ಕಲ್ಲಿಹಳ್ಳಿ ಅವರ ತೋಟದ ಈ ಬಿಳಿ ಹಾವು ಹೆಗ್ಗಣ ನುಂಗಿತ್ತೋ...? ಅಥವಾ ಗರ್ಭಿಣಿಯಾಗಿತ್ತೋ!

ಕಲ್ಲಿಹಳ್ಳಿ ಅವರ ತೋಟದ ಈ ಬಿಳಿ ಹಾವು ಹೆಗ್ಗಣ ನುಂಗಿತ್ತೋ...? ಅಥವಾ ಗರ್ಭಿಣಿಯಾಗಿತ್ತೋ!

ಬರಹ

ತ.ರಾ.ಸು. ಬದುಕಿರಬೇಕಿತ್ತು. ಹಾಗೆಯೇ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ಕೂಡ.

ಖಾತ್ರಿ ನಮ್ಮ ಸುಬ್ಬರಾಯರು ತಮ್ಮ ಐತಿಹಾಸಿಕ ಕಾದಂಬರಿ ‘ನಾಗರಹಾವು’ ಶೀರ್ಷಿಕೆ ತಿದ್ದಿ ’ಬಿಳಿ ನಾಗರಹಾವು’ ಎಂದು ಬರೆಯುತ್ತಿದ್ದರು!

ಹಾಗೆಯೇ ನಮ್ಮ ಪುಟ್ಟಣ್ಣನವರು ತಮ್ಮ ಚಲನಚಿತ್ರದ ಹೆಸರನ್ನು ಸಹ ’ಬಿಳಿ ನಾಗರಹಾವು’ ಎಂದು ಬದಲಾಯಿಸುತ್ತಿದ್ದರು ಎಂದು ನಾನಂದರೆ ನೀವು ನಂಬಬೇಕು.

ಬೇಕಿದ್ದರೆ ‘ನಾಗರಹಾವಿನ’ ನಮ್ಮ ಚಾಮಯ್ಯ ಮೇಷ್ಟ್ರು..ಕೆ.ಎಸ್.ಅಶ್ವಥ್ ಅವರನ್ನು ಈಗ ಕೇಳಲು ಅಡ್ಡಿ ಇಲ್ಲ!

ಕಾರಣ ಮೊನ್ನೆ ನಮ್ಮ ಏಲಕ್ಕಿ ಕಂಪಿನ ನಾಡು ಹಾವೇರಿಯ ಜಿಲ್ಲೆ ವ್ಯಾಪ್ತಿಯ ಗ್ರಾಮ ಯೆಲ್ಲಾಪುರದಲ್ಲಿ ಸುಂದರವಾದ ಬಿಳಿ ಹಾವು ಏಕಾಏಕಿ ಪ್ರತ್ಯಕ್ಷವಾಗಿತ್ತು. ಕಪ್ಪು ಮಣ್ಣಿನ ಮಣ್ಣಿನ ಮಸಾರಿ ಭೂಮಿಯಲ್ಲಿ ಈ ವಿಚಿತ್ರ ಉಪದ್ರವ ಜೀವಿಯ ಅವತರಣ ಆ ಭಾಗದಲ್ಲಿ ವಿಶೇಷ ಸಂಚಲನ ಮೂಡಿಸಿತ್ತು. ಗ್ರಾಮದ ಭೀಮಪ್ಪಜ್ಜ ಮೂಗೇರಿಸಿ, ಕನ್ನಡಕದಲ್ಲಿ ದಿಟ್ಟಿಸಿ ನೋಡಿ.."ಅಯ್ಯೋ..ಇದ..ಬಿಳಪ ಹತ್ತಿದ ಹಾವು!" ಅಂತ ಅಂದ್ರು. ನಮ್ಮಂತಹ ನೋಡುಗರ ಆಸಕ್ತಿ ಉಡುಗಿಯೇ ಹೋಗಿತ್ತು. ‘ಹಾವಿಗೂ ತೊನ್ನು ರೋಗ ಬರುತ್ತದೆಯೇ?’

ಡಾ. ಎಚ್. ನರಸಿಂಹಯ್ಯ ಯಾವತ್ತೂ ಹೇಳುತ್ತಿದ್ದರು. ಅದೂ ರಾಜ್ಯ ವಿಜ್ಞಾನ ಪರಿಷತ್ತು ಹುಟ್ಟು ಹಾಕಿದ ಮೇಲಂತೂ ಎಚ್.ಎನ್. ಒತ್ತುಕೊಟ್ಟು, ತೀಡಿ ಹೇಳೋರು. "ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬೇಡ." ನನ್ನ ಪ್ರಶ್ನೆ ಭೀಮಪ್ಪಜ್ಜನಿಗೆ ಕೋಪ ನೆತ್ತಿಗೇರಿಸಿತು. ನಶ್ಯದ ಡಬ್ಬಿ ತೆಗೆದು, ಮೂಗಿಗೆ ಏರಿಸಿ ಭೂಮಿಯನ್ನು ನಡುಗಿಸುವವನಂತೆ ಭಯಂಕರವಾಗಿ ಒಮ್ಮೆ ಸೀನಿ, ನನ್ನತ್ತ ಕ್ಯಾಕರಿಸಿ ನೋಡಿ.."ಮುಂಡೆದ್ದುವು..ಹಂಗದ್ರ ಉಪದ್ರ ಕೊಡದ ಇವಲ್ಲೆ ಓಡಿ ಹೋಗ್ತಾವ..ಪಾಪ ಆ ಹಾವು ಮುಟ್ಟದ; ಆಮೇಲೆ ನಾನು ಎತ್ತಿ ಆ ಹಳ್ಳದಾಗ ಬಿಡತೇನಿ. ಎಲ್ಲರೆ ಬದಕೋತೈತಿ. ಇಲ್ಲಾಂದ್ರ ಇವು ಚಿನ್ನಾಟಗಿ ಆಡಕೋತ ಅದನ್ನ ಕೊಂದ ಹಾಕತಾವ. ನಾನು ನಿಮ್ಮಾಂಗ ಸಾಲಿ ಕಲಿತಿಲ್ಲ ಆದರ ಅದನ ಬದಕಸಾಕ ಇಷ್ಟು ಬುದ್ಧಿ ಸಾಕು..ಅಲಾ?" ಅಂದ್ರು. ನಾನು ಹೆದರಿ ತಲೆಯಾಡಿಸಿದೆ.

"ನೀವು ಪೇಪರಿನಾವರು..ಏನೇನೋ ನಾಳೆ ಸುದ್ದಿ ಬರೀತೀರಿ..ನಮ್ಮ ಊರವರು ಈ ಬಿಳಿ ಹಾವಿಗೆ ಒಂದು ಗುಡಿ ಕಟ್ಟಸುವಷ್ಟು ಮುಂದಕ ವಿಚಾರ ಮಾಡತಾರ!" ಎಂದು ತಮ್ಮ ಅಸಹನೆ ವ್ಯಕ್ತ ಪಡಿಸಿದರು. ನೂರಾರು ಜನ ಅಲ್ಲಿಗೆ ಸುದ್ದಿ ಕೇಳಿ ಧಾವಿಸಿ ಬರುತ್ತಿದ್ದರು. ಅದೇ ಹೊಲದಲ್ಲಿ ಶೇಂಗಾ ಬೆಳೆ ಬೆಳೆದಿದ್ದ ಗುಡ್ಡಪ್ಪ ನೀಲಪ್ಪ ಕಲ್ಲಿಹಳ್ಳಿ ಅವರ ಫಜೀತಿ ಹೇಳತೀರದು. "ತಮ್ಮಗೋಳ್ರ್ಯಾ..ಹೊಲದ ಬದುವಿನ ಮ್ಯಾಲೆ ಹೋಗ್ರಲೇ..ಪೀಕು ತುಳದು ಹಾಳ ಮಾಡತೀರಿ..ಆ ಹೊಲಸು ಹಾವು ಬರೋದು ಒತ್ತಟ್ಟಿಗಿರಲಿ ಈ ಉದ್ಯೋಗ ಇರಲಾರ್ದು ಜಾತ್ರಿ ಮಾಡಕತ್ಯಾವ.." ಎಂದು ತಮ್ಮ ತಾಳ್ಮೆ ಗೆಟ್ಟು ರಂಪ ಮಾಡುತ್ತಿದ್ದರು.

ನಿಜಕ್ಕೂ ಮನಮೋಹಕ ದೃಷ್ಯ ಅಲ್ಲಿತ್ತು. ಹಾವು Olive Green ಬಣ್ಣದಾಗಿತ್ತು. ಆಗಲೇ ಇಲಿಯನ್ನು ನುಂಗಿದ್ದರಿಂದ ಸರ ಸರನೇ ತೆವಳಲಾಗದೇ ತೀರ ಪ್ರಯಾಸ ಪಟ್ಟು ತನ್ನ ಬಿಲ ಹುಡುಕುತ್ತ ಎಲ್ಲರ ಮಧ್ಯೆ ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿತ್ತು. ಬಿಳಿ ಬಣ್ಣದ ಸೀಳು ನಾಲಿಗೆಯನ್ನು ಆಗಾಗ ಚಾಚಿ ವಾಸನೆ ಗ್ರಹಿಸಲು ಪ್ರಯತ್ನಿಸುತ್ತಿತ್ತು. ಸೂರ್ಯನ ರಶ್ಮಿಗೆ ಮಿರಿಮಿರಿ ಮಿಂಚುತ್ತಿದ್ದ ಬಿಳಿ ಹಾವಿನ ಮೈಬಣ್ಣ ನೋಡುಗರಲ್ಲಿ ರೋಮಾಂಚನ ಉಂಟುಮಾಡಿತ್ತು. ಒಂದರ್ಥದಲ್ಲಿ ಯೆಲ್ಲಾಪುರದಲ್ಲಿ ಬಿಳಿ ಹುಲಿ ನೋಡಿದಷ್ಟು ಸಂಭ್ರಮ ಅಲ್ಲಿತ್ತು.

ಹಾವೇರಿಯ ಜಿ.ಎಚ್. ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಎಸ್.ಬಿರಸಾಲ ಅವರನ್ನು ಈ ಬಿಳಿ ಹುಲಿ..ಕ್ಷಮಿಸಿ ಬಿಳಿ ಹಾವಿನ ಬಗ್ಗೆ ವಿಚಾರಿಸಿದೆ. ಅವರು ಈ ಹಾವು Rat Snake ಕುಟುಂಬಕ್ಕೆ ಸೇರಿರುವ ವಿಶಿಷ್ಟ ಹಾವು ಎಂದರು. ಪೂರ್ತಿ ಬೆಳೆದ ಹಾವು ಸುಮಾರು ೬ ಅಡಿಗಳಷ್ಟು ಉದ್ದವಿರುವುದಾಗಿ ಹೇಳಿದರು. ಬಣ್ಣ ಮಾತ್ರ ನಮ್ಮ ಸೀಮೆ ಸುಣ್ಣದಂತೆ ಚೊಕ್ಕ ಬಿಳಿ ಯಾಗಿರದೇ, Olive Green ಬಣ್ಣದ್ದಾಗಿರುತ್ತದೆ. ಇದು ವಿನಾಶದ ಅಂಚಿನಲ್ಲಿರುವ ಅಪರೂಪದ ಹಾವಾಗಿದ್ದು, ದೇಶದ ವಿವಿಧ ಸಮಶೀತೋಷ್ಣ ಪ್ರದೇಶಗಳ ಕಾಡುಗಳಲ್ಲಿ ಕ್ವಚಿತ್ ಕಂಡುಬರುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದ ಪ್ರೊ. ಗಾಮನಗಟ್ಟಿ ಅವರನ್ನು ಈ ಕುರಿತು ವಿಚಾರಿಸಿದೆ. ಅವರು ಬರೆದ ‘ಉರಗಗಳು’ ಎಂಬ ಪುಸ್ತಕವನ್ನು ನಮ್ಮ ಕವಿವಿ ಪ್ರಸಾರಾಂಗ ಪ್ರಕಟಿಸಿದೆ. ಅದು ಮೌಲ್ಯಯುತ ಪುಸ್ತಕ ಎಂಬುದರಲ್ಲಿ ಎರಡು ಮಾತಿಲ್ಲ. "ಈ ರೀತಿಯ ಬಿಳಿ ಹಾವುಗಳ ಬಗ್ಗೆ ಹೆಚ್ಚಿನ ಸಂಶೋಧನೆ ಆಳವಾಗಿ ಕೈಗೊಳ್ಳುವ ಅವಶ್ಯಕತೆ ಇದೆ. ಕೆಲವೊಮ್ಮೆ ಗುಣಾಣುಗಳ ಏರುಪೇರು ಅಥವಾ ಹೇರಾಪೇರಿಯಿಂದ ಕರಿ ಕಾಗೆಗೆ ಬಿಳಿ ಮರಿ, ಕರಿ ಬಣ್ಣದ ಇಲಿಗೆ ಬಿಳಿ ಇಲಿ ಮರಿ ಹೀಗೆ ಬಣ್ಣದೋಷದ ಮರಿಗಳು ಜನಿಸುವುದು ಸಾಮಾನ್ಯ. ಇದು Albino ಕೂಡ ಅಲ್ಲ. ಏಕೆಂದರೆ ಆ ಜಾತಿಯ ಉರಗಗಳಲ್ಲಿ ದೇಹದ ಬಣ್ಣ ಸಂಪೂರ್ಣ ಬಿಳಿಯಾಗಿದ್ದು, ಕಣ್ಣುಗಳು ಮೊಲದಂತೆ ಕೆಂಪಾಗಿರುತ್ತವೆ. ಈ ಹಾವಿನ ಕಣ್ಣುಗಳು ಕಪ್ಪಗಿವೆ. ನಾಲಿಗೆ ಮಾತ್ರ ಬಿಳಿ ಇದೆ. ಆದರೆ ಮನುಷ್ಯರಂತೆ ಕಣ್ಣು ಹಾಗು ಕೂದಲಿನ ಬಣ್ಣಗಳಲ್ಲಿ ವ್ಯತ್ಯಾಸವಾಗುವಂತೆ ಜೀವಿ ವೈವಿಧ್ಯದಲ್ಲಿ ವಿಕಸನದ ಹಂತದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ" ಎಂದರು.

ಧಾರವಾಡದಲ್ಲಿ ಹಾವು ಹಿಡಿಯುವ ಧೀರ ಅಂದರೆ ನಮ್ಮ ಗಾಂಧಿ ಚೌಕದಲ್ಲಿ ‘ಪಡ್’ ಮಾರಾಟ ಮಾಡುತ್ತಿದ್ದ ಪಡ್ ಮಾಸ್ತರ್ ಮಗ ಶ್ಯಾಮ. ಸದ್ಯ ವೈದಿಕ ಕೆಲಸದಲ್ಲಿ ತೊಡಗಿಕೊಂಡಿರುವ ಆತ ನನ್ನ ಆಪ್ತ ಗೆಳೆಯ. ಕಳೆದ ಸುಮಾರು ೧೬-೧೭ ವರ್ಷಗಳಿಂದ ಆತ ಈ ಹಾವುಗಳನ್ನು ಹಿಡಿಯುತ್ತ ಬಂದಿದ್ದಾನೆ. ಅವನ ಅನುಭವದ ಸಾರ.."ಈ ಬಿಳಿ ಹಾವು ನನಗನಿಸೋ ಮಟ್ಟಿಗೆ Russel Viper. ಏಕೆಂದರೆ ಹಾವಿನ ತಲೆ ಹೆಣ್ಣುಮಕ್ಕಳ ಸ್ಯಾಂಡಲ್ ಮುಂಭಾಗದ ಆಕೃತಿಯಂತಿದೆ. ಮೂಗಿನ ಹೊಳ್ಳೆಗಳು ಸಾಮಾನ್ಯ ಹಾವಿಗಿಂತ ಮೂರು ಪಟ್ಟು ದೊಡ್ಡವು. ಕಡು ಕಪ್ಪು ಕಣ್ಣುಗಳ ಮಧ್ಯೆ ಕಂದು ಗುಡ್ಡೆ, ಸುತ್ತ ಬಿಳಿ ಛಾಯೆಯ ಪಾಪೆಗಳು. ಅದರ ಗಾತ್ರ ನೋಡಿದರೆ ಅದು ಹೆಣ್ಣು ಹಾವಾಗಿದ್ದು, ಬಹುಶ: ಗರ್ಭವತಿಯಾಗಿದೆ. ಸಾಮಾನ್ಯವಾಗಿ ಕಂಡು ಬರುವ Tail Rat ಇದಲ್ಲ. ಏಕೆಂದರೆ Tail Rat ಇದಕ್ಕಿಂತಲೂ ಉದ್ದ ಹಾಗು ಅತ್ಯಂತ ಚುರುಕಾದ ಹಾವು. ಹಾಗು ಅದು ತತ್ತಿ ಇಡದೇ ನೇರವಾಗಿ ಮರಿಗಳನ್ನೇ ಹಾಕುತ್ತದೆ" ಎಂದು ಫೋಟೊ ನೋಡಿ ವಿವರಿಸಿದ.

ಆದರೆ ಗ್ರಾಮಸ್ಥರು ಹಾಗು ನನ್ನ ಅಲ್ಲಿನ ಮಾಧ್ಯಮ ಮಿತ್ರರ ಪ್ರಕಾರ ಇಂತಹ ಹಾವನ್ನು ೨ ತಿಂಗಳ ಕೆಳಗೆ ಅದೇ ವ್ಯಾಪ್ತಿಯಲ್ಲಿ ಇನ್ನೊಬ್ಬರ ಹೊಲದಲ್ಲಿ ನೋಡಿದ್ದಾಗಿ ತಿಳಿಸಿದರು. ಆದರೆ ಅದೇ ಇದು ಎಂದು ಸಾಬೀತು ಪಡಿಸಲು, ಅಥವಾ ಇದು ಬೇರೆ ಎಂದು ಹೇಳಲು ಅವರ ಬಳಿ ಯಾವ ಪುರಾವೆಗಳೂ ಇರಲಿಲ್ಲ. ಆದರೆ "ಈ ಬಿಳಿ ಹಾವು ಮಾತ್ರ ಗರ್ಭವತಿ ಆಗಿಲ್ಲ..ಅದು ಹೆಗ್ಗಣ ನುಂಗಿದೆ" ಎಂದು ವಾದಿಸುವಲ್ಲಿ ಯೆಲ್ಲಾಪುರದ ದೊಡ್ಡ ಯುವ ಸಮೂಹ ಭರ್ಜರಿ ವಾದ ಮಂಡಿಸಿತು. ಸುಮ್ಮನಿದ್ದರೆ ಹಾವಿಗೆ ಸರ್ಜರಿ ಮಾಡಿ, ಸತ್ಯ ತಿಳಿಯುವಷ್ಟು ಭಯಂಕರವಾಗಿತ್ತು. ಆದರೆ, ಅಧೇಗೆ ಈ ಪಾಯಿಂಟ್ ಅವರಿಗೆ ಹೊಳೆಯಿತು? ಅಥವಾ ಅದು ‘ಪ್ರಗ್ನೆಂಟ್’ ಎಂಬ ಊಹೆ ಮೊದಲು ಇಲ್ಲಿ ಯಾರಿಗೆ ಬಂದಿತ್ತು? ಎಂಬುದು ಈಗ ಜಿಜ್ಞಾಸೆಯ ಪ್ರಶ್ನೆ!

ಅಂತೂ ಸುರಕ್ಷಿತವಾಗಿ ಬಿಳಿ ಹಾವು ಅರಣ್ಯ ಇಲಾಖೆಯ ಸುಪರ್ದಿಗೆ ಸೇರಿತು. ಅದನ್ನು ಉಪಚರಿಸಿ, ಕೆಲ ಕಾಲ ಸಂಶೋಧನೆಗಾಗಿ, ಮಾಹಿತಿ ಸಂಗ್ರಹಿಸಲು ಕಾಯ್ದಿಟ್ಟು ಕಾಡಿಗೆ ಬಿಡುವುದಾಗಿ ಅಧಿಕಾರಿಗಳು ಹೇಳಿದರು. ನಾನು ನಿಟ್ಟುಸಿರು ಬಿಟ್ಟೆ.