ಕರ್ಮಯೋಗಿ ಭಾಗ ೨
ಬರಹ
ಇವರ ಹತ್ತಿರದ ಸಂಬಂಧಿ ಒಬ್ಬರು ದೂರದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಹತ್ತಿರದ ಸಂಬಂಧಿಯಾಗಿದ್ದರು ದೂರದೂರಿನಲ್ಲಿದ್ದೋ ಏನೋ ಇವರುಗಳಿಗೆ ಬಹಳ ದೂರವಾಗಿದ್ದರು. ಪತ್ರಿಕೆಯಲ್ಲಿ ಹುಡುಗನ ಸಾಧನೆ ನೋಡಿ ವಿಶ್ವನಾಥರಾಯರಿಗೆ ಪತ್ರ ಬರೆದಿದ್ದರು, ಹುಡುಗ ಬುದ್ಧಿವಂತ, ನಿನ್ನಲ್ಲಿ ಹೆಚ್ಚಿನ ಓದಿಗೆ ಸೌಲಭ್ಯವಿಲ್ಲ, ನನ್ನ ಹತ್ತಿರವಿದ್ದರೆ ಏಳಿಗೆ ಹೊಂದುವನು.
ಇದನ್ನು ಕಂಡು ವಿಶ್ವನಾಥರಾಯರಿಗೆ ಹಳೆಯ ವಿಷಯಗಳೆಲ್ಲಾ ಜ್ಞಾಪಕ ಬಂದು ಕೋಪ ಬಂದಿತು. ಆದರೂ ಅದನ್ನು ಹೊರಗೆ ತೋರ್ಪಡಿಸದೆ, ಮಾರುತಿಗೆ ಈ ಪತ್ರ ತೋರಿಸಿ, ನೋಡು ಹೋಗುವ ಹಾಗಿದ್ದರೆ ಅವರಲ್ಲಿಗೆ ಹೋಗು ಎಂದರು. ಎಷ್ಟಾದರೂ ಅವನು ರಾಯರ ಮಗನಲ್ಲವೇ, ಹುಲಿಯ ಹೊಟ್ಟೆಯೊಳಗೆ ಹುಟ್ಟಿದ ಹುಲಿ. ತುಂಬಾ ಕೋಪ ತೋರ್ಪಡಿಸಿ ಕೂಗಾಡಿದ, ನೀವೆಲ್ಲಾ ನನ್ನನ್ನು ಏನೂಂತ ತಿಳಿದಿದ್ದೀರಿ, ನನ್ನನ್ನು ಮನೆಬಿಟ್ಟು ಆಚೆಗೆ ಕಳುಹಿಸಲು ನೋಡ್ತಿದ್ದೀರಾ? ಇಲ್ಲ ನಾನು ಹೋಗಲ್ಲ, ಎಲ್ಲಾದರೂ ಕೆಲಸಕ್ಕೆ ಸೇರುವೆ. ನನಗೆ ಈಗ ಮುಖ್ಯವಾಗಿ ಬೇಕಿರೋದು, ಮನೆಯ ಯೋಗಕ್ಷೇಮ. ನನ್ನ ಏಳಿಗೆಯಲ್ಲ. ವಿಶ್ವನಾಥರಾಯರು ಮತ್ತು ಭಾಗೀರಥಮ್ಮನವರು ಮತ್ತೆ ಮತ್ತೆ ಹುಡುಗನಿಗೆ ಸಮಜಾಯಿಷಿ ಹೇಳಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಇಲ್ಲಿಯವರೆವಿಗೆ ತುಂಬಾ ಕಷ್ಟ ಪಟ್ಟ ಜೀವಿ, ಹುಡುಗನಿಗೆ, 'ನಿನಗೆ ಹೇಗೆ ಬೇಕೋ ಹಾಗೆ ಮಾಡು' ಅಂದರು.
