ಕರ್ನಾಟಕ Vs ಕನ್ನಡ ( Unicode Version )

ಕರ್ನಾಟಕ Vs ಕನ್ನಡ ( Unicode Version )

ಬರಹ

ಕರ್ನಾಟಕ Vs ಕನ್ನಡ : ಕೆಲವು ಅನುಮಾನಗಳು

ಕರ್ತೃ H.S.R.Raghavend... ದಿನಾಂಕ ಜನವರಿ 18, 2007 - 21:16 ಚಿಂತನೆ

 

ಈ ಬರವಣಿಗೆಯ ತಲೆಬರೆಹವು ಅನೇಕ ಓದುಗರ ಹುಬ್ಬುಗಳು ಮೇಲೇರುವಂತೆ ಮಾಡುತ್ತದೆ. ಕರ್ನಾಟಕ ಮತ್ತು ಕನ್ನಡಗಳು ಒಂದೇ ಎಂದು ತಿಳಿದವರಿಗೆ, ಇದು ಅಚ್ಚರಿಯನ್ನು ಉಂಟುಮಾಡುತ್ತದೆ. ಆದರೆ ನಮ್ಮ ಈ ನಾಡಿನ ನಿಜವಾದ ಸ್ಥಿತಿಗತಿಗಳನ್ನು ಗಮನಿಸಿದಾಗ ಅಂತಹ ಆಶ್ಚರ್ಯಕ್ಕೆ ಕಾರಣವಿರುವಂತೆ ತೋರುವುದಿಲ್ಲ. ಕರ್ನಾಟಕ ಎನ್ನುವುದು ಒಂದು ಭೌಗೋಳಿಕ ಪ್ರದೇಶ. ಇಲ್ಲಿನ ಬಹುಪಾಲು ಜನರು ಬಳಸುವ ಭಾಷೆಯು ಕನ್ನಡ. ಆದರೆ, ಇಲ್ಲಿ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಜನರೂ ಇದ್ದಾರೆ. ಅಲ್ಲದೆ, ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಬೇರೆ ಭಾಷೆಗಳನ್ನು ಉಪಯೋಗಿಸುವ ಕೆಲವು ಪ್ರದೇಶಗಳೂ ಇಲ್ಲಿವೆ. ಇವುಗಳಲ್ಲಿ ಕೆಲವು ಭಾಷೆಗಳಿಗೆ, ಕರ್ನಾಟಕದ ಹೊರಗೆ ಯಾವ ಅಸ್ತಿತ್ವವೂ ಇಲ್ಲ. ತುಳು, ಕೊಡಗು, ಸೋಲಿಗ ಮುಂತಾದ ಹಲವು ಭಾಷೆಗಳು ಈ ಗುಂಪಿಗೆ ಸೇರುತ್ತವೆ. ಉರ್ದು, ತಮಿಳು, ಕೊಂಕಣಿ, ತೆಲುಗು ಮುಂತಾದ ಭಾಷೆಗಳಿಗೆ ಅಂತಹ ಅಸ್ತಿತ್ವವಿದೆ. ಆದರೆ, ಇಲ್ಲಿ ಆ ಭಾಷೆಗಳನ್ನು ಬಳಸುವವರಿಗೆ, ತಮ್ಮ ಮೂಲ ರಾಜ್ಯಗಳ ನೊಕಟ ಸಂಪರ್ಕವೇನೂ ಇಲ್ಲ. ಅವರಲ್ಲಿ ಬಹುಪಾಲು ಜನರು, ತಲೆಮಾರುಗಳಿಂದ ಕರ್ನಾಟಕದಲ್ಲಿಯೇ ಇರುವವರು. ಅವರು ನೂರಕ್ಕೆ ನೂರರಷ್ಟು ಕರ್ನಾಟಕದ ಪ್ರಜೆಗಳು. ತಾಯಿನುಡಿಯ ಅಗತ್ಯದ ಬಗ್ಗೆ ಇಷ್ಟೆಲ್ಲ ಮಾತನಾಡುವ ನಮಗೆ, ಅವರ ತಾಯಿನುಡಿಗಳನ್ನು ಕಾಪಾಡುವ ಹೊಣೆಗಾರಿಕೆಯೂ ಇದೆ. ನಾವು ಇಂಗ್ಲಿಷ್, ಹಿಂದಿ, ಸಂಸ್ಕೃತ ಮುಂತಾದ ಭಾಷೆಗಳನ್ನು ಎದುರಿಸುವಾಗ, ಮಾತೃಭಾಷೆಯೆಂಬ ಆಯುಧವನ್ನು ಬಳಸಿದರೆ, ನಮ್ಮೊಳಗೇ ಇರುವ ಇತರ ಭಾಷೆಗಳ ಪ್ರಶ್ನೆ ಬಂದಾಗ ಪ್ರಾದೇಶಿಕ ಭಾಷೆಯ ಪರವಾದ ವಾದವನ್ನು ಮಂಡಿಸುತ್ತೇವೆ. ಕರ್ನಾಟಕದಲ್ಲಿಯೇ ಇರುವ ಅನ್ಯ ಮಾತೃಭಾಷಿಕರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುವುದಿಲ್ಲ. ಈಚಿನ ದಿನಗಳಲ್ಲಿ, ಈ ಅನ್ಯಭಾಷಿಕರ ಸಂಸ್ಕೃತಿ ಮತ್ತು ಕಲೆಗಳನ್ನು ನಮ್ಮದಾಗಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ಕನ್ನಡಿಗರ ಪ್ರಧಾನ ವಾಹಿನಿಯು ಅಷ್ಟೊಂದು ಆಸಕ್ತವಾಗಿಲ್ಲ.

 

ಇಲ್ಲಿ ಇನ್ನೊಂದು ಪ್ರಶ್ನೆಯೂ ಆಡಕವಾಗಿದೆ. ನಾವು ನಮ್ಮ ಬರವಣಿಗೆಯಲ್ಲಿ, ಪಠ್ಯಪುಸ್ತಕಗಳಲ್ಲಿ, ಜ್ಞಾನಸಾಹಿತ್ಯದಲ್ಲಿ ಬಳಸುವ ಕನ್ನಡವು ಎಂತಹ ಕನ್ನಡವಾಗಿದೆ, ಯಾರ ಕನ್ನಡವಾಗಿದೆ ಎನ್ನುವುದು ಆ ಮುಖ್ಯ ಪ್ರಶ್ನೆ. ಅನಕ್ಷರಸ್ಥರ ಮಾತು ಹಾಗಿರಲಿ, ಕನ್ನಡದಲ್ಲಿ ಓದಲು ಬರೆಯಲು ಕಲಿತಿರುವವರಿಗೂ ಅರ್ಥವಾಗದ, ಅವರು ಎಂದಿಗೂ ಓದದ/ಓದಲಾಗದ ಕನ್ನಡವನ್ನು ನಾವು ಏಕಾಗಿ ಬಳಸುತ್ತೇವೆ? ಅದು ಯಾರನ್ನು ಕಾಪಾಡಿಕೊಳ್ಳುವ ಉಪಾಯವಾಗಿದೆ? ಹೀಗೆ ಮಾಡಬಾರದೆಂದು ಹೇಳಹೊರಟ ಡಿ.ಎನ್ ಶಂಕರಭಟ್ಟರ ಮೇಲೆ ಕರ್ನಾಟಕದ `ವಿದ್ವಾಂಸ`ರ ಸಮುದಾಯವೇ ಮುಗಿಬಿದ್ದಿತಲ್ಲ. ಯಾಕೆ? ಇದು ಈಗಾಗಲೇ ಮುಂದುವರೆದಿರುವ ಜಾತಿ ಮತ್ತು ವರ್ಗಗಳ ಹಿತವನ್ನು ಕಾಪಾಡಿಕೊಳ್ಳುವ ಹುನ್ನಾರವಲ್ಲವೇ? ವಿಚಾರಗಳ, ತಿಳಿವಳಿಕೆಯ ಸೃಷ್ಟಿ ಮತ್ತು ಸಂವಹನಕ್ಕೆ ಯಾವ ಬಗೆಯ ಭಾಷೆಯನ್ನು ಬಳಸಬೇಕು ಎನ್ನುವದರ ಬಗ್ಗೆ ಇರುವ ಬಿಕ್ಕಟ್ಟುಗಳು ಕೆಲಸಗಾರರನ್ನು, ಕುಶಲಕರ್ಮಿಗಳನ್ನು ಮೌನಿಗಳಾಗಿಸಿಲ್ಲವೇ? ಕೆಲಸ ಮಾಡುವವರೇ ಬೇರೆ, ಅದರ ಬಗ್ಗೆ ಮಾತನಾಡುವವರೇ ಬೇರೆ ಎಂಬ ವಿದ್ಯಮಾನವು ಇಂದು ಒಟ್ಟು ಜನಪದದ ಬದುಕಿನ ಬಗ್ಗೆಯೇ ಉಂಟಾಗಿದೆಯಲ್ಲ, ಯಾಕೆ?

 

ಉದಾಹರಣೆಗೆ, ಈಗ ನಾವು ಕರ್ನಾಟಕದ ಬಂಗಾರದ ಹಬ್ಬವನ್ನು ಧಾಂ ಧೂಂ ಎಂದು ಆಚರಿಸುತ್ತಿದ್ದೇವೆ. ಇದು ಕೇವಲ ಕನ್ನಡದ/ಕನ್ನಡಿಗರ ಹಬ್ಬವೋ? ಅಥವಾ ಕರ್ನಾಟಕದಲ್ಲಿರುವ ಎಲ್ಲರ ಹಬ್ಬವೋ? ಒಂದೇ ಒಂದು ತಮಿಳು, ಮರಾಠಿ, ತೆಲುಗು, ತುಳು ಅಥವಾ ಕೊಡಗು ಭಾಷೆಯ ಪುಸ್ತಕವನ್ನು ಪ್ರಕಟಿಸಬಹುದೆಂದು ನಮಗೆ ಹೊಳೆಯುವುದೇ ಇಲ್ಲವಲ್ಲ, ಈ ಹಬ್ಬದಲ್ಲಿ ಅನ್ಯಭಾಷಿಕರನ್ನು ಸಕ್ರಿಯವಾಗಿ ಸೇರಿಸಿಕೊಳ್ಳುವ ಪ್ರಯತ್ನವನ್ನು ನಾವು ಎಷ್ಟರ ಮಟ್ಟಿಗೆ ಮಾಡಿದ್ದೇವೆ? ಬದಲಾಗಿ, ಅನ್ಯಭಾಷಿಕರ ಮೇಲೆ ಆಕ್ರಮಣಕಾರಿಯಾದ ನಿಲುವುಗಳನ್ನು ತಳೆಯಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆಯೇ? ಬೆಳಗಾವಿ ನಗರದಲ್ಲಿ ವಿಧಾನಮಂಡಳದ ಅಧಿವೇಶನವನ್ನು ಕರೆಯುವ ನಿರ್ಧಾರ ಮತ್ತು ಮಹಾಜನ ವರದಿಯು ಜಾರಿಯಾಗಬೇಕೆಂದು ಹಟಹಿಡಿಯುವ ಚಳುವಳಿಗಳು ಯಾವ ದಿಕ್ಕಿನ ಚಲನೆಗಳು? ಎಂದರೆ, ಕನ್ನಡಿಗರ ಪರವಲ್ಲದ ನಿಲುವುಗಳೆಲ್ಲವೂ ಕರ್ನಾಟಕಕ್ಕೆ ಪರವಲ್ಲದ ನಿಲುವುಗಳೆಂದು ಹೇಳುವುದು ಹೇಗೆ?

 

ಕನ್ನಡದ ಮತ್ತು ಕರ್ನಾಟಕದ ವಿಶಿಷ್ಟ ಅಸ್ತಿತ್ವಕ್ಕೆ ನಿಜವಾಗಿಯೂ ಧಕ್ಕೆ ತಂದಿರುವ/ತರುತ್ತಿರುವ ಇಂಗ್ಲಿಷ್‌ನ ಬಗ್ಗೆ ಮತ್ತು ಅದಕ್ಕೆ ಅಂತಹ ದೈತ್ಯಶಕ್ತಿಯನ್ನು ಕೊಡುತ್ತಿರುವ ಜಾಗತೀಕರಣದ ಒತ್ತಡಗಳ ಬಗ್ಗೆ ತೋರಿಸದ ಪ್ರತಿರೋಧವನ್ನು ಇತರ ದೇಶಭಾಷೆಗಳ ಬಗ್ಗೆ ಯಾಕೆ ತೋರಿಸಬೇಕು? ಹಾಗೆ ನೋಡಿದರೆ, ತಮಿಳು, ಹಿಂದಿ, ಬಂಗಾಳಿ, ತೆಲುಗು ಮುಂತಾದ ಭಾಷೆಗಳು, ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಬೆಳೆದು ನಿಂತಿವೆಯೇ? ತಮಿಳಿನವರ ಆಕ್ರಮಣ, ಮರಾಠಿಗರ ದಾಳಿ ಮುಂತಾದ ಮಾತುಗಳನ್ನು ಬಳಸುವ ನಾವು, ಇದನ್ನು ನಮ್ಮದೇ ಆದ ರಚನಾತ್ಮಕ ನಿಲುವಿನಿಂದ ಸರಿಪಡಿಸಿಕೊಂಡಿದ್ದೇವೆಯೇ? ಇಡೀ ಕನ್ನಡ ಸಮುದಾಯವೇ ಇಂಗ್ಲಿಷ್‌ಗೆ ಮುಗಿಬಿದ್ದಿರುವಾಗ, ರಾಜಕೀಯ ಇಚ್ಛಾಶಕ್ತಿಯ ಲವಲೇಶವೂ ಇಲ್ಲದ ನಾವು `ಗಂಡುಸಾದರೆ ನಿನ್ನ ಬಲಿಕೊಡುವೆಯೇನೋ' ಎಂಬ ಪ್ರಶ್ನೆಗೆ ಹೇಡಿ ಮಾರ್ದನಿಗಳಾಗಿಯೇ ಉಳಿಯುವುದಿಲ್ಲವೇ? ಬದಲಾಗಿ, ನಮ್ಮ ಸಾಹಿತ್ಯ ಹಾಗೂ ಸಂಸ್ಕೃತಿಗಳು ಆ ಅನ್ಯ ಮೂಲಗಳಿಂದ ಸಾಕಷ್ಟು ಶ್ರೀಮಂತಿಕೆಯನ್ನು ಪಡೆದುಕೊಂಡಿಲ್ಲವೇ? ಈ ಪ್ರಶ್ನೆಗಳು ಇಂದಿಗೂ ಬಹಳ ಮೌಲಿಕವೆಂದು ನನಗೆ ತೋರುತ್ತದೆ. ಈ ಸ್ಥೂಲ ಹಿನ್ನೆಲೆಯಲ್ಲಿ, ಕೆಲವು ಸಂಗತಿಗಳನ್ನು ಸಾಧ್ಯವಾದಷ್ಟು ವಿವರವಾಗಿ ಪ್ರಸ್ತಾಪಿಸುವುದು ನನ್ನ ಉದ್ದೇಶ.

 

1. ಮಗುವು ಭಾಷೆಗಳನ್ನು ಕಲಿಯುವ ವಿಧಾನಗಳನ್ನು ಕುರಿತು, ನಮ್ಮ ಕಾಲದ ವಿದ್ಯಾವಂತರಲ್ಲಿಯೂ ಕೆಲವು ತಪ್ಪು ತಿಳಿವಳಿಕೆಗಳಿವೆ. ಒಂದು ಗೊತ್ತಾದ ವಯಸ್ಸಿನಲ್ಲಿ, ಯಾವುದೇ ಮಗುವಿಗೆ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯಲು ಖಂಡಿತವಾಗಿಯೂ ಸಾಧ್ಯ. ಅನ್ಯ ಭಾಷೆಯ ಕಲಿಕೆಯು ಮಾತೃಭಾಷೆಯ ಕಲಿಕೆಗೆ ಅಡ್ಡಿಯಾಗುವುದಿಲ್ಲ. ಆ ಭಾಷೆಗಳು ಸೂಕ್ತವಾದ ರೀತಿಯಲ್ಲಿ ಅನಾವರಣವಾಗುವುದು ಮುಖ್ಯ. ಮಾತನಾಡುವುದರಲ್ಲಿ ಪರಿಣತಿ ಬರುವುದೆಂದರೆ, ಮಗುವಿನ ಅನುಭವಲೋಕದಲ್ಲಿ ನಡೆಯುವ ವಿಸ್ತರಣಗಳೇ ಆಗಿರುತ್ತವೆ. ಸಮಾಜವು ಭಾಷಾಬಳಕೆಯ ವಿವಿಧ ಬಗೆಗಳ ನಡುವೆ ತೋರಿಸುವ ಪಕ್ಷಪಾತವು, ನಮ್ಮ ನಡುವೆ, ಮಾತುಬಲ್ಲ, ಜಾಣರಾದ, ಹಲವು ವಿಷಯಗಳಲ್ಲಿ ಪರಿಣಿತರಾದ ಆದರೂ ಕೀಳರಿಮೆಯಿಂದಲೇ ಮೂಕರಾದ ಜನರನ್ನು ಸೃಷ್ಟಿಸುತ್ತದೆ. ತಮ್ಮ ತಮ್ಮ ನಡುವೆ ಲೀಲಾಜಾಲವಾಗಿಯೇ ಮಾತನಾಡುವ ಈ ಸಾಮಾನ್ಯ ಜನರು ಸಾರ್ವಜನಿಕ ಸಂದರ್ಭಗಳಲ್ಲಿ ಮೌನ ತಳೆಯುತ್ತಾರೆ. ಇಂಗ್ಲಿಷ್ ಅನ್ನು ಬಳಸುವ ಕಡೆ ಎದ್ದುಕಾಣುವ ಈ ಪ್ರವೃತ್ತಿಯು ಕನ್ನಡದ ಶಿಷ್ಟ ಬಗೆಗಳ ಬಳಕೆಯ ಸಂದರ್ಭದಲ್ಲಿಯೂ ಗಂಭೀರವಾಗಿಯೇ ಕಾಡುತ್ತದೆ. ಶಿಕ್ಷಣ, ಮಾಹಿತಿಗಳ ವಿನಿಮಯ ಮತ್ತು ಸಾಂಸ್ಕೃತಿಕೆವಾದ ಕೊಡುಪಡೆಗಳಲ್ಲಿ, ಎಲ್ಲರಿಗೂ ಸಮಾನವಾಗಿ ಸಂವಹನವಾಗುವ ಪ್ರಮಾಣ ಭಾಷೆಯೊಂದರ ಬಗ್ಗೆ ಎಲ್ಲರೂ ಮಾತನಾಡಿ, ಆ ಮೂಲಕ ಸಂಸ್ಕೃತ ಅಥವಾ ಇಂಗ್ಲಿಷ್‌ನ ಪರಿಭಾಷೆಯನ್ನು ಹೇರಲು ತಯಾರಾಗುತ್ತೇವೆ. ಆದರೆ, ಕನ್ನಡದ ಉಪಭಾಷೆಗಳನ್ನು ಗ್ರಹಿಸುವುದೇ ಬೇರೆ, ಬಳಸುವುದೇ ಬೇರೆ. ಗುಲ್ಬರ್ಗಾ ಪ್ರದೇಶದ ಕನ್ನಡವನ್ನು ಅರ್ಥಮಾಡಿಕೊಳ್ಳಲು, ಅದನ್ನು ಹಾಗೆ ಮಾತನಾಡಲು ಅಗತ್ಯವಾದ ಪರಿಣತಿಯ ಅಗತ್ಯವಿಲ್ಲ. ಆದ್ದರಿಂದಲೇ ಇಂದು ಕನ್ನಡ ಸಾಹಿತ್ಯವು, ಭೌಗೋಳಿಕ ಮತ್ತು ಸಾಮಾಜಿಕ ಉಪಭಾಷೆಗಳ ಬಳಕೆಯನ್ನು ಒಂದು ಮಿತಿಯೆಂದು ತಿಳಿಯದೆ, ಆ ಮೂಲಕವೇ ಹೊಸ ನೆಲೆಗಳನ್ನು ಕಂಡುಕೊಳ್ಳುತ್ತಿರುವುದು. ಇದರ ಜೊತೆಗೆ, ಕನ್ನಡದಲ್ಲಿ ಜ್ಞಾನದ ಸೃಷ್ಟಿಗೆ ಮತ್ತು ಸಂವಹನಕ್ಕೆ ಆಗತ್ಯವೆನಿಸಿದಾಗ, ಸಮುದಾಯಗಳು ಅದಕ್ಕೆ ಅಗತ್ಯವಾದ ಪರಿಭಾಷೆಯನ್ನು ರೂಪಿಸಿಕೊಳ್ಳುತ್ತವೆ. ಈ ಕೆಲಸದಲ್ಲಿ ಮಾಧ್ಯಮಗಳೂ ನೆರವಾಗುತ್ತವೆ. ತನಗಿರುವ ವ್ಯಾಪಾರೀಕರಣದ ಒತ್ತಡಗಳ ನಡುವೆಯೂ ಇಂದು ಮಾಧ್ಯಮಗಳಿಗೆ ಇರುವ `ಜನಗಳಿಕೆ'ಯ ಶಕ್ತಿಯು ವಿಶ್ವವಿದ್ಯಾಲಯಗಳಿಗೆ ಇಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜ್ಞಾನವು ಕನ್ನಡದಲ್ಲಿ ಮೈದಳಯಬೇಕಾಗಿರುವುದು ಜನಸಮುದಾಯಗಳ ನಡುವೆಯೇ ವಿನಾ, ಆ ಹೊಣೆ ತಮ್ಮದೆಂದು ಬೀಗುತ್ತಿರುವ ಪಂಡಿತಗರ್ವಗಳಿಂದ ಅಲ್ಲ. ಇಂದು ಕರ್ನಾಟಕದಲ್ಲಿ ಅಪಾರವಾದ ಜ್ಞಾನದ ಸೃಷ್ಟಿಯು ಆಗುತ್ತಿದ್ದರೂ ಅದನ್ನು ಕನ್ನಡದ ಭಾಷಿಕಸಂಪತ್ತಾಗಿ ಪರಿವರ್ತಿಸುವ ಅನಿವಾರ್ಯತೆಯು ಉಂಟಾಗಿಲ್ಲ. ಹಲವು ಬಗೆಯ ತಿಳವಳಿಕೆಗಳನ್ನು ಒಡಮೂಡಿಸುತ್ತಿರುವ ಜನರಲ್ಲಿ, ಅದನ್ನು ಕನ್ನಡದಲ್ಲಿ ಹೇಳುವ ಸಾಮರ್ಥ್ಯವನ್ನಾಗಲೀ ಉಮೇದನ್ನಾಗಲೀ ರೂಪಿಸುವುದರಲ್ಲಿ ನಮ್ಮ ಶಿಕ್ಷಣವು ವಿಫಲವಾಗಿದೆ. ಹದಿನೈದು ವರ್ಷಗಳ ಕಾಲ ಭಾಷಾಭ್ಯಾಸ ಮಾಡಿದರೂ ಕನ್ನಡವನ್ನಾಗಲೀ ಇಂಗ್ಲಿಷ್ ಭಾಷೆಯನ್ನಾಗಲೀ ದಿನನಿತ್ಯದ ಕನಿಷ್ಠ ಅಗತ್ಯಕ್ಕಿಂತ ನಸುಮಾತ್ರವೂ ಹೆಚ್ಚಾಗಿ ಬಳಸದ `ವಿದ್ಯಾವಂತರ" ಸೃಷ್ಟಿಯು ಕರ್ನಾಟಕ ಮತ್ತು ಕನ್ನಡಗಳ ನಡುವೆ ವಿಚಿತ್ರವಾದ ವಿರೋಧವನ್ನು ತಂದಿದೆ. ಇಂದಿನ ಸನ್ನಿವೇಶದಲ್ಲಿ, ಒಟ್ಟು ಕರ್ನಾಟಕದಲ್ಲಿ ಅಡಗಿರುವ ತಿಳಿವಳಿಕೆಯು ಯಾವುದೇ ಅಡೆತಡೆಗಳಿಲ್ಲದೆ, ಹೊರಹಾದಿಗಳನ್ನು ಕಂಡುಕೊಳ್ಳದೆ ಇರಲು, ಪಾರಿಭಾಷಿಕತೆಯಲ್ಲಿ ಮುಳುಗಿಹೋಗಿರುವ ಕನ್ನಡವೇ ಕಾರಣವಾಗಿದೆ. ರೈತ, ಬಡಗಿ, ಚಮ್ಮಾರರುಗಳು, ತಮ್ಮದೇ ಭಾಷೆಯಲ್ಲಿ ತಮ್ಮಂತಹವರಿಗೆ ತಲುಪುವಂತೆ ಹೇಳಿದ್ದನ್ನು ಜ್ಞಾನವೆಂದು ಒಪ್ಪಿಕೊಳ್ಳುವ ಸ್ಥಿತಿಯನ್ನು ನಮ್ಮ ಅಧಿಕಾರ ಕೇಂದ್ರಗಳು ತಲುಪಬೇಕಾಗಿದೆ. ಇಲ್ಲವಾದರೆ ಕರ್ನಾಟಕದಲ್ಲಿ ಜ್ಞಾನ, ಕನ್ನಡದಲ್ಲಿ ಶೂನ್ಯ ಎಂಬ ಸ್ಥಿತಿಯು ಸಹಜವಾಗುತ್ತದೆ.

 

೨. ಯಾವುದೇ ನಾಡಿನಲ್ಲಿ, ಕಲೆ ಮತ್ತು ಸಂಸ್ಕೃತಿಗಳು ಯಾವ ಒತ್ತಡಗಳಿಂದ ರೂಪಿತವಾಗುತ್ತವೆ ಮತ್ತು ನಿರ್ದೇಶಿತವಾಗುತ್ತವೆ ಎಂಬುದು ಮುಖ್ಯವಾದ ಪ್ರಶ್ನೆ. ವ್ಯಕ್ತಿಗಳ ಸಾಧನೆಯ ಮೂರ್ತ ನೆಲೆಗಳ ಹಿಂದೆ, ಸಾಮಾಜಿಕ ಚಲನವಲನಗಳ ಅಮೂರ್ತ ನೆಲೆಯು ಸದಾ ಜಾಗೃತವಾಗಿರುತ್ತದೆ. ಸಂಸ್ಕೃತಿಯ ಸೃಷ್ಟಿ, ವಿತರಣೆ ಮತ್ತು ಮೌಲ್ಯಮಾಪನಗಳನ್ನು ಯಾವ ವರ್ಗಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿವೆ ಎನ್ನುವುದು ಬಹಳ ಮುಖ್ಯವಾದ ಸಂಗತಿ. ನಮಗೆ ಕಲಾವಿದರು ಮುಖ್ಯವಾಗಿ, ಕಲೆಯನ್ನು ನಿಯಂತ್ರಿಸುವ ಸಂಗತಿಗಳು ಗೌಣವಾಗಿಬಿಟ್ಟಾಗ, ಮಠಾಧೀಶರುಗಳು, ವಿಜಯಮಲ್ಯರಂತಹವರು, ಜ್ಞ್ಞಾನಪೀಠ ಪ್ರಶಸ್ತಿವಿಜೇತರು, ನಟರ ಬದಲಾಗಿ ವಿಜೃಂಭಿಸುವ ``ತಾರೆಯರು" ಇವೆರೆಲ್ಲರ ಸಹಜೀವನವನ್ನು ರೋಮಾಂಚಿತರಾಗಿ ಒಪ್ಪಿಕೊಳ್ಳುತ್ತೇವೆ. `ಜನಪ್ರಿಯತೆ'ಯೆಂಬ ಮೃಗಜಲಕ್ಕೂ ಜನಪರತೆಯೆಂಬ ಜೀವಜಲಕ್ಕೂ ಇರುವ ಅಂತರಗಳೇ ಅಳಿಸಿಹೋಗುವ ಸ್ಥಿತಿಯು ಬಹಳ ಅಪಾಯಕಾರಿಯಾದುದು. ಈ ಹಿನ್ನಲೆಯಲ್ಲಿ ನೋಡಿದಾಗ, ಈಗ ಕರ್ನಾಟಕದ ಸಂಸ್ಕೃತಿ ಮತ್ತು ಕಲೆಗಳ ಹೆಸರಿನಲ್ಲಿ, ಕನ್ನಡದ ಹೆಸರಿನಲ್ಲಿ ಇಡೀ ಕರ್ನಾಟಕಕ್ಕೆ ಉಣಬಡಿಸುತ್ತಿರುವ ಸರಕುಗಳ ಉಪಯುಕ್ತತೆ ಮತ್ತು ಗುಣದ ಬಗ್ಗೆ ಯೋಚನೆ ಮಾಡುವ ಸಾಧ್ಯತೆಗಳಾದರೂ ಇವೆಯೇ? ಹಾಗೆಯೇ ಜಾನಪದ ಕಲೆಗಳ ಬಗಗೆ ಯೋಚನೆ ಮಾಡುವಾಗ, ಕೇವಲ ಗತಕಾಲದ ಪಳೆಯುಳಿಕೆಗಳನ್ನು ಪ್ರದರ್ಶನಕ್ಕೆ ಇಟ್ಟು, ಇಂದು ನಮ್ಮ ನಡುವೆ ದಲಿತಶಿಬಿರಗಳಲ್ಲಿ, ಹೋರಾಟದ ಹಾಡುಗಳಲ್ಲಿ, ರಾಜಕಾರಣದ ವಿರುದ್ಧವಾದ ಭ್ರಮನಿರಸನದಲ್ಲಿ ಮೂಡಿಬರುತ್ತಿರುವ ಜನಪರ ಕಲೆಗಳ ಬಗ್ಗೆ ನಿರ್ಲಕ್ಷ್ಯ ತೋರುವುದೇಕೆ? ಜಾನಪದವೆನ್ನುವುದು ವರ್ತಮಾನದ ಬದುಕಿನಲ್ಲಿ ಜೀವಂತವಾಗಿರಬೇಕಾದ ಚಲನಶೀಲ ಸಂಗತಿಯಲ್ಲವೇ? ಇವೆಲ್ಲದರ ಬಗ್ಗೆ ಯೋಚನೆ ಮಾಡುವ ಹೊಣೆಹೊತ್ತ ಜನರೂ ಈ ಜಾಲದ ಭಾಗವೇ ಆಗಿಬಿಟ್ಟರೆ ಮಾಡುವುದೇನು? ಸನ್ನಿವೇಶದ ಬಗ್ಗೆ ಗಂಭೀರವಾದ ನಿಲುವುಗಳನ್ನು ತೆಗೆದುಕೊಳ್ಳಬಹುದಾದ ಮಾಧ್ಯಮಗಳೂ ಎಲ್ಲವನ್ನೂ ಮನರಂಜನೆಯ ಗರಂ ಮಸಾಲಾ ಆಗಿ ಬದಲಿಸಿಲ್ಲವೇ? ಸಾಹಿತ್ಯ ಸಮ್ಮೇಳನದ, ವಿವಾದಗಳನ್ನು ಬದಿಗಿರಿಸಿ ನೋಡಿದಾಗಲೂ ಅದು ಜನದ ಹಣದ ದುರ್ವ್ಯಯವಲ್ಲವೇ? ಲೈಮ್‌ಲೈಟ್ ಕೆಳಗೆ ಬರುವ ಪ್ರತಿಯೊಬ್ಬರನ್ನೂ ಅವಿಮರ್ಶಕವಾಗಿ ವೈಭವೀಕರಿಸುವುದರ ಹಿಂದೆ ಇರುವ ಹುನ್ನಾರಗಳೇನು? ನಾನು ಕೇವಲ ನೈತಿಕವಾದ, ಭ್ರಷ್ಟಾಚಾರ ವಿರೋಧಿಯಾದ ಮಡಿನೆಲೆಯಲ್ಲಿ ನಿಂತು ಮಾತನಾಡುತ್ತಿಲ್ಲ. ಬದಲಾಗಿ, ನಾಡಿನ ನಿಜವಾದ ಹಿತಾಸಕ್ತಿಗಳಿಗೂ ಆಸಕ್ತಹಿತಗಳಿಂದ ಘೋಷಿತವಾದ ಹಿತಾಸಕ್ತಿಗಳಿಗೂ ಇರುವ ವ್ಯತ್ಯಾಸದ ಬಗ್ಗೆ ನನ್ನ ಕಾಳಜಿ ಇದೆ. ಭಾಷಿಕವೆಂದು ಹೇಳಲಾದ ಪ್ರಗತಿಗೂ ಸಾಮುದಾಯಿಕವಾದ ಪ್ರಗತಿಗೂ ಕಂದರಗಳು ಏರ್ಪಟ್ಟಾಗ ನಾವು ಕಟ್ಟೆಚ್ಚರವನ್ನು ತಳೆಯಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಒಂದು ಬಗೆಯ ಭಾಷೆಯ ಮೇಲೆ ಪ್ರಭುತ್ವ ಪಡೆದುಕೊಂಡ ಸಾಹಿತಿಗಳು, ಉಳಿದವರೆಲ್ಲರ ಪರವಾಗಿ, ಅಂತೆಯೇ ಸೂರ್ಯನ ಕೆಳಗಿರುವ ಎಲ್ಲ ವಿಷಯಗಳ ಬಗ್ಗೆ, ಮಾತನಾಡಲು ಹಕ್ಕುಪತ್ರ ಪಡೆದವರಂತೆ ವರ್ತಿಸುವುದು ಬಹಳ ಅಪಾಯಕಾರಿಯೆಂದೇ ನನ್ನ ತಿಳಿವಳಿಕೆ. ಹೀಗೆ ಆಗಲು, ಭಾಷೆಯ ಸ್ವರೂಪ ಮತ್ತು ಕಲಾತ್ಮಕತೆಗಳ ಬಗ್ಗೆ ಇರುವ ವೈಭವೀಕೃತವಾದ ನಿಲುವುಗಳೇ ಕಾರಣ.

 

೩. ನನ್ನ ಕುತೂಹಲವನ್ನು ಕೆರಳಿಸಿರುವ ಇನ್ನೊಂದು ಸಂಗತಿಯೆಂದರೆ, ನಮ್ಮ ಭಾಷೆಯು ಬಯಸುವ ಹೊಸ ಪದಗಳನ್ನು ಎಲ್ಲಿಂದ ತೆಗೆದುಕೊಳ್ಳಬೇಕು ಮತ್ತು ಅವುಗಳನ್ನು ಹೇಗೆ ಬಳಕೆಗೆ ತರಬೇಕು ಎನ್ನುವುದು. ಅನ್ಯಭಾಷೆಗಳಿಂದ ತೆಗೆದುಕೊಳ್ಳುವುದು, ಹೊಸ ಪದಗಳನ್ನು ಸೃಷ್ಟಿಸುವುದು ಸಾಮಾನ್ಯವಾಗಿ ರೂಢಿಯಲ್ಲಿರುವ ಬಗೆಗಳು. ಆದರೆ, ಜನರ ನಡುವೆ ಈಗಾಗಲೇ ಬಳಕೆಯಲ್ಲಿದ್ದರೂ ಪ್ರಮಾಣೀಕೃತವೆನ್ನಲಾದ ಭಾಷೆಯಲ್ಲಿ, ಕಾಣೆಯಾಗಿರುವ ಪದಗಳನ್ನು ಮರುಬಳಕೆಗೆ ತರುವುದು ಇನ್ನೊಂದು ಮಾರ್ಗ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಿದ್ಧವಾದ `ವೃತ್ತಿ ಪದಕೋಶ'ವು ಈ ಬಗೆಯ ಉದ್ದೇಶದಿಂದ ಪ್ರೇರಿತವಾಗಿತ್ತು. ಭಾಷೆಯನ್ನು ಬಳಸುವವರಿಗೂ ಪರಿಭಾಷೆಯನ್ನು ರೂಪಿಸುವವರಿಗೂ ನಡುವೆ ಉಂಟಾಗಿರುವ ಕಂದರವು ಇಂಥದೊಂದು ಕೆಲಸವು ಸುಸೂತ್ರವಾಗಿ ನಡೆಯಲು ಅಡ್ಡಿಯಾಗಿದೆ. ನಮ್ಮ ವಿದ್ಯಾರ್ಥಿಗಳಿಗೆ, ಕನ್ನಡದ ಪ್ರಾಚೀನ ಹಂತಗಳಿಗೆ ಸೇರಿದ ಅಥವಾ ಸಂಸ್ಕೃತಮಯವಾದ ಸಾಹಿತ್ಯಕ ಪಠ್ಯಗಳನ್ನು ಅರೆದು ಕುಡಿಸುತ್ತಿದ್ದರೆ, ಇತ್ತ ಬಳಕೆಯ ಭಾಷೆಯೂ ಬೆಳೆಯುವುದಿಲ್ಲ, ಅತ್ತ ಸಾಹಿತ್ಯಾಸಕ್ತಿಯೂ ಕುದುರುವುದಿಲ್ಲ. ಜನಭಾಷೆ, ಪ್ರಾದೇಶಿಕ ಉಪಭಾಷೆಗಳು ಮತ್ತು ಜ್ಞಾನವಾಹಿಯಾದ ಭಾಷೆಗಳು ನಮ್ಮ ಪಠ್ಯಪುಸ್ತಕಗಳ ಅನಿವಾರ್ಯ ಭಾಗವಾದ ಹೊರತು ಜ್ಞಾನವಾಹಿಯಾದ ಕನ್ನಡದ ಸೃಷ್ಟಿಯು ಸಾಧ್ಯವಾಗುವುದಿಲ್ಲ. ಹೀಗೆ ಮಾಡುವುದರಿಂದ ಸರ್ವರಿಗೂ ತಲುಪಬಲ್ಲ ಪ್ರಮಾಣ ಭಾಷೆಯೊಂದರ ಬಳಕೆ ಹಾಗೂ ಗ್ರಹಿಕೆಗೆ ಅಡ್ಡಿಯಾಗುವುದಿಲ್ಲ. ಮನುಷ್ಯನ ಮನಸ್ಸಿಗೆ, ನಿರ್ದಿಷ್ಟ ಮಾದರಿಗಳ ಮೂಲಕವೇ ಸಾರ್ವತ್ರಿಕ ಆಕೃತಿಗಳನ್ನು ಕಟ್ಟಿಕೊಳ್ಳುವ ಸಾಮರ್ಥ್ಯವು ಇದ್ದೇ ಇರುತ್ತದೆ. ಸುತ್ತಲಿನ ಜನರು ಆಡುವ ಮಾತುಗಳನ್ನು ಕೇಳಿ ತನ್ನ ಮಾತನ್ನು ರೂಪಿಸಿಕೊಳ್ಳುವಂತೆ, ಶ್ರೇಷ್ಠವಾದ ಬರವಣಿಗೆಯನ್ನು ಓದಿ, ಉತ್ತಮ ಗದ್ಯಶೈಲಿಯನ್ನು ರೂಪಿಸಿಕೊಳ್ಳುವುದು ಸಾಧ್ಯ. ಇದು ನಮ್ಮ ಮಾಧ್ಯಮಗಳಿಂದ, ಅಂತೆಯೇ ಶಿಕ್ಷಣದಿಂದ ಸಾಧ್ಯವಾಗಬೇಕು. ಇಲ್ಲವಾದರೆ ಕರ್ನಾಟಕದಲ್ಲಿ ಇರುವ ಜ್ಞಾನವು ಕನ್ನಡದಲ್ಲಿಯೇ ಒಡಮೂಡುವುದಿಲ್ಲ.

 

೪. ಒಂದು ಭೌಗೋಳಿಕ ಪ್ರದೇಶಕ್ಕೆ ಅದರದೇ ಆದ ವಿಶಿಷ್ಟತೆ ಇರುತ್ತದೆಯೇ, ಇದ್ದರೆ ಅದಕ್ಕೂ ಆ ಜನರು ಬಳಸುವ ಭಾಷೆಗೂ ಸಂಬಂಧವಿರುತ್ತದೆಯೇ, ಹಾಗಿದ್ದರೆ, ಅದು ಯಾವ ಬಗೆಯದು ಎಂಬುದು ಕುತೂಹಲಕಾರಿಯಾದ ಪ್ರಶ್ನೆ. ಉದಾಹರಣೆಗೆ, ಕರ್ನಾಟಕದ ತುಂಬಾ ಕನ್ನಡವನ್ನೇ ಬಳಸಿದರೂ ಬಯಲುಸೀಮೆ, ಮಲೆನಾಡು ಮತ್ತು ಕರಾವಳಿಗಳ ಜೀವನಕ್ರಮಗಳು ವಿಭಿನ್ನವಾಗಿವೆ. ಅಷ್ಟೇಕೆ, ಬಯಲುಸೀಮೆಯಲ್ಲಿಯೇ ಮಂಡ್ಯ, ಚಿತ್ರದುರ್ಗ, ಬಿಜಾಪುರ ಮತ್ತು ಕಲಬುರ್ಗಿ ಜಿಲ್ಲೆಗಳ ಜೀವನಶೈಲಿಗಳ ನಡುವೆ ಸ್ಪಷ್ಟವಾದ ವ್ಯತ್ಯಾಸಗಳಿವೆ. ಈ ವ್ಯತ್ಯಾಸವು ಆಯಾ ಪ್ರದೇಶದ ಉಪಭಾಷೆಯಲ್ಲಿ ನಿಕ್ಷಿಪ್ತವಾಗಿದ್ದರೂ ಭಾಷೆಯೇ ಆ ಅಂತರಕ್ಕೆ ಕಾರಣವಲ್ಲ. ಭೌಗೋಳಿಕ ಪರಿಸರದಿಂದ ಹುಟ್ಟಿದ, ಸಾಮಾಜಿಕವಾದ ಅಂತೆಯೇ ಐತಿಹಾಸಿಕವಾದ ಹಲವು ಕಾರಣಗಳು ಅಲ್ಲಿ ಪ್ರವೃತ್ತವಾಗಿರುತ್ತವೆ. ಅವುಗಳ ಹುಡುಕಾಟವು ಬೇರೊಂದೇ ಕೆಲಸ. ದ್ವಿಭಾಷಿಕ ಗಡಿನಾಡುಗಳಲ್ಲಿ ಬದುಕಿರುವ ಜನರ ಜೀವನಸಾಮ್ಯವನ್ನು ನೋಡಿದಾಗ ಈ ಮಾತು ಸ್ಪಷ್ಟವಾಗುತ್ತದೆ. ಬಾಗೇಪಲ್ಲಿಯ ಜನರು ತೆಲುಗರಾಗಿರಲಿ, ಕನ್ನಡಿಗರೇ ಆಗಿರಲಿ, ಅವರು ಬದುಕುವ ಬಗೆ ಒಂದೇ. ಆದ್ದರಿಂದಲೇ ಇಡೀ ಕರ್ನಾಟಕವನ್ನು ಕನ್ನಡ ಭಾಷೆಯ ಬಳಕೆಯೊಂದೇ ಒಗ್ಗಟ್ಟಾಗಿ ಇಡಬಲ್ಲುದು ಎಂಬ ನಂಬಿಕೆಯನ್ನೇ ಮರುಪರಿಶೀಲನೆ ಮಾಡಬೇಕಾಗಿದೆ. ಭಾಷೆಯು `ಅನ್ಯರ' ವಿರುದ್ಧ `ನಮ್ಮವರನ್ನು' ಎತ್ತಿಕಟ್ಟುವ ಅಸ್ತ್ರವಾಗಬಹುದೇ ವಿನಾ ನಮ್ಮ ನಡುವಿನ ವೈಷಮ್ಯಗಳನ್ನು ಕಳೆಯುವ ಉಪಕರಣವಾಗಲಾರದು. ಆದ್ದರಿಂದಲೇ ಭಾಷಾವಾರು ರಾಜ್ಯಗಳ ಕಲ್ಪನೆಯ ಹಿಂದೆ ಸಾಂಸ್ಕೃತಿಕ/ಸಾಹಿತ್ಯಕ ಪ್ರೇರಣೆಗಳಿರುವಂತೆ ಆರ್ಥಿಕ ಪ್ರೇರಣೆಗಳಿರುವುದಿಲ್ಲ. ಹೆಚ್ಚೆಂದರೆ, ಬಹುಸಂಖ್ಯಾತರ ನಡುವೆ ಅಲ್ಪಸಂಖ್ಯಾತರಾಗಿದ್ದವರಿಗೆ ಪದೋನ್ನತಿ ದೊರಕಿ, ಅವರೇ ಬಹುಸಂಖ್ಯಾತರಾಗಿ ಮನ್ನಣೆ ಪಡೆಯಬಹುದು. ಉದಾಹರಣೆಗೆ ಕೊಡಗು ಪ್ರತ್ಯೇಕ ನಾಡಾಗಿ ರೂಪಿಗೊಂಡರೆ, ಅಲ್ಲಿಯೇ ಇರುವ ಕೊಡಗರು, ವೀರಶೈವರು ಮತ್ತು ಮುಸ್ಲಿಮರ ನಡುವೆ ಶಕ್ತಿ ರಾಜಕೀಯವು ಮೊದಲಾಗುತ್ತದೆ ಎನ್ನುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟ. ಆದ್ದರಿಂದ ಕರ್ನಾಟಕದ ಏಕತೆ ಮತ್ತು ಮತ್ತು ಕನ್ನಡ ಭಾಷಿಕರ ಏಕತೆಗಳ ನಡುವೆ ಇರುವ ಗಡಿ ಗೆರೆಗಳನ್ನು ಖಚಿತಗೊಳಿಸಿಕೋಳ್ಳಬೇಕಾಗಿದೆ. ಉದಾಹರಣೆಗೆ, ಉತ್ತರ ಕರ್ನಾಟಕ ಮತ್ತು ಹಳೆಯ ಮೈಸೂರುಗಳ ನಡುವಿನ ವೈಷಮ್ಯಕ್ಕೆ, ಪ್ರಮುಖ ಜಾತಿಗಳ ನಡುವಿನ ಜಗಳವು ಭಾಷೆಗಿಂತ ಮುಖ್ಯವಾಗಿದೆ. ಎರಡೂ ಕಡೆ ಹಿಂದುಳಿದ ಜಾತಿಗಳವರ ಮೌನವು ಗಮನೀಯವಾಗಿದೆ. ಖಚಿತವಾಗಿ ಹೇಳುವುದಾದರೆ, ಇಂದು ಬಹುಸಂಖ್ಯಾತರಾದ ಭೂಮಾಲಿಕ ಜಾತಿಗಳವರು ಪ್ರದೇಶನಿಷ್ಠವಾದ ರಾಜಕಾರಣದಲ್ಲಿ ತೊಡಗಿದ್ದರೆ, ಅಲ್ಪಸಂಖ್ಯಾತರಾದ ಹಿಂದುಳಿದ ಜಾತಿಗಳವರು ಸಮುದಾಯನಿಷ್ಠವಾದ ರಾಜ್ಯಮಟ್ಟದ ಸಂಘಟನೆಗಳಲ್ಲಿ ತೊಡಗಬೇಕಾಗಿದೆ. ದಲಿತರು ವಿಕೇಂದ್ರಿತವಲ್ಲದ ಕಾನೂನು ವ್ಯವಸ್ಥೆಯಲ್ಲಿಯೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾಗಿದೆ.

 

ಇವೆಲ್ಲ ಸಂದರ್ಭಗಳಲ್ಲಿಯೂ ಭಾಷೆಯೂ ಒಂದು ಮೌಲ್ಯವಾಗಿಲ್ಲ. ಹೀಗಿರುವಾಗ ನುಡಿಗೂ ನಾಡಿಗೂ ನಡುವೆ ವೈರುದ್ಧ್ಯಗಳು ಹುಟ್ಟಿಕೊಳ್ಳುವುದು ಸಹಜ.

 

ಈ ಕಿರು ಲೇಖನದ ವ್ಯಾಪ್ತಿಯಲ್ಲಿ ಎಲ್ಲ ವಿಷಯಗಳನ್ನೂ ಸವಿವರವಾಗಿ ಹೇಳಲಾಗುವುದಿಲ್ಲ. ಇದು ಕನ್ನಡ ಪ್ರೇಮ, ಕನ್ನಡ ಭಾಷೆಯ ಅಸ್ತಿತ್ವಕ್ಕೆ ಬಂದಿರುವ ಅಪಾಯ, ಕನ್ನಡ ಸಂಸ್ಕೃತಿ/ಸಾಹಿತ್ಯಗಳ ಘನತೆ ಮುಂತಾದ ಸಂಗತಿಗಳನ್ನು ಪ್ರತಿಪಕ್ಷವಾಗಿಟ್ಟುಕೊಂಡು ಬರೆದುದೂ ಅಲ್ಲ. ನಮ್ಮ ಈ ನಾಡಿನಲ್ಲಿ ಮನೆಮಾಡಿರುವ ಬಹುರೂಪಿ ಭಾಷೆಗಳು ಮತ್ತು ಅವುಗಳಿಗಿಂತ ಬಹುರೂಪಿಯಾದ ಭಾಷಾ ಸಮುದಾಯಗಳ ಆರೋಗ್ಯಕರವಾದ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಇಲ್ಲಿ ಕೆಲವು ಸಂಗತಿಗಳನ್ನು ಮಂಡಿಸಲಾಗಿದೆ. ನಿಜವಾಗಿಯೂ, ಕರ್ನಾಟಕದಲ್ಲಿ ಭಾಷಾಕೇಂದ್ರಿತವಾದ ಸಮೂಹಸನ್ನಿಯೇನೂ ಇಲ್ಲ. ಆದರೆ, ಆಸಕ್ತಹಿತಗಳು ಸಮಾಜಘಾತಕ ಶಕ್ತಿಗಳ ಸಹಯೋಗದಲ್ಲಿ ಆಗಾಗ ಅಂತಹ ವಾತಾವರಣವನ್ನು ನಿರ್ಮಿಸುತ್ತವೆ. ಹಾಗಿಲ್ಲವಾದರೆ, ಇಡೀ ವರ್ಷವನ್ನೇ ನವೆಂಬರ್ ತಿಂಗಳಾಗಿ ಪರಿವರ್ತಿಸಿಕೊಂಡು ಸರ್ಕಾರದ ಎಂದರೆ ಜನತೆಯ ಸಂಪನ್ಮೂಲಗಳನ್ನು ಉಂಡುಂಡೆಯಾಗಿ ಕಬಳಿಸುತ್ತಾ ಭಾಷೆಯ ಹೆಸರಿನಲ್ಲಿ ಸ್ವಹಿತಗಳನ್ನು ಸಾಧಿಸಿಕೊಳ್ಳುವ ವ್ಯಕ್ತಿಗಳ, ವರ್ಗಗಳ ಗಹಗಹಿಕೆಯು ಮುಂದುವರಿಯುತ್ತದೆ.

ಎಚ್.ಎಸ್. ರಾಘವೇಂದ್ರ ರಾವ್

 

೨೨-೧೨-೦೬, ನಂ.೭, ಶ್ರೀಮಾತಾ, ೧೫ ನೆಯ ಕ್ರಾಸ್ ೫ ನೆಯ ಫೇಸ್,

 

ಜೆ.ಪಿ.ನಗರ, ಬೆಂಗಳೂರು ೫೬೦೦೭೮