ ಯವುದೇ ತಿಳುವಳಿಕೆ ಇಲ್ಲದೆ ಮಹಿಳಾ ಮಂಡಳದ ಸಭೆಗಳಲ್ಲಿನ ತಮ್ಮ ಅಸಂಬದ್ಧ ಭಾಷಣವನ್ನು ಇಲ್ಲಿಯೂ ಮುಂದುವರೆಸಿದಂತಿತ್ತು! ಇದು ಇಂದು ಪ್ರತಿಬಿಂಬಿತವಾಗುತ್ತಿರುವ ರಾಜ್ಯ ಕಾಂಗ್ರೆಸ್ಸಿನ ಸಾರ್ವಜನಿಕ ಮುಖ! ಸದ್ಯಕ್ಕೆ ಕೃಷ್ಣಭೈರೇಗೌಡರ ಹೊರತಾಗಿ ಭರವಸೆ ಹುಟ್ಟಿಸುವಂತಹ ಇನ್ನಾವ ಮುಖವೂ ಅಲ್ಲಿ ಕಾಣುತ್ತಿಲ್ಲ. ಇದು ರಾಜ್ಯ ರಾಜಕಾರಣದ ನಿಜವಾದ ದುರಂತ.

ಪರಿಸ್ಥಿತಿ ಹೀಗಿರುವಾಗ ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ತಡೆಯುವವರಾರು? ಮಂಗಳೂರಿನ ಪಬ್‌ವೊಂದರ ಆವರಣದಲ್ಲಿ ಮಹಿಳೆಯರ ಮೇಲೆ ಶ್ರೀರಾಮ ಸೇನೆಯವರು ನಡೆಸಿದ ಗೂಂಡಾಗಿರಿಯ ಬಗ್ಗೆ ದ.ಕ. ಜಿಲ್ಲೆಯ ಉಸ್ತುವಾರಿ ಮಂತ್ರಿ ಕೃಷ್ಣ ಪಾಲೇಮಾರ್‌ರ ಪ್ರತಿಕ್ರಿಯೆ ಕೇಳಿದರೆ, ಅವರು ನಾವು ಪಬ್ ಸಂಸ್ಕೃತಿಯನ್ನು ಸಹಿಸುವುದಿಲ್ಲ ಎಂದಷ್ಟೇ ಉತ್ತರಿಸುತ್ತಾರಲ್ಲಾ ಎಂದು ಡಿ.ಎಚ್.ಶಂಕರಮೂರ್ತಿಯವರನ್ನು ಪ್ರಶ್ನಿಸಿದರೆ, ಸಚಿವರು ಆ ಮೂಲಕ ಮಹಿಳೆಯರ ಮೇಲಿನ ಗೂಂಡಾಗಿರಿಯನ್ನೇನೂ ಸಮರ್ಥಿಸಿಲ್ಲವಲ್ಲ ಎಂಬ ಜಾಣ ಉತ್ತರ ನೀಡುತ್ತಾರೆ! ಇದೇ ಬಿಜೆಪಿಯ ಘಾತುಕ ಜಾಣತನ. ಅದರ ಮೂಲಕವೇ ಅದು ತನ್ನ ಕೋಮುವಾದಿ ರಾಜಕಾರಣವನ್ನು ನಡೆಸಿರುವುದು. ಇಂತಹುದೇ ಘಾತುಕ ಜಾಣತನವೇ ಮುಖ್ಯಮಂತ್ರಿ ಯಡಿಯೂರಪ್ಪನವರ ’ಯಾರೇ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಆದರೆ ಅದೇ ಹೊತ್ತಿನಲ್ಲಿ ಪಬ್ ಸಂಸ್ಕೃತಿಯನ್ನೂ ಸಹಿಸುವುದಿಲ್ಲ’ ಎಂಬ ಹೇಳಿಕೆಯಲ್ಲಿ ಎದ್ದು ಕಾಣುವುದು. ಈ ಇಡೀ ಸಂಘ ಪರಿವಾರ ’ಭಾರತೀಯ ಸಂಸ್ಕೃತಿ’ಯ ಹೆಸರಿನಲ್ಲಿ ಆಡುತ್ತಿರುವುದು ಇಂತಹ ಎರಡೆಳೆಯ ನಾಲಿಗೆಯ ಮಾತುಗಳನ್ನೇ! ಅಲ್ಲಾ ಯಡಿಯೂರಪ್ಪನವರೇ, ಶ್ರೀರಾಮ ಸೇನೆಯವರು ಅಲ್ಲಿಗೆ ಬಂದಿದ್ದುದು ಯಾವ ಕಾನೂನನ್ನು ಜಾರಿಗೆ ಮಾಡಲು? ಪಬ್‌ಗಳು ನಡೆಯುತ್ತಿರುವುದು ಕಾನೂನಿನ ಅಡಿಯಲ್ಲೇ ಎಂಬುದು ನಿಮಗೆ ಗೊತ್ತಿಲ್ಲವೆ?

ಪಬ್ ಸಂಸ್ಕೃತಿ ನಿಮಗೆ ಸಹಿಸಲಾಗದ್ದು ಎನ್ನಿಸಿರುವುದು, ಭಾರತೀಯ ಸಂಸ್ಕೃತಿಯ ನೆನಪು ಬಂದಿರುವುದು, ಅಲ್ಲಿಗೆ ಹುಡುಗಿಯರು ಮುಕ್ತವಾಗಿ ಹೋಗಲಾರಂಭಿಸಿದ ಮೇಲಷ್ಟೇ? ಹಾಗಿದ್ದಲ್ಲಿ ಕಾನೂನಿನಲ್ಲಿ ಅವಕಾಶವಿದ್ದರೆ, ಅವರ ಪ್ರವೇಶವನ್ನು ಬಹಿಷ್ಕರಿಸಿ ಅಥವಾ ಪಬ್‌ಗಳನ್ನೇ ಮುಚ್ಚಲು ಈ ಕೂಡಲೇ ಆದೇಶಿಸಿರಿ. ಆದರೆ ಯಾವುದೇ ಕಾನೂನು ಮತ್ತು ಶಿಸ್ತಿನ ಸಮಸ್ಯೆ ಸೃಷ್ಟಿಸದೆ, ತಮ್ಮ ಹಣದಲ್ಲಿ ತಾವು ಸರಿ ಕಂಡಂತೆ ಖುಷಿ ಪಡುತ್ತಿದ್ದ ಯುವಕ-ಯುವತಿಯರ ಮೇಲೆ ಸ್ವಯಂಘೋಷಿತ ಸಂಸ್ಕೃತಿ ರಕ್ಷಕರು ನಡೆಸಿದ ಅನಾಗರಿಕ ಹಲ್ಲೆಯನ್ನು ಖಂಡಿಸುವುದರ ಜೊತೆ ಜೊತೆಯಲ್ಲೇ ಸುಮ್ಮನೆ ಸಂಸ್ಕೃತಿ ರಕ್ಷಣೆಯ ಹುಸಿ ಮಾತುಗಳನ್ನೇಕೆ ಆಡುತ್ತೀರಿ? ಈ ಮೂಲಕ ನೀವು ಪರೋಕ್ಷವಾಗಿ ಹಲ್ಲೆಯನ್ನು ಸಮರ್ಥಿಸುತ್ತಿದ್ದೀರಿ ಅಲ್ಲವೇ? ನೀವು ಮೊದಲು ಸಂರಕ್ಷಿಸಬೇಕಾಗಿರುವುದು ನಮ್ಮ ಸಂವಿಧಾನವನ್ನು ಎಂಬುದು ನಿಮಗೆ ನೆನಪಿರಲಿ. ಜೊತೆಗೆ ನಮಗೂ ಶ್ರೀರಾಮ ಸೇನೆಗೂ ಯಾವ ಸಂಬಂಧವೂ ಇಲ್ಲ ಎಂಬ ನಿಮ್ಮ ಆತ್ಮದ್ರೋಹದ ಮಾತು ಬೇರೆ! ಈ ಹಲ್ಲೆ ರಾಷ್ಟ್ರಾದ್ಯಂತ ಸುದ್ದಿಯಾಗಿ ಎಲ್ಲಡೆಯಿಂದ ಖಂಡನೆ ವ್ಯಕ್ತವಾಗುತ್ತಿದ್ದಂತೆ ಈ ಸೇನೆಯ ನಾಯಕ ಪ್ರಮೋದ್ ಮುತಾಲಿಕ್, ’ಈ ಘಟನೆಯನ್ನು ಅತಿಯಾಗಿ ಪ್ರಚಾರ ಮಾಡಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪಿತೂರಿ ನಡೆದಿದೆ’ ಎಂದು ನೀಡಿರುವ ಹೇಳಿಕೆ, ನಿಮಗೂ ಅವರಿಗೂ ಇರುವ ಯಾವ ಮತ್ತು ಎಂತಹ ಸಂಬಂಧವನ್ನು ಸೂಚಿಸುತ್ತದೆ?

ನೀವು ಭಾರತೀಯ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಕಳೆದ ೨೦ ವರ್ಷಗಳಲ್ಲಿ ನಡೆಸಿಕೊಂಡು ಬರುತ್ತಿರುವ ಕೋಮುವಾದಿ ರಾಜಕಾರಣವೇ ಅನೇಕ ಇಂತಹ ತುಂಡರಸರನ್ನು ಸೃಷ್ಟಿಸಿ ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗಿರುವುದು. ಇವರು ’ಮನೆ ಮನೆಯಲ್ಲೂ ಬಾಂಬ್ ಹಿಡಿದಿರುವ ಪ್ರಗ್ಯಾ ಸಿಂಗ್ ಸೃಷ್ಟಿಯಾಗಲಿರುವಳು!’ ಎಂದರಚುತ್ತಾ, ಕೋಮು ಹಿಂಸೆಯನ್ನು ಪ್ರಚೋದಿಸುವ ಉಗ್ರ ಭಾಷಣಗಳನ್ನು ಮಾಡುತ್ತಾ ರಾಜ್ಯಾದ್ಯಂತ ನಿರ್ಭಯವಾಗಿ ಓಡಾಡಲು ಸಾಧ್ಯವಾಗಿರುವುದು. ಇಂತಹ ಎರಡೆಳೆ ನಾಲಿಗೆಯ ನೀತಿಯಿಂದಾಗಿಯೇ ಮುತಾಲಿಕ, ಅತ್ತಾವರರಂತಹವರು ಪೋಲೀಸ್ ಬಂಧನದಲ್ಲಿದ್ದುಕೊಂಡೇ ತಾವು ಮಾಡಿದ ಕೆಲಸಕ್ಕೆ ತಾವೇ ಬೆನ್ನು ತಟ್ಟಿಕೊಳ್ಳುತ್ತಾ, ’ನಮ್ಮ ಈ ಕಾರ್ಯಕ್ರಮದ ಮೂಲಕ ಪಬ್ ಸಂಸ್ಕೃತಿಯ ಬಗ್ಗೆ ಜನತೆಯನ್ನು ಎಚ್ಚರಿಸಿದ್ದೇವೆ. ಆದ್ದರಿಂದ ನಮ್ಮ ಕೆಲಸ ಸಾರ್ಥಕವಾಗಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳು ಮುಂದುವರೆಯುತ್ತವೆ’ ಎಂದು ಘೋಷಿಸಿಕೊಳ್ಳುವ ಧೈರ್ಯ ವಹಿಸಿರುವುದು. ನಿಮ್ಮ ಪೋಲೀಸ್ ಕಾರ್ಯಾಚರಣೆ ಇಂತಹದು! ಇದರ ಮೇಲೆ ಭಯೋತ್ಪಾದನೆಯ ವಿರುದ್ಧ ನಿಮ್ಮ ವಿದ್ಯಾರ್ಥಿ ಜಾಗೃತಿ ಆಂದೋಲನ ಬೇರೆ! ಇಂದು ಭಾರತದಲ್ಲಿ ಭಯೋತ್ಪಾದನೆ - ಶ್ರೀರಾಮ ಸೇನೆಯವರದೂ ಸೇರಿದಂತೆ - ವಿವಿಧ ರೂಪಗಳನ್ನು ತಾಳಿದೆಯೆಂದು ನಿಮಗೆ ಗೊತ್ತಿದೆಯಷ್ಟೆ? ಆದುದರಿಂದ, ಇದು ನಿಮ್ಮ ಎರಡೆಳೆ ನಾಲಿಗೆ ನೀತಿಯ ಇನ್ನೊಂದು ಅವತಾರವಷ್ಟೆ. ಇದರಲ್ಲೊಳಗೊಂಡಿರುವ ಜನ, ಈ ಸಂಬಂಧ ಕಾಲೇಜುಗಳಿಗೆ ಒದಗಿಸಿರುವ ಸಾಮಗ್ರಿಯ ವಿವರಗಳನ್ನು ನೋಡಿದರೆ, ಇದೊಂದು ಭಯೋತ್ಪಾದನಾ ವಿರೋಧಿ ಆಂದೋಲನವಲ್ಲ; ಬದಲಿಗೆ, ಸಾರ್ವಜನಿಕರ ಹಣ ಬಳಸಿಕೊಂಡು ಸರ್ಕಾರದಿಂದ ಪ್ರಾಯೋಜಿತವಾದ ವಿದ್ಯಾರ್ಥಿಗಳ ಕೋಮುವಾದೀಕರಣ ಕಾರ್ಯಕ್ರಮ ಎಂಬುದು ಸ್ಪಷ್ಟವಾಗುವಂತಿದೆ. ಈಗಾಗಲೇ, ಇದರ ನೇತೃತ್ವ ವಹಿಸಬೇಕಾದ ಅಧ್ಯಾಪಕ ವೃಂದದಲ್ಲಿ ಈ ಬಗ್ಗೆ ಅಸಮಾಧಾನದ ಹೊಗೆ ಏಳಲಾರಂಭಿಸಿದೆ.