ಇಲ್ಲಿ ಒಂದು ಅಂಶ ಗಮನಿಸಬೇಕಾದದ್ದು ಅಂದ್ರೆ ರಾಯರ ಸಂಸಾರ ಹೊಸಹಳ್ಳಿಯಲ್ಲಿ ಇದ್ದಾಗ ಕಷ್ಟ ಕಾಲವಿತ್ತು. ಹಾಗೂ ಶಾಲೆಗಾಗಿ ೨ ಮೈಲು ದೂರದ ತಳುಕಿಗೆ ಕಳುಹಿಸಬೇಕಾಗಿ, ಹುಡುಗನನ್ನು ಶಾಲೆಗೆ ಸೇರಿಸುವಾಗಲೇ ಅವನಿಗೆ ೭ ವರ್ಷವಾಗಿದ್ದಿತು. ಈಗ ಹುಡುಗ ೧೮ ವರ್ಷ ವಯಸ್ಸಿನವನಾಗಿದ್ದು ಸರಕಾರೀ ಕೆಲಸಕ್ಕೆ ಅರ್ಜಿ ಹಾಕಲು ಯೋಗ್ಯನಾಗಿದ್ದ. ಅಂಚೆ ಇಲಾಖೆಯಲ್ಲಿ ಗುಮಾಸ್ತೆ ಹುದ್ದೆಗಾಗಿ ಜಾಹೀರಾತು ಬಂದಿತ್ತು. ಹುಡುಗ ಅದಕ್ಕಾಗಿ ಅರ್ಜಿ ಹಾಕಿದ ಸ್ವಲ್ಪವೇ ದಿನಗಳಲ್ಲಿ ಕೆಲಸಕ್ಕೆ ಸೇರಲು ಇಲಾಖೆಯಿಂದ ಪತ್ರ ಬಂದಿತು. ಅವನ ಮೊದಲ ಪೋಸ್ಟಿಂಗ್ ಘಟ್ಟದ ಮೇಲಿನ ಯಲ್ಲಾಪುರದಲ್ಲಾಗಿತ್ತು. ಈಗ ಅವನು ಮನೆ ಬಿಟ್ಟು ಒಬ್ಬನೇ ಅಲ್ಲಿಗೆ ಹೋಗುವ ಸನ್ನಿವೇಶ. ಶ್ರೀನಾಥನಂತೂ ಎರಡು ದಿನ ಊಟವನ್ನೂ ಬಿಟ್ಟು ಅತ್ತಿದ್ದೇ ಅತ್ತಿದ್ದು. ಆದರೂ ಮನೆಯ ಒಳಿತಿಗಾಗಿ ಹೋಗುತ್ತಿರುವವನಾಗಿ ಎಲ್ಲರಿಗೂ ಅದೊಂದು ತರಹದ ಸಮಾಧಾನ. ಇನ್ನು ಮೇಲೆ ತಿಂಗಳು ತಿಂಗಳಿಗೂ ಮನೆಗೆ ಆಧಾರವಾಗಿ ಹಣ ಬರುವುದೆಂಬ ಸಂತೋಷ. ಸರಿ, ಮಾರುತಿಯನ್ನು ಯಲ್ಲಾಪುರಕ್ಕೆ ಬೀಳ್ಕೊಡುವ ತಯಾರಿ ಮನೆಯಲ್ಲಿ ನಡೆಯಿತು. ಹಾಸಿಕೊಳ್ಳಕ್ಕೆ ಇದ್ದರೆ ಹೊದೆಯುವುದಕ್ಕೆ ಇಲ್ಲ ಹೊದೆಯುವುದಕ್ಕೆ ಇದ್ದರೆ ಹಾಸಿಕೊಳ್ಳಕ್ಕೆ ಇಲ್ಲ ಅನ್ನುವ ಮನೆಯಲ್ಲಿ ಇನ್ನೇನು ಹೆಚ್ಚು ಮಾಡಿಕೊಡಕ್ಕಾಗತ್ತೆ. ಎಲ್ಲರಿಗೂ ಗೊತ್ತಾಗುವಂತೆ ಮನೆ ಬಿಟ್ಟು ಅವನು ಹೊರಗೆ ಹೋಗುತ್ತಿರುವುದು ಇದೇ ಮೊದಲು. ಅವನಿಗೇನೋ ಒಬ್ಬನೇ ಇರಬಲ್ಲನೆಂಬ ಛಾತಿ, ನಂಬಿಕೆ ಇದೆ. ಈಗಾಗ್ಲೇ ವಿಶ್ವ ಪರ್ಯಟನದ ಅನುಭವ ಆಗಿದೆಯಲ್ಲ. ಜೀವನದಲ್ಲಿ ಎಲ್ಲರೂ ೩೦ ವರ್ಷಗಳಲ್ಲಿ ಪಡೆಯುವ ಅನುಭವ ಈ ಪುಟ್ಟ ಹುಡುಗ ಮೂವತ್ತೇ ದಿನಗಳಲ್ಲಿ ಅನುಭವಿಸಿರುವ. ಆದರೆ ಅಮ್ಮನ ಕರುಳು ಕೇಳಬೇಕಲ್ಲ. ಹತ್ತಿರ ಕರೆದು, ತಲೆ ನೇವರಿಸಿ 'ಸರಿಯಾಗಿ ಅಡುಗೆ ಮಾಡ್ಕೋ. ಹೋಟೆಲ್ ಗಳಿಗೆ ಹೋಗ್ಬೇಡ. ಅಲ್ಲಿ ಸೋಡಾ ಹಾಕಿದ ಅಡುಗೆ ಮಾಡಿರ್ತಾರೆ. ಮೆಣಸಿನಪುಡಿ ಪೊಟ್ಟಣದಲ್ಲಿ ಕಟ್ಟಿಕೊಡ್ತೀನಿ' ಅಂದಳು. ಮನೆಯಲ್ಲಿ ದೊಡ್ಡ ಹುಡುಗರೆಲ್ಲರಿಗೂ ಅಡುಗೆ ಕಲಿಸಿದ್ದಳು ಭಾಗೀರಥಮ್ಮ. ತಿಂಗಳ ಮೂರು ದಿನಗಳ ಸಲುವಾಗಿಯಾದ್ರೂ ವಿಧಿಯಿಲ್ಲದೇ ರಾಯರ ಜೊತೆ ಸೇರಿ ಮಕ್ಕಳೂ ಅಡುಗೆ ಮಾಡುತ್ತಿದ್ದರು. ಹೆಣ್ಣು ಮಗು ಹುಟ್ಟಿದ್ದು ತುಂಬಾ ನಿಧಾನವಾಗಿ.
ಯಲ್ಲಾಪುರಕ್ಕೆ ಹೊರಡುವ ಸಮಯಕ್ಕೆ ಭಟ್ಟರು ಬಂದು, 'ರಾಯರೇ ನೀವೇನೂ ಯೋಚಿಸ್ಬ್ಯಾಡ್ರಿ. ಇಡಗುಂಜಿ ಗಣಪತಿ ಇವನನ್ನು ಕಾಯ್ತಿದ್ದಾನೆ. ಮಾಣಿ ಜೀವನದಲ್ಲಿ ದೊಡ್ಡ ಪಾಠವನ್ನು ಕಲ್ತಿದ್ದಾನೆ. ನಾನು ಹೇಗಿದ್ರೂ ಯಲ್ಲಾಪುರದ ಕಡೆಗೆ ಆಗಾಗ್ಯೆ ಹೋಗ್ತಿರ್ತೀನಿ. ನೀವೂ ಮಂಡಿ ಕೆಲಸದ ಮೇಲೆ ಹೋದಾಗ ನೋಡಿ ಬರಬಹುದು; ಎಂದು ಮಾರುತಿಯನ್ನು ತಮ್ಮ ಜೊತೆಗೆ ಯಲ್ಲಾಪುರಕ್ಕೆ ಕರೆದೊಯ್ದರು. ಅಲ್ಲಿ ಮೊದಲು ಒಂದು ಕೋಣೆ ಮಾಡಿಕೊಟ್ಟು ಅವನಿಗೆ ತಿಂಗಳಿಗೆ ಖರ್ಚಿಗೆ ಇರಲಿ ಎಂದು ಸ್ವಲ್ಪ ಹಣ ಕೊಟ್ಟು, ಪೋಸ್ಟ್ ಆಫೀಸಿಗೆ ಹೋಗಿ ಹಿರಿಯ ಅಧಿಕಾರಿಗಳಿಗೆ ಹುಡುಗನ ವಿಷಯವನ್ನೆಲ್ಲಾ ತಿಳಿಸಿ ಅವರೂರಾದ ಭಟ್ಕಳಕ್ಕೆ ಹೋದರು. ಹಿರಿಯ ಪೋಸ್ಟ್ ಆಫೀಸರರು ಗೀತಾಚಾರ್ಯರು. ಅವರು ಮಾರುತಿಯನ್ನು ತನ್ನ ಮನೆಗೇ ಬಂದಿರಲು ಕರೆದರು. ಸ್ವಾಭಿಮಾನಿ ಅಷ್ಟು ಸುಲಭವಾಗಿ ಬಗ್ಗುವನೇ? ಸಾರ್, ನೀವು ನನಗೆ ಮಾರ್ಗದರ್ಶಕರಾಗಿ ಸಾಕು. ಇನ್ನೇನೂ ಬೇಡ ಅಂದ. ಗೀತಾಚಾರ್ಯರು ಇವನನ್ನು ಹೆಚ್ಚಿನ ಕೆಲಸವಿಲ್ಲದ ಜಾಗಕ್ಕೆ ಪೋಸ್ಟ್ ಮಾಡಿ ಅಂಚೆಯ ಮೂಲಕ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸಲು ತಿಳಿಸಿದರು. ಅಷ್ಟೇ ಅಲ್ಲ, ; ನೀನಿನ್ನೂ ಚಿಕ್ಕ ಹುಡುಗ. ತುಂಬಾ ದೂರದವರೆವಿಗೆ ಬಾಳ್ವೇ ಮಾಡ್ಬೇಕು, ಒಳ್ಳೆಯ ಕೆಲಸ ಸಿಗಲು ಬೇರೆ ಕಡೆಯಲ್ಲೂ ಪ್ರಯತ್ನಿಸು ಎಂದರು.
ಇತ್ತ ಕಡೆ ಮನೆಯಲ್ಲಿ ಅಷ್ಟು ಹೊತ್ತಿಗೆ ಮೊದಲನೆ ಮಗನ ಮೊದಲ ಪತ್ರ ಮನೆಗೆ ಬಂದಿತ್ತು. ತಾನು ಬೆಂಗಳೂರಿನಲ್ಲಿ ಇರುವುದಾಗ್ಯೂ, ಅಲ್ಲಿಯ ಹೆಚ್.ಎ.ಎಲ್. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ತಿಳಿಸಿದ್ದ. ಆದರೆ ತನ್ನ ವಿಳಾಸವನ್ನು ಮಾತ್ರ ಕೊಟ್ಟಿರಲಿಲ್ಲ. ಹಣವೇನಾದ್ರೂ ಬೇಕಾಗಿದ್ರೆ(?) ನಾನು ಮುಂದಿನ ಪತ್ರದಲ್ಲಿ ಸೂಚಿಸುವ ವಿಳಾಸಕ್ಕೆ ಬರೆಯಿರಿ - ಎಷ್ಟಾಗುವುದೋ ಅಷ್ಟನ್ನು ಕಳುಹಿಸಲು ಪ್ರಯತ್ನಿಸುವೆ ಎಂದೂ ಬರೆದಿದ್ದ. ಅವತ್ತು ಆ ಪತ್ರ ಬಂದದ್ದೇ ತಡ ವಿಶ್ವನಾಥರಾರು ಭಾಗೀರಥಮ್ಮನವರ ಮೇಲೆ ಕೂಗಾಡಿದ್ದೇ ಕೂಗಾಡಿದ್ದು.
'ನಾನಷ್ಟು ಬಡಕೊಂಡೆ, ಬೋ*ಮಗನಿಗೆ ಜಾಸ್ತಿ ಸದರ ಕೊಡಬೇಡ ಅಂತ. ನೀನೆಲ್ಲಿ ಕೇಳ್ತೀಯೆ.
ಮಾ ಅಬ್ಬಾಯಿ ಅಪ್ಪಟ ಇರವೈನಾಲ್ಗು ಕ್ಯಾರೆಟ್ ಬಂಗಾರ, ಅಂದೆ. ಈಗ ನೋಡು ನಿನ್ನ ಮಗ ಕಾಗದ ಬರೆಯೋ ವರಸೇನಾ? ಇವನು ನಮ್ಮ ಮನೆಯಲ್ಲಿ ಹುಟ್ಲೇ ಇಲ್ಲ ಅಂದ್ಕೋತೀನಿ. ಮಾರುತಿ ನೋಡು ಎಂತಹ ಅಪ್ಪಟ ಬಂಗಾರ. ಇವನ ಮುಂದಿನ ಕಾಗದ ಬಂದ್ರೆ ನನಗೆ ತೋರಿಸ್ಲೇ ಬೇಡ ಹರಿದು ಹಾಕು. ಇವನ ಸುದ್ದಿ ಮನೇಲಿ ಯಾರು ಎತ್ಬಾರ್ದು' ಅಂತ ಅಣತಿ ಮಾಡಿದ್ದರು. ಮಕ್ಕಳ್ಯಾರಿಗೂ ದೊಡ್ಡಣ್ಣನ ವಿಷಯವೇ ಗೊತ್ತಿಲ್ಲ. ಕಣ್ಣು ಕಣ್ಣು ಬಿಟ್ಟು ನೋಡ್ತಿದ್ದಾರೆ. ಏನಾಗ್ತಿದೆ ಅಂತ ತಿಳಿದುಕೊಳ್ಳೋ ಹಂಬಲ. ಆದರೆ ಯಾರನ್ನು ಕೇಳೋದು. ಅಪ್ಪ ಹಿರಣ್ಯ ಕಶಿಪುವಿನ ಅಪರಾವತಾರ. ಆಮ್ಲಜನಕ ಇದ್ದ ಹಾಗೆ. ಹತ್ತಿರ ಹೋದ್ರೆ ಬೆಂಕಿ ಹತ್ತಿಕೊಳ್ಳತ್ತೆ. ಇನ್ನು ಅಮ್ಮನೋ ಮುಸಿ ಮುಸಿ ಅಳ್ತಾ ಸೆರಗಿನಿಂದ ಮೂಗು ಒರೆಸಿಕೊಳ್ತಿದ್ದಾಳೆ.
ಅದೇ ಹೊತ್ತಿಗೆ ಮಾರುತಿಯಿಂದ ಮೊದಲ ಪತ್ರ ಬಂದಿತ್ತು. ಗೀತಾಚಾರ್ಯರಂಥ ಹಿರಿಯರ ಮಾರ್ಗದರ್ಶನ ಸಿಗುತ್ತಿದೆಯೆಂದೂ, ಮೊದಲ ಸಂಬಳ ಬಂದ ಕೂಡಲೇ ಹಣ ಕಳುಹಿಸುವೆನೆಂದೂ, ಹೆಚ್ಚಿನ ಓದನ್ನು ಮಾಡುತ್ತಿರುವೆನೆಂದೂ ತಿಳಿಸಿದ್ದನು. ಅವನ ಪತ್ರ ನೋಡಿ ಮನೆಯವರಿಗೆಲ್ಲರಿಗೂ ತುಂಬಾ ಸಂತೋಷವಾಯಿತು. ಮನೆ ದೇವರಾದ ವೆಂಕಟೇಶ್ವರನಿಗೆ ಹರಕೆಯ ಮುಡಿಪು ಕಟ್ಟಿಟ್ಟು ಮುಂದಿನ ವರ್ಷ ಮನೆ ಮಂದಿಯೆಲ್ಲರೂ ತಿರುಪತಿಗೆ ಬಂದು ನಡಿಗೆಯಲ್ಲಿ ಬೆಟ್ಟ ಹತ್ತುವೆವೆಂದು ಅಂದುಕೊಂಡರು.
ಹೀಗೇ ದಿನಗಳು ಕಳೆಯುತ್ತಾ ಮೂರು ವರುಷಗಳು ಉರುಳಿದವು. ಮಾರುತಿಗೆ ಎರಡು ವರ್ಷ ದೊಡ್ಡವನಾದ ಶ್ರೀನಾಥ ಬಿ.ಎಸ್.ಸಿ ಯನ್ನು ಮೊದಲ ದರ್ಜೆಯಲ್ಲಿ ತೇರ್ಗಡೆ ಹೊಂದಿದ. ಗೀತಾಚಾರ್ಯರ ಮಾರ್ಗದರ್ಶನದಲ್ಲಿ ಆ ಹೊತ್ತಿಗಾಗಲೇ ಅಂಚೆ ಶಿಕ್ಷಣದ ಮೂಲಕ ಮಾರುತಿ ಬಿ.ಎ. ಮೊದಲ ವರ್ಷ ಓದುತ್ತಿದ್ದ. ಆಗಲೇ ಈ ಮುಂಚೆ ಅರ್ಜಿ ಸಲ್ಲಿಸಿದ್ದ ಕೆನರಾ ಬ್ಯಾಂಕಿನಿಂದ ಗುಮಾಸ್ತೆ ಕೆಲಸಕ್ಕೆ ಆಹ್ವಾನ ಬಂದಿತು. ಮಾರುತಿ ಗೀತಾಚಾರ್ಯರ ಬಳಿ ಹೋಗಿ, 'ಸಾರ್, ಕೆನರಾ ಬ್ಯಾಂಕಿನಿಂದ ಕೆಲಸಕ್ಕೆ ಕರೆ ಬಂದಿದೆ. ನನಗೆ ನಿಮ್ಮನ್ನು ಬಿಟ್ಟು ಹೋಗಲು ಇಷ್ಟವಿಲ್ಲ. ನಾನು ಅದಕ್ಕೆ ಹೋಗೋದಿಲ್ಲ' ಅಂದ. ಅದಕ್ಕೆ ಗೀತಾಚಾರ್ಯರು, 'ಲೋ ಪೆದ್ದೇ, ಇವತ್ತು ನಾನು ನಾಳೆ ಇನ್ನೊಬ್ಬ. ಹಾಗೇ ನಿನ್ನ ಜೀವನದಲ್ಲಿ ಎಷ್ಟೋ ಜನಗಳನ್ನು ನೀನು ನೋಡುತ್ತಿರಲೇಬೇಕು. ಎಲ್ಲಿಗೆ ಪೋಸ್ಟಿಂಗ್ ಆಗಿದೆ' ಅಂದರು. ಅದಕ್ಕೆ ಇವನು ಶಿವಮೊಗ್ಗಕ್ಕೆ ಅಂದ. ಸರಿ ಗಂಟು ಮೂಟೆ ಕಟ್ಟು. ಮೊದಲು ಹೋಗಿ ಕೆಲಸಕ್ಕೆ ಸೇರಿ ನಿನ್ನ ತಂದೆ ತಾಯಿ ಎಲ್ಲರನ್ನೂ ನಿನ್ನ ಬಳಿಗೆ ಕರೆಸಿಕೋ. ಇಂತಹ ಅವಕಾಶ ಕಳೆದುಕೊಳ್ಳಬೇಡ ಅಂದರು. ಇಷ್ಟು ದಿನ ಮೊಂಡುತನ ತೋರಿಸುತ್ತಿದ್ದ ಮಾರುತಿ ಅಂದು ಅದೇನು ಆಗಿತ್ತೋ ಏನೋ, ಹಸುವಿನಂತೆ ತಲೆ ಅಲ್ಲಾಡಿಸಿ, ಅವರು ತಿಳಿಸಿದಂತೆಯೇ ಮಾಡಲನುವಾದ. ಹಾಗೇ ಈ ವಿಷಯವಾಗಿ ತಕ್ಷಣ ಊರಿಗೆ ಒಂದು ಪತ್ರ ಬರೆದ. ತಂದೆ ತಾಯಿಯಾದಿಯಾಗಿ ಮನೆಯಲ್ಲಿ ಎಲ್ಲರಿಗೂ ತುಂಬಾ ಸಂತೋಷವಾಯಿತು.
