ಕಳ್ಳನ ಹಿಂದೆ ಓಡಿದ ಸಾಧು!

ಕಳ್ಳನ ಹಿಂದೆ ಓಡಿದ ಸಾಧು!

ಗಂಗಾ ನದಿ ತೀರದಲ್ಲಿ ವಾರಣಾಸಿಯ ಹತ್ತಿರ ಒಬ್ಬ ಸಾಧು ಕುಟೀರ ಕಟ್ಟಿಕೊಂಡು ವಾಸಮಾಡುತ್ತಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಹಾಯ ಮಾಡುವುದು ಆ ಸಾಧುವಿನ ಹವ್ಯಾಸ. ಸುತ್ತಮುತ್ತಲಿನವರು ಆ ಸಾಧುಗೆ ನಾನಾ ರೀತಿಯ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಹೀಗೆ ಸಂಗ್ರಹಗೊಂಡ ರಜತ ಪಾತ್ರೆಗಳು ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಅವರು ಬಡವರಿಗೆ ನೀಡುತ್ತಿದ್ದರು. ಜನಸಾಮಾನ್ಯರಿಗೆ ಕಷ್ಟ ಬಂದಾಗ ಇಂತಹ ವಸ್ತುಗಳ ಉಪಯೋಗವಾಗುತ್ತದೆ ಎಂಬ ಉದ್ದೇಶದಿಂದ, ಅಂತಹ ವಸ್ತುಗಳನ್ನು ಅವರು ಕುಟೀರದ ಮರದ ಹಲಗೆಗಳ ಅಡಿ ಜೋಡಿಸಿಡುತ್ತಿದ್ದರು.

ಒಮ್ಮೆ ಈ ಕುಟೀರದ ಮೇಲೆ ಒಬ್ಬ ಕಳ್ಳನ ಕಣ್ಣು ಬಿತ್ತು. ಸುತ್ತಲಿನ ಗ್ರಾಮದವರು ನೀಡಿದ ವಸ್ತುಗಳನ್ನು, ದವಸ ಧಾನ್ಯಗಳನ್ನು ಸಾಧುಗಳು ಸಂಗ್ರಹಿಸಿ ಇಟ್ಟುಕೊಳ್ಳುವುದನ್ನು ಸಹ ಗಮನಿಸಿದ. ಇವರು ಹೇಳಿ ಕೇಳಿ ಸಾಧು. ಇವರು ಅದನ್ನೇಕೆ ಸಂಗ್ರಹಿಸಿ ಇಡಬೇಕು? ಎಂದು ಆ ಕಳ್ಳ ತರ್ಕಿಸಿದ.

ಒಂದು ರಾತ್ರಿ ಅವರ ಕುಟೀರಕ್ಕೆ ಕನ್ನ ಕೊರೆಯುವುದು ಎಂದು ನಿರ್ಧರಿಸಿದ. ಪ್ರತೀ ದಿನ ಸಂಜೆ ಹತ್ತಿರದ ಗ್ರಾಮದ ದೇವಾಲಯಕ್ಕೆ ಸಾಧುಗಳು ಹೋಗಿ, ಧ್ಯಾನ ಮಾಡುತ್ತಿದ್ದರು. ಆ ಸಮಯವನ್ನು ನೋಡಿಕೊಂಡು, ಕಳ್ಳ ಕುಟೀರದ ಹಿಂಭಾಗದಿಂದ ಕನ್ನಕೊರೆದು ಬೆಲೆ ಬಾಳುವ ವಸ್ತುಗಳಿಗೆ ತಡಕಾಡಿದ. ಆ ಕುಟೀರದಲ್ಲಿ ಸಾಕಷ್ಟು ಧಾನ್ಯದ ಮೂಟೆಗಳಿದ್ದವು. ಅವು ಕಳ್ಳನಿಗೆ ಬೇಕಾಗಿರಲಿಲ್ಲ. ಸಾಕಷ್ಟು ಹುಡುಕಿದ ಮೇಲೆ, ಕೆಲವು ಮರಗಳ ಹಲಗೆಗಳ ಅಡಿಯಲ್ಲಿ ಸಾಧು ಸಂಗ್ರಹಿಸಿ ಇಟ್ಟಿದ್ದ ಕೆಲವು ರಜತ ಮತ್ತು ತಾಮ್ರದ ಪಾತ್ರೆಗಳು ಕಂಡವು. ಅವುಗಳನ್ನು ನಿಧಾನವಾಗಿ ಹೊರಗಿಟ್ಟುಕೊಂಡ ಕಳ್ಳ, ಇನ್ನೇನು ಅವುಗಳನ್ನು ಹೊತ್ತು ಕಣ್ಮರೆಯಾಗಬೇಕು ಎನ್ನುವ ಹೊತ್ತಿಗೆ ಸಾಧುಗಳು ಕುಟೀರದ ಬಾಗಿಲು ತೆರೆದು ಒಳಗೆ ಬಂದರು.

