ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ವಿಮೋಚನಾ ದಿನ

ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ವಿಮೋಚನಾ ದಿನ

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವಾಗಿ ಸೆಪ್ಟೆಂಬ ೧೭ ಅನ್ನು ಆಚರಿಸುತ್ತಾರೆ. ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ ಭೌಗೋಳಿಕ ಪ್ರದೇಶಗಳ ಚಿತ್ರಣದ ಮಾಹಿತಿ ಬೇಕಾಗುತ್ತದೆ. ಭಾರತದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ರಾಜಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಕರ್ನಾಟಕವನ್ನು ಸರಳವಾಗಿ ಇಲ್ಲಿನ ಭೌಗೋಳಿಕತೆಯ ಆಧಾರದ ಮೇಲೆ ಐದು ವಿಭಾಗಗಳಾಗಿ ವಿಂಗಡಿಸಬಹುದು.

1) ಮಲೆನಾಡು ಕರ್ನಾಟಕ

2) ಮೈಸೂರು ಕರ್ನಾಟಕ

3) ಕರಾವಳಿ ಕರ್ನಾಟಕ

4) ಮುಂಬಯಿ ಕರ್ನಾಟಕ

5) ಕಲ್ಯಾಣ ಕರ್ನಾಟಕ.

ಗಾಳಿ, ನೀರು, ಆಹಾರ, ಶಿಕ್ಷಣ, ಆರೋಗ್ಯ, ಸಾರಿಗೆ, ಸಂಪರ್ಕ, ರಸ್ತೆ, ಮನೆ, ಪ್ರಾಕೃತಿಕ ವಾತಾವರಣ, ತಲಾ ಆದಾಯ, ಕೈಗಾರಿಕೆ ಹೀಗೆ ಕೆಲವು ಮೂಲಭೂತ ಸೌಕರ್ಯಗಳ ಆಧಾರದ ಮೇಲೆ ಭೌತಿಕವಾಗಿ ಇಡೀ ಕರ್ನಾಟಕವನ್ನು ಪಾದಯಾತ್ರೆ ಮೂಲಕ ಸಂಚರಿಸಿದ ಅನುಭವದ ಆಧಾರದ ಹೇಳುವುದಾದರೆ ಮೇಲೆ ಹೇಳಿರುವ ಪ್ರದೇಶವಾರು ಅನುಕ್ರಮದಲ್ಲಿ ಮಲೆನಾಡು ಶ್ರೀಮಂತ ಮುಂದುವರಿದ ಪ್ರದೇಶವೆಂದು ಕಲ್ಯಾಣ ಕರ್ನಾಟಕ ಅತ್ಯಂತ ಹಿಂದುಳಿದ ಪ್ರದೇಶವೆಂದು ನಿಸ್ಸಂಶಯವಾಗಿ ಹೇಳಬಹುದು. ಒಂದು ಅಂದಾಜಿನ ಪ್ರಕಾರ ಭೌತಿಕ ಅಭಿವೃದ್ಧಿ ಅದೇ 5 ಕ್ರಮಾಂಕದಲ್ಲಿ ಇದೆ.

ಕಲ್ಯಾಣ ಕರ್ನಾಟಕದ ಅನೇಕ ಹಳ್ಳಿಗಳು ಈಗಲೂ ರಾಜ್ಯದ ದಕ್ಷಿಣ ಭಾಗದ ಕೆಲವು ಜಿಲ್ಲೆಗಳಿಗೆ ಹೋಲಿಸಿದರೆ ಮನುಷ್ಯ ವಾಸಿಸಲು ಯೋಗ್ಯವಾಗಿಲ್ಲ. ಕೆಲವರು ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು, ಕೆಲವು ಕಟ್ಟಡಗಳು, ವಾಸಿಸುವ ಮನೆಗಳು, ವಾಹನಗಳು, ರಾಜಕೀಯ ಪ್ರಾಮುಖ್ಯತೆಯ ಆಧಾರದ ಮೇಲೆ ಕಲ್ಯಾಣ ಕರ್ನಾಟಕ ಹಿಂದಿನಂತಿಲ್ಲ ಈಗ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ವಾದ ಮಂಡಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ಮೇಲ್ನೋಟದ ಅಭಿವೃದ್ಧಿ ಮತ್ತು ಸಮರ್ಥನೆ ಮಾತ್ರ. ನಿಜಕ್ಕೂ ಒಟ್ಟಾರೆ ಸಮಗ್ರವಾಗಿ ನೋಡಿದಾಗ ತೀರಾ ಹಿಂದುಳಿದಿರುವುದು ಗಮನಕ್ಕೆ ಬರುತ್ತದೆ.

ಮೂಲಭೂತವಾಗಿ ಕಲ್ಯಾಣ ಕರ್ನಾಟಕದ ಜನ ಮುಗ್ದರು, ಹೃದಯವಂತರು, ಶ್ರಮಜೀವಿಗಳು. ಆದರೆ ರಾಜಕೀಯ ಇತಿಹಾಸ ಮಾತ್ರವಲ್ಲ ಪ್ರಕೃತಿ ಸಹ ಆ ಭಾಗದ ಜನರಿಗೆ ಸ್ವಲ್ಪ ಪಕ್ಷಪಾತ ಮಾಡಿದೆ. ಅನ್ಯಾಯ ಮಾಡಿದೆ. ಬಹಳಷ್ಟು ಕಪ್ಪು ನೆಲದ ಆ ಭೂಮಿ ಸದಾ ಮಳೆಯ ಕೊರತೆಯನ್ನು ಎದುರಿಸುತ್ತಿದೆ. ಆ ಕಾರಣದಿಂದ ವಾಣಿಜ್ಯ ಬೆಳೆಗಳು ತುಂಬಾ ಕಡಿಮೆ. ಮಳೆಯಾದಾರಿತ ಹೊಲಗಳು ಹೆಚ್ಚು. ರಾಜ್ಯದ ರಾಜಧಾನಿಯಿಂದ ದೂರವಿದೆ. ಇತ್ತೀಚಿನ ವರ್ಷಗಳಲ್ಲಿ ನೀರಾವರಿ ಯೋಜನೆಗಳ ಮೂಲಕ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದರು ಅದು ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.

ತೀರಾ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಸುಸಜ್ಜಿತ ಶೌಚಾಲಯ, ಸ್ನಾನ ಗೃಹ, ಅಡುಗೆ ಮನೆ, ಪ್ರತ್ಯೇಕ ಮಲಗುವ ಕೋಣೆಗಳು ತುಂಬಾ ವಿರಳ. ಕುಡಿಯುವ ನೀರಿನ ಸಂಗ್ರಹಕ್ಕೆ ಪ್ಲಾಸ್ಟಿಕ್ ಬಳಕೆಯೇ ಹೆಚ್ಚು. ಮುರಿದ ನಲ್ಲಿಗಳು, ಕಿತ್ತುಹೋದ ಬಕೆಟ್ ಮತ್ತು ಜಗ್ಗುಗಳು ಸಾಮಾನ್ಯವಾಗಿದೆ. ಗುಟ್ಕಾ ಪದಾರ್ಥಗಳನ್ನು ಸಾಕಷ್ಟು ಜನ ಉಪಯೋಗಿಸುತ್ತಾರೆ. ಸ್ವಂತ ಮನೆ, ಸ್ವಂತ ವಾಹನ ಇರುವವರಿಗೆ ಶ್ರೀಮಂತರ ರೀತಿ ಹೆಚ್ಚು ಮರ್ಯಾದೆ ಸಿಗುತ್ತದೆ.

ಈ ಭಾಗದ ಮತ್ತೊಂದು ದುರಂತ ಕಥೆ ವಲಸೆ. ಉದ್ಯೋಗ ಹುಡುಕಿಕೊಂಡು ಇಡೀ ಕುಟುಂಬ ಮಕ್ಕಳು ಮರಿಮಕ್ಕಳೊಂದಿಗೆ ಗುಳೇ ಹೋಗುವುದು ಮತ್ತು ನಗರಗಳಲ್ಲಿ ಎಲ್ಲೆಂದರಲ್ಲಿ ಆಶ್ರಯ ಪಡೆದು ಬದುಕುವವರಲ್ಲಿ ಈ ಭಾಗದ ಜನರೇ ಹೆಚ್ಚು.

ಇತರ ಭಾಗಗಳಲ್ಲಿ ಸಹ ಬಡತನವಿದೆ. ಆದರೆ ಕಲ್ಯಾಣ ಕರ್ನಾಟಕದಲ್ಲಿ ಕಣ್ಣಿಗೆ ರಾಚುವಷ್ಟು ಬಡತನ ಕಾಣಬಹುದು. ಇತ್ತೀಚಿನ ವರ್ಷಗಳ ವಿಶೇಷ ಸ್ಥಾನಮಾನದ ಅನುಷ್ಠಾನದಿಂದ ಸರ್ಕಾರಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಡು ಬಡತನ ಕಡಿಮೆಯಾಗುತ್ತಿದೆ. ಆದರೆ ಉದ್ಯೋಗಿಗಳು ಬಹುತೇಕ ನಗರ ಪ್ರದೇಶಗಳಲ್ಲಿಯೇ ಹೆಚ್ಚಾಗಿ ವಾಸ ಮಾಡುವುದರಿಂದ ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಬಹುತೇಕ ಜನ ಪ್ರತಿನಿಧಿಗಳು ನಗರಗಳಲ್ಲಿಯೇ ವಾಸ ಮಾಡುತ್ತಿದ್ದು ನೆಪಕ್ಕಾಗಿ ಅಪರೂಪಕ್ಕೆ ಹಳ್ಳಿಗಳಿಗೆ ಭೇಟಿ ನೀಡುತ್ತಾರೆ. ಚುನಾವಣಾ ಸಮಯದಲ್ಲಿ ಮಾತ್ರ ಇಲ್ಲಿಗೆ ಬರುತ್ತಾರೆ. ಅವರ ಪ್ರತಿನಿಧಿಗಳದೇ ಇಲ್ಲಿ‌ ದರ್ಬಾರು.

ಧೈರ್ಯ, ಕಷ್ಟ ಸಹಿಷ್ಣುತೆಗೆ ಹೆಸರಾದ ಕಲ್ಯಾಣ ಕರ್ನಾಟಕದ ಜನರ ಜೀವನಮಟ್ಟ ಸುಧಾರಣೆಯಾಗದೆ ಸಮಗ್ರ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕಾಗಿಯೇ ಆಗಾಗ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಸ್ತಿತ್ವದಲ್ಲಿದ್ದು ಸಾಕಷ್ಟು ಹಣವೂ ಇದೆ. ಆದರೆ ಎಂದಿನಂತೆ ಇಚ್ಚಾ ಶಕ್ತಿಯ ಕೊರತೆಯಿಂದ ಅನುಷ್ಠಾನ ತುಂಬಾ ನಿಧಾನಗತಿಯಲ್ಲಿದೆ.

ಮೊದಲಿಗೆ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದರ ನಂತರವೇ ಪರಿಹಾರ ಸಾಧ್ಯ. ಕೇವಲ ರಸ್ತೆ ಕಟ್ಟಡಗಳೇ ಅಭಿವೃದ್ಧಿ ಎಂಬ ಕಲ್ಪನೆಯಲ್ಲಿ ಯೋಜನೆಗಳನ್ನು ರೂಪಿಸಿದರೆ ಕಲ್ಯಾಣ ಕರ್ನಾಟಕ ಶಾಪಗ್ರಸ್ಥವಾಗಿಯೇ ಉಳಿಯುತ್ತದೆ. 12 ನೆಯ ಶತಮಾನದ ಸಾಮಾಜಿಕ ಕ್ರಾಂತಿಯ ಕಲ್ಯಾಣ ವಿಶ್ವಕ್ಕೆ ಒಂದು ಮಾದರಿ. ಮಠ ಸಂಸ್ಕೃತಿಯ ಉಗಮದ ಮೂಲಕ ಅನ್ನ ಅಕ್ಷರ ದಾಸೋಹದ ನಿಸ್ವಾರ್ಥ ಸೇವೆಯ ಈ ನೆಲ ಎಂದೂ ಬರಡಾಗಬಾರದು.