ಕೆಲವೇ ದಿನಗಳಲ್ಲಿ ಇಡೀ ಸಂಸಾರವು ಶಿವಮೊಗ್ಗೆಗೆ ಪ್ರಯಾಣ ಬೆಳೆಸಿತು. ಅಲ್ಲಿ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ಅಲ್ಲಿಂದ ಸಾಗರಕ್ಕೆ ರಾಯರ ನಿತ್ಯ ಪ್ರಯಾಣ. ಆಗಲೇ ಮಾರುತಿ ಬ್ಯಾಂಕಿನ ಕೆಲಸವನ್ನೂ ಮಾಡಿಕೊಂಡು ಬಿ.ಏ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ. ಮೊದಲ ರ್‍ಯಾಂಕ್ ಬಂದ ಹುಡುಗನಿಗಿಂತ ಇವನಿಗೆ ೫ ಅಂಕಗಳು ಜಾಸ್ತಿ ಬಂದಿದ್ದರೂ ಇವನು ರೆಗ್ಯುಲರ್ ಕೋರ್ಸ್ ನಲ್ಲಿ ಇರಲಿಲ್ಲ ಎಂಬ ಕಾರಣಕ್ಕಾಗಿ ರ್‍ಯಾಂಕ್ ಕೊಟ್ಟಿರಲಿಲ್ಲ. ನೋಡಿ ವಿಧಿ ಹೇಗಿದೆ. ಕೊಟ್ಟರೂ ಕೊಡದಂತಿರುತ್ತದೆ. ಆಗ ಶ್ರೀನಾಥನದ್ದೂ ಓದು ಮುಗಿದು ಅವನಿಗೆ ಚಳ್ಳಕೆರೆಯಲ್ಲಿ ಒಂದು ಕಾಲೇಜಿನಲ್ಲಿ ಗುಮಾಸ್ತೆಯ ಕೆಲಸ ಸಿಕ್ಕಿತು. ವಿಶ್ವನಾಥರಾಯರದ್ದು ಊರಿಗೆ ಹೋಗಬೇಕೆಂಬ ಹಠ ಪ್ರಾರಂಭವಾಯಿತು. ಎಂದಿಗೂ ತಂದೆಯ ಮಾತಿಗೆ ಎದುರಾಡದ ಮಾರುತಿ ಇದಕ್ಕೆ ಒಪ್ಪಿದ. ಹೇಗಿದ್ದರೂ ರಾಯರ ಶರೀರ ಕಟು ಕೆಲಸ ಮತ್ತು ಲಕ್ವದಿಂದ ಜರ್ಜರಿತವಾಗಿತ್ತು. ಇದಕ್ಕೆ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇದೆ ಹಾಗೇ ಜೊತೆಗೆ ಊರಿಗೆ ಹೋದರೆ ಮಾನಸಿಕವಾಗಿ ಸಮಾಧಾನ ಸಿಗುವುದೆಂದೂ ಎಲ್ಲರೂ ಗಂಟು ಮೂಟೆ ಕಟ್ಟಿದರು.
ಅದಾಗಲೇ ಮಾರುತಿಯು ಬ್ಯಾಂಕಿನ ಪ್ರಮೋಷನ್ ಪರೀಕ್ಶೆಯನ್ನೂ ಪಾಸು ಮಾಡಿ, ಮುಂಬೈಗೆ ವರ್ಗದ ಆದೇಶ ಬಂದಿತ್ತು. ಆದರೆ ವಿಶ್ವವಿದ್ಯಾಲಯದ ಈ ರ್‍ಯಾಂಕಿನ ನಿಯಮದಿಂದ ರೋಸಿ ಹೋಗಿದ್ದ ಮಾರುತಿಯ ಮನಸ್ಸು ಇದಕ್ಕೆ ಏನಾದರೂ ಮಾಡಲೇಬೇಕು ಎಂದು ಸೂಚಿಸುತ್ತಿತ್ತು. ಗೆಳೆಯರೊಡನೆ ಇದರ ಬಗ್ಗೆ ಚರ್ಚಿಸಿದ. ಈ ವ್ಯವಸ್ಥೆಯನ್ನು ಸರಿಪಡಿಸಲು ತಾನು ವಿದ್ಯಾ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿದ್ದರೇ ಮಾತ್ರ ಏನಾದರೂ ಮಾಡಬಹುದು ಎಂಬ ಅಂಶ ಗಮನಕ್ಕೆ ಬಂದಿತು. ಇದಕ್ಕೆ ಸರಿಯಾದ ಮಾರ್ಗವೆಂದರೆ ಐ. ಏ. ಎಸ್. ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಆ ಇಲಾಖೆಗೆ ಹೋಗಬೇಕು. ಬ್ಯಾಂಕಿನ ಪ್ರಮೋಷನ್ ತಿರಸ್ಕರಿಸಿ ಐ. ಏ, ಇಸ್. ಪರೀಕ್ಷೆಗಾಗಿ ಸಿದ್ಧತೆ ನಡಿಸಿದ. ಈ ಮಧ್ಯೆ ಊರಿನಲ್ಲಿ ಸ್ವಂತ ಮನೆ ಇಲ್ಲವಾಗಿ ಬಾಡಿಗೆ ಮನೆಯ ಸಹವಾಸ ಬೇಡವೆಂದು ರಾಯರು ಹಿಡಿದ ಹಠಕ್ಕಾಗಿ ಒಂದು ಮನೆಯನ್ನೂ ಕಟ್ಟಿಸಿಕೊಟ್ಟನು ಮಾರುತಿ.
ಎರಡು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಐ.ಏ.ಎಸ್. ಪರೀಕ್ಷೆಯಲ್ಲಿ ಮೊದಲ ೫೦ ರ್‍ಯಾಂಕ್ ಗಳಲ್ಲಿ ಒಂದಾಗಿ ತೇರ್ಗಡೆಯಾದ. ಇವನ ಅದೃಷ್ಟವೇನೋ ಎಂಬಂತೆ ಇವನಿಗೆ ಕರ್ನಾಟಕದಲ್ಲೇ ಕೆಲಸವಾಯಿತು. ಎಲ್ಲರೂ ಹೆಚ್ಚಿನದಾಗಿ ಇಷ್ಟಪಡುವ ಹಣಕಾಸು ಇಲಾಖೆಯಲ್ಲಿ ಪೋಸ್ಟಿಂಗ್ ದೊರೆತರೂ ಅದನ್ನು ತಿರಸ್ಕರಿಸಿ ವಿದ್ಯಾ ಇಲಾಖೆಗೆ ಸೇರಿದ. ಬೆಂಗಳೂರಿನಲ್ಲೇ ಕೆಲಸವಾಗಿ ನಂತರದ ದಿನಗಳಲ್ಲಿ ತಮ್ಮಂದಿರನ್ನು ಮತ್ತು ತಂಗಿಯನ್ನು ಬೆಂಗಳೂರಿಗೆ ಕರೆಸಿಕೊಂಡ. (ಇಲ್ಲಿಯವರೆವಿಗೆ ಇವರುಗಳ ಪ್ರಸ್ತಾಪ ಮಾಡಿರಲಿಲ್ಲ - ಇಬ್ಬರು ತಮ್ಮಂದಿರು ರವಿ ಮತ್ತು ಶ್ರೀಹರಿ. ಕೊನೆಯವಳು ತಂಗಿ ಜಲಜೆ). ಇವರುಗಳೆಲ್ಲರ ವಿದ್ಯಾಭ್ಯಾಸ ನೋಡಿಕೊಂಡು ಇವರುಗಳು ತಮ್ಮ ಕಾಲ ಮೇಲೆ ನಿಂತುಕೊಳ್ಳುವಂತೆ ಮಾಡಿ ಹಾಗೇ ತಂಗಿಯ ಮದುವೆಯನ್ನೂ ಮಾಡಿದನು. ಇಷ್ಟರ ವೇಳೆಗೆ ಅವನಿಗಾಗಲೇ ೩೫ ವರ್ಷ ವಯಸ್ಸು ದಾಟಿತ್ತು.
ಇಷ್ಟು ಹೊತ್ತಿಗಾಗಲೇ ಶ್ರೀನಾಥನಿಗೂ ಸಂಬಂಧಿಗಳಲ್ಲೇ ಮದುವೆ ಆಗಿ ಹೋಯಿತು. ಅವನದಿನ್ನು ಅವನ ಹೆಂಡತಿ ಅವನ ಸಂಸಾರ. ಅವನಿಗೆ ಒಂದರ ಹಿಂದೊಂದಂತೆ ಮೂರು ಹೆಣ್ಣು ಮಕ್ಕಳು ಆದವು. ಅವನು ಮನೆ ಕಡೆ ಅಷ್ಟಾಗಿ ನೋಡಲಾಗಲಿಲ್ಲ.
ಆಗ ಬರಸಿಡಿಲಿನಂತೆ ಬಂದ ಸುದ್ದಿಯೆಂದರೆ ರಾಯರಿಗೆ ರಕ್ತದ ಕ್ಯಾನ್ಸರಿಗೆ ಬಲಿಯಾಗಿದ್ದರು. ಅವರನ್ನು ಔಷಧೋಪಚಾರಕ್ಕೆಂದು ಬೆಂಗಳೂರಿಗೆ ಕರೆತರುವಾಗ ಹಾದಿಯಲ್ಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಲ್ಲಿಯವರೆವಿಗೆ ಎಂದೂ ಅತ್ತಿರದ ಮಾರುತಿ ಅಂದು ಮನ ದಣಿಯುವಷ್ಟು ಅತ್ತು ಬಿಟ್ಟ. ಇದಾದ ಒಂದು ವರುಷಗಳವರೆಗೆ ಎಲ್ಲಿಯೂ ಹೋಗಬಾರದೆಂದು ಭಾಗೀರಥಮ್ಮನವರು ಮಾರುತಿಯ ಮನೆಯಲ್ಲೇ ಉಳಿದರು. ಒಂದು ವರ್ಷ ಕಳೆದು ರಾಯರ ವರ್ಷಾಬ್ಧಿಕ ಕರ್ಮ ಮುಗಿಯಿತು. ಮೊದಲ ವರ್ಷದ ವೈಕುಂಠ ಸಮಾರಾಧನೆಗೆ ಎಲ್ಲಿಲ್ಲದ ನೆಂಟರಿಷ್ಟರು. ಎಲ್ಲ ನೆಂಟರದ್ದೂ ಒಂದೇ ವರಸೆ, 'ಭಾಗೀರಥಿ ಮಾರುತಿಗೆ ಯಾವಾಗ ಮದುವೆ ಮಾಡುತ್ತೀ, ನಮ್ಮ ಕಡೆ ಒಳ್ಳೆ ಹುಡುಗಿ ಇದೆ. ಅವನಿಗೇನೂ ಹೆಚ್ಚಿನ ವಯಸ್ಸಾಗಿಲ್ಲ ೩೫ - ೩೬ ಇರಬಹುದು ಅಷ್ಟೆ. ಒಮ್ಮೆ ಹುಡುಗಿಯನ್ನು ಬಂದು ನೋಡು'. ಭಾಗೀರಥಮ್ಮನವರು ಇಂದಿನವರೆವಿಗೂ ತನ್ನ ಮನದ ಅಳಲನ್ನು ಯಾರ ಮುಂದೆಯೂ ತೋಡಿಕೊಂಡಿರಲಿಲ್ಲ. ಅಂದು ರಾತ್ರಿ ಮಾರುತಿಯ ಮುಂದೆ 'ತಾನು ಹುಟ್ಟಿದಂದಿನಿಂದ ಎಂಥ ಅನುಕೂಲಸ್ಥರ ಮನೆಯಲ್ಲಿ ಬೆಳೆದೆ ಮತ್ತು ಮದುವೆ ಆದಂದಿನಿಂದ ಇಂದಿನವರೆಗೂ ಒಂದೇ ಸಮನೆ ಕಷ್ಟಗಳನ್ನೇ ಅನುಭವಿಸುತ್ತಿದ್ದೇನೆ. ಇಲ್ಲಿಯವರೆವಿಗೆ ಯಾವ ನೆಂಟರೂ ನನ್ನ ಕಡೆ ತಿರುಗಿ ನೋಡಿರಲಿಲ್ಲ. ನನ್ನಪ್ಪನೂ ನನ್ನನ್ನು ದೂರ ಸರಿಸಿದ್ದ. ಈಗ ಮಾರುತಿಯ ಹುದ್ದೆ ನೋಡಿ ಎಲ್ಲರೂ ಹತ್ತಿರ ಬರುತ್ತಿರುವರೆಂದೂ, ತನಗೆ ಜೀವನ ರೋಸಿ ಹೋಗಿದೆಯೆಂದೂ ಇನ್ನು ಹೋಗುವೆನು ಎಂದರು.' ಅಪ್ಪನ ಸಾವಿನಿಂದ ಅಮ್ಮನಿಗೆ ಬುದ್ಧಿ ಭ್ರಮಣೆ ಆಗಿರಬೇಕೆಂದು ಮಾರುತಿ ಎಣಿಸಿದ. ಅಂದು ರಾತ್ರಿ ಮಲಗಿದ ಅಮ್ಮ ಮತ್ತೆ ಮೇಲೇಳಲೇ ಇಲ್ಲ.
ಮಾರುತಿಗೆ ಇದೇನಿದು ದೇವರು ಒಮ್ಮೆ ಕಷ್ಟ ಕೊಟ್ಟ. ನಂತರ ಕೆಲಸ ಕೊಟ್ಟು ಸುಖ ಕೊಟ್ಟ. ಹಿಂದೆಯೇ ರ್‍ಯಾಂಕ್ ವಂಚಿಸಿ ಮನಸ್ಸಿಗೆ ಆಘಾತವಾಗುವಂತೆ ಮಾಡಿದ. ಅದರ ವಿರುದ್ಧ ಹೋರಾಡಲು ಐ.ಏ.ಎಸ್. ಮಾಡುವಂತೆ ಪ್ರೇರೇಪ್ಪಿಸಿದ. ತಕ್ಕನ ಹಾಗೆ ವಿದ್ಯಾ ಇಲಾಖೆಯಲ್ಲಿ ಸೇರಿಸಿ ಅಲ್ಲಿಯ ಪದ್ಧತಿಯನ್ನು ಸರಿ ಮಾಡಬೇಕೆನ್ನುವ ಯೋಚನೆಯಲ್ಲಿರುವಾಗಲೇ ಅಪ್ಪ ಅಮ್ಮರಿಬ್ಬರನ್ನೂ ಕಿತ್ತುಕೊಂಡಿದ್ದ.
ಅಣ್ಣನಿಗೆ ಮದುವೆಯಾಗಿ ಅವನ ಸಂಸಾರ ಸಾಗರದಲ್ಲಿ ಅವನು ಏಳದಂತೆ ಮುಳುಗುತ್ತಿರುವ. ತಮ್ಮ ತಂಗಿಯರು ತಮ್ಮ ತಮ್ಮ ಜೀವನ ರೂಪಿಸಿಕೊಂಡರು. ಯಾರ ಹತ್ತಿರ ಹೋದರೂ ಅವರವರ ಕಷ್ಟಗಳನ್ನು ಹೇಳಿಕೊಳ್ಳುವವರೇ ಹೊರತು ತನ್ನ ಬಗ್ಗೆ ಒಂದು ಕ್ಷಣವೂ ಯೋಚಿಸುವವರಿಲ್ಲ. ಆಗಲೇ ಇಬ್ಬರು ತಮ್ಮಂದಿರೂ ತಮಗಿಷ್ಟ ಬಂದವರನ್ನು ಮದುವೆ ಆಗಿ ಮನೆ ಕಟ್ಟಿ ದೂರ ಸರಿದಿದ್ದರು.
ಇನ್ನು ಊರಿನಲ್ಲಿದ್ದ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡು ಎಂದು ತಂಗಿ ಕೇಳುತ್ತಿದ್ದಾಳೆ. ಇದೆಲ್ಲವನ್ನೂ ಪರಾಮರ್ಶಿಸಿದ ಮಾರುತಿ ಅಂದು ಕಲಿತ ಪಾಠ - ಯಾವುದರ ಹಿಂದೆಯೂ ನಾನು ಬೀಳಬಾರದು. ಬರುವುದು ಬಂದೇ ತೀರುತ್ತದೆ. ಹೆಣ್ಣು ಹೊನ್ನು ಮಣ್ಣು ತನಗೆ ಎಂದಿಗೂ ಆಗಿ ಬರುವುದಿಲ್ಲ. ತಾವರೆಯ ಎಲೆಯ ಮೇಲಣ ನೀರ ಹನಿಯಂತೆ ಇರುವೆ ಎಂದು ನಿರ್ಧರಿಸಿದ.