ನೋಡುತ್ತಾರೆ, ಹಿಂಭಾಗದಲ್ಲಿ ಕನ್ನ ಕೊರೆದು, ಕಳ್ಳನು ಕೆಲವು ಬೆಲೆಬಾಳುವ ವಸ್ತುಗಳನ್ನು ಸಾಗಿಸಲು ಪ್ರಯತ್ನಿಸುತ್ತಿದ್ದಾನೆ? ‘ಯಾರಪ್ಪಾ ಅದು?’ ಎಂದು ಸಾಧು ದೊಡ್ಡ ದನಿಯಲ್ಲಿ ಕೇಳುತ್ತಾರೆ.

ತಕ್ಷಣ ಕಳ್ಳನು ಕೈಗೆ ಸಿಕ್ಕ ಒಂದೆರಡು ಪಾತ್ರೆಗಳನ್ನು ಎತ್ತಿಕೊಂಡು ಪರಾರಿಯಾಗುತ್ತಾನೆ. ಕೆಲವು ನಿಮಿಷಗಳ ನಂತರ ಕಳ್ಳ ಹಿಂತಿರುಗಿ ನೋಡಿದ. ಅವನು ಬಂದ ದಾರಿಯಲ್ಲೇ ಸಾಧುಗಳು ಸಹ ಓಡಿ ಬರುತ್ತಿರುವುದು ಆ ಬೆಳದಿಂಗಳ ರಾತ್ರಿಯಲ್ಲಿ ಮಸುಕಾಗಿ ಕಾಣಿಸಿತು. ಕಳ್ಳನಿಗೆ ಗಾಬರಿಯಾಯಿತು. ಸಾಧು ಅಟ್ಟಿಸಿಕೊಂಡು ಬಂದು ತನ್ನನ್ನು ಹಿಡಿದು, ಸೈನಿಕರ ಕೈಗೆ ಒಪ್ಪಿಸುತ್ತಾರೆ ಎಂಬ ಭಯದಿಂದ ವೇಗವಾಗಿ ಓಡತೊಡಗುತ್ತಾನೆ. ಆದರೆ ಸಾಧುಗಳು ಅವನಷ್ಟೇ ವೇಗವಾಗಿ ಓಡಿ ಬಂದು, ಕೆಲವೇ ನಿಮಿಷಗಳಲ್ಲಿ ಕಳ್ಳನ ಬೆನ್ನಿನ ಮೇಲೆ ಕೈ ಇಡುತ್ತಾರೆ.

‘ಯಾಕಪ್ಪಾ ಓಡುತ್ತಿದ್ದೀಯಾ? ನನ್ನ ಕಂಡರೆ ಭಯವೇ? ನೀನು ಕೆಲವು ಪಾತ್ರೆಗಳನ್ನು ಮಾತ್ರ ತಂದಿದ್ದೀಯಾ. ಇನ್ನಷ್ಟು ಬೆಲೆಬಾಳುವ ಪಾತ್ರೆಗಳನ್ನು ಅಲ್ಲೇ ಬಿಟ್ಟು ಬಂದಿರುವೆ. ಅದನ್ನೂ ತೆಗೆದುಕೊಂಡು ಹೋಗು ಎಂದು ಹೇಳಲು ನಿನ್ನ ಹಿಂದೆಯೇ ನಾನು ಓಡಿ ಬಂದೆ.’ ಎಂದರು.

ಕಳ್ಳನಿಗೆ ಗಾಬರಿ, ನಾಚಿಕೆ ಎಲ್ಲವೂ ಆಯಿತು. ‘ಬೇಡ ಬುದ್ದಿ, ನಿಮ್ಮ ಬಳಿ ಇರುವ ಅಮೂಲ್ಯ ಪಾತ್ರೆಗಳು ನನಗೆ ಬೇಡ' ಎಂದು ತೊದಲಿದ. ಆದರೆ ಸಾಧುಗಳು ಬಿಡಲಿಲ್ಲ. ‘ನೀನೀಗ ಬಂದು ಆ ಪಾತ್ರೆಗಳನ್ನೂ ತೆಗೆದುಕೊಂಡು ಹೋಗು. ಇಲ್ಲವಾದರೆ ಸೈನಿಕರಿಗೆ ಹೇಳುತ್ತೇನೆ' ಎಂದು, ಅವನ ಕೈಯನ್ನು ಬಿಗಿಯಾಗಿ ಹಿಡಿದು, ಕುಟೀರದ ಬಳಿ ಕರೆದುಕೊಂಡು ಬಂದು, ಅಲ್ಲಿದ್ದ ನಾಲ್ಕಾರು ಪಾತ್ರೆಗಳನ್ನು ಅವನ ಕೈಗೆ ಇಡುತ್ತಾರೆ.

ಕಳ್ಳನ ಮನಃ ಪರಿವರ್ತನೆಯಾಗಿ, ಆತ ಸಾಧುಗಳ ಕಾಲಿಗೆ ಬೀಳುತ್ತಾನೆ. ಆ ದಿನದಿಂದ ಅದೇ ಕುಟೀರದಲ್ಲಿ ಕೆಲಸ ಮಾಡಿಕೊಂಡು, ಸಾಧುಗಳ ಸೇವೆ ಮಾಡಿಕೊಂಡು ಇರುತ್ತಾನೆ. ಆ ಸಾಧುಗಳೇ ಪವಾಹರಿ ಬಾಬಾ ಎಂದು ಹೆಸರಾದ ಸಂತರು.

ಇದಾಗಿ ಹಲವು ವರ್ಷಗಳ ನಂತರ, ಸ್ವಾಮಿ ವಿವೇಕಾನಂದರು ಭಾರತ ದರ್ಶನ ಹೊರಟಾಗ, ಒಬ್ಬ ವ್ಯಕ್ತಿ ಬೀದಿ ಬದಿಯಲ್ಲಿ ಮಲಗಿದ್ದ. ಅವನಿಗೆ ಕಂಬಳಿ ನೀಡಿ, ವಿವೇಕಾನಂದರು ಸಂತೈಸುತ್ತಾರೆ. ಆಗ ಆ ವ್ಯಕ್ತಿ ‘ನಾನೇ ಕಳ್ಳ, ನಂತರ ಧ್ಯಾನ ಮಾಡಿ, ಉತ್ತಮ ಜೀವನ ನಡೆಸಿದೆ.’ ಎಂದ. ಈ ಕಥೆಯನ್ನು ವಿವೇಕಾನಂದರು ಹಲವು ಕಡೆ ನಮ್ಮಲ್ಲಿರುವ ಮನಸ್ಸಿನ ಶಕ್ತಿಗೆ ಉದಾಹರಣೆಯನ್ನಾಗಿ ಹೇಳುತ್ತಿದ್ದರು. 

-ಶಶಾಂಕ್ ಮುದೂರಿ   

(ವೇದಾಂತಿ ಹೇಳಿದ ಕಥೆ, ವಿಶ್ವವಾಣಿ ಪತ್ರಿಕೆಯ ಕೃಪೆ)