ಕಲ್ಯಾಣ ಕರ್ನಾಟಕ ವಾಸ್ತವ ನೆಲೆಯಲ್ಲಿ ವಿಮೋಚನೆ ಆಗಬೇಕಾದರೆ ಮುಖ್ಯವಾಗಿ ‌ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಮತ್ತು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಜಾರಿಗೊಳಿಸಬೇಕು.‌ ಅರಣ್ಯ ವಲಯಗಳನ್ನು ಗುರುತಿಸಿ ಬೆಳೆಸಬೇಕು. ಆಗ ಕೃಷಿ ತೀವ್ರ ಬೆಳವಣಿಗೆ ಹೊಂದಿ ಹಸಿರು ವಲಯ ಸೃಷ್ಟಿಯಾಗುತ್ತದೆ. ಅದೇ ಸಮೃದ್ಧಿಯ ಮೊದಲ ಲಕ್ಷಣ. ಇದು ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ಕೊಡುತ್ತದೆ. ಐಟಿ ಬಿಟಿ ಕಂಪನಿಗಳು ನೆಲೆಯೂರಲು ಪೂರಕ ವಾತಾವರಣ ನಿರ್ಮಿಸುತ್ತದೆ.

ಆಡಳಿತಗಾರರು ಬೆಂಗಳೂರು ಮೈಸೂರು ಮಂಗಳೂರು ಬೆಳಗಾವಿ ಹುಬ್ಬಳ್ಳಿ ಶಿವಮೊಗ್ಗ ಮಾತ್ರ ಕರ್ನಾಟಕದ ಹೆಮ್ಮೆ ಎಂದು ಭಾವಿಸಬಾರದು. ಒಂದು ದೇಹದ ಎಲ್ಲಾ ಭಾಗಗಳು ಸಮೃದ್ಧವಾಗಿ ಆರೋಗ್ಯವಾಗಿ ಬೆಳವಣಿಗೆ ಹೊಂದಿದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಇರಲು ಸಾಧ್ಯ. ಹಾಗೆ ಒಂದು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಇಡೀ ರಾಜ್ಯ ಸಮತೋಲನವನ್ನು ಕಾಪಾಡಿಕೊಳ್ಳಬೇಕು.

ಇನ್ನು ಮುಂದಾದರು ಆಡಳಿತ ವ್ಯವಸ್ಥೆ ಕಲ್ಯಾಣ ಕರ್ನಾಟಕದ ವಾಸ್ತವ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಿ. ಮತ್ತೆ ಸಮ ಸಮಾಜದ ಕಲ್ಯಾಣ ಉದಯಿಸಲಿ ಎಂದು ಆಶಿಸುತ್ತಾ…

ಕಲ್ಯಾಣ ಕರ್ನಾಟಕ ನಮ್ಮ ಕರ್ನಾಟಕ,

ಕಲ್ಯಾಣ ಕರ್ನಾಟಕ ಹೆಮ್ಮೆಯ ಕರ್ನಾಟಕ,

ಬಸವಣ್ಣನ ಕರ್ನಾಟಕ ನಿಜವಾದ ಕರ್ನಾಟಕ,

ಹೃದಯವಂತರ ಕರ್ನಾಟಕ ಕಲ್ಯಾಣ ಕರ್ನಾಟಕ,

ನಿಮ್ಮೊಂದಿಗೆ ನಾವು ಎಂದೆಂದಿಗೂ,

ಎಂದು ಭರವಸೆ ನೀಡುತ್ತಾ...

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