ಕಳಚಿದ ಕಾಲಗರ್ಭದ ಸವಿಸವಿ ನೆನಪು

ಕಳಚಿದ ಕಾಲಗರ್ಭದ ಸವಿಸವಿ ನೆನಪು

ಬರಹ

ಕೊನೆಗೂ ೨೦೦೮ ಕಾಲನ ಕಾಳ್ತುಳಿತಕ್ಕೆ ಸಿಕ್ಕಿ ಕಾಲಗರ್ಭವನ್ನು ಸೇರಿದೆ. ಹತ್ತು ಹಲವು ವಿವಾದಗಳನ್ನು, ನೂರಾರು ಸಮಸ್ಯೆಗಳನ್ನು ತನ್ನ ಒಡಲಾಳದಲ್ಲಿ ನುಂಗಿಕೊಂಡು ವಿದಾಯ ಹಾಡಿದೆ.
ಎಂಟು ಸಾವಿರದ ಎಂಟರೊಳಗಿನ ನಂಟು ಇದೀಗ ತಾನೇ ಸಡಿಲಗೊಂಡಿದೆ. ನೆನಪಿನ ಗಂಟು ಭಾರವಾಗಿದೆ.
ಜಗವಿಹುದನಾದಿಯದು, ಮೊದಲಿಲ್ಲ, ಕೊನೆಯಿಲ್ಲ,
ಯುಗದಿಂದ ಯುಗಕೆ ಹರಿವುದು ಜೀವನದಿ.
ಎಂದು ಕಗ್ಗದ ಸಾಲುಗಳು ಹೇಳುತ್ತವೆ. ಕಾಲಕ್ಕೆ ಕೊನೆಯಿಲ್ಲ, ಮೊದಲಿಲ್ಲ, ಅದು ಅನಂತವಾದುದು. ಅದು ಬದಲಾಗುವುದೂ ಇಲ್ಲ ಆದರೆ ನಮ್ಮ ಜೀವಿತಕ್ಕೆ ಕೊನೆ ಇದೆಯಲ್ಲಾ? ಅದನ್ನು ನೆನಪಿಸುವುದಕ್ಕಾದರೂ ಕಾಲದ ಅರಿವು ಆಗಬೇಕಾಗಿದೆ.
ನಮ್ಮ ಸ್ನೇಹಿತರೊಬ್ಬರು ಹೇಳಿರುವಂತೆ, ವರ್ಷ ತನ್ನ ೧೨ ವಸಂತ ಪೂರ್ತಿ ಮಾಡಿ, ಮತ್ತೊಂದು ವರ್ಷಕ್ಕೆ ಕಾಲಿಡುತ್ತದೆ. ಅಂದರೆ ನಮ್ಮ ಆಯುಷ್ಯದಲ್ಲಿ ಒಂದು ವರ್ಷ ಕಡಿಮೆಯಾದಂತೆ. ಆದರೂ ಹೊಸವರ್ಷ ಬಂತೆಂದರೆ ನಮ್ಮೆಲ್ಲರಿಗೂ ಒಂದು ವಿಶೇಷ ಆಕರ್ಷಣೆ.
ಸುಧೀರ್ಘವಾದ ಈ ಎಂಟರ ಪಯಣದಲ್ಲಿ ಆದ ವಿಶೇಷ ದಾಖಲೆಗಳು ಕಡಿಮೆಯೇನಿಲ್ಲ. ಶಶಿಯೊಂದಿಗೆ ಸಖ್ಯ ಬೆಳೆಸಲು ಚಂದ್ರಯಾನ, ಬಿಳಿಯರ ನಾಡಿನಲ್ಲಿ ಕರಿಯರಿಗೆ ಅಸಾಧ್ಯವಾಗಿದ್ದ ಅಧ್ಯಕ್ಷ ಪಟ್ಟ ಒಲಿದದ್ದು, ಭಾರತಕ್ಕೆ ಒಲಂಪಿಕ್ ಚಿನ್ನದ ಕನಸು ನನಸಾಗಿದ್ದು, ಕನ್ನಡಿಗನ ಕುಂಚದಿಂದ ಮೂಡಿಬಂದ ಪುಸ್ತಕಕ್ಕೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿ ದೊರೆತದ್ದು... ಹೀಗೆ ಮುಂದುವರೆಯುತ್ತದೆ.
ಹಾಗಂತ ಈ ನಂಟಿನೊಳಗಿನ ನೆನಪುಗಳೆಲ್ಲಾ ಒಳ್ಳೆಯದೇ ಎನ್ನುವ ಹಾಗೂ ಇಲ್ಲ. ವರ್ಷದ ಆರಂಭವಾಗಿನಿಂದ ಅಲ್ಲಲ್ಲಿ ಸಾಗಿದ ವಿದ್ವಂಸಕ ಕೃತ್ಯಗಳಿಗೆ ಎಣಿಕೆ ಸಾಲದು. ಅಂತ್ಯದಲ್ಲಂತೂ ಇದರ ರೂಪ ವಿರೂಪವಾಗಿ ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಪೋಟ ಪ್ರಕರಣಗಳು ನಡೆದದ್ದು, ಸಾವಿರಾರು ಮಂದಿ ಮಡಿದದ್ದು, ಗಾಯಗೊಂಡಿದ್ದು ಇನ್ನೂ ಮಾಸಿಲ್ಲ. ಇಡೀ ವಿಶ್ವವೇ ಆರ್ಥಿಕ ಸಂಕಷ್ಟ ಎದುರಿಸಿದ್ದು ಗಮನಾರ್ಹ. 

ಹೀಗೆ... ಕಾಲದ ಪ್ರವಾಹದಲ್ಲಿ ನಾವು ನಡೆದಾಡಿದ ಎಲ್ಲಾ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವುದು ಅಸಾಧ್ಯ. ಆದರೂ ಮರೆಯಲಾಗದ ನೆನಪುಗಳನ್ನು ಮುಂದಿನ ವರ್ಷಕ್ಕೆ ಜೊತೆಯಲ್ಲಿ ಕರೆದೊಯ್ಯೋಣ. ಹೊಸವರ್ಷದ ಹೊಸ್ತಿಲೊಳಗೆ ನಾವು ಇಣುಕಿದ್ದೇವೆ. ಹಳೆಯ ವರ್ಷದಲ್ಲಿ ಪಡೆದುಕೊಳ್ಳಲಾಗದೇ ಇದ್ದುದು, ಹೊಸ ವರ್ಷದಲ್ಲಿ ಸಿಗಬಹುದೆಂಬ ಭರವಸೆಯೊಂದಿಗೆ ಮುಂದಕ್ಕೆ ಅಡಿಇಡೋಣ.
ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು