ಕಲಾಪದಲ್ಲಿ ಗದ್ದಲ, ಅಮಾನತು ದುರದೃಷ್ಟಕರ ಬೆಳವಣಿಗೆ

ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಹೊತ್ತಲ್ಲಿ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿರುವುದು ಸಾಮಾನ್ಯ. ಆದರೆ, ಉಳಿದ ಸಮಯದಲ್ಲೂ ರಾಜಕೀಯ ಮೇಲಾಟವೇ ಮುಖ್ಯವಾದರೆ, ಜನರ, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವವರಾರು? ಹಿಂದೆಲ್ಲಾ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಗಂಭೀರ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿದ್ದವು. ಅದಕ್ಕಾಗಿಯೇ, ‘ಸಂಸತ್ತಿನ ದನಿ' ಎಂಬ ಹಿರಿಮೆ ಕೂಡಾ ಸೇರಿಕೊಂಡಿತ್ತು. ಆದರೆ, ಇತೀಚಿನ ದಿನಗಳಲ್ಲಿ ಕಲಾಪ ಹಳಿತಪ್ಪುತ್ತಿರುವುದು, ಬೇಡದ ಕಾರಣಗಳಿಗಾಗಿ ಸುದ್ದಿ ಆಗುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಆಡಳಿತ ಮತ್ತು ಪ್ರತಿಪಕ್ಷಗಳು ರಚನಾತ್ಮಕವಾಗಿ ಬಳಸಿಕೊಳ್ಳಬೇಕಿತ್ತು. ಆದರೆ, ಎರಡೂ ಕಡೆಯ ಪ್ರತಿಷ್ಟೆಗೆ ಕಲಾಪ ಬಲಿಯಾಗಿದೆ. ರಾಜ್ಯಸಭೆಯ ೪೫ ಮತ್ತು ಲೋಕಸಭೆಯ ೩೩ ಸಂಸದರು ಒಂದೇ ದಿನದಂದು ಅಮಾನತುಗೊಳ್ಳುವ ಮೂಲಕ ದೇಶದ ಸಂಸತ್ತು ಅನಿರೀಕ್ಷಿತ ಕ್ಷಣಗಳಿಗೆ ಸೋಮವಾರ ಸಾಕ್ಷಿಯಾಗಿದೆ. ಸದನದಲ್ಲಿ ಶಾಂತಿ ಕಾಪಾಡಬೇಕು ಮತ್ತು ಕಲಾಪ ನಡೆಸಲು ಸಹಕಾರ ನೀಡಬೇಕು ಎಂದು ಪದೇ ಪದೆ ಎಚ್ಚರಿಸಿದರ, ಹದ್ದುಮೀರಿ ನಡೆದರು ಎಂಬ ಕಾರಣಕ್ಕಾಗಿ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಒಟ್ಟು ೭೮ ಸಂಸದರನ್ನು ಅಮಾನತುಗೊಳಿಸಿದ್ದಾರೆ. ೧೯೮೨ರ ಬಳಿಕ ಇದೇ ಮೊದಲ ಬಾರಿಗೆ ದಿನವೊಂದಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಸಂಸದರು ಅಮಾನತುಗೊಂಡಿದ್ದಾರೆ. ೧೯೮೨ರಲ್ಲಿ ರಾಜೀವ ಗಾಂಧಿ ಪ್ರಧಾನಮಂತ್ರಿಯಾಗಿದ್ದಾಗ ಒಂದೇ ದಿನಕ್ಕೆ ೬೩ ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಈ ಬೆಳವಣಿಗೆ ಯಾವ ಸಂದೇಶದವನ್ನು ರವಾನಿಸುತ್ತಿದೆ ಎಂಬುದನ್ನು ಆಡಳಿತ, ಪ್ರತಿಪಕ್ಷಗಳೋಉ ಅವಲೋಕಿಸಿದಂತಿಲ್ಲ. ಕೆಲ ಸಂಸದರಂತೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಸಂಸದೀಯ ನಡವಳಿಕೆಗಳನ್ನು ಉಲ್ಲಂಘಿಸುವ ಮೂಲಕ ಅಪ್ರಬುದ್ಧತೆ ತೋರಿರುವುದು ವಿಷಾದನೀಯ.
ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಸಹಜವೇ. ಇದರ ನಿವಾರಣೆಗೆ ಚರ್ಚೆ ವೇದಿಕೆಯಾಗಬೇಕೇ ಹೊರತು ಕಲಹ, ಕೂಗಾಟ-ಚೀರಾಟವಲ್ಲ. ಸಂಸತ್ತಿನ ಕಲಾಪವನ್ನು ಇಡೀ ದೇಶ ಗಮನಿಸುತ್ತದೆ. ಚರ್ಚೆಗಳನ್ನು ಗಂಭೀರವಾಗಿ ಆಲಿಸುತ್ತಿದೆ ಎಂಬ ಸರಳ ವಾಸ್ತವ ನಮ್ಮ ಸಂಸದರಿಗೆ, ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗೆ ತಿಳಿಯದೆ ಇರುವಂಥದ್ದೇನಲ್ಲ. ಆದರೆ, ರಾಜಕೀಯ ಪ್ರತಿಷ್ಟೆಯಲ್ಲಿ ತಮ್ಮದೇ ಗೆಲುವಾಗಬೇಕು ಎಂಬ ಧೋರಣೆಯೇ ಇಂಥ ಅಪಸವ್ಯಗಳಿಗೆ ನಾಂದಿಯಾಗುತ್ತಿರುವುದು ದುರದೃಷ್ಟಕರ. ಅರ್ಥಪೂರ್ಣ ಚರ್ಚೆ ನಡೆಸುವ ಮೂಲಕ ನಿಷ್ಕರ್ಷಕ್ಕೆ ಬರಲು ಇವರಿಗೆ ಏನು ಅಡ್ಡಿ? ಚರ್ಚೆ ನಡೆದ ಮೇಲೂ ಯಾವುದಾದರೂ ವಿಷಯದ ಬಗ್ಗೆ ಅಸಮಧಾನವಿದ್ದರೆ ಸಂಸತ್ತಿನ ಹೊರಗೆ ವಿರೋಧವನ್ನು ಪ್ರದರ್ಶಿಸಲು ಅವಕಾಶವಿದೆ. ಆದರೆ, ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಡೆಸುವ ಕಲಾಪವನ್ನು ಹಾಳು ಮಾಡಿ, ಚರ್ಚೆಯ ವಾತಾವರಣವನ್ನೇ ನುಂಗಿ ಹಾಕುವ ಪ್ರವೃತ್ತಿ ಕೊನೆಗೊಳ್ಳಬೇಕು. ಈ ಬಗೆಯ ಗದ್ದಲದಿಂದ ಸಂಸದೀಯ ಮೌಲ್ಯಗಳಿಗೂ ಅವಮಾನವಾದಂತಾಗಿದೆ. ಇನ್ನಾದರೂ, ರಾಜಕೀಯ ಪಕ್ಷಗಳು ತಪ್ಪನ್ನು ಸರಿಪಡಿಸಿಕೊಳ್ಳುವ ವಿವೇಕವನ್ನು ತೋರಬೇಕು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೯-೧೨-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