ಇದಕ್ಕೆ ಮುಖ್ಯ ಕಾರಣ, ಸಂಘ ಪರಿವಾರಕ್ಕೆ ಧರ್ಮ ಮತ್ತು ಸಂಸ್ಕೃತಿಗಳ ಬಗ್ಗೆ ಒಂದು ಸಂಕುಚಿತ ಮತ್ತು ಸ್ಥಿರವಾದ ಕಲ್ಪನೆ ಇರುವುದು. ಉದಾಹರಣೆಗೆ ಇವರ ಸಂಸ್ಕೃತಿಯ ವಿವರಣೆಗಾಗಿ, ಪ್ರಮೋದ್ ಮುತಾಲಿಕ್ ಪಬ್ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾ ಉಲ್ಲೇಖಿಸಿರುವ ’ಮಾತೃ ದೇವೋ ಭವ’ ಎಂಬ ಮಾತನ್ನೇ ನೋಡಿ. ಏನಿದರ ಅರ್ಥ? ಹೆಣ್ಣು ತಾಯಿಯಾಗಿ ಮಕ್ಕಳನ್ನು ಹೆರುತ್ತಾ, ಸಾಕುತ್ತಾ ಮನೆಯಲ್ಲಿ ದೇವರಂತೆ ಪೂಜೆಗೆ ಒಳಗಾಗಿ ಕೂರಬೇಕೆಂದೆ? ಹಾಗೆ ಕೂತ ಹೆಣ್ಣು ಇಂತಹ ಮಂತ್ರ-ಶ್ಲೋಕ ಹೇಳುವವರ ನಿಯಂತ್ರಣಕ್ಕೆ ಸಿಕ್ಕಿ, ಆಧುನಿಕ ಕಾಲದ ಸಮಾಜ ಸುಧಾರಣಾ ಚಳುವಳಿ ಆರಂಭವಾಗುವ ತನಕ ಯಾವ ಯಾವ ವಿಧಿ-ನಿಷೇಧಗಳನ್ನು ಅನುಭವಿಸುತ್ತಾ, ಎಂತಹ ಸ್ಥಿತಿ ತಲುಪಿದ್ದರು ಎಂಬುದನ್ನು ನಮ್ಮ ಇತಿಹಾಸವೇ ತಿಳಿಸುತ್ತಿದೆ. ಸಂಘ ಪರಿವಾರದವರು ಸ್ವಲ್ಪ ಸಂವೇದನಾಶೀಲರಾಗಿ ಈ ಇತಿಹಾಸವನ್ನು ಓದಿಕೊಂಡರೆ ಒಳ್ಳೆಯದು. ಇಂದು ಮಹಿಳೆ ಸ್ವತಂತ್ರಳಾಗಿ, ಸಂಪ್ರದಾಯವಾದಿ ಸಮಾಜದ ಕಟ್ಟು ಕಟ್ಟಳೆಗಳನ್ನು ದಾಟಿ ಹೋಗಿದ್ದರೆ, ಅದಕ್ಕೆ ನಾವೇ ಪ್ರೀತಿಯಿಂದ ಆಹ್ವಾನಿಸಿ ಸಾಕುತ್ತಾ ಬಂದಿರುವ ಆಧುನಿಕತೆ ನಮ್ಮ ಒಟ್ಟಾರೆ ಸಮಾಜದ ನಿರೀಕ್ಷೆಯನ್ನೂ ಮೀರಿ ಬೆಳೆದಿರುವುದೇ ಕಾರಣವಾಗಿದೆ. ಹಾಗಾಗಿ ಅದನ್ನು ಇಡಿಯಾಗಿ ನಿಯಂತ್ರಿಸದೆ, ಮಹಿಳೆಯರ ಚಲನ-ವಲನಗಳನ್ನು ಮಾತ್ರ ನಿಯಂತ್ರಿಸ ಹೋಗುವುದು ಅವಿವೇಕವಷ್ಟೇ ಅಲ್ಲ, ಅನಾಗರೀಕವೂ ಆಗುತ್ತದೆ. ಇಂತಹ ಅನಾಗರೀಕತೆ, ಅನೇಕ ನೆಲೆಗಳಲ್ಲಿ ವಿಧಿ - ನಿಷೇಧ - ದಂಡನೆಗಳ ವಶಿಷ್ಠ ಸಂಪ್ರದಾಯವಾಗಿ ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿ, ಬಹು ಕಾಲದಿಂದಲೂ ಬೆಳೆದು ಬಂದಿದೆ. ಅನೇಕ ರೀತಿಯ ಸಾಮಾಜಿಕ ಅನಾಹುತಗಳಿಗೆ ಮತ್ತು ಶೋಷಣೆಗಳಿಗೆ ಕಾರಣವಾಗಿದೆ. ಸಂಘ ಪರಿವಾರವು ಭಾರತೀಯ ಸಂಸ್ಕೃತಿಯ ಈ ಧಾರೆಯ ಪ್ರತಿನಿಧಿಯಾಗಿರುವುದರಿಂದಲೇ-ಭಾರತೀಯ ಸಂಸ್ಕೃತಿಯ ಉದಾರವಾದಿ ಬಹುಮುಖಿ ಧಾರೆಯನ್ನು ರಕ್ಷಿಸಿಕೊಳ್ಳುವ ದೃಷ್ಟಿಯಿಂದ-ಅದನ್ನು ಸದಾ ವಿಮರ್ಶೆಗೊಳಪಡಿಸಬೇಕಾದ, ಎದುರಿಸಬೇಕಾದ ಅನಿವಾರ್ಯತೆಯನ್ನುಂಟು ಮಾಡಿದೆ.

ಸಂಘ ಪರಿವಾರಕ್ಕೆ ನಿಜವಾಗಿ ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇದ್ದರೆ, ಅದರ ತಿರುಳು ಅದಕ್ಕೆ ಗೊತ್ತಿದ್ದರೆ, ’ಸರಳ ಜೀವನ, ಉನ್ನತ ಚಿಂತನ’ ಎಂಬುದೇ ಈ ಸಂಸ್ಕೃತಿಯ ಧ್ಯೇಯ ವಾಕ್ಯ ಎಂದು ಅದು ಅರಿತಿರಬೇಕಿತ್ತು. ಆ ಆಧಾರದ ಮೇಲೆ ತನ್ನ ರಾಜಕಾರಣವನ್ನು ಕಟ್ಟಿಕೊಳ್ಳಬೇಕಿತ್ತು. ಆದರೆ ಜಗತ್ತಿಗೇ ಮಾರ್ಗದರ್ಶನ ಮಾಡುವ ಸಂಸ್ಕೃತಿ ಕುರಿತು ಮಾತಾಡುವ ಇವರು, ಜಾಗತೀಕರಣವಾದಿಗಳಂತೆಯೇ ಸ್ಪರ್ಧಾತ್ಮಕ ಜಗತ್ತಿನ ಹಿಂದೆ ಬಿದ್ದು; ’ಬಲಿಷ್ಠ ಭಾರತ’ವನ್ನು ಸೃಷ್ಟಿಸುವ ಧಾವಂತದಲ್ಲಿ ಈ ಧ್ಯೇಯ ವಾಕ್ಯವನ್ನೇ ಮರೆತು, ಕಣ್ಣು ಕುಕ್ಕುವ ’ಪ್ರಕಾಶಮಾನ ಭಾರತ’ವನ್ನು ಸೃಷ್ಟಿಸಿದ್ದಾಗಿ ಬೀಗಿದರು! ಈ ’ಪ್ರಕಾಶಮಾನ ಭಾರತ’ದ ವೈಶಿಷ್ಟ್ಯವೆಂದರೆ, ಕೆಲವು ’ಪುಣ್ಯವಂತ’ರ ಜೊತೆಗೆ ಕೆಲವು ’ಪುಣ್ಯವಂತೆ’ಯರಿಗೂ ಸ್ವತಂತ್ರವಾಗಿ ಸ್ವರ್ಗಸುಖವನ್ನು ಆಹ್ವಾನಿಸುವಂತಹ ಅಪಾರ ಆದಾಯದ ಅವಕಾಶ... ಅದು, ನಮ್ಮ ಸಂಸ್ಕೃತಿಯಾಗಲೀ, ಅದರಲ್ಲಿ ಮೂಡಿದ ವ್ಯಕ್ತಿತ್ವಗಳಾಗಲೀ ಜೀರ್ಣಿಸಿಕೊಳ್ಳಲಾಗದಷ್ಟು ಹಣ! ಅದನ್ನು ಅವರಾದರೂ ಏನು ಮಾಡಿಯಾರು? ಇದರ ಅನೇಕ ಪರಿಣಾಮಗಳ ಒಂದು ಸಣ್ಣ ಕಿಡಿಯಷ್ಟೇ ಪಬ್ ಸಂಸ್ಕೃತಿ!

ನಮ್ಮ ನಾಗರೀಕತೆಯಲ್ಲಿ ’ಹಣ’ ಉತ್ಪತ್ತಿಯಾದದ್ದೇ ಸುಖಕ್ಕಾಗಿ. ಈಗ ಅದು ಅತಿಯಾದ ಆಧುನಿಕತೆಗೆ ಸಿಕ್ಕಿ ’ಮಜಾ’ ಆಗಿ ಪರಿವರ್ತಿತವಾಗಿದೆಯಷ್ಟೇ. ಕೆಲವರು ಈ ಹಡಬೆ ಹಣವನ್ನು ಅಧಿಕಾರ ಮತ್ತು ಪುಣ್ಯ ಸಂಪಾದನೆಗಳಿಗಾಗಿ ವೈಭವೋಪೇತ ಯಜ್ಞ - ಯಾಗ - ವಿಶೇಷ ಪೂಜೆ-ಪುನಸ್ಕಾರಗಳನ್ನು ನಡೆಸಿ ’ಮಜಾ’ ಅನುಭವಿಸುತ್ತಾರೆ. ಇನ್ನು ಕೆಲವರು ಅದನ್ನು ಪಬ್ ಜೀವನ ಶೈಲಿಗಳಲ್ಲ್ಲಿ ಉಡಾಯಿಸಿ ’ಮಜಾ’ ತೆಗೆದುಕೊಳ್ಳುತ್ತಾರಷ್ಟೆ. ಇದು ತಮ್ಮ ಹಣವನ್ನು ರಾಜಕೀಯ ಅನಾಚಾರ ಅಥವಾ ಇತರೆ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿಸುವುದಕ್ಕಿಂತ ಎಷ್ಟೋ ಉತ್ತಮವಲ್ಲವೆ? ಇದನ್ನು ತಡೆಯಲು ನೀವು ಯಾರು? ಒಮ್ಮೆ ಹಣ ಸಂಸ್ಕೃತಿಗೆ ನೀವು yes ಎಂದರೆಂದರೆ, ಮುಂದೆ ಯಾವುದಕ್ಕೂ no ಎನ್ನಲಾರಿರಿ! no ಹೇಳಿದರೆ ಅದು ನಿಮ್ಮ ಚಿಂತನೆಯ ವಿರೋಧಾಭಾಸವಷ್ಟೆ, ಹಣದ ಸಂಸ್ಕೃತಿಯದಲ್ಲ. ಏಕೆಂದರೆ, ಮನಸ್ಸೆಂಬುದು ನಿಮಗಿರಬಹುದು, ಆದರೆ ಹಣಕ್ಕಿರುವುದಿಲ್ಲ. ಇದು ನಿಮಗೆ ಗೊತ್ತಾಗದಿದ್ದರೆ, ಭಾರತೀಯ ಸಂಸ್ಕೃತಿಯ ಎರಡು ಮುಖ್ಯ ಕಲ್ಪನೆಗಳಾದ ’ಪ್ರೇಯ’ ಮತ್ತು ’ಶ್ರೇಯ’ಗಳನ್ನು ಕುರಿತು ಉಪನಿಷತ್ತುಗಳಲ್ಲಿ ಬರುವ ಚರ್ಚೆಯ ಮೇಲೊಮ್ಮೆ ಕಣ್ಣಾಡಿಸಿ!

ಆದುದರಿಂದ ಸಂಘ ಪರಿವಾರದ ನೈತಿಕ ಪಾರುಪತ್ತೇದಾರರೇ, ನಿಮ್ಮ ಈ ಪುಣ್ಯಭೂಮಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ನೆಲೆಗೊಳಿಸುವ ಪವಿತ್ರ ಕಾರ್ಯಕ್ಕಾಗಿ ನೀವು ಮೊದಲು, ಶ್ರೀರಾಮ ಸೇನೆಯ ನಾಯಕರದೂ ಸೇರಿದಂತೆ ನಿಮ್ಮ ನಾಯಕ ಗಣದ ಆಸ್ತಿ- ಪಾಸ್ತಿ, ಅವರು ಪೋಷಿಸುತ್ತಿರುವ ಹಣ ಸಂಸ್ಕೃತಿಯ ನೈತಿಕ ಪಾರುಪತ್ತೇದಾರಿಕೆ ನಡೆಸಿ. ಅವರ ಬದುಕಿನ ಶೈಲಿಯನ್ನೊಮ್ಮೆ ಹತ್ತಿರದಿಂದ ಅವಲೋಕಿಸಿ. ನಿಮ್ಮ ಮುಖ್ಯಮಂತ್ರಿ, ಮಂತ್ರಿಗಳ ಊರುಗಳಲ್ಲಿ ಆಸ್ತಿ-ಪಾಸ್ತಿಗಳ ಬೆಲೆ ಏಕೆ ಯದ್ವಾ ತದ್ವಾ ಏರಿದೆ ಎಂಬುದನ್ನು ಸ್ವಲ್ಪ ಪರಿಶೀಲಿಸಿ. ಸಾಧ್ಯವಾದರೆ, Simple living high thinking ಎಂಬ ಭಾರತೀಯ ಸಂಸ್ಕೃತಿಯ ಕೇಂದ್ರ ಆಶಯವನ್ನು ನಿಮ್ಮ ಪರಿವಾರದಲ್ಲಿ ಬಿತ್ತಿ, ಇತರರಿಗೆ ಉದಾಹರಣೆಯಾಗಿ. ಆಗ ನೋಡುವಿರಂತೆ, ಭಾರತೀಯ ಬದುಕಿನಲ್ಲಿನ ಸಾಂಸ್ಕೃತಿಕ ಬದಲಾವಣೆಯ ಸ್ವರೂಪವನ್ನು!

ಆದರೆ ಸಂಘ ಪರಿವಾರ ತನ್ನ ಚಿಂತನೆಯ ಅಖಂಡತೆಯನ್ನು ಎಂದೋ ಕಳೆದುಕೊಂಡಿದೆ. ಅಥವಾ ಅದು ಹುಟ್ಟಿದುದೇ ಭಾರತೀಯ ಸಂಸ್ಕೃತಿ-ಅಖಂಡತೆಯ ಸೀಳು ನೋಟದಲ್ಲೇ. ಇತ್ತೀಚೆಗೆ ವಿಶ್ವವಿದ್ಯಾಲಯವೊಂದರ ಸಂಕಿರಣವೊಂದರಲ್ಲಿ ಗೋಲ್ವಾಲ್ಕರ್ ಬಗ್ಗೆ ಮಾತನಾಡುತ್ತಿದ್ದ ಸಂಘ ಪರಿವಾರದ ವಕ್ತಾರರೊಬ್ಬರು ಭಾರತೀಯತೆ ಎಂದರೆ ಏನೆಂಬುದನ್ನು ನಿರೂಪಿಸುತಾ, ಭಾರತದ ಭವ್ಯ ಪರಂಪರೆಯನ್ನು ತಮ್ಮದೆಂದು ಒಪ್ಪಿಕೊಂಡವರೇ ನಿಜವಾದ ಭಾರತೀಯರು ಎಂದು ಹೇಳಿದಾಗ, ನಾನು ಬುದ್ಧನನ್ನು ಈ ಪರಂಪರೆಯ ಭಾಗವೆಂದು ನೀವು ಒಪ್ಪಿಕೊಳ್ಳುತ್ತೀರಾ ಎಂದು ಕೇಳಬೇಕಾಯಿತು. ಅವರೇನೋ ತಕ್ಷಣವೇ ಉದಾರವಾಗಿ ಹೌದು ಎಂದು ಉತ್ತರಿಸಿದರು. ಆದರೆ ಹಾಗಾದರೆ ಗೋಲ್ವಾಲ್ಕರ್ ಸೇರಿದಂತೆ ’ಹಿಂದುತ್ವ’ವನ್ನು ನಿರೂಪಿಸುವ ನಿಮ್ಮ ತಾತ್ವಿಕರಾರೂ ಈ ಭಾರತೀಯ ಪರಂಪರೆಯ ಭಾಗವಾಗಿ ಬುದ್ಧನ ಬಗ್ಗೆ ಒಂದು ಮಾತನ್ನೂ ಆಡಿಲ್ಲವಲ್ಲ ಏಕೆ ಎಂದು ಕೇಳಿದರೆ ಅವರಿಂದ ಉತ್ತರವಿಲ್ಲ! ಅಷ್ಟೇ ಅಲ್ಲ, ಅಂದಿನ ಸಾವರ್ಕರರಿಂದ ಹಿಡಿದು ಇಂದಿನ ಪ್ರತಾಪ ಸಿಂಹನವರೆಗೆ ಇವರ ವಕ್ತಾರರನೇಕರ ಪ್ರಕಾರ; ಜಗತ್ತಿನ ಬೆಳಕು ಎಂದು ಕರೆಯಲ್ಪಡುವ ಬುದ್ಧ, ಇವರ ಭವ್ಯ ಭಾರತದ ಅವನತಿಗೆ ಕಾರಣನಾದನಂತೆ! ಏಕೆಂದರೆ ಬುದ್ಧ ತನ್ನ ವೈಚಾರಿಕ ಅಧ್ಯಾತ್ಮಿಕತೆಯ ಮೂಲಕ ಭಾರತದ ಪುರೋಹಿತಶಾಹಿ ರಾಜಕಾರಣಕ್ಕೆ- ಅದರ ಪಟ್ಟಭದ್ರ ಅಂಧ ಪರಂಪರೆಗೆ - ದೊಡ್ಡ ಆಘಾತವನ್ನುಂಟು ಮಾಡಿದ. ಅದರ ಪ್ರತಿಧ್ವನಿಗಳು ಇಂದೂ ಕೇಳಿಬರುತ್ತಿರುವುದು, ಬುದ್ಧನಿಲ್ಲದ ಭಾರತೀಯ ಪರಂಪರೆಯನ್ನು ಕಟ್ಟ ಹೊರಟಿರುವ ಸಂಘ ಪರಿವಾರದವರಿಗೆ ಸಹಿಸಲಸಾಧ್ಯವಾಗಿದೆ!

ಹೀಗೆ ಇವರು ನಮ್ಮ ಆವೃತ ಮತ್ತು ಪರಸ್ಪರ ಹಾಸುಹೊಕ್ಕಾದ ಧರ್ಮ, ಸಂಸ್ಕೃತಿ, ಪರಂಪರೆಗಳ ಅರ್ಥವನ್ನು ಅದರೆಲ್ಲ ವೈಚಾರಿಕ ಮತ್ತು ಉದಾರವಾದಿ ನೆಲೆಗಳಿಂದ ಮುಕ್ತಗೊಳಿಸಿ ಒಂದು ಕಠೋರ ಮಾದರಿಯ ಆಶಯ - ಆಲೋಚನೆ - ಆಶೋತ್ತರಗಳಿಗೆ ಸಂಕುಚಿತಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದನ್ನು ಇತರೆಲ್ಲರ ಮೇಲೆ ಆದರ್ಶದ ರೂಪದಲ್ಲಿ ಹೇರತೊಡಗಿರುವ ಇವರ ರಾಜಕಾರಣ, ರಾಷ್ಟ್ರದ ಭಾವನಾತ್ಮಕ ಏಕತೆ ಹಾಗೂ ಲೌಕಿಕ ಮತ್ತು ಪಾರಮಾರ್ಥಿಕ ಏಳ್ಗೆಯ ದೃಷ್ಟಿಯಿಂದ ಅಪಾಯಕಾರಿಯೇ ಆಗಿದೆ. ಆದರೆ ಇವರ ಎರಡೆಳೆ ನಾಲಗೆ, ಈ ರಾಜಕಾರಣಕ್ಕೆ ಸಾಂಸ್ಕೃತಿಕ ರಾಷ್ಟ್ರೀಯತೆಯೆಂಬ ಬೆಡಗನ್ನು ನೀಡಿಬಿಟ್ಟಿದೆ. ಇದಕ್ಕೆ ತಕ್ಕುದಾಗಿ ಜಾಗತಿಕ ಮುಸ್ಲಿ ಮೂಲಭೂತವಾದ ಮತ್ತು ಭಯೋತ್ಪಾದನೆ ತಲೆ ಎತ್ತಿ ಇವರ ರಾಜಕಾರಣಕ್ಕೆ ಸಾಂದರ್ಭಿಕ ಪೋಷಣೆಯನ್ನೂ ಒದಗಿಸಿಬಿಟ್ಟಿದೆ. ಇದನ್ನು ವಿವರಿಸುವವರನ್ನೂ, ಈ ಬಗ್ಗೆ ಎಚ್ಚರಿಸುವವರನ್ನೂ ಹಿಂದೂ ವಿರೋಧಿಗಳೆಂದೂ, ಬುದ್ಧಿಜೀವಿಗಳೆಂದೂ ಹೆಸರಿಸಿ ಹೀಗೆಳೆಯುವ ಪ್ರಚಾರಾಂದೋಲನವನ್ನೂ ಇವರು ಆರಂಭಿಸಿದ್ದಾರೆ. ಆದರೆ ಇಂತಹ ಆಂದೋಲನ, ಬುದ್ಧಿಗೇಡಿಗಳ ರಾಷ್ಟವನ್ನು ಮಾತ್ರ ನಿರ್ಮಿಸಬಲ್ಲುದು ಎಂದು ಇವರಿಗೆ ಹೇಳ ಬಲ್ಲವರಾದರೂ ಯಾರು?

ಹೀಗೆ ಭಾರತದ ರಾಜಕಾರಣ, ನಿರ್ದಿಷ್ಟವಾಗಿ ಕರ್ನಾಟಕದ ರಾಜಕಾರಣ ನಿಜವಾಗಿ ಇಂದು ಕವಲು ದಾರಿಯಲ್ಲಿದ್ದಂತಿದೆ. ಭಾಜಪದಲ್ಲಿನ ಉದಾರವಾದಿಗಳೇ, ಕಾಂಗ್ರೆಸ್ಸಿಗರೇ, ದೇವೇಗೌಡರೇ, ಇದು ರಾಷ್ಟ್ರದ ಮತ್ತು ನಿರ್ದಿಷ್ಟವಾಗಿ ರಾಜ್ಯದ ಹಿತ ದೃಷ್ಟಿಯಿಂದ ನೀವೆಲ್ಲರೂ ನಿಜವಾಗಿ ಎಚ್ಚೆತ್ತುಕೊಳ್ಳಬೇಕಾದ ಕಾಲ